HomeBusinessಸ್ವಿಗ್ಗಿ ಡೆಲಿವರಿ ಪಾರ್ಟ್ನರ್‌ಗಳಿಗೆ ಬಿಗ್ ಆಫರ್: ₹10 ಲಕ್ಷದವರೆಗೆ ಉಚಿತ ವಿಮಾ ಸೌಲಭ್ಯ

ಸ್ವಿಗ್ಗಿ ಡೆಲಿವರಿ ಪಾರ್ಟ್ನರ್‌ಗಳಿಗೆ ಬಿಗ್ ಆಫರ್: ₹10 ಲಕ್ಷದವರೆಗೆ ಉಚಿತ ವಿಮಾ ಸೌಲಭ್ಯ

ಡೆಲಿವರಿ ಕೆಲಸದ ವೇಳೆ ಮಳೆ, ಬಿಸಿಲು ಎನ್ನದೆ ನಿರಂತರವಾಗಿ ಶ್ರಮಿಸುವ ಸಿಬ್ಬಂದಿಯ ಆರೋಗ್ಯ ಮತ್ತು ಆರ್ಥಿಕ ಭದ್ರತೆಗೆ ಸ್ವಿಗ್ಗಿ ಮಹತ್ವದ ಕ್ರಮ ಕೈಗೊಂಡಿದೆ. ತನ್ನ 25 ಲಕ್ಷಕ್ಕೂ ಹೆಚ್ಚು ಡೆಲಿವರಿ ಪಾಲುದಾರರಿಗೆ ನೀಡುವ ವಿಮಾ ಯೋಜನೆಯನ್ನು ನವೀಕರಿಸಿರುವ ಕಂಪನಿ, ಅಪಘಾತ, ಆಸ್ಪತ್ರೆ ಚಿಕಿತ್ಸೆ, ಹೆರಿಗೆ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಲಿದೆ. ಈ ವಿಮೆಯಡಿ ಏನೆಲ್ಲಾ ಪ್ರಯೋಜನಗಳಿವೆ? ಯಾರಿಗೆಲ್ಲಾ ಅನ್ವಯವಾಗಲಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ಭಾರತದ ಗಿಗ್ ಕಾರ್ಯಪಡೆಗೆ ಸಾಮಾಜಿಕ ಮತ್ತು ಆರ್ಥಿಕ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಇದೊಂದು ದೊಡ್ಡ ಪ್ರಯತ್ನವಾಗಿದೆ. 2025-26ರ ಆರ್ಥಿಕ ವರ್ಷದಲ್ಲಿ, ಸ್ವಿಗ್ಗಿಯ ಈ ಅಪಘಾತ ಮತ್ತು ಆರೋಗ್ಯ ವಿಮಾ ಯೋಜನೆಯಡಿ ಬರೋಬ್ಬರಿ 25 ಲಕ್ಷಕ್ಕೂ ಹೆಚ್ಚು ಡೆಲಿವರಿ ಪಾಲುದಾರರು ವಿಮಾ ರಕ್ಷಣೆಯ ಪ್ರಯೋಜನ ಪಡೆದಿದ್ದಾರೆ.

ಏನೆಲ್ಲಾ ಸೌಲಭ್ಯಗಳಿರಲಿವೆ?

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೊಸದಾಗಿ ನವೀಕರಿಸಲಾದ ಈ ವಿಮಾ ಯೋಜನೆಯು ಡೆಲಿವರಿ ಸಿಬ್ಬಂದಿಗೆ ಹಾಗೂ ಅವರ ಕುಟುಂಬಕ್ಕೆ ನೆರವಾಗಲಿದ್ದು, ದುರದೃಷ್ಟವಶಾತ್ ಅಪಘಾತದಿಂದ ಸಾವು ಸಂಭವಿಸಿದರೆ ಅಥವಾ ಸಂಪೂರ್ಣ ಅಂಗವೈಕಲ್ಯ ಉಂಟಾದರೆ 10 ಲಕ್ಷ ರೂ. ಪರಿಹಾರ, ಜೊತೆಗೆ ಮಕ್ಕಳ ಶಿಕ್ಷಣಕ್ಕೂ ಆರ್ಥಿಕ ಬೆಂಬಲ ಸಿಗಲಿದೆ.

ಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾದರೆ 2 ಲಕ್ಷ ರೂ.ವರೆಗೆ ಚಿಕಿತ್ಸಾ ವೆಚ್ಚ, ಡೆಲಿವರಿ ಸಿಬ್ಬಂದಿಯ ಕುಟುಂಬದ ಆರೋಗ್ಯ ರಕ್ಷಣೆಗಾಗಿ 1 ಲಕ್ಷ ರೂ. ಕವರ್ ದೊರೆಯಲಿದೆ.

ಎಲ್ಲಾ ಮಹಿಳಾ ಡೆಲಿವರಿ ಪಾಲುದಾರರಿಗೆ ಹಾಗೂ ಪುರುಷ ಪಾಲುದಾರರ ಪತ್ನಿಯರಿಗೆ ಈ ವಿಮೆಯಡಿ ಹೆರಿಗೆ ಸೌಲಭ್ಯ ಒದಗಿಸಲಾಗುತ್ತದೆ. ಕಳೆದ ಬಾರಿ ಶೇ. 75ರಷ್ಟು ಪುರುಷ ಸಿಬ್ಬಂದಿಯ ಪತ್ನಿಯರು ಹಾಗೂ ಶೇ. 25ರಷ್ಟು ಮಹಿಳಾ ಸಿಬ್ಬಂದಿ ಈ ಸೌಲಭ್ಯ ಬಳಸಿಕೊಂಡಿದ್ದರು.

ಈ ವಿಮಾ ಪಾಲಿಸಿಯ ಬಹುದೊಡ್ಡ ವಿಶೇಷತೆಯೆಂದರೆ, ಇದರಲ್ಲಿ ಯಾವುದೇ ‘ಕಾಯುವಿಕೆಯ ಅವಧಿ’ ಇರುವುದಿಲ್ಲ. ಮೊದಲೇ ಇರುವ ಕಾಯಿಲೆಗಳಿಗೂ ಕೆಲಸಕ್ಕೆ ಸೇರಿದ ಮೊದಲ ದಿನದಿಂದಲೇ ವಿಮೆ ಅನ್ವಯವಾಗುತ್ತದೆ. 10,000 ರೂ.ವರೆಗೆ ಹೊರರೋಗಿ (ಒಪಿಡಿ) ಚಿಕಿತ್ಸೆ, 10,000 ರೂ.ವರೆಗಿನ ತುರ್ತು ಆಂಬ್ಯುಲೆನ್ಸ್ ಸೇವೆ, ಆಸ್ಪತ್ರೆಗೆ ದಾಖಲಾಗುವ ಮುನ್ನ ಹಾಗೂ ನಂತರದ ವೆಚ್ಚ, ಚಿಕಿತ್ಸೆ ಪಡೆಯುವಾಗ ಆಗುವ ವೇತನ ನಷ್ಟಕ್ಕೆ ಬೆಂಬಲ ಕೂಡ ಇದರಲ್ಲಿ ಸೇರಿದೆ.

ಸಿಬ್ಬಂದಿಗಳು ಸ್ವಿಗ್ಗಿ ಡೆಲಿವರಿ ಪಾರ್ಟ್ನರ್ ಆ್ಯಪ್ ಮೂಲಕವೇ ಈ ಎಲ್ಲ ಪ್ರಯೋಜನಗಳನ್ನು ಸುಲಭವಾಗಿ ಕ್ಲೈಮ್ ಮಾಡಬಹುದು.

ಇಂಡಸ್‌ಇಂಡ್ ಜನರಲ್ ಇನ್ಶೂರೆನ್ಸ್ ಸಹಯೋಗದಲ್ಲಿ, ಎಲ್ಲಾ ಸ್ವಿಗ್ಗಿ ಡೆಲಿವರಿ ಪಾಲುದಾರರು ಮತ್ತು ಅವರ ಕುಟುಂಬದವರು ದಿನದ 24 ಗಂಟೆಯೂ ತಜ್ಞ ವೈದ್ಯರೊಂದಿಗೆ ಉಚಿತವಾಗಿ ಟೆಲಿಕನ್ಸಲ್ಟೇಶನ್ ಪಡೆಯಬಹುದು. ಅಲ್ಲದೆ, ಔಷಧಿಗಳು ಮತ್ತು ಲ್ಯಾಬ್ ಟೆಸ್ಟ್‌ಗಳ ಮೇಲೂ ರಿಯಾಯಿತಿ ಸಿಗಲಿದೆ.

ಈ ಬಗ್ಗೆ ಹೆಚ್ಚಿನ ವಿವರ ಹಂಚಿಕೊಂಡಿರುವ ಸ್ವಿಗ್ಗಿ ಫುಡ್ ಮಾರ್ಕೆಟ್‌ಪ್ಲೇಸ್‌ನ ಸಿಒಒ ಸೌರವ್ ಗೋಯಲ್, “ಭಾರತದ ಗಿಗ್ ಆರ್ಥಿಕತೆಯಲ್ಲಿ ನಮ್ಮ ಡೆಲಿವರಿ ಪಾರ್ಟ್ನರ್ ವಿಮಾ ಯೋಜನೆಯು ಅತ್ಯಂತ ಸಮಗ್ರ ರಕ್ಷಣಾ ಉಪಕ್ರಮವಾಗಿದೆ. ಕಳೆದ ವರ್ಷ ಲಕ್ಷಾಂತರ ಪಾಲುದಾರರು ಇದರ ಲಾಭ ಪಡೆದಿದ್ದಾರೆ. ಇದೀಗ ಹೆಚ್ಚಿನ ಪ್ರಯೋಜನಗಳೊಂದಿಗೆ ಈ ಯೋಜನೆಯನ್ನು ನವೀಕರಿಸುವ ಮೂಲಕ, ಸಿಬ್ಬಂದಿಗೆ ಅತ್ಯಂತ ಅಗತ್ಯವಿರುವ ಸಮಯದಲ್ಲಿ ನಾವು ಆರ್ಥಿಕ ಮತ್ತು ಆರೋಗ್ಯ ರಕ್ಷಣೆಯನ್ನು ಒದಗಿಸುತ್ತಿದ್ದೇವೆ. ಇಂಡಸ್‌ಇಂಡ್ ಜನರಲ್ ಇನ್ಶೂರೆನ್ಸ್ ಜೊತೆಗಿನ ನಮ್ಮ ಸಹಭಾಗಿತ್ವ ಮುಂದುವರಿದಿರುವುದು ಸಂತಸ ತಂದಿದೆ,” ಎಂದರು.

ವಿಮಾ ರಕ್ಷಣೆಯ ಜೊತೆಗೆ, ಸ್ವಿಗ್ಗಿ ಕಳೆದ ವರ್ಷ ಹಲವು ನಗರಗಳಲ್ಲಿ ಡೆಲಿವರಿ ಸಿಬ್ಬಂದಿಗಾಗಿ ಉಚಿತ ‘ಆರೋಗ್ಯ ತಪಾಸಣಾ ಶಿಬಿರ’ಗಳನ್ನು ಆಯೋಜಿಸಿತ್ತು. ಈ ವರ್ಷ ದೇಶಾದ್ಯಂತ ಮತ್ತಷ್ಟು ನಗರಗಳಿಗೆ ಈ ಶಿಬಿರಗಳನ್ನು ವಿಸ್ತರಿಸಲು ಕಂಪನಿ ನಿರ್ಧರಿಸಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular