ಬೆಂಗಳೂರು- ನಗರದ ಆಸ್ತಿ ಮಾಲೀಕರಿಗೆ ಇ-ಖಾತಾ ಪಡೆಯುವ ಪ್ರಕ್ರಿಯೆಯನ್ನು ಮತ್ತಷ್ಟು ಸುಲಭಗೊಳಿಸುವ ಉದ್ದೇಶದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಇಂದಿನಿಂದ ನನ್ನ ಇ-ಖಾತಾ, ನನ್ನ ಹಕ್ಕು ಅಭಿಯಾನವನ್ನು ಪುನರಾರಂಭಿಸಿದೆ.
ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ 62 ಸಹಾಯಕ ಕಂದಾಯ ಅಧಿಕಾರಿ (ಎಆರ್ಒ) ಕಚೇರಿಗಳಲ್ಲಿ ಈ ಮೇಳ ನಡೆಯಲಿದ್ದು, ನಾಗರಿಕರು ತಮ್ಮ ಆಸ್ತಿಗೆ ಸಂಬಂಧಿಸಿದ ಇ-ಖಾತಾ ಸೇವೆಗಳನ್ನು ಪಡೆದುಕೊಳ್ಳಬಹುದು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರ ನಿರ್ದೇಶನದ ಮೇರೆಗೆ ಅಭಿಯಾನವನ್ನು ಮರು ಆರಂಭಿಸಲಾಗುತ್ತಿದೆ.
ಇ-ಖಾತಾ ಪಡೆಯುವುದು, ಹೊಸ ಖಾತೆ ಮಾಡಿಸಿಕೊಳ್ಳುವುದು ಹಾಗೂ ಖಾತಾಗೆ ಸಂಬಂಧಿಸಿದ ಇತರ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ನಾಗರಿಕರಿಗೆ ಈ ಅಭಿಯಾನ ನೆರವಾಗಲಿದೆ. ನಾಗರಿಕರು ತಮ್ಮ ಸಮೀಪದ ಅಭಿಯಾನದ ಕೇಂದ್ರಕ್ಕೆ ಭೇಟಿ ನೀಡಿ ಅಗತ್ಯ ಮಾಹಿತಿ ಮತ್ತು ಸೇವೆಗಳನ್ನು ಪಡೆದುಕೊಳ್ಳಬಹುದು ಎಂದು ಜಿಬಿಎ ಕಂದಾಯ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ಸ್ವತಃ ಅರ್ಜಿ ಸಲ್ಲಿಸಲು ಪ್ರಕ್ರಿಯೆ
ಸ್ವತಃ ಅರ್ಜಿ ಸಲ್ಲಿಸಲು ಅವಕಾಶ:ಇ-ಖಾತಾ ಪಡೆಯಲು ಮಧ್ಯವರ್ತಿಗಳ ನೆರವು ಪಡೆಯುವ ಬದಲು ನಾಗರಿಕರೇ ಸ್ವತಃ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವಂತೆ ಜಿಬಿಎ ಉತ್ತೇಜಿಸುತ್ತಿದೆ. ಇ-ಖಾತಾ ಸೇವೆಗಳಿಗೆ ಸಂಬಂಧಿಸಿದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಕುರಿತು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಾಹಿತಿ ನೀಡುವ ವಿಡಿಯೋಗಳನ್ನು ಜಿಬಿಎಯ ಯೂಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಮಾಡಲಾಗಿದೆ.
ನಾಗರಿಕರು ಈ ವಿಡಿಯೋಗಳನ್ನು ವೀಕ್ಷಿಸಿ ಅರ್ಜಿ ಸಲ್ಲಿಸುವ ವಿಧಾನವನ್ನು ತಿಳಿದುಕೊಳ್ಳಬಹುದು. ಬಳಿಕ ಜಿಬಿಎಯ ಇ-ಆಸ್ತಿ ಪೋರ್ಟಲ್ಗೆ ಭೇಟಿ ನೀಡಿ ಅಗತ್ಯ ವಿವರಗಳನ್ನು ಒದಗಿಸುವ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಬಹುದು. ಇ-ಖಾತಾ ಕುರಿತ ಹೆಚ್ಚಿನ ಮಾಹಿತಿಗಾಗಿ ಆಯಾ ನಗರ ಪಾಲಿಕೆಗಳ ಕಂದಾಯ ವಿಭಾಗದ ಸಹಾಯವಾಣಿಯನ್ನು ಸಂಪರ್ಕಿಸಬಹುದಾಗಿದೆ.
ಮನೆ ಬಾಗಿಲಿಗೇ ಜನಸೇವಕ ನೆರವು
ಮನೆ ಬಾಗಿಲಿಗೇ ಜನಸೇವಕ ನೆರವು:ಇ-ಖಾತಾ ಪಡೆಯಲು, ಹೊಸ ಖಾತೆ ಮಾಡಿಸಿಕೊಳ್ಳಲು ಅಥವಾ ಬಿ-ಖಾತಾದಿಂದ ಎ-ಖಾತಾಗೆ ಪರಿವರ್ತಿಸಿಕೊಳ್ಳಲು ತೊಂದರೆ ಅನುಭವಿಸುತ್ತಿರುವ ನಾಗರಿಕರಿಗಾಗಿ ಜನಸೇವಕ ಸೇವೆಯನ್ನೂ ಕಲ್ಪಿಸಲಾಗಿದೆ. ಈ ಸೇವೆಯಡಿ ಜನಸೇವಕರು ನಾಗರಿಕರ ಮನೆ ಬಾಗಿಲಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ನೆರವು ನೀಡಲಿದ್ದಾರೆ.ಜನಸೇವಕ ಸೇವೆ ಪಡೆಯಲು ನಿಗದಿತ ವೆಬ್ಸೈಟ್ ಮೂಲಕ ಸ್ಲಾಟ್ ಕಾಯ್ದಿರಿಸಿಕೊಳ್ಳಬಹುದು ಅಥವಾ ಸಂಬಂಧಿತ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದು. ಇದರಿಂದ ಕಚೇರಿಗಳಿಗೆ ಪದೇಪದೆ ಅಲೆದಾಡುವುದನ್ನು ತಪ್ಪಿಸಬಹುದು ಎಂಬುದು ಜಿಬಿಎಯ ಉದ್ದೇಶವಾಗಿದೆ.ಬೆಂಗಳೂರು ಒನ್ ಕೇಂದ್ರಗಳಲ್ಲೂ ಸೇವೆ:ಇ-ಖಾತಾ ಅರ್ಜಿ ಸಲ್ಲಿಸಲು ನಾಗರಿಕರಿಗೆ ಮತ್ತೊಂದು ಅವಕಾಶ ಕಲ್ಪಿಸಲಾಗಿದ್ದು, ಜಿಬಿಎ ವ್ಯಾಪ್ತಿಯ 140 ಬೆಂಗಳೂರು ಒನ್ ಕೇಂದ್ರಗಳಲ್ಲಿಯೂ ಈ ಸೌಲಭ್ಯ ಲಭ್ಯವಿದೆ. ನಾಗರಿಕರು ತಮ್ಮ ಸಮೀಪದ ಬೆಂಗಳೂರು ಒನ್ ಕೇಂದ್ರಕ್ಕೆ ಭೇಟಿ ನೀಡಿ 45 ರೂ.ಶುಲ್ಕ ಪಾವತಿಸುವ ಮೂಲಕ ಇ-ಖಾತಾಗೆ ಅರ್ಜಿ ಸಲ್ಲಿಸಬಹುದು ಎಂದು ಜಿಬಿಎ ಕಂದಾಯ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ಒಟ್ಟಾರೆ, 62 ಎಆರ್ಒ ಕಚೇರಿಗಳಲ್ಲಿ ನಡೆಯುವ ವಿಶೇಷ ಅಭಿಯಾನ, ಜನಸೇವಕ ಸೇವೆ ಹಾಗೂ ಬೆಂಗಳೂರು ಒನ್ ಕೇಂದ್ರಗಳ ಮೂಲಕ ಇ-ಖಾತಾ ಸೇವೆಗಳನ್ನು ಜನರಿಗೆ ಸುಲಭವಾಗಿ ತಲುಪಿಸಲು ಜಿಬಿಎ ಮುಂದಾಗಿದೆ. ಆಸ್ತಿ ಮಾಲೀಕರು ಈ ಸೌಲಭ್ಯಗಳನ್ನು ಬಳಸಿಕೊಂಡು ತಮ್ಮ ಇ-ಖಾತಾ ಸಂಬಂಧಿತ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

