ಹಾಸನ: ಹಾಸನ ಶಕ್ತಿ ದೇವತೆ, ಇತಿಹಾಸ ಪ್ರಸಿದ್ಧ ಹಾಸನಾಂಬ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯುತ್ತಿದೆ. ಈ ನಡುವೆ ಶಾಸಕ ಹೆಚ್.ಡಿ.ರೇವಣ್ಣ ನಾಅನು ಈ ಬಾರಿ ಹಾಸನಾಂಬ ದರ್ಶನಕ್ಕೆ ಹೋಗುವುದಿಲ್ಲ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ.ರೇವಣ್ಣ, ಈ ಬಾರಿಯ ಹಾಸನಾಂಬ ದರ್ಶನಕ್ಕೆ ನಮಗೆ ಆಹ್ವಾನವನ್ನೇ ನೀಡಿಲ್ಲ. ನಾನು ಈ ಬಾರಿ ಮಹೋತ್ಸವಕ್ಕೆ ಹೋಗಲ್ಲ ಎಂದು ಹೇಳಿದರು.
ಹಾಸನ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ವಿರುದ್ಧ ಮತ್ತೆ ಹರಿಹಾಯ್ದ ರೇವಣ್ಣ, ಹಾಸನಾಂಬ ದೇವಾಲಯಕ್ಕೆ ನಮಗೆ ಆಹ್ವಾನವನ್ನೇ ನೀಡಿಲ್ಲ. ನಾನೊಬ್ಬ ಮಾಜಿ ಸಚಿವ, ಮೂವತ್ತು ವರ್ಷ ರಾಜಕೀಯ ಮಾಡಿದ್ದೀನಿ. ಹಾಗಿರುವಾಗ ಯಾರೋ ಗುಮಾಸ್ತನ ಕೈಯಲ್ಲಿ ಆಹ್ವಾನ ಕೊಟ್ಟು ಕಳುಹಿಸಿದ್ದಾರೆ. ಅದಕ್ಕೆ ನಾನು ಈ ವರ್ಷ ಹಾಸನಾಂಬೆ ದರ್ಶನಕ್ಕೆ ಹೋಗೋದು ಬೇಡ ಎಂದು ತೀರ್ಮಾನ ಮಾಡಿದ್ದೇನೆ ಎಂದು ಹೇಳಿದರು.
ನನ್ನನ್ನು ಕರೆಯದೇ ಇದ್ದಮೇಲೆ ನಾನು ಯಾಕೆ ಹೋಗಲಿ? ಇಲ್ಲಿಂದಲೇ ಆ ತಾಯಿಗೆ ಕೈ ಮುಗಿಯುತ್ತೇನೆ. ನಮ್ಮ ತಂದೆ ತಾಯಿಯನ್ನ ಕಣ್ಣೀರು ಹಾಕಿಸಿದವರನ್ನ ನೋಡಿಕೊ ಎಂದು ಬೇಡಿಕೊಳ್ಳುತ್ತೇನೆ. ಆಹ್ವಾನವಿಲ್ಲದೆ ಅಲ್ಲಿ ಬಂದು ಯಾಕೆ ಥೂ ಎನಿಸಿಕೊಳ್ಳಲಿ. ನಮ್ಮ ಜಿಲ್ಲೆಯಲ್ಲಿ ಜೆಡಿಎಸ್ ನಾಲ್ಕು, ಬಿಜೆಪಿಯ ಎರಡು ಶಾಸಕರಿದ್ದಾರೆ. ಆದರೆ, ಜಾತ್ರಾ ಮಹೋತ್ಸವದ ಫ್ಲೆಕ್ಸ್ನಲ್ಲಿ ಯಾರ ಫೋಟೋನು ಹಾಕಿಸಿಲ್ಲ. ಇದು ಕಾಂಗ್ರೆಸ್ ಕಾರ್ಯಕ್ರಮ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ರೀತಿಯ ಕಾರ್ಯಕ್ರಮಗಳಿದ್ದರೆ ಸಂಸದರ ಮನೆ ಬಾಗಿಲಿಗೆ ಪಾಸ್ ತೆಗೆದುಕೊಂಡು ಹೋಗಿ ಕೊಡ್ತಾರೆ. ನಮಗೆ ಪಾಸ್ ಕೊಡೋದಿರಲಿ ಆಹ್ವಾನ ಪತ್ರಿಕೆನೇ ಕೊಟ್ಟಿಲ್ಲ. ಎಲ್ಲರಿಗೂ ಸಮಾನವಾಗಿ ಪಾಸ್ ಹಂಚಿಕೆ ಆಗಬೇಕು. ಇಲ್ಲವಾದರೆ ಬುಧವಾರ ನಮ್ಮ ಕಾರ್ಯಕರ್ತರನ್ನ ಮಹೋತ್ಸವಕ್ಕೆ ನುಗ್ಗಿಸುತ್ತೇನೆ ಎಂದು ಎಚ್ಚರಿಸಿದರು.
ಇನ್ನೂ 2000 ಪೊಲೀಸರನ್ನು ಭದ್ರತೆಗೆ ಹಾಕಿಸಿಕೊಳ್ಳಲಿ, ನಾನೇ ಮುಂದೆ ನಿಲ್ಲುತ್ತೇನೆ. ಕೊಟ್ಟರೆ ಎಲ್ಲರಿಗೂ ಪಾಸ್ ಕೊಡಿ ಇಲ್ಲವೇ ಎಲ್ಲರೂ ಸಾಮಾನ್ಯ ಸಾಲಿನಲ್ಲಿ ಹೋಗಲಿ ಎಂದು ಆಗ್ರಹಿಸಿದರು.
ದರ್ಶನಕ್ಕೆ ಕನಿಷ್ಠ ಜಿಲ್ಲಾ ಮಂತ್ರಿ ಕೂಡ ಕರೆ ಮಾಡಿ ಬನ್ನಿ ಎಂದು ಹೇಳಿಲ್ಲ. ಅದಕ್ಕೆ ಈ ಬಾರಿ ಹೋಗಬಾರದು ಎಂದು ತೀರ್ಮಾನ ಮಾಡಿದ್ದೇನೆ. ಗ್ರಾಮ ಸಹಾಯಕನ ಕೈಯಲ್ಲಿ ಪಾಸ್ ಕೊಟ್ಟು ಕಳುಹಿಸಿದ್ದರು, ಬೇಡವೆಂದು ವಾಪಾಸ್ ಕಳುಹಿಸಿದ್ದೇನೆ. ಇದು ಯಾರ ಮನೆಯ ದುಡ್ಡು? ತಾಯಿ ಹೆಸರಿನಲ್ಲಿ ಮಜಾ ಮಾಡಲು ಇಟ್ಟಿರೋದಾ? ಶಾಸಕರು ಇರುವುದು ಏತಕ್ಕೆ? ಒಂದು ಸ್ವಾಗತ ಕಮಾನಿಗೆ 25 ಲಕ್ಷ ರೂ. ಖರ್ಚು ಮಾಡುತ್ತಾರೆ. ಆದರೆ, ಒಬ್ಬ ಶಾಸನಕ ಫೋಟೋ ಹಾಕಿಲ್ಲ. ಡಿಸಿ ಮೇಡಂ ಏನಾದರೂ ಮನೆಯಿಂದ ಹಣ ತಂದು ಕೊಡುತ್ತಾರಾ?ಬುಧವಾರದವರೆಗೂ ಗಡುವು ನೀಡುತ್ತೇನೆ, ಅಷ್ಟರೊಳಗೆ ಸಮಸ್ಯೆ ಬಗೆ ಹರಿಸಬೇಕು ಎಂದು ಒತ್ತಾಯಿಸಿದರು.

