ದೇಶದ ಗಡಿಗಳು ಬೇರೆಯಾಗಿರಬಹುದು, ರಾಜಕೀಯ ಪರಿಸ್ಥಿತಿಗಳು ವಿಭಿನ್ನವಾಗಿರಬಹುದು. ಆದರೆ ಭಕ್ತಿ, ನಂಬಿಕೆ ಮತ್ತು ಪೌರಾಣಿಕ ಕಥೆಗಳ ಮೇಲಿನ ಪ್ರೀತಿ ಗಡಿಗಳನ್ನು ಮೀರುತ್ತದೆ ಎಂಬುದಕ್ಕೆ ಪಾಕಿಸ್ತಾನದ ಕರಾಚಿಯಲ್ಲಿ ನಡೆದಿರುವ ಈ ಘಟನೆ ಸಾಕ್ಷಿಯಾಗಿದೆ.
ಹೌದು. ಭಾರತದಲ್ಲಿ ಬಿಡುಗಡೆಯಾಗಲು ಸಿದ್ಧವಾಗಿರುವ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ಈಗ ಪಾಕಿಸ್ತಾನದ ಹಿಂದೂ ಸಮುದಾಯದಲ್ಲೂ ಹೊಸ ಸಂಚಲನ ಮೂಡಿಸಿದೆ. ಪಾಕಿಸ್ತಾನದಲ್ಲಿ ರಾಮಾಯಣ ಸಿನಿಮಾ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಹಿಂದೂ ಸಮುದಾಯದ ಜನರು ಪಾಕಿಸ್ತಾನದಲ್ಲಿ ಬೀದಿಗಿಳಿದು ಪ್ರತಿಭಟಿಸಿ ಆಗ್ರಹಿಸಿದ್ದಾರೆ.
ಕೈಯಲ್ಲಿ ‘ರಾಮಾಯಣ’ ಚಿತ್ರದ ಪೋಸ್ಟರ್ಗಳು, ಬಾಯಲ್ಲಿ ಭಕ್ತಿಗೀತೆಗಳು, ಹೃದಯದಲ್ಲಿ ಶ್ರೀರಾಮನ ಭಕ್ತಿ… ಹೀಗೆ ಕರಾಚಿಯ ಹಿಂದೂ ಸಮುದಾಯದ ಜನರು ಒಟ್ಟಾಗಿ ಸೇರಿ ‘ಜೈ ಶ್ರೀರಾಮ್’ ಘೋಷಣೆ ಮೊಳಗಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಲವರ ಗಮನ ಸೆಳೆಯುತ್ತಿದೆ.
ಸಿನಿಮಾ ಬಿಡುಗಡೆಯಾಗುವ ಮುನ್ನವೇ ಅಭಿಮಾನದ ಸಂಭ್ರಮ!
ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾದಲ್ಲಿ ಬಾಲಿವುಡ್ ನಟ ರಣಬೀರ್ ಕಪೂರ್ ಶ್ರೀರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ಕನ್ನಡದ ನಟ ಯಶ್ ರಾವಣನಾಗಿ ನಟಿಸುತ್ತಿದ್ದಾರೆ. ಈ ತಾರಾಗಣದ ಬಗ್ಗೆ ಭಾರತದಲ್ಲಿ ಭಾರಿ ನಿರೀಕ್ಷೆ ಮನೆಮಾಡಿದೆ. ಇದೀಗ ಇದೇ ಕುತೂಹಲ ಪಾಕಿಸ್ತಾನದ ಕರಾಚಿಯ ಹಿಂದೂಗಳಲ್ಲೂ ಕಂಡುಬಂದಿದೆ.
ಯೂಟ್ಯೂಬರ್ ಸುಮಿತ್ ಚಾಂಗ್ರಾ ಅವರು ಅಕ್ಟೋಬರ್ 26ರಂದು ಹಂಚಿಕೊಂಡಿರುವ ವಿಡಿಯೋದಲ್ಲಿ ಕರಾಚಿಯ ಹಿಂದೂಗಳು ಚಿತ್ರದ ಪೋಸ್ಟರ್ಗಳನ್ನು ಹಿಡಿದು ರಸ್ತೆಯಲ್ಲಿ ಸಾಗುತ್ತಿರುವ ದೃಶ್ಯಗಳಿವೆ. ಈ ಸಂದರ್ಭದಲ್ಲಿ ಭಜನೆಗಳನ್ನು ಹಾಡುತ್ತಾ, ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗುತ್ತಾ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ದೇವಸ್ಥಾನದಲ್ಲಿ ಚಿತ್ರದ ಪೋಸ್ಟರ್ ಅಂಟಿಸಿ ವಿಶೇಷ ಪ್ರಾರ್ಥನೆ!
ಈ ಸಂಭ್ರಮದ ನಡುವೆ ಮತ್ತೊಂದು ವಿಶೇಷ ದೃಶ್ಯ ಎಲ್ಲರ ಗಮನ ಸೆಳೆದಿದೆ. ಕರಾಚಿಯ ದೇವಸ್ಥಾನವೊಂದರಲ್ಲಿ ‘ರಾಮಾಯಣ’ ಚಿತ್ರದ ಪೋಸ್ಟರ್ ಅಂಟಿಸಿ, ಸಿನಿಮಾ ಯಶಸ್ವಿಯಾಗಲಿ ಎಂದು ಹಿಂದೂ ಸಮುದಾಯದವರು ಹಾರೈಸಿದ್ದಾರೆ. ಅಷ್ಟೇ ಅಲ್ಲ, ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ದೊಡ್ಡ ದಾಖಲೆ ಬರೆಯಬೇಕು, ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯನ್ನೂ ಗೆಲ್ಲಬೇಕು ಎಂಬ ಆಶಯವನ್ನೂ ವ್ಯಕ್ತಪಡಿಸಿದ್ದಾರೆ.
ಸಿನಿಮಾ ಬಿಡುಗಡೆಯಾಗುವ ಮುನ್ನವೇ ಇಷ್ಟೊಂದು ಅಭಿಮಾನ ತೋರಿಸಿರುವುದು ವಿಶೇಷ. ತಮ್ಮ ನೆಚ್ಚಿನ ರಾಮಾಯಣದ ಕಥೆಯನ್ನು ದೊಡ್ಡ ಪರದೆಯ ಮೇಲೆ ನೋಡುವ ಆಸೆ ಅವರಲ್ಲಿ ಎಷ್ಟರಮಟ್ಟಿಗೆ ಇದೆ ಎಂಬುದಕ್ಕೆ ಈ ವಿಡಿಯೋವೇ ಸಾಕ್ಷಿಯಾಗಿದೆ.
ಪಾಕಿಸ್ತಾನದಲ್ಲೂ ಸಿನಿಮಾ ನೋಡಲು ಸಾಧ್ಯವಾಗುತ್ತಾ?
ಕರಾಚಿಯ ಹಿಂದೂಗಳ ಸಂಭ್ರಮದ ನಡುವೆಯೇ ಒಂದು ಪ್ರಶ್ನೆ ಎದುರಾಗಿದೆ. ‘ರಾಮಾಯಣ’ ಸಿನಿಮಾ ಪಾಕಿಸ್ತಾನದಲ್ಲೂ ಬಿಡುಗಡೆಯಾಗುತ್ತದೆಯೇ? ಸದ್ಯಕ್ಕೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಭಾರತ ಮತ್ತು ಪಾಕಿಸ್ತಾನದ ನಡುವಿನ ರಾಜಕೀಯ ಉದ್ವಿಗ್ನತೆಯಿಂದಾಗಿ ಸಿನಿಮಾ ಬಿಡುಗಡೆಗೆ ಅಡೆತಡೆ ಎದುರಾಗುವ ಸಾಧ್ಯತೆಯಿದೆ. ಆದರೂ ಕರಾಚಿಯ ಹಿಂದೂಗಳು ತಮ್ಮ ನಗರದಲ್ಲೂ ಸಿನಿಮಾ ಬಿಡುಗಡೆ ಮಾಡಬೇಕೆಂದು ಚಿತ್ರತಂಡಕ್ಕೆ ಮನವಿ ಮಾಡಿದ್ದಾರೆ.
