HomeIndiaಭೀಕರ ಅಪಘಾತ: ಟ್ರಕ್ ಡಿಕ್ಕಿಯಾಗಿ ಮೂವರು ಮಕ್ಕಳು ಸೇರಿ 7 ಜನರು ದುರ್ಮರಣ

ಭೀಕರ ಅಪಘಾತ: ಟ್ರಕ್ ಡಿಕ್ಕಿಯಾಗಿ ಮೂವರು ಮಕ್ಕಳು ಸೇರಿ 7 ಜನರು ದುರ್ಮರಣ

ರಾಂಚಿ: ವೇಗವಾಗಿ ಬಂದ ಟ್ರಕ್ ಜನರ ಗುಂಪಿನ ಮೇಲೆ ಹರಿದು ಹೋದ ಪರಿಣಾಮ ಮೂವರು ಮಕ್ಕಳು ಸೇರಿದಂತೆ ಏಳು ಜನರು ಮೃತಪಟ್ಟಿರುವ ಘಟನೆ ಜಾರ್ಖಂಡ್‌ನ ಖುಂಟಿ ಜಿಲ್ಲೆಯಲ್ಲಿ ನಡೆದಿದೆ.

ಸ್ಕೂಟಿ ಅಪಘಾತಕ್ಕೀಡಾದಾಗ ಸವಾರನ ನೆರವಿಗೆ ಧಾವಿಸಿದ್ದ ಸ್ಥಳೀಯರು ಈ ದುರಂತಕ್ಕೆ ಬಲಿಯಾಗಿದ್ದಾರೆ. ಕರ್ರಾ–ತೋರ್ಪಾ ಮುಖ್ಯ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಓರ್ವ ಮಹಿಳೆ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗುರುವಾರ ರಾತ್ರಿ ಸುಮಾರು 9.45ರ ವೇಳೆಗೆ ಖುಂಟಿ ಜಿಲ್ಲೆಯ ಕರ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಜೊನೆ–ಲುಡ್ರು ತಿರುವಿನ ಬಳಿ ಈ ಅಪಘಾತ ಸಂಭವಿಸಿದೆ. ಕರ್ರಾ–ತೋರ್ಪಾ ಮುಖ್ಯ ರಸ್ತೆಯಲ್ಲಿ ಸ್ಕೂಟಿ ಸವಾರನೊಬ್ಬ ನಿಯಂತ್ರಣ ತಪ್ಪಿ ರಸ್ತೆಬದಿಯ ಪೊದೆಗಳಿಗೆ ಬಿದ್ದಿದ್ದರು.

ಇದನ್ನು ಗಮನಿಸಿದ ಸ್ಥಳೀಯರು ಅವರಿಗೆ ಸಹಾಯ ಮಾಡಲು ಧಾವಿಸಿದ್ದಾರೆ. ಸಮೀಪದ ಕಾಲೋನಿಯ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಹಲವು ಮಂದಿ ರಸ್ತೆಯ ಬಳಿ ಸೇರಿದ್ದರು. ಇದೇ ಸಮಯದಲ್ಲಿ ತೋರ್ಪಾ ಕಡೆಯಿಂದ ವೇಗವಾಗಿ ಬಂದ ಟ್ರಕ್ ಜನರ ಗುಂಪಿನ ಮೇಲೆ ಹರಿದಿದೆ.

ಟ್ರಕ್ ಡಿಕ್ಕಿಯ ರಭಸಕ್ಕೆ ಆರು ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡವರನ್ನು ಸ್ಥಳೀಯರು ಮತ್ತು ಪೊಲೀಸರು ಖುಂಟಿ ಸದರ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 12 ವರ್ಷದ ಸೌರಭ್ ನಾಯಕ್ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ.

ಖುಷ್ಬು ಕುಮಾರಿ ಎಂಬ ಬಾಲಕಿ ಗಾಯಗೊಂಡಿದ್ದು, ಚಿಕಿತ್ಸೆ ಮುಂದುವರಿದಿದೆ. ಮೃತರೆಲ್ಲರೂ ಅಪಘಾತ ನಡೆದ ಸ್ಥಳದ ಸಮೀಪದ ಕಾಲೋನಿಯ ನಿವಾಸಿಗಳು ಎಂದು ವರದಿಯಾಗಿದೆ. ಮೃತರಲ್ಲಿ ಮಹಿಳೆಯರು ಮತ್ತು ಮೂವರು ಮಕ್ಕಳು ಸೇರಿದ್ದಾರೆ. ಒಂದೇ ಕುಟುಂಬದ ಮೂವರು ಸದಸ್ಯರೂ ಈ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ವರದಿಗಳು ತಿಳಿಸಿವೆ.

ಅಪಘಾತದ ಬಳಿಕ ಟ್ರಕ್ ಚಾಲಕ ಮತ್ತು ಸಹಾಯಕ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ. ಟ್ರಕ್‌ನ ನೋಂದಣಿ ಸಂಖ್ಯೆ JH 02 AJ 1377 ಎಂದು ಗುರುತಿಸಲಾಗಿದೆ. ಅಪಘಾತದ ವೇಳೆ ಟ್ರಕ್ ರಸ್ತೆಬದಿಯ ಸೇತುವೆಯ ತಡೆಗೋಡೆಗೆ ಡಿಕ್ಕಿ ಹೊಡೆದು ಹೊಂಡಕ್ಕೆ ಬಿದ್ದಿದೆ ಎಂದು ಖುಂಟಿ ಪೊಲೀಸ್ ವರಿಷ್ಠಾಧಿಕಾರಿ ರಿಷಭ್ ಗರ್ಗ್ ತಿಳಿಸಿದ್ದಾರೆ.

ಚಾಲಕ ಮದ್ಯದ ಅಮಲಿನಲ್ಲಿದ್ದಿರಬಹುದು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ಪೊಲೀಸರು ಇನ್ನೂ ದೃಢಪಡಿಸಿಲ್ಲ. ಚಾಲಕನ ಪತ್ತೆ ಮತ್ತು ಅಪಘಾತದ ನಿಖರ ಕಾರಣದ ಕುರಿತು ತನಿಖೆ ನಡೆಯುತ್ತಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular