ಬೆಂಗಳೂರು: ನಂದಿನಿ ಹಾಲು ಮತ್ತು ಮೊಸರಿನ ಬೆಲೆ ಏರಿಕೆಯಿಂದ ಗ್ರಾಹಕರಲ್ಲಿ ಅಸಮಾಧಾನ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಮಹತ್ವದ ಕ್ರಮಕ್ಕೆ ಮುಂದಾಗಿದೆ. ನಂದಿನಿ ಮೊಸರಿನ ಬೆಲೆಯನ್ನು ಸ್ವಲ್ಪ ಕಡಿಮೆ ಮಾಡುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ . ಈ ಸಂಬಂಧ ಶೀಘ್ರದಲ್ಲೇ ಆದೇಶ ಹೊರಬೀಳುವ ಸಾಧ್ಯತೆಯಿದೆ.
ಇತ್ತೀಚಿನ ಬೆಲೆ ಏರಿಕೆಯಿಂದ ಸಾಮಾನ್ಯ ಜನರ ದಿನನಿತ್ಯದ ಖರ್ಚು ಹೆಚ್ಚಾಗಿದೆ. ವಿಶೇಷವಾಗಿ ಹಾಲು ಮತ್ತು ಮೊಸರು ಖರೀದಿಸುವ ಕುಟುಂಬಗಳಿಗೆ ಬೆಲೆ ಏರಿಕೆ ಹೊರೆಯಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದ್ದು, ಸರ್ಕಾರದ ಮೇಲೆ ಬೆಲೆ ಇಳಿಸುವಂತೆ ಒತ್ತಡ ಹೆಚ್ಚಾಗಿದೆ. ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮೊಸರಿನ ಬೆಲೆಯನ್ನು ಸ್ವಲ್ಪ ಕಡಿಮೆ ಮಾಡುವಂತೆ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.
ಹಾಲಿನ ಬೆಲೆ ಇಳಿಕೆ ಇಲ್ಲ, ಮೊಸರಿಗೆ ಮಾತ್ರ ರಿಲೀಫ್?
ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಹಾಲಿನ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡುವ ಪ್ರಸ್ತಾಪವಿಲ್ಲ. ಆದರೆ ನಂದಿನಿ ಮೊಸರಿನ ಬೆಲೆಯನ್ನು ಸ್ವಲ್ಪ ಇಳಿಸುವ ಕುರಿತು ಸರ್ಕಾರ ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಗ್ರಾಹಕರಿಗೆ ಸಿಗುತ್ತಾ ಬೆಲೆ ಇಳಿಕೆಯ ಸಿಹಿ ಸುದ್ದಿ?
ಹಾಲು ಮತ್ತು ಮೊಸರು ಬಹುತೇಕ ಕುಟುಂಬಗಳ ದಿನನಿತ್ಯದ ಆಹಾರ ಪದಾರ್ಥಗಳಾಗಿವೆ. ಇವುಗಳ ಬೆಲೆ ಏರಿಕೆಯು ಜನಸಾಮಾನ್ಯರ ಬಜೆಟ್ ಮೇಲೆ ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಮೊಸರಿನ ಬೆಲೆ ಇಳಿಸುವ ಸರ್ಕಾರದ ನಿರ್ಧಾರಕ್ಕೆ ಗ್ರಾಹಕರು ಎದುರು ನೋಡುತ್ತಿದ್ದಾರೆ.ಆದರೆ ಮೊಸರಿನ ಬೆಲೆ ಎಷ್ಟು ಇಳಿಕೆಯಾಗಲಿದೆ, ಯಾವ ದಿನದಿಂದ ಹೊಸ ದರ ಜಾರಿಗೆ ಬರಲಿದೆ ಎಂಬ ಬಗ್ಗೆ ಅಧಿಕೃತ ಆದೇಶ ಹೊರಬಂದ ಬಳಿಕವೇ ಸ್ಪಷ್ಟವಾಗಲಿದೆ.
*ನ.06 ರಂದು ಡಾಕ್ ಅದಾಲತ್ ಆಯೋಜನೆ
ಧಾರವಾಡ ಅಂಚೆ ವಿಭಾಗದ ವಿಭಾಗೀಯ ಮಟ್ಟದ ನವೆಂಬರ್-2026 ತಿಂಗಳಿನ ಡಾಕ್ ಅದಾಲತ್ನ್ನು ಧಾರವಾಡ ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕರ ಅಧ್ಯಕ್ಷತೆಯಲ್ಲಿ ನವೆಂಬರ್ 06, 2026 ರಂದು ಬೆಳಿಗ್ಗೆ 11 ಗಂಟೆಗೆ ಧಾರವಾಡ ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ಆಯೋಜಿಸಲಾಗಿದೆ.
ಅಂಚೆ ಸೇವೆಗಳಿಗೆ ಸಂಬಂಧಿಸಿದ ಎಲ್ಲಾ ರೀತಿಯ ದೂರುಗಳು, ವಿಶೇಷವಾಗಿ ಅಂಚೆ, ಸ್ವೀಡ್ ಪೋಸ್ಟ್, ಪಾರ್ಸೆಲ್, ಕೌಂಟರ್ ಸೇವೆಗಳು, ಉಳಿತಾಯ ಬ್ಯಾಂಕ್, ಮನಿ ಆರ್ಡರ್ ಹಾಗೂ ದುರುಪಯೋಗ/ದುರ್ಬಳಕೆಗೆ ಸಂಬಂಧಿಸಿದ ದೂರುಗಳನ್ನು ಡಾಕ್ ಅದಾಲತ್ನಲ್ಲಿ ಪರಿಗಣಿಸಲಾಗುವುದು.
ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಅಂಚೆ ಮೂಲಕ, ಖುದ್ದಾಗಿ ಅಥವಾ ಇ-ಮೇಲ್ ಮೂಲಕ ನವೆಂಬರ್ 04, 2026 ರೊಳಗಾಗಿ ಸಲ್ಲಿಸಬಹುದು. ಸಾರ್ವಜನಿಕ ಅನೂಕೂಲಕ್ಕಾಗಿ ಡಾಕ್ ಅದಾಲತ್ನಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸುವ ಸೌಲಭ್ಯವೂ ಲಭ್ಯವಿದ್ದು, ಸಾರ್ವಜನಿಕರು ತಮ್ಮ ಸಮೀಪದ ಪ್ರಧಾನ ಅಂಚೆ ಕಚೇರಿಯಿಂದ ವಿಸಿ ಮೂಲಕ ಡಾಕ್ ಅದಾಲತ್ನಲ್ಲಿ ಭಾಗವಹಿಸಬಹುದಾಗಿದೆ. ಡಾಕ್ ಅದಾಲತ್ಗೆ ಹಾಜರಾಗುವವರಿಗೆ ಯಾವುದೇ ಪ್ರಯಾಣ ಭತ್ಯೆ/ದಿನಭತ್ಯೆ ನೀಡಲಾಗುವುದಿಲ್ಲ ಎಂದು ಪ್ರಕಟಣೆ ನೀಡಿದೆ.