ತಾರಾಗಣದ ಮೇಲೂ ಭಾರಿ ನಿರೀಕ್ಷೆ
ಎರಡು ಭಾಗಗಳಲ್ಲಿ ನಿರ್ಮಾಣವಾಗುತ್ತಿರುವ ‘ರಾಮಾಯಣ’ ಚಿತ್ರದ ಮೊದಲ ಭಾಗದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ, ಯಶ್ ರಾವಣನಾಗಿ, ಸನ್ನಿ ಡಿಯೋಲ್ ಹನುಮಂತನಾಗಿ ಹಾಗೂ ರವಿ ದುಬೆ ಲಕ್ಷ್ಮಣನಾಗಿ ಕಾಣಿಸಿಕೊಳ್ಳಲಿದ್ದಾರೆ.
ಶ್ರೀರಾಮನ ಜನನದಿಂದ ಆರಂಭವಾಗಿ, ವನವಾಸ, ಸೀತಾಪಹರಣ ಸೇರಿದಂತೆ ಮಹಾಕಾವ್ಯದ ಪ್ರಮುಖ ಘಟನೆಗಳು ಮೊದಲ ಭಾಗದಲ್ಲಿ ಮೂಡಿಬರಲಿವೆ. ಈಗಾಗಲೇ ಬಿಡುಗಡೆಯಾಗಿರುವ ‘ಮಂಗಳ್ ರಂಗ್’ ವಿವಾಹ ಗೀತೆಯೂ ಪ್ರೇಕ್ಷಕರ ಗಮನ ಸೆಳೆದಿದೆ.
ಗಡಿಗಳು ಬೇರೆ, ದೇಶಗಳು ಬೇರೆ; ಆದರೆ ರಾಮಾಯಣದ ಮೇಲಿನ ಅಭಿಮಾನ ಒಂದೇ!
ಸಾಮಾನ್ಯವಾಗಿ ಸಿನಿಮಾಗಳ ಯಶಸ್ಸನ್ನು ಅದರ ಬಿಡುಗಡೆಯ ನಂತರದ ಪ್ರೇಕ್ಷಕರ ಪ್ರತಿಕ್ರಿಯೆಯಿಂದ ಅಳೆಯಲಾಗುತ್ತದೆ. ಆದರೆ ಕರಾಚಿಯ ಈ ಹಿಂದೂ ಸಮುದಾಯದ ಅಭಿಮಾನ ನೋಡಿದರೆ, ಸಿನಿಮಾ ತೆರೆಗೆ ಬರುವ ಮುನ್ನವೇ ಅದು ಜನರ ಭಾವನೆಗಳನ್ನು ತಲುಪಿರುವುದು ಸ್ಪಷ್ಟವಾಗುತ್ತದೆ. ತಾವು ವಾಸಿಸುವ ದೇಶದಲ್ಲಿ ಸಿನಿಮಾ ಬಿಡುಗಡೆಯಾಗುತ್ತದೆಯೇ ಎಂಬ ಖಚಿತತೆ ಇಲ್ಲದಿದ್ದರೂ, ಅದರ ಯಶಸ್ಸಿಗಾಗಿ ಹಾರೈಸುತ್ತಿರುವ ಈ ಜನರ ನಿರೀಕ್ಷೆ ಈಗ ಕುತೂಹಲಕ್ಕೆ ಕಾರಣವಾಗಿದೆ. ಭಾರತದಲ್ಲಿ ಮಾತ್ರವಲ್ಲದೆ ಪಾಕಿಸ್ತಾನದ ಕರಾಚಿಯಲ್ಲೂ ‘ರಾಮಾಯಣ’ ಚಿತ್ರದ ಬಗ್ಗೆ ಇಷ್ಟೊಂದು ಅಭಿಮಾನ ವ್ಯಕ್ತವಾಗಿರುವುದು ಈ ಸಿನಿಮಾದ ಮೇಲಿನ ನಿರೀಕ್ಷೆಯ ಮತ್ತೊಂದು ಮುಖವನ್ನು ತೋರಿಸಿದೆ.

