ಶಿವಮೊಗ್ಗ: ಬರ ಮತ್ತು ಪ್ರಾಕೃತಿಕ ವಿಕೋಪಗಳ ನಡುವೆ ಕೃಷಿಯನ್ನು ಲಾಭದಾಯಕವಾಗಿ ಮತ್ತು ಯಶಸ್ವಿಯಾಗಿ ಮುನ್ನಡೆಸುವುದು ಹಾಗೂ ರೈತರಿಗೆ ಆರ್ಥಿಕ ಪುನಶ್ಚೇತನ ಮತ್ತು ಯಂತ್ರೋಪಕರಣಗಳ ಬಳಕೆಯ ಬಗ್ಗೆ ಅರಿವು ಮೂಡಿಸುವುದು ಕೃಷಿ ಮೇಳದ ಮುಖ್ಯ ಉದ್ದೇಶವಾಗಿದ್ದು, ರೈತರೆಲ್ಲ ಇದರ ಸದುಪಯೋಗ ಪಡೆಯಬೇಕೆಂದು ಕೃಷಿ ಸಚಿವರು ಹಾಗೂ ಕೆ.ಶಿ.ನಾ.ಕೃ.ತೋ.ವಿ.ವಿ. ಸಹ ಕುಲಾಧಿಪತಿ ಪಿ. ಎಂ. ನರೇಂದ್ರಸ್ವಾಮಿ ಕರೆ ನೀಡಿದರು.
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ “ಬರ ನಿರ್ವಹಣೆಗಾಗಿ ನಾವೀನ್ಯತಾ ಕೃಷಿ” ಎಂಬ ಧೈಯವಾಕ್ಯದೊಂದಿಗೆ ನವುಲೆ ಕೃಷಿ ಕಾಲೇಜು ಆವರಣದಲ್ಲಿ ಅ.31 ರಿಂದ ನ.2 ರವರೆಗೆ ಆಯೋಜಿಸಲಾಗಿರುವ ‘ಕೃಷಿ ಮತ್ತು ತೋಟಗಾರಿಕೆ ಮೇಳ-2026 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಜ್ಞಾನ ಮತ್ತು ತಂತ್ರಜ್ಞಾನ ಸರಿಯಾಗಿ ಬಳಸಿಕೊಂಡು ಬರವನ್ನು ಮೆಟ್ಟಿ ನಿಲ್ಲಬಹುದಾಗಿದ್ದು ರೈತರು ಮುಕ್ತವಾಗಿ ವಿಜ್ಞಾನಿಗಳ ಸಲಹೆ ಬಳಸಿಕೊಂಡು ಮುನ್ನಡೆಯಬೇಕೆಂದರು.
ರೈತ ಕುಲವನ್ನು, ರಾಜ್ಯವನ್ನು ಮತ್ತು ಆಹಾರೋತ್ಪಾದನಾ ನಿರ್ಣಯವನ್ನು ಗಮನದಲ್ಲಿಟ್ಟುಕೊಂಡು ಇಲಾಖೆಯ ಜವಾಬ್ದಾರಿಯನ್ನು ನಿರ್ವಹಿಸುವುದು ಇವತ್ತಿನ ಕೃಷಿ ಮೇಳದ ಸವಾಲಾಗಿದೆ. ರೈತರಿಗೆ ನೆರವಾಗಲು ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದ್ದು, ನವೆಂಬರ್ ತಿಂಗಳಲ್ಲಿ ‘ನೇಗಿಲಯೋಗಿ’ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯು ಬರದಿಂದ ಕಂಗೆಟ್ಟಿರುವ ರೈತರಿಗೆ ಆರ್ಥಿಕ ಪುನಶ್ಚೇತನ ಮತ್ತು ಯಂತ್ರೋಪಕರಣಗಳನ್ನು ಬಳಸುವ ಜವಾಬ್ದಾರಿಯನ್ನು ಅರಿವು ಮೂಡಿಸುತ್ತದೆ. ರಾಜ್ಯದಲ್ಲಿ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಪ್ರಾಥಮಿಕವಾಗಿ ಪ್ರತಿ ರೈತನಿಗೆ ರೂ.2,500 ಗಳ ಆರಂಭಿಕ ಪರಿಹಾರವನ್ನು ಬಿಡುಗಡೆ ಮಾಡಲಾಗಿದೆ. ಕಡಿಮೆ ನೀರಿನಲ್ಲಿ ಬೆಳೆಯಬಹುದಾದ ಬೆಳೆಗಳು, ಹವಾಮಾನ ವೈಪರೀತ್ಯ ತಡೆಬಲ್ಲ ತಳಿಗಳ ಹೊಸ ಆವಿಷ್ಕಾರಗಳು ಹಾಗೂ ಸೂಕ್ಷ್ಮ ನೀರಾವರಿ ತಂತ್ರಜ್ಞಾನಗಳ ಬಗ್ಗೆ ಕೃಷಿ ಮೇಳದಲ್ಲಿ ಮಾಹಿತಿ ನೀಡಲಾಗುತ್ತದೆ ಎಂದರು.
ನೆಗಲು ಯೋಗಿ ಯೋಜನೆ: ನವೆಂಬರ್ ತಿಂಗಳಲ್ಲಿ ‘ನೇಗಲು ಯೋಗಿ’ ಯೋಜನೆ ಅನುಷ್ಠಾನಗೊಳ್ಳಲಿದ್ದು, ಇದರ ಮೂಲಕ ಬರದಿಂದ ಕಂಗೆಟ್ಟಿರುವ ರೈತರಿಗೆ ಆರ್ಥಿಕ ಪುನಶ್ಚೇತನ ಮತ್ತು ಯಂತ್ರೋಪಕರಣಗಳನ್ನು ಬಳಸುವ ಜವಾಬ್ದಾರಿಯನ್ನು ಅರಿವು ಮೂಡಿಸಲಾಗುತ್ತದೆ.
ಆರಂಭಿಕ ಪರಿಹಾರ: ರಾಜ್ಯದಲ್ಲಿ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಕೇಂದ್ರದ ನಿಲುವಿನ ಜೊತೆಗೆ, ಪ್ರತಿಯೊಬ್ಬ ರೈತರಿಗೆ ಆರಂಭಿಕ ಪರಿಹಾರವಾಗಿ 2,500 ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಕೃಷಿ ಕ್ಷೇತ್ರದಲ್ಲಿ ಸೂಕ್ಷ್ಮ ನೀರಾವರಿ ತಂತ್ರಜ್ಞಾನ, ಸಮಗ್ರ ಕೃಷಿ ಪದ್ಧತಿ, ಡಿಜಿಟಲ್ ಕೃಷಿ ಮತ್ತು ಕೃತಕ ಬುದ್ಧಿಮತ್ತೆಯ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಶಿವಮೊಗ್ಗದಲ್ಲಿ ಅಡಿಕೆ ಹಾಗೂ ಶುಂಠಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಾಂಬಾರು ಬೆಳೆಗಳು ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ ಶೇಂಗಾ ಬೆಳೆಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತಿದ್ದು, ಏಕ ಬೆಳೆಗಿಂತ ಮಿಶ್ರ ಬೆಳೆಗಳಿಗೆ ಆದ್ಯತೆ ನೀಡುವಂತೆ ತಿಳಿಸಲಾಗಿದೆ.
ಯೂನಿವರ್ಸಿಟಿ ಸಾಧನೆ: ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯವು ಜೆ.ಆರ್.ಎಫ್. ಮತ್ತು ಎಸ್.ಆರ್.ಎಫ್. ಫಲಿತಾಂಶದಲ್ಲಿ 81 ಫೆಲೋಶಿಪ್ಗಳನ್ನು ಗಳಿಸುವ ಮೂಲಕ ರಾಜ್ಯದ ಐದು ವಿಶ್ವವಿದ್ಯಾಲಯಗಳಲ್ಲಿ ಅತ್ಯಧಿಕ ಸ್ಥಾನ ಪಡೆದಿದೆ.
