HomeKarnatakaಒಂದೇ ಕುಟುಂಬದ 7 ಜನರ ಹತ್ಯೆ ಪ್ರಕರಣ: ತಂದೆಯ ಕೃತ್ಯಕ್ಕೆ ಮಗಳೇ ಸಾಥ್: ವಿವಿಧ ಸ್ಥಳಗಳಲ್ಲಿ...

ಒಂದೇ ಕುಟುಂಬದ 7 ಜನರ ಹತ್ಯೆ ಪ್ರಕರಣ: ತಂದೆಯ ಕೃತ್ಯಕ್ಕೆ ಮಗಳೇ ಸಾಥ್: ವಿವಿಧ ಸ್ಥಳಗಳಲ್ಲಿ ಮೃತದೇಹಗಳನ್ನು ಎಸೆದಿರುವ ಆರೋಪಿ

ಬೆಂಗಳೂರು: ಪತ್ನಿ ಹಾಗೂ ಕುಟುಂಬದ 7 ಜನರನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಕ್ಯಾಬ್ ಚಾಲಕ ಇಂದುಶೇಖರ್‌ನನ್ನು ಬೆಂಗಳೂರಿನ ರಾಜಾಜಿನಗರದಲ್ಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು 15-20 ದಿನಗಳ ಅವಧಿಯಲ್ಲಿ ಒಬ್ಬೊಬ್ಬರನ್ನೇ ಮನೆಗೆ ಕರೆಸಿ ಹತ್ಯೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ತಂದೆಯ ಕೃತ್ಯಕ್ಕೆ ಮಗಳೇ ಸಾಥ್ ನೀಡಿರುವ ಅನುಮಾನ ವ್ಯಕ್ತವಾಗಿದೆ.

ರಾಜಾಜಿನಗರದ ಭಾಷ್ಯಂ ವೃತ್ತದ ಸಮೀಪ ವಾಸವಿದ್ದ ಇಂದುಶೇಖರ್, ಸುಮಾರು ಎರಡು ದಶಕಗಳ ಹಿಂದೆ ಸುನೀತಾರನ್ನು ವಿವಾಹವಾಗಿದ್ದ. ಸುನೀತಾ ಶ್ರೀರಾಮಪುರದ ತವರು ಮನೆಗೆ ಹೋಗಿ ಬರುತ್ತಿದ್ದುದು ಆರೋಪಿಗೆ ಇಷ್ಟವಿರಲಿಲ್ಲ. ತವರಿಗೆ ಹೋಗದಂತೆ ಆತ ಪತ್ನಿಗೆ ನಿರ್ಬಂಧ ವಿಧಿಸಿದ್ದ. ಸುನೀತಾ ಅವರಿಗೆ ತಾಯಿ ಹಾಗೂ ಸೋದರರು ಬೆಂಬಲ ನೀಡುತ್ತಿದ್ದರು. ಹಲವು ಬಾರಿ ರಾಜಿ ಪಂಚಾಯಿತಿ ನಡೆದರೂ ಕಲಹ ನಿಂತಿರಲಿಲ್ಲ. ತನ್ನ ಬದುಕಿಗೆ ಪತ್ನಿಯ ಕುಟುಂಬವೇ ಅಡ್ಡಿ ಎಂದು ಭಾವಿಸಿ ಆತ ಹತ್ಯೆಗೆ ಸಂಚು ರೂಪಿಸಿದ್ದ ಎಂದು ಆರೋಪಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪೊಲೀಸ್ ಮೂಲಗಳ ಪ್ರಕಾರ, ಆರೋಪಿ ಮೊದಲು ಪತ್ನಿ ಸುನೀತಾ ತಲೆಗೆ ರುಬ್ಬುಗುಂಡಿನಿಂದ ಹೊಡೆದು ಕೊಂದಿದ್ದಾನೆ. ಮೃತದೇಹವನ್ನು ನಂದಿ ಬೆಟ್ಟಕ್ಕೆ ಕೊಂಡೊಯ್ದು ಎಸೆದಿದ್ದಾನೆ. ಸುನೀತಾ ಅವರ ಮೊಬೈಲ್ ಸ್ವಿಚ್ ಆಫ್ ಮಾಡಿ, ಆಕೆ ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೋಗಿದ್ದಾಳೆ ಎಂದು ನೆರೆಹೊರೆಯವರಿಗೆ ಹಾಗೂ ಸಂಬಂಧಿಕರಿಗೆ ಹೇಳಿದ್ದ.

ಮನೆಯಲ್ಲೇ ಎಣ್ಣೆ ಪಾರ್ಟಿ ಮಾಡೋಣ ಎಂದು ಶಿವಕುಮಾರ್ ಮತ್ತು ಶಂಕರ್ ಅವರನ್ನು ಕರೆಸಿ ಹತ್ಯೆ ಮಾಡಿದ್ದಾನೆ. ನಂತರ ಶಂಕರ್ ಪತ್ನಿ ನಳಿನಿ, ಶಿವಕುಮಾರ್ ಪತ್ನಿ ದಿವ್ಯಾ, ಅತ್ತೆ ರೂಪಾವತಿ ಹಾಗೂ ಶಂಕರ್ ಪುತ್ರ ಪುನೀತ್ ಅವರನ್ನೂ ಒಬ್ಬೊಬ್ಬರಾಗಿ ಮನೆಗೆ ಕರೆಸಿ ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ. ಮೃತದೇಹಗಳನ್ನು ಬೇರೆ ಬೇರೆ ಸ್ಥಳಗಳಲ್ಲಿ ಎಸೆದಿದ್ದಾನೆ.

ಕೃತ್ಯದ ಬಳಿಕ ಆರೋಪಿ ಮನೆಯಲ್ಲಿದ್ದ ರಕ್ತದ ಕಲೆಗಳನ್ನು ತೊಳೆದು ಸ್ವಚ್ಛಗೊಳಿಸಿದ್ದ. ರುಬ್ಬುಗುಂಡನ್ನು ರಾಸಾಯನಿಕ ಬಳಸಿ ಶುದ್ಧಗೊಳಿಸಿದ್ದ ಎನ್ನಲಾಗಿದೆ. ಮೃತದೇಹ ಸಾಗಿಸಲು ಬಳಸಿದ ಕಾರು ಹಾಗೂ ರುಬ್ಬುಗುಂಡನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಸುನೀತಾ ಕುಟುಂಬ ನಿಗೂಢವಾಗಿ ನಾಪತ್ತೆಯಾದ ಬಗ್ಗೆ ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ನಳಿನಿ ಅವರ ತಾಯಿ ನೀಡಿದ ದೂರಿನ ಆಧಾರದ ಮೇಲೆ ತನಿಖೆ ಆರಂಭವಾಯಿತು. ಅನುಮಾನದ ಮೇರೆಗೆ ಇಂದುಶೇಖರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆತ ಗೊಂದಲದ ಹೇಳಿಕೆಗಳನ್ನು ನೀಡಿದ್ದ. ಮನೆ ಪರಿಶೀಲನೆ ವೇಳೆ ಕೊಲೆಗೆ ಸಂಬಂಧಿಸಿದ ಸುಳಿವುಗಳು ಸಿಕ್ಕವು. ತೀವ್ರ ವಿಚಾರಣೆಯ ಬಳಿಕ ಆರೋಪಿ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪೊಲೀಸರು ಆರೋಪಿಯನ್ನು ನಂದಿ ಬೆಟ್ಟಕ್ಕೆ ಕರೆದೊಯ್ದು ಶೋಧ ನಡೆಸಿದರು. ಹಲವು ಗಂಟೆಗಳ ಹುಡುಕಾಟದ ಬಳಿಕ ಪುನೀತ್ ಮೃತದೇಹ ಪತ್ತೆಯಾಗಿದೆ. ಉಳಿದ ಮೃತದೇಹಗಳಿಗಾಗಿ ಕಾರ್ಯಾಚರಣೆ ಮುಂದುವರಿದಿದೆ. ಈವರೆಗೆ ಬಾಲಕ ಪುನೀತ್ ಮೃತದೇಹ ಮಾತ್ರ ಪತ್ತೆಯಾಗಿದೆ. ಕೆಲ ಮೃತದೇಹವನ್ನು ಚಾರ್ಮಡಿ ಘಾಟ್ ಬಳಿ ಎಸೆದಿದ್ದಾಗಿ. ಮತ್ತೊಂದು ಮೃತದೇಹ ಚಾಮುಂಡಿ ಬೆಟ್ಟ ಹಾಗೂ ತಮಿಳುನಾಡಿನಲ್ಲಿ ಎಸೆದಿದ್ದಾಗಿ ಆರೋಪಿ ಹೇಳಿದ್ದಾನೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.

ಪ್ರಕರಣದ ಗಂಭೀರತೆ ಹಿನ್ನೆಲೆಯಲ್ಲಿ ಪಶ್ಚಿಮ ವಿಭಾಗದ ಜಂಟಿ ಪೊಲೀಸ್ ಆಯುಕ್ತ ವಂಶಿಕೃಷ್ಣ ಹಾಗೂ ಉತ್ತರ ವಿಭಾಗದ ಡಿಸಿಪಿ ನೇಮಗೌಡ ಅವರು ರಾಜಾಜಿನಗರ ಠಾಣೆಗೆ ಭೇಟಿ ನೀಡಿದ್ದಾರೆ. ಅವರು ಠಾಣೆಯಲ್ಲೇ ಇದ್ದು ತನಿಖೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಡಿಸಿಪಿ ನೇತೃತ್ವದಲ್ಲಿ ಮೂವರು ಎಸಿಪಿಗಳ ತಂಡ ರಚಿಸಲಾಗಿದ್ದು, ಮೃತದೇಹಗಳ ಪತ್ತೆ ಹಾಗೂ ಪ್ರಕರಣದ ಸಂಪೂರ್ಣ ತನಿಖೆ ನಡೆಯುತ್ತಿದೆ.

ಈ ನಡುವೆ ಒಂದೇ ಕುಟುಂಬದ ಏಳು ಜನರ ಭೀಕರ ಹತ್ಯೆ ಪ್ರಕರಣದಲ್ಲಿ ಆರೋಪಿ ಇಂದುಶೇಖರ್​​ಗೆ ಪಿಯುಸಿ ಓದುತ್ತಿರುವ ಮಗಳು ಕೂಡ ಸಾಥ್​​ ನೀಡಿರುವ ಶಂಕೆ ವ್ಯಕ್ತವಾಗಿದೆ. ಮಗಳನ್ನು ಮಾತ್ರ ಬಿಟ್ಟು ಉಳಿದವರೆಲ್ಲರನ್ನೂ ಆರೋಪಿ ಕೊಲೆ ಮಾಡಿದ್ದು, 20 ದಿನಗಳಿಂದ ಕೊಲೆ ನಡೆಯುತ್ತಿದ್ದರೂ ಮಗಳು ಮೌನವಾಗಿದ್ದಳು. ಕಳೆದ 4 ದಿನಗಳಿಂದ ಮನೆ ಬಳಿಯೇ ಓಡಾಟ ನಡೆಸುತ್ತಿದ್ದಳು. ಹೀಗಾಗಿ ತಂದೆಯ ಕೊಲೆ ಕೃತ್ಯಕ್ಕೆ ಆಕೆಯೂ ಸಹಕಾರ ನೀಡಿದ್ದಳಾ? ಇಬ್ಬರೂ ಪ್ಲ್ಯಾನ್​​ ಮಾಡಿ ಕುಟುಂಬವನ್ನೇ ಮುಗಿಸಿದ್ರಾ ಎಂಬ ಪ್ರಶ್ನೆ ಉದ್ಭವಿಸಿದೆ. ಅಲ್ಲದೆ ಮಗಳ ಮೂಲಕವೇ ಒಬ್ಬೊಬ್ಬರನ್ನೇ ಮನೆಗೆ ಕರೆಸಿಕೊಂಡು ಇಂದುಶೇಖರ್​​ ಕೊಲೆ ಮಾಡಿರೋದು ಕೂಡ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಈ ನಿಟ್ಟಿನಲ್ಲಿಯೂ ತನಿಖೆ ನಡೆಯುತ್ತಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular