ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ ಸುರುದ ಮಳೆಯಿಂದಾಗಿ ನಗರದ ಹಲವೆಡೆ ರಸ್ತೆಗಳು ಜಲಾವೃತಗೊಂಡು ಅವಾಂತರಗಳು ಸೃಷ್ಟಿಯಾಗಿವೆ.
ರಸ್ತೆಗಳಲ್ಲಿ ನೀರು ನದಿಯಂತೆ ಹರಿದಿದ್ದು, ವಾಹನ ಸವಾರರು ಸಂಕಷ್ಟ ಅನುಭವಿಸಿದರು. ಸರ್ಜಾಪುರ ರಸ್ತೆಯಲ್ಲಿ ಮಳೆ ನೀರು ನಿಂತು ಸಂಚಾರಕ್ಕೆ ಅಡ್ದಿಯುಂಟಾಯಿತು. ಇದೇ ವೇಳೆ ಕೊಡತಿ ಗೇಟ್ ಬಳಿಯ ಬಾರ್ ವೊಂದಕ್ಕೆ ಚರಂಡಿ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.
ಧಾರಾಕಾರ ಮಳೆಯಿಂದಾಗಿ ಸರ್ಜಾಪುರ ರಸ್ತೆಯಲ್ಲಿ ನೀರು ಸರಾಗವಾಗಿ ಹರಿದು ಹೋಗದೆ ರಸ್ತೆಯಲ್ಲೇ ಸಂಗ್ರಹಗೊಂಡಿದೆ. ಇದರಿಂದಾಗಿ ವಾಹನ ಸವಾರರು ನೀರಿನ ನಡುವೆಯೇ ಸಂಚರಿಸುತ್ತಾ ಪರದಾಟ ನಡೆಸಿದ್ದಾರೆ.
ಈ ವೇಳೆ ಸಂಚಾರ ದಟ್ಟಣೆ ಉಂಟಾಗಿ ಟ್ರಾಫಿಕ್ ಜಾಮ್ ಸಂಭವಿಸಿದೆ. ಕೆಲವೆಡೆ ವಾಹನ ಸಂಚಾರ ತುಂಬಾ ನಿಧಾನವಾಗಿ ಸಾಗಿದೆ. ಕೊಡತಿ ಗೇಟ್ ಬಳಿಯ ಬಾರ್ ಗೆ ರಸ್ತೆಯಲ್ಲಿದ್ದ ನೀರು ನೀರು ನುಗ್ಗಿದೆ. ಬಾರ್ ಒಳಗಡೆ ಹೊಳೆಯಂತಾಗಿದ್ದು, ಸಾಕಷ್ಟು ಪ್ರಮಾಣದಲ್ಲಿ ನೀರು ತುಂಬಿಕೊಂಡಿದೆ. ಆದರೂ ಮದ್ಯ ಖರೀದಿಗೆ ಬಂದ ಗ್ರಾಹಕರು ಕೊಂಚವೂ ಹಿಂದೇಟು ಹಾಕದೇ ಮದ್ಯ ಖರೀದಿಸಿದ್ದಾರೆ.
ಮಳೆ ನೀರು ಬಾರ್ ಅಂಗಡಿಯಲ್ಲಿ ನಿಂತರೂ ತಲೆಕೆಡಿಸಿಕೊಳ್ಳದೇ ಕುಡಿಯುವುದರಲ್ಲಿ ಮಗ್ನರಾಗಿದ್ದಾರೆ. ಭಾರಿ ಮಳೆಯಿಂದಾಗಿ ಹಲವೆಡೆ ನೀರು ನಿಂತುಇ ಅವಾಂತರ ಸೃಷ್ಟಿಯಾಗಿದೆ. ಹಲವೆಡೆ ಮನೆಗಳಿಗೆ ನೀರು ನುಗ್ಗಿದ್ದರಿಂದ ನಿವಾಸಿಗಳು ಸಂಕಷ್ಟ ಎದುರಿಸುವಂತಾಯಿತು. ಅಂಗಡಿಗಳಿಗೆ, ಶಾಪಿಂಗ್ ಮಾಲ್ ಗಳಿಗೂ ನೀರು ನುಗ್ಗಿ ಸಿಬ್ಬಂದಿಗಳು ಸಂಕಷ್ಟಕ್ಕೀಡಾಗಿದ್ದಾರೆ.
ಭಾರಿ ಮಳೆ ಎಚ್ಚರಿಕೆ:
ಇನ್ನು ರಾಜ್ಯದಲ್ಲಿ ಮಳೆಯ ವಾತಾವರಣ ಮುಂದುವರಿದಿದ್ದು, ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆ ಹಾಗೂ ಗುಡುಗು ಸಹಿತ ಮಳೆಯ ಮುನ್ಸೂಚನೆ ನೀಡಲಾಗಿದೆ.
ಚಾಮರಾಜನಗರ, ಕೊಡಗು ಮತ್ತು ಮೈಸೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರೀ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಮುನ್ಸೂಚನೆಯಲ್ಲಿ ತಿಳಿಸಲಾಗಿದೆ.
ದಕ್ಷಿಣ ಒಳನಾಡಿನ ಮಂಡ್ಯ, ರಾಮನಗರ, ಹಾಸನ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಕೋಲಾರ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಗಂಟೆಗೆ 30ರಿಂದ 40 ಕಿ.ಮೀ ವೇಗದ ಗಾಳಿಯೊಂದಿಗೆ ಸಾಧಾರಣದಿಂದ ಮಧ್ಯಮ ಪ್ರಮಾಣದ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
ಬಳ್ಳಾರಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಮುಖ್ಯವಾಗಿ ಒಣಹವೆ ಮುಂದುವರಿಯುವ ನಿರೀಕ್ಷೆಯಿದೆ.
ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಸಾಧಾರಣದಿಂದ ಮಧ್ಯಮ ಪ್ರಮಾಣದ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
ಉತ್ತರ ಒಳನಾಡಿನಲ್ಲಿ ಬೆಳಗಾವಿ, ಧಾರವಾಡ ಮತ್ತು ಬಾಗಲಕೋಟೆ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಸಾಧಾರಣದಿಂದ ಮಧ್ಯಮ ಮಳೆಯಾಗಬಹುದು. ಗದಗ ಮತ್ತು ಹಾವೇರಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರ ಮಳೆಯ ಮುನ್ಸೂಚನೆ ನೀಡಲಾಗಿದೆ. ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಮುಖ್ಯವಾಗಿ ಒಣಹವೆ ಮುಂದುವರಿಯುವ ಸಾಧ್ಯತೆ ಇದೆ.
ದಕ್ಷಿಣ ಒಳನಾಡಿನ ಕರ್ನಾಟಕದಲ್ಲಿ ನವೆಂಬರ್ 6ರವರೆಗೆ ಗಂಟೆಗೆ 30ರಿಂದ 40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಇದೇ ಅವಧಿಯಲ್ಲಿ ದಕ್ಷಿಣ ಒಳನಾಡಿನ ಕೆಲವು ಪ್ರದೇಶಗಳಲ್ಲಿ ಗುಡುಗು ಮತ್ತು ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ

