ಓದು ಮುಗಿಸಿ ಕೆಲಸದ ಹುಡುಕಾಟದಲ್ಲಿದ್ದೀರಾ? ದೊಡ್ಡ ಕಂಪನಿಯಲ್ಲಿ ಕೆಲಸದ ಅನುಭವ ಪಡೆಯಬೇಕು, ಜೊತೆಗೆ ಪ್ರತಿ ತಿಂಗಳು ಕೈತುಂಬಾ ಸ್ಟೈಪೆಂಡ್ ಕೂಡ ಸಿಗಬೇಕು ಎಂಬ ಆಸೆ ಇದೆಯೇ? ಹಾಗಿದ್ದರೆ ನಿಮಗೊಂದು ಉತ್ತಮ ಅವಕಾಶವಿದೆ.
ಸರ್ಕಾರಿ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ONGC)ದಲ್ಲಿ ದೇಶಾದ್ಯಂತ ಒಟ್ಟು 3,047 ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. 10ನೇ ತರಗತಿ, ಐಟಿಐ, ಡಿಪ್ಲೊಮಾ ಹಾಗೂ ಪದವಿ ಪೂರ್ಣಗೊಳಿಸಿದ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಗೆ ಅನುಗುಣವಾಗಿ ಅರ್ಜಿ ಸಲ್ಲಿಸಬಹುದು. ಆಯ್ಕೆಯಾದವರಿಗೆ ತಿಂಗಳಿಗೆ ₹8,200ರಿಂದ ₹12,300ರವರೆಗೆ ಸ್ಟೈಪೆಂಡ್ ನೀಡಲಾಗುತ್ತದೆ.
3,047 ಹುದ್ದೆಗಳಿಗೆ ನೇಮಕಾತಿ
ONGC ಅಪ್ರೆಂಟಿಸ್ ನೇಮಕಾತಿ ಪ್ರಕ್ರಿಯೆಯಡಿ ಡೆಹ್ರಾಡೂನ್, ದೆಹಲಿ, ಜೋಧ್ಪುರ, ಗೋವಾ, ಹಜೀರಾ, ಮುಂಬೈ, ಉರಾನ್, ಪನ್ವೇಲ್ ಸೇರಿದಂತೆ ದೇಶದ ವಿವಿಧ ಕೇಂದ್ರಗಳಲ್ಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.
ಅಪ್ರೆಂಟಿಸ್ ಕಾಯ್ದೆ 1961ರ ಅಡಿಯಲ್ಲಿ ಈ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಆದರೆ, ಅಭ್ಯರ್ಥಿಗಳು ಒಂದು ಪ್ರಮುಖ ಅಂಶವನ್ನು ಗಮನಿಸಬೇಕು. ಇದು ಅಪ್ರೆಂಟಿಸ್ಶಿಪ್ ತರಬೇತಿ ಕಾರ್ಯಕ್ರಮವಾಗಿದ್ದು, ಇದನ್ನು ಖಾಯಂ ಸರ್ಕಾರಿ ಉದ್ಯೋಗ ನೇಮಕಾತಿ ಎಂದು ಪರಿಗಣಿಸಬಾರದು.
• ನೇಮಕಾತಿ ಸಂಸ್ಥೆ: ಆಯಿಲ್ ಆ್ಯಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ (ONGC)
• ಒಟ್ಟು ಹುದ್ದೆಗಳು: 3,047
• ಅಧಿಸೂಚನೆ ಸಂಖ್ಯೆ: ONGC/APPR/1/2026
• ಅರ್ಜಿ ಆರಂಭ: ಅಕ್ಟೋಬರ್ 29, 2026
• ಅರ್ಜಿ ಸಲ್ಲಿಸಲು ಕೊನೆಯ ದಿನ: ನವೆಂಬರ್ 20, 2026
ಯಾರೆಲ್ಲ ಅರ್ಜಿ ಸಲ್ಲಿಸಬಹುದು?
10ನೇ ತರಗತಿ, ಐಟಿಐ, ಡಿಪ್ಲೊಮಾ ಹಾಗೂ ಪದವಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆದರೆ, ಹುದ್ದೆ ಮತ್ತು ಟ್ರೇಡ್ಗೆ ಅನುಗುಣವಾಗಿ ಶೈಕ್ಷಣಿಕ ಅರ್ಹತೆಗಳು ಬದಲಾಗುತ್ತವೆ. ಆದ್ದರಿಂದ ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯಲ್ಲಿ ತಮ್ಮ ವಿದ್ಯಾರ್ಹತೆಗೆ ಸಂಬಂಧಿಸಿದ ಹುದ್ದೆಗಳ ವಿವರಗಳನ್ನು ಪರಿಶೀಲಿಸಬೇಕು.
ಅಧಿಸೂಚನೆಯ ಪ್ರಕಾರ, ನವೆಂಬರ್ 29, 2026ರ ವೇಳೆಗೆ ಅಭ್ಯರ್ಥಿಗಳ ವಯಸ್ಸು 18ರಿಂದ 24 ವರ್ಷಗಳ ನಡುವೆ ಇರಬೇಕು.
• ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ.
• ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ.
• ಅಂಗವಿಕಲ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ.
ಅಲ್ಲದೆ, ಅಭ್ಯರ್ಥಿಗಳು ಸಂಬಂಧಿತ ಅರ್ಹತಾ ಜಿಲ್ಲೆಯ ನಿವಾಸಿಯಾಗಿರಬೇಕು ಅಥವಾ ಆ ಜಿಲ್ಲೆಯಲ್ಲಿ ವಿದ್ಯಾಭ್ಯಾಸ ಮಾಡಿರಬೇಕು.
ತಿಂಗಳಿಗೆ ಎಷ್ಟು ಸ್ಟೈಪೆಂಡ್ ಸಿಗಲಿದೆ?
ಈ ಅಪ್ರೆಂಟಿಸ್ ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಅವರ ವಿದ್ಯಾರ್ಹತೆ ಮತ್ತು ಟ್ರೇಡ್ಗೆ ಅನುಗುಣವಾಗಿ ತಿಂಗಳಿಗೆ ₹8,200ರಿಂದ ₹12,300ರವರೆಗೆ ಸ್ಟೈಪೆಂಡ್ ನೀಡಲಾಗುತ್ತದೆ.ಎಲ್ಲಾ ಟ್ರೇಡ್ಗಳಿಗೂ ತರಬೇತಿ ಅವಧಿ 12 ತಿಂಗಳುಗಳಾಗಿರುತ್ತದೆ. ಈ ಹಿಂದೆ ಅಪ್ರೆಂಟಿಸ್ ತರಬೇತಿ ಪೂರ್ಣಗೊಳಿಸಿ, ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಕೆಲಸದ ಅನುಭವ ಹೊಂದಿರುವ ಅಭ್ಯರ್ಥಿಗಳು ಈ ನೇಮಕಾತಿಗೆ ಅರ್ಹರಾಗಿರುವುದಿಲ್ಲ.
ಆಯ್ಕೆ ಪ್ರಕ್ರಿಯೆ ಹೇಗೆ ನಡೆಯಲಿದೆ?
ONGC ಅಪ್ರೆಂಟಿಸ್ ಹುದ್ದೆಗಳಿಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯಲ್ಲಿ ಗಳಿಸಿರುವ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.
ನಂತರ ಆಯ್ಕೆಯಾದ ಅಭ್ಯರ್ಥಿಗಳ ಪ್ರಮಾಣಪತ್ರಗಳನ್ನು ಪರಿಶೀಲಿಸಲಾಗುತ್ತದೆ. ಇಬ್ಬರು ಅಭ್ಯರ್ಥಿಗಳು ಸಮಾನ ಅಂಕಗಳನ್ನು ಪಡೆದಿದ್ದರೆ, ವಯಸ್ಸಿನಲ್ಲಿ ಹಿರಿಯ ಅಭ್ಯರ್ಥಿಗೆ ಆದ್ಯತೆ ನೀಡಲಾಗುತ್ತದೆ.
ಆಯ್ಕೆ ಫಲಿತಾಂಶಗಳನ್ನು ಡಿಸೆಂಬರ್ 15, 2026ರಂದು ಪ್ರಕಟಿಸುವ ಸಾಧ್ಯತೆಯಿದೆ.
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಸಂಬಂಧಿತ ಪೋರ್ಟಲ್ಗಳಲ್ಲಿ ಮೊದಲು ನೋಂದಣಿ ಮಾಡಿಕೊಳ್ಳಬೇಕು.
• NAPS ಟ್ರೇಡ್ಗಳಿಗೆ: apprenticeshipindia.gov.in
• NATS ಟ್ರೇಡ್ಗಳಿಗೆ: nats.education.gov.in
ನೋಂದಣಿ ಪೂರ್ಣಗೊಂಡ ಬಳಿಕ ಪೋರ್ಟಲ್ನಲ್ಲಿ ನೀಡಿರುವ ಸೂಚನೆಗಳಂತೆ ಅರ್ಜಿ ಪ್ರಕ್ರಿಯೆಯನ್ನು ಮುಗಿಸಬೇಕು.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
• ಜನ್ಮ ದಿನಾಂಕದ ದೃಢೀಕರಣ ಪತ್ರ
• ವಿದ್ಯಾರ್ಹತೆಯ ಅಂಕಪಟ್ಟಿಗಳು
• ಪದವಿ ಅಥವಾ ಐಟಿಐ ಪ್ರಮಾಣಪತ್ರ
• ಜಾತಿ ಪ್ರಮಾಣಪತ್ರ (ಅನ್ವಯಿಸಿದರೆ)
• ಅಂಗವೈಕಲ್ಯ ಪ್ರಮಾಣಪತ್ರ (ಅನ್ವಯಿಸಿದರೆ)
• ಗುರುತಿನ ಚೀಟಿ
ಕೊನೆಯ ದಿನಾಂಕ ನವೆಂಬರ್ 20, 2026: ಆಸಕ್ತ ಅಭ್ಯರ್ಥಿಗಳು ಕೊನೆಯ ಕ್ಷಣದವರೆಗೆ ಕಾಯದೆ ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಮುನ್ನ ONGC ಅಧಿಕೃತ ಅಧಿಸೂಚನೆಯಲ್ಲಿ ಹುದ್ದೆಗಳು, ವಿದ್ಯಾರ್ಹತೆ, ವಯೋಮಿತಿ ಹಾಗೂ ಇತರ ಷರತ್ತುಗಳನ್ನು ಕಡ್ಡಾಯವಾಗಿ ಪರಿಶೀಲಿಸಿ.

