ಹೊಟ್ಟೆಪಾಡಿಗಾಗಿ ಕೇರಳದಿಂದ ಬೆಂಗಳೂರಿಗೆ ಬಂದು ಕೆಲಸ ಮಾಡುತ್ತಿದ್ದ ಯುವಕನ ಬದುಕು ದುರಂತದಲ್ಲಿ ಅಂತ್ಯವಾಗಿದೆ. ವರ್ಷಗಳಿಂದ ನಂಬಿಕೆಯಿಂದ ಕೆಲಸ ಮಾಡುತ್ತಿದ್ದ ಮಾಲೀಕನ ಮನೆಯಲ್ಲೇ ಆತನ ಸಾವು ಸಂಭವಿಸಿದೆ. ಮಾಲೀಕನ 19 ವರ್ಷದ ಮಗಳ ಜೊತೆ ಮನೆಯಲ್ಲಿದ್ದಾನೆಂಬ ಕಾರಣಕ್ಕೆ 22 ವರ್ಷದ ಉದ್ಯೋಗಿಯನ್ನು ಉದ್ಯಮಿಯೇ ಬಡಿದು ಕೊಂದಿರುವ ಆರೋಪ ಕೇಳಿಬಂದಿದೆ.ಈ ಘಟನೆ ಇಡೀ ಪ್ರದೇಶದಲ್ಲಿ ಬೆಚ್ಚಿಬೀಳಿಸಿದೆ. ಕೊಲೆಯ ಆರೋಪದ ಮೇಲೆ ಉದ್ಯಮಿ ಆನಂದರಾಜ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಹೌದು. ಹಲವು ಕನಸುಗಳನ್ನು ಹೊತ್ತು ಬೆಂಗಳೂರಿಗೆ ಬಂದಿದ್ದ ಕಿರಣ್‌ಗೆ ಇನ್ನೂ ಬದುಕಿ ಬಾಳಬೇಕಾದ ವಯಸ್ಸು. ಕುಟುಂಬದ ಆಸರೆಯಾಗಬೇಕಿದ್ದ 22 ವರ್ಷದ ಯುವಕ ಈಗ ಹೆಣವಾಗಿದ್ದಾನೆ. ವರ್ಷಗಳಿಂದ ಕೆಲಸ ಮಾಡುತ್ತಿದ್ದ ಉದ್ಯಮಿಯೇ ಆತನ ಸಾವಿಗೆ ಕಾರಣರಾದ ಆರೋಪ ಎದುರಿಸುತ್ತಿದ್ದಾರೆ. ಮಗಳ ಜೊತೆ ಮನೆಯಲ್ಲಿದ್ದಾನೆಂಬ ವಿಚಾರವೇ ಈ ಭೀಕರ ಘಟನೆಗೆ ಕಾರಣ ಎನ್ನಲಾಗಿದೆ.
ಮೃತ ಯುವಕನನ್ನು ಕೇರಳದ ಪಾಲಕ್ಕಾಡ್ ಜಿಲ್ಲೆಯ ಕಿರಣ್ (22) ಎಂದು ಗುರುತಿಸಲಾಗಿದೆ. ಕಳೆದ ಕೆಲವು ವರ್ಷಗಳಿಂದ ಆನಂದರಾಜ್ ಮಾಲೀಕತ್ವದ ಉತ್ಪಾದನಾ ಘಟಕದಲ್ಲಿ ಕಿರಣ್ ಕೆಲಸ ಮಾಡುತ್ತಿದ್ದ. ಈ ನಡುವೆ ಆನಂದರಾಜ್ ಅವರ 19 ವರ್ಷದ ಮಗಳು ಮತ್ತು ಕಿರಣ್ ನಡುವೆ ಪ್ರೇಮ ಸಂಬಂಧವಿತ್ತು ಎನ್ನಲಾಗಿದೆ. ಈ ವಿಚಾರ ಆನಂದರಾಜ್‌ಗೆ ಇತ್ತೀಚೆಗಷ್ಟೇ ತಿಳಿದಿತ್ತು ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.
ಮಂಗಳವಾರ ಬೆಳಗ್ಗೆ ಆನಂದರಾಜ್ ಮತ್ತು ಅವರ ಪತ್ನಿ ಮನೆಯಿಂದ ಹೊರಗೆ ತೆರಳಿದ್ದರು. ಪಕ್ಕದ ನಗರವೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಮಗಳು ರಜೆ ಹಿನ್ನೆಲೆಯಲ್ಲಿ ಬೆಂಗಳೂರಿನ ಮನೆಗೆ ಬಂದಿದ್ದರು. ದಂಪತಿ ಇಡೀ ದಿನ ಮನೆಯಲ್ಲಿ ಇರುವುದಿಲ್ಲ ಎಂದು ಮಗಳಿಗೆ ತಿಳಿಸಿ ಹೊರಟಿದ್ದರು.
ಆದರೆ, ಕೆಲವೇ ಗಂಟೆಗಳಲ್ಲಿ ಮನೆಗೆ ವಾಪಸ್ ಬಂದ ದಂಪತಿಗೆ ಆಘಾತ ಕಾದಿತ್ತು. ಮನೆಯ ಕೋಣೆಯೊಂದರಲ್ಲಿ ಕಿರಣ್ ಮತ್ತು ತಮ್ಮ ಮಗಳು ಒಟ್ಟಿಗೆ ಇರುವುದನ್ನು ಆನಂದರಾಜ್ ಕಂಡಿದ್ದಾರೆ ಎನ್ನಲಾಗಿದೆ.
ಮೊದಲು ತಮ್ಮ ಮಗಳನ್ನು ಸಂಬಂಧಿಕರ ಮನೆಗೆ ಕಳುಹಿಸಿದ ಆನಂದರಾಜ್, ಬಳಿಕ ಕಿರಣ್ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಹಲ್ಲೆಯ ತೀವ್ರತೆಗೆ ಕಿರಣ್ ಪ್ರಜ್ಞೆ ಕಳೆದುಕೊಂಡಿದ್ದಾರೆ. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲಾಗಲೇ ಪ್ರಾಣಪಕ್ಷಿ ಹಾರಿಹೋಗಿತ್ತು. ವೈದ್ಯರು ಕಿರಣ್ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ ಎಂದು ವರದಿಗಳು ತಿಳಿಸಿದೆ. ಆಸ್ಪತ್ರೆಯ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.
ಸಹೋದರನನ್ನೂ ದೂರ ಕಳುಹಿಸಿ ಸಂಚು ರೂಪಿಸಿದ್ದರೇ?
ಈ ಕೊಲೆ ಪೂರ್ವಯೋಜಿತವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಇದೇ ವೇಳೆ ಮೃತ ಕಿರಣ್ ಅವರ ಸೋದರಮಾವನ ಮಗ ಪ್ರಸಾದ್ ಗಂಭೀರ ಆರೋಪ ಮಾಡಿದ್ದಾರೆ.
ಆನಂದರಾಜ್ ಉದ್ದೇಶಪೂರ್ವಕವಾಗಿಯೇ ಕಿರಣ್ ಅವರ ಸಹೋದರನನ್ನು ವಾರದ ಆರಂಭದಲ್ಲಿ ಡೆಲಿವರಿ ಕೆಲಸದ ನೆಪದಲ್ಲಿ ಉತ್ತರ ಪ್ರದೇಶಕ್ಕೆ ಕಳುಹಿಸಿದ್ದರು. ಕಿರಣ್ ಮನೆಯಲ್ಲಿ ಒಬ್ಬರೇ ಇರುವಂತೆ ಮಾಡಿ, ಹಲ್ಲೆ ನಡೆಯುವ ಸಂದರ್ಭದಲ್ಲಿ ಯಾರೂ ಮಧ್ಯಪ್ರವೇಶಿಸದಂತೆ ಯೋಜನೆ ರೂಪಿಸಲಾಗಿತ್ತು ಎಂದು ಪ್ರಸಾದ್ ಆರೋಪಿಸಿದ್ದಾರೆ.ಆದರೆ, ಈ ಆರೋಪಗಳು ಇನ್ನಷ್ಟೇ ತನಿಖೆಯಿಂದ ದೃಢಪಡಬೇಕಿದೆ.
ಸದ್ಯ ಪೊಲೀಸರು ಪ್ರಕರಣದ ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ. ಕಿರಣ್ ಹತ್ಯೆ ಪೂರ್ವಯೋಜಿತವಾಗಿತ್ತೇ? ಘಟನೆಯ ಹಿಂದೆ ಬೇರೆಯವರ ಕೈವಾಡವಿದೆಯೇ? ಎಂಬ ಪ್ರಶ್ನೆಗಳಿಗೆ ತನಿಖೆಯ ಬಳಿಕ ಉತ್ತರ ಸಿಗಬೇಕಿದೆ.
ಒಂದು ಸಂಬಂಧದ ಮೇಲಿನ ಆಕ್ರೋಶ ಯುವಕನ ಜೀವವನ್ನೇ ಬಲಿ ಪಡೆದಿರುವ ಆರೋಪದ ಈ ಘಟನೆ, ಕಾನೂನನ್ನು ಕೈಗೆತ್ತಿಕೊಳ್ಳುವ ಕ್ರೌರ್ಯ ಎಷ್ಟು ಭೀಕರ ಪರಿಣಾಮ ಉಂಟುಮಾಡಬಹುದು ಎಂಬುದಕ್ಕೆ ಮತ್ತೊಂದು ಉದಾಹರಣೆಯಾಗಿದೆ.
Disclaimer: ಈ ಸುದ್ದಿಯಲ್ಲಿರುವ ಮಾಹಿತಿಯನ್ನು ಲಭ್ಯವಿರುವ ಮಾಧ್ಯಮ ವರದಿಗಳು ಹಾಗೂ ಪ್ರಾಥಮಿಕ ಪೊಲೀಸ್ ತನಿಖೆಯ ವಿವರಗಳ ಆಧಾರದ ಮೇಲೆ ಪ್ರಕಟಿಸಲಾಗಿದೆ. ಕೊಲೆಗೆ ಸಂಬಂಧಿಸಿದ ಕೆಲವು ಆರೋಪಗಳು ಮೃತನ ಕುಟುಂಬದವರ ಹೇಳಿಕೆಗಳಾಗಿದ್ದು, ಅವು ಇನ್ನಷ್ಟೇ ತನಿಖೆಯಿಂದ ದೃಢಪಡಬೇಕಿದೆ.