ಮುಖ್ಯಮಂತ್ರಿ ರೈತ ಚೈತನ್ಯ ಯೋಜನೆ: ಕರ್ನಾಟಕ ಅಗ್ರಿಟೆಕ್ ಮಿಷನ್ 2026 ರ ಅಡಿಯಲ್ಲಿ ದೂರ ಸಂವೇದಿ ತಂತ್ರಜ್ಞಾನ, ಡ್ರೋನ್ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಮುಂತಾದ ಆಧುನಿಕ ಡಿಜಿಟಲ್ ತಂತ್ರಜ್ಞಾನಗಳನ್ನು ಬಳಸಿ ರೈತರಿಗೆ ಸಲಹೆ ಮತ್ತು ಸೇವೆ ಒದಗಿಸಲು ರೂ. 35.99 ಕೋಟಿ ಅಂದಾಜು ಮೊತ್ತದಲ್ಲಿ ಅನುಮೋದನೆ ನೀಡಲಾಗಿದೆ.
ರೈತರಿಗೆ ಕೃಷಿ ಸಂಬಂಧಿತ, ಸಕಾಲಿಕ ಹಾಗೂ ಸ್ಥಳ ನಿರ್ದಿಷ್ಟ ಸಲಹೆಗಳನ್ನು ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರವು ಪ್ರಾಯೋಗಿಕವಾಗಿ ಐದು ಜಿಲ್ಲೆಗಳಲ್ಲಿ ವಿಶೇಷ ಯೋಜನೆಯನ್ನು ಜಾರಿಗೆ ತಂದಿದೆ. ಮಂಡ್ಯ, ಬೆಳಗಾವಿ, ವಿಜಯಪುರ, ಹಾಸನ ಹಾಗೂ ಶಿವಮೊಗ್ಗ ಜಿಲ್ಲೆಗಳ ರೈತರಿಗೆ ಬೆಳೆ ಉತ್ಪಾದನೆ ಮತ್ತು ತಂತ್ರಜ್ಞಾನದ ಕುರಿತು ಜಾಗೃತಿ ಮೂಡಿಸಲು ಹಾಗೂ ಸಂದೇಶಗಳನ್ನು ತಲುಪಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸಂಸದರಾದ ಬಿ.ವೈ.ರಾಘವೇಂದ್ರ ಬರ ನಿರ್ವಹಣೆ” ನೇಗಿಲ ಮಿಡಿತ ವಿಶೇಷ ಸಂಚಿಕೆ ಹಾಗೂ ರೈತರ ಯಶೋಗಾಥೆ ಬಿಡುಗಡೆಗೊಳಿಸಿ ಮಾತನಾಡಿದರು
ಕುಲಪತಿಗಳು, ಕೆ.ಶಿ.ನಾ.ಕೃ.ತೋ.ವಿ.ವಿ., ಶಿವಮೊಗ್ಗ ಡಾ. ಎಮ್. ವಿ. ಧನಂಜಯ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಪದ್ಮಶ್ರೀ ಪುರಸ್ಕೃತ ಕೃಷಿಕರು, ಕಾಸರಗೋಡು ಸತ್ಯನಾರಾಯಣ ಬೆಲೆಕೇರಿ, ಸಂಸದ ಬಿ.ವೈ. ರಾಘವೇಂದ್ರ, ಶಾಸಕಿ ಶಾರದಾ ಪೂರ್ಯಾನಾಯ್ಕ ಮಾತನಾಡಿದರು. ಶಾಸಕರಾದ ಎಸ್ ಎನ್ ಚನ್ನಬಸಪ್ಪ, ಪರಿಶಿಷ್ಟ ಜಾತಿ, ವರ್ಗ, ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ, ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ಚೇತನ್ ಕೆ. ,ಕೃಷಿಕ ಸಮಾಜದ ನಗರದ ಮಹಾದೇವಪ್ಪ ಇತರರು ಇದ್ದರು. ವಿಸ್ತರಣಾ ನಿರ್ದೇಶಕ ಡಾ. ರಾಘವೇಂದ್ರ ಕೆ. ಮೇಸ್ತ ವಂದಿಸಿದರು.
