ಪಂಚಕುಲ: ಶಾಲೆ ಎಂದರೆ ಮಕ್ಕಳಿಗೆ ಸುರಕ್ಷತೆ, ಪ್ರೀತಿ ಹಾಗೂ ಕಲಿಕೆಯ ತಾಣವಾಗಿರಬೇಕು. ಆದರೆ ಹರಿಯಾಣದ ಪಂಚಕುಲದಲ್ಲಿ ನಡೆದಿರುವ ಘಟನೆಯೊಂದು ಪೋಷಕರನ್ನು ಬೆಚ್ಚಿಬೀಳಿಸಿದೆ. ಆಟವಾಡುತ್ತಾ, ಕಲಿಯುತ್ತಾ ಬಾಲ್ಯ ಕಳೆಯಬೇಕಿದ್ದ ಪುಟ್ಟ ವಿಶೇಷ ಚೇತನ ಬಾಲಕಿಯೊಬ್ಬಳು ಶಾಲೆಯ ಆವರಣದಲ್ಲೇ ಭೀಕರ ಹಲ್ಲೆಗೆ ಒಳಗಾಗಿರುವ ಆರೋಪ ಕೇಳಿಬಂದಿದೆ. ಮೂರನೇ ತರಗತಿಯ ವಿದ್ಯಾರ್ಥಿಯೊಬ್ಬ ಎಲ್ಕೆಜಿ (KG) ತರಗತಿಯ ಬಾಲಕಿಯ ಮೇಲೆ ಕಲ್ಲು ಹಾಗೂ ಹೂವಿನ ಕುಂಡದಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದ್ದು, ಬಾಲಕಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾಳೆ ಎಂದು ವರದಿಯಾಗಿದೆ.
ಪಂಚಕುಲದ ಸೆಕ್ಟರ್ 20ರ ಸಂಸ್ಕೃತಿ ಮಾಡೆಲ್ ಶಾಲೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ವರದಿಗಳ ಪ್ರಕಾರ, ಮೂರನೇ ತರಗತಿಯ ವಿದ್ಯಾರ್ಥಿ ಮೊದಲು ಬಾಲಕಿಯ ಮೇಲೆ ಪದೇಪದೇ ಕಲ್ಲುಗಳಿಂದ ಹಲ್ಲೆ ನಡೆಸಿದ್ದಾನೆ. ಬಳಿಕ ಹೂವಿನ ಕುಂಡವನ್ನು ಬಳಸಿ ಮತ್ತಷ್ಟು ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಹಲ್ಲೆಯ ತೀವ್ರತೆಗೆ ಬಾಲಕಿ ಪ್ರಜ್ಞೆ ಕಳೆದುಕೊಂಡಿದ್ದರೂ ದಾಳಿ ಮುಂದುವರಿದಿದೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಗಾಯಗೊಂಡು ಅಸ್ವಸ್ಥಳಾಗಿದ್ದ ಬಾಲಕಿಯನ್ನು ಸ್ವಲ್ಪ ದೂರ ಎಳೆದೊಯ್ದಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ.
ಆಸ್ಪತ್ರೆಯಿಂದ ಆಸ್ಪತ್ರೆಗೆ ಸಾಗಾಟ: ಬಾಲಕಿಯ ಸ್ಥಿತಿ ಗಂಭೀರ
ಘಟನೆ ತಿಳಿಯುತ್ತಿದ್ದಂತೆ ಗಾಯಗೊಂಡ ಬಾಲಕಿಯನ್ನು ಪಂಚಕುಲದ ಸೆಕ್ಟರ್ 6ರ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಬಾಲಕಿಯ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಚಂಡೀಗಢದ ಪ್ರತಿಷ್ಠಿತ PGIMER ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯ ಬಾಲಕಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಗಳು ತಿಳಿಸಿವೆ.
ಶಾಲೆಗೆ ಧಾವಿಸಿದ ಪೊಲೀಸರು; ಪೋಷಕರ ವಿಚಾರಣೆ
ಘಟನೆಯ ಮಾಹಿತಿ ಪಡೆದ ತಕ್ಷಣ ಸೆಕ್ಟರ್ 20ರ ಪೊಲೀಸ್ ಠಾಣೆಯ ಎಸ್ಎಚ್ಒ ಯಶದೀಪ್ ಹಾಗೂ ತನಿಖಾಧಿಕಾರಿ ಪ್ರದೀಪ್ ಕುಮಾರ್ ಪೊಲೀಸ್ ತಂಡದೊಂದಿಗೆ ಶಾಲೆಗೆ ಭೇಟಿ ನೀಡಿದ್ದಾರೆ.
ಶಾಲೆಯ ಆಡಳಿತ ಮಂಡಳಿಯಿಂದ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದು, ಘಟನೆ ನಡೆದ ಸಂದರ್ಭ, ಹಲ್ಲೆಗೆ ಕಾರಣ ಹಾಗೂ ಆ ಸಮಯದಲ್ಲಿ ಶಾಲೆಯಲ್ಲಿ ಮೇಲ್ವಿಚಾರಣೆ ಹೇಗಿತ್ತು ಎಂಬುದನ್ನು ಪರಿಶೀಲಿಸುತ್ತಿದ್ದಾರೆ. ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ವಿದ್ಯಾರ್ಥಿಯ ಪೋಷಕರನ್ನೂ ವಿಚಾರಣೆ ನಡೆಸಲಾಗುತ್ತಿದೆ.
ಶಾಲೆಗಳಲ್ಲಿನ ಮಕ್ಕಳ ಸುರಕ್ಷತೆ ಬಗ್ಗೆ ಮತ್ತೆ ಚರ್ಚೆ
ಪುಟ್ಟ ಮಕ್ಕಳು ಓದುವ ಶಾಲೆಯಲ್ಲೇ ಇಂತಹ ಆಘಾತಕಾರಿ ಘಟನೆ ನಡೆದಿದೆ ಎಂಬ ಆರೋಪ ಪೋಷಕರಲ್ಲಿ ಆತಂಕ ಮೂಡಿಸಿದೆ. ವಿಶೇಷವಾಗಿ ವಿಶೇಷ ಅಗತ್ಯಗಳಿರುವ ಮಕ್ಕಳನ್ನು ಶಾಲೆಗಳಲ್ಲಿ ಹೇಗೆ ಸುರಕ್ಷಿತವಾಗಿ ನೋಡಿಕೊಳ್ಳಲಾಗುತ್ತಿದೆ? ಮಕ್ಕಳ ಚಲನವಲನಗಳ ಮೇಲೆ ಶಿಕ್ಷಕರು ಮತ್ತು ಸಿಬ್ಬಂದಿ ಎಷ್ಟು ನಿಗಾ ವಹಿಸುತ್ತಿದ್ದಾರೆ? ಎಂಬ ಪ್ರಶ್ನೆಗಳು ಇದೀಗ ಮುನ್ನೆಲೆಗೆ ಬಂದಿವೆ.
ಶಾಲೆಗಳಲ್ಲಿ ಪಾಠ ಮತ್ತು ಪಠ್ಯೇತರ ಚಟುವಟಿಕೆಗಳಷ್ಟೇ ಅಲ್ಲದೆ, ಪ್ರತಿಯೊಂದು ಮಗುವಿನ ಸುರಕ್ಷತೆಗೂ ಆದ್ಯತೆ ನೀಡುವುದು ಅತ್ಯಗತ್ಯ. ವಿಶೇಷ ಅಗತ್ಯಗಳಿರುವ ಮಕ್ಕಳಿಗೆ ಹೆಚ್ಚುವರಿ ಕಾಳಜಿ, ಸೂಕ್ತ ಮೇಲ್ವಿಚಾರಣೆ ಹಾಗೂ ಸುರಕ್ಷಿತ ವಾತಾವರಣ ಕಲ್ಪಿಸಬೇಕಿದೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದು, ಘಟನೆಯ ಸಂಪೂರ್ಣ ವಿವರಗಳು ತನಿಖೆಯ ಬಳಿಕ ಬಹಿರಂಗವಾಗಬೇಕಿದೆ.

