ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ‘ಜೈಲರ್ 2’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸಾರ್ವಕಾಲಿಕ ದಾಖಲೆಗಳನ್ನು ಉಡಾಯಿಸುತ್ತಾ ಮುನ್ನುಗ್ಗುತ್ತಿದೆ. 2023 ರಲ್ಲಿ ಬ್ಲಾಕ್‌ಬಸ್ಟರ್ ಹಿಟ್ ಆಗಿದ್ದ ‘ಜೈಲರ್’ ಚಿತ್ರದ ಮುಂದುವರಿದ ಭಾಗವಾಗಿ ತೆರೆಗೆ ಬಂದಿರುವ ಈ ಸಿನಿಮಾ, ಇದೀಗ ಜಾಗತಿಕವಾಗಿ 800 ಕೋಟಿ ರೂಪಾಯಿಗಳ ಗಡಿಯನ್ನು ತಲುಪಲು ಸಜ್ಜಾಗಿದೆ. ಈ ನಡುವೆ ದಕ್ಷಿಣ ಭಾರತದ ಚಿತ್ರರಂಗದಲ್ಲೇ ಇದುವರೆಗೆ ಯಾವುದೇ ಸಿನಿಮಾ ಮಾಡಿರದ ಅಭೂತಪೂರ್ವ ದಾಖಲೆಯನ್ನು ರಜನಿಕಾಂತ್ ತಮ್ಮದಾಗಿಸಿಕೊಂಡಿದ್ದಾರೆ.
ದಕ್ಷಿಣದ ಪ್ರತಿಯೊಂದು ರಾಜ್ಯದಲ್ಲೂ 75 ಕೋಟಿಗೂ ಹೆಚ್ಚು ಗಳಿಕೆ: ದಕ್ಷಿಣ ಭಾರತದ ಪ್ರಮುಖ ರಾಜ್ಯಗಳಾದ ತಮಿಳುನಾಡು, ತೆಲುಗು ರಾಜ್ಯಗಳು (ಆಂಧ್ರಪ್ರದೇಶ ಹಾಗೂ ತೆಲಂಗಾಣ), ಕರ್ನಾಟಕ ಮತ್ತು ಕೇರಳದಲ್ಲಿ ಪ್ರತ್ಯೇಕವಾಗಿ ತಲಾ 75 ಕೋಟಿ ರೂಪಾಯಿಗೂ ಹೆಚ್ಚು ಗ್ರಾಸ್ ಕಲೆಕ್ಷನ್ ಮಾಡಿದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ ‘ಜೈಲರ್ 2’ ಪಾತ್ರವಾಗಿದೆ. ದಕ್ಷಿಣ ಭಾರತದ ಪ್ರತಿಯೊಂದು ಚಿತ್ರರಂಗದಲ್ಲೂ ‘ತಲೈವರ್’ ರಜನಿಕಾಂತ್ ಅವರಿಗೆ ಇರುವ ಅಪಾರ ಜನಪ್ರಿಯತೆ ಮತ್ತು ಮಾರುಕಟ್ಟೆಗೆ ಈ ದಾಖಲೆಯೇ ಸಾಕ್ಷಿಯಾಗಿದೆ.
ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಈ ಚಿತ್ರವನ್ನು ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ. ವಿದ್ಯಾ ಬಾಲನ್, ಎಸ್.ಜೆ. ಸೂರ್ಯ, ಸೂರಜ್ ವೆಂಜಾರಮೂಡು, ಮಿಥುನ್ ಚಕ್ರವರ್ತಿ, ರಮ್ಯಾ ಕೃಷ್ಣನ್, ಮಿರ್ನಾ ಮೆನನ್ ಮತ್ತು ನಮೋ ನಾರಾಯಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅನಿರುದ್ಧ್ ರವಿಚಂದರ್ ಅವರ ಸಂಗೀತ ಸಂಯೋಜನೆ ಚಿತ್ರಕ್ಕೆ ಮತ್ತಷ್ಟು ಶಕ್ತಿ ತುಂಬಿದೆ.
ಅಲ್ಲದೆ, ಬಾಲಿವುಡ್ ನಟ ಹೃತಿಕ್ ರೋಷನ್, ಮೋಹನ್‌ಲಾಲ್, ವಿಜಯ್ ಸೇತುಪತಿ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರ ಅತಿಥಿ ಪಾತ್ರಗಳು ಪಂದ್ಯದ ಕಾವು ಹೆಚ್ಚಿಸಿದ್ದು, ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಸೆಳೆಯುವಲ್ಲಿ ಯಶಸ್ವಿಯಾಗಿವೆ.