ಕೃಷಿ ಮೇಳದ ವಿಶೇಷ ಆಕರ್ಷಣೆಗಳು
ಈ ಮೇಳದಲ್ಲಿ ಬರ ನಿರ್ವಹಣಾ ವಿಭಾಗ ಮತ್ಸ್ಯ ಕೃಷಿ ಪ್ರದರ್ಶನ, ಅಡಿಕೆ ವಿಭಾಗ, ಸಾವಯವ ಮತ್ತು ನೈಸರ್ಗಿಕ ಕೃಷಿ, ಕಪ್ಪು ಬಂಗಾರದ ಹುಳು.
ಸಿಹಿ ನೀರು ಮತ್ತು ಉಪ್ಪು ನೀರಿನ ಏಡಿ ಸಾಕಣೆ, ಮುತ್ತು ಕೃಷಿ, ಮೀನುಗಾರಿಕೆ ವಿಭಾಗ , ಹೈನುಗಾರಿಕೆ, ಮೇಕೆ ಸಾಕಣೆ , ಕುರಿ ಸಾಕಣೆ, ಇತರೆ ಕೃಷಿ ಸಂಬಂಧಿತ ಪ್ರದರ್ಶನವನ್ನು ಆಯೋಜಿಸಲಾಗಿದೆ.
ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿ ಕಣ್ಮರೆಯಾಗುತ್ತಿರುವ, ಕಬ್ಬಿನ ಆಲೆಮನೆಯಲ್ಲಿ ಜೋನಿ ಬೆಲ್ಲ ತಯಾರಿಕೆಯಲ್ಲಿ ಬಳಕೆಯಾಗುತ್ತಿದ್ದ ಕಬ್ಬಿನ ಗಾಣದ ಅಪರೂಪದ “ಕೋಣದ ಕಣ್ಣಿ”ಯ ಪ್ರದರ್ಶನ.
ಕೃಷಿ ಮತ್ತು ತೋಟಗಾರಿಕೆ ಮೇಳದಲ್ಲಿ ವಿಶೇಷವಾಗಿ ವಿವಿಧ ಬಗೆಯ ಜಾನುವಾರು ಪ್ರದರ್ಶನ ಹಾಗೂ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ವಲಯಮಟ್ಟದ ಶ್ವಾನ ಪ್ರದರ್ಶನ ಹಾಗೂ ಸ್ಪರ್ಧೆ
ಉತ್ತಮ ಕುರಿ, ಆಡು ಮತ್ತು ಮುದ್ದು ಪ್ರಾಣಿಗಳ ಪ್ರದರ್ಶನ ಹಾಗೂ ಸ್ಪರ್ಧೆ
ಉತ್ತಮ ಹಸು ಮತ್ತು ಎಮ್ಮೆ ತಳಿಗಳ ಪ್ರದರ್ಶನ ಹಾಗೂ ಸ್ಪರ್ಧೆ
ಮರೆತು ಹೋದ ಸಿರಿಧಾನ್ಯಗಳ ಪಾಕ ಸ್ಪರ್ಧೆ
ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿಯ ಸಹಯೋಗದೊಂದಿಗೆ “ಮತ್ಸ್ಯಾಂಗಣ”
ವಿವಿಧ ಬೆಳೆಗಳ ಕುರಿತಂತೆ ತಜ್ಞರ ಸಲಹಾ ಕೇಂದ್ರವು ನಮ್ಮ ವಿಶ್ವವಿದ್ಯಾಲಯದ ತಜ್ಞ ವಿಜ್ಞಾನಿಗಳಿಂದ ಕೃಷಿ ಸಂಬಂಧಿತ ಸಮಸ್ಯೆಗಳಿಗೆ ರೈತರಿಗೆ ಸಲಹಾ ಸೇವೆಗಳನ್ನು ನೀಡಲಿದೆ.
ಈ ಮೇಳದಲ್ಲಿ ಮಣ್ಣಿನ ತೇವಾಂಶ ಸಂರಕ್ಷಣೆ ಸಾವಯವ ಇಂಗಾಲ ಮತ್ತು ಇಳುವರಿ ಹೆಚ್ಚಿಸಲು ಬಯೋಚಾರ್ ಬಳಕೆಯ ಪ್ರಾತ್ಯಕ್ಷಿಕೆ, ವಿವಿಧ ಬೆಳೆಗಳಲ್ಲಿ ಬೀಜಾಮೃತ, ಜೀವಾಮೃತ, ಜೈವಿಕ ಗೊಬ್ಬರ ಮತ್ತು ಜೈವಿಕ ನಿಯಂತ್ರಕಗಳ, ಬೀಜೋಪಚಾರ ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸಲಾಗಿದೆ.
ಸಾವಯವ ಸಂಶೋಧನಾ ಕೇಂದ್ರವತಿಯಿಂದ ಕಣ್ಮರೆಯಾಗುತ್ತಿರುವ ಸುಮಾರು 240 ದೇಶಿ ಭತ್ತದ ತಳಿಗಳನ್ನು ಸಂರಕ್ಷಿಸಿ ವೈಜ್ಞಾನಿಕವಾಗಿ ಗುಣ ದಾಖಲಾತಿ ಮಾಡಿ, ಪ್ರಾತ್ಯಕ್ಷಿಕೆಗಳನ್ನು ಮಾಡಲಾಗಿದೆ.
ಶಿವಮೊಗ್ಗ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ವಿದೇಶಿ ಮತ್ತು ದೇಶಿ ತಳಿಗಳ ಹೂವು ಮತ್ತು ತರಕಾರಿ ತಳಿಗಳ ತಾಕುಗಳು, ಮಕ್ಕಳಿಗಾಗಿ ಕೃಷಿ ಯಾನ/ಕೃಷಿ ಪ್ರವಾಸೋದ್ಯಮ, ಜೇನು ವನ ಹಾಗೂ ಇತ್ಯಾದಿ, ಕೃಷಿಗೆ ಸಂಬಂಧಿಸಿದ ಹಲವಾರು ತರಬೇತಿಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.
ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಡುವ 6 ಜಿಲ್ಲೆಗಳ ವಿವಿಧ ಜನಪದ ಮತ್ತು ಸಾಂಸ್ಕೃತಿಕ ಕಲಾವಿದರನ್ನು ಗುರುತಿಸಿ, ಅವರನ್ನು ಪ್ರೋತ್ಸಾಹಿಸುವ ಸಲುವಾಗಿ ಈ ಮೇಳದಲ್ಲಿ ಕಲಾವಿದರಿಗೆ ತಮ್ಮ ಕಲಾ ಪ್ರದರ್ಶನ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಮಲೆನಾಡು ಭಾಗದ ಹೋರಿಹಬ್ಬವು ಜನಪದ ಸಂಸ್ಕೃತಿಯಾಗಿರುವುದರಿಂದ, ಈ ಮೇಳದಲ್ಲಿ ಶಿವಮೊಗ್ಗದ ನಂದಿ, ಅಬ್ಬಲಗೆರೆಯ ಅಜ್ಜಯ್ಯ, ಅಬ್ಬಲಗೆರೆ ಸರ್ಕಾರ್ ಹೋರಿಗಳ ಪ್ರದರ್ಶನ ಏರ್ಪಡಿಸಲಾಗಿದೆ.
ಕೃಷಿ ಮೇಳ ಕಾರ್ಯಕ್ರಮದಲ್ಲಿ ಉತ್ತಮ ರೈತ ಹಾಗೂ ರೈತ ಮಹಿಳೆ ಪ್ರಶಸ್ತಿ ಪ್ರದಾನ
ಶಿವಮೊಗ್ಗ: ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ ವತಿಯಿಂದ 2026ನೇ ಸಾಲಿನ ಉತ್ತಮ ರೈತ ಹಾಗೂ ರೈತ ಮಹಿಳೆ ಪ್ರಶಸ್ತಿಗೆ ಆಯ್ಕೆಯಾದವರ ಅಧಿಕೃತ ಪಟ್ಟಿ ಈ ಕೆಳಗಿನಂತಿದೆ:
ಶಿವಮೊಗ್ಗ ಜಿಲ್ಲೆ: ಉತ್ತಮ ರೈತರಾಗಿ ಭದ್ರಾವತಿ ತಾಲ್ಲೂಕಿನ ಮಜ್ಜಿಗೇನಹಳ್ಳಿಯ ವಸಂತ ಬಿ.ಹೆಚ್ಹಾಗೂ ಉತ್ತಮ ರೈತ ಮಹಿಳೆಯಾಗಿ ಶಿಕಾರಿಪುರ ತಾಲ್ಲೂಕಿನ ಶ್ರೀಮತಿ ವೇದಾವತಿ ಆಯ್ಕೆಯಾಗಿದ್ದಾರೆ.
ಚಿತ್ರದುರ್ಗ ಜಿಲ್ಲೆ: ಉತ್ತಮ ರೈತರಾಗಿ ಚಳ್ಳಕೆರೆ ತಾಲ್ಲೂಕಿನ ಗುಡಿಹಳ್ಳಿಯ ರಂಗಪ್ಪ ಹಾಗೂ ಉತ್ತಮ ರೈತ ಮಹಿಳೆಯಾಗಿ ಹೊಸದುರ್ಗ ತಾಲ್ಲೂಕಿನ ಆನಿವಾಳದ ರಮ್ಯ ಆರ್. ಆಯ್ಕೆಯಾಗಿದ್ದಾರೆ.
ದಾವಣಗೆರೆ ಜಿಲ್ಲೆ: ಉತ್ತಮ ರೈತರಾಗಿ ಚನ್ನಗಿರಿ ತಾಲ್ಲೂಕಿನ ಹೊನ್ನಮರಡಿಯ ಹೆಚ್.ಕೆ. ಮಾಧವ ಹಾಗೂ ಉತ್ತಮ ರೈತ ಮಹಿಳೆಯಾಗಿ ಸಂತೆಬೆನ್ನೂರಿನ ಲತಾ ಎನ್.ಎಸ್. ಆಯ್ಕೆಯಾಗಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ: ಉತ್ತಮ ರೈತರಾಗಿ ಅಜ್ಜಂಪುರ ತಾಲ್ಲೂಕಿನ ತಡಗ ಗ್ರಾಮದ ಶಿವಕುಮಾರ್ ಟಿ.ಸಿ. ಹಾಗೂ ಉತ್ತಮ ರೈತ ಮಹಿಳೆಯಾಗಿ ಎನ್.ಆರ್.ಪುರ ತಾಲ್ಲೂಕಿನ ಕರುಗುಂದದ ವಾಣಿ ಎನ್.ಕೆ. ಆಯ್ಕೆಯಾಗಿದ್ದಾರೆ.
ಉಡುಪಿ ಜಿಲ್ಲೆ: ಉತ್ತಮ ರೈತರಾಗಿ ಬೈಂದೂರು ತಾಲ್ಲೂಕಿನ ಅರೆಶಿರೂರಿನ ಗೌತಮ್ ಶೆಟ್ಟಿ ಹಾಗೂ ಉತ್ತಮ ರೈತ ಮಹಿಳೆಯಾಗಿ ಉದ್ಯಾವರದ ವತ್ಸಲ ವಿಜಯ ಕುಮಾರ್ ಆಯ್ಕೆಯಾಗಿದ್ದಾರೆ.
ಮಂಗಳೂರು(ದಕ್ಷಿಣ ಕನ್ನಡ) ಜಿಲ್ಲೆ: ಉತ್ತಮ ರೈತರಾಗಿ ಮೂಡುಬಿದ್ರೆ ತಾಲ್ಲೂಕಿನ ಕಲ್ಲಪುತ್ತಿಗೆ ಗ್ರಾಮದ ಗೋಪಾಲ ಸಿ ಪೂಜಾರಿ ಹಾಗೂ ಉತ್ತಮ ರೈತ ಮಹಿಳೆಯಾಗಿ ಬಂಟ್ವಾಳ ತಾಲ್ಲೂಕಿನ ಪುಣಚ ಗ್ರಾಮದ ಚಂದ್ರಾವತಿ ಆಯ್ಕೆಯಾಗಿದ್ದು ಕೃಷಿ ಮೇಳದಲ್ಲಿ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

