ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ನಗರಗಳು ಆರ್ಥಿಕವಾಗಿ ಬಲಿಷ್ಠವಾದರೆ ಮಾತ್ರ ಗ್ರಾಮೀಣ ಪ್ರದೇಶಗಳಿಗೂ ಹೆಚ್ಚಿನ ಅಭಿವೃದ್ಧಿ ಸಂಪನ್ಮೂಲ ಒದಗಿಸಲು ಸಾಧ್ಯ. ನಗರಗಳ ಬೆಳವಣಿಗೆಯಿಂದ ಪಟ್ಟಣಗಳು ಅಭಿವೃದ್ಧಿಯಾಗಬೇಕು, ಪಟ್ಟಣಗಳ ಬೆಳವಣಿಗೆಯಿಂದ ಗ್ರಾಮೀಣ ಬದುಕು ಸಮೃದ್ಧವಾಗಬೇಕು. ಇದೇ ನಮ್ಮ ಅಭಿವೃದ್ಧಿಯ ಚಿಂತನೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ‘ಕರ್ನಾಟಕ ರಾಜ್ಯ ಪ್ರಾದೇಶಿಕ ನಗರೀಕರಣ ಯೋಜನೆ-2047’ರ ವರದಿ ಬಿಡುಗಡೆ ಹಾಗೂ ಕಾರ್ಯಾಗಾರ ಉದ್ಘಾಟಿಸಿ ಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿದರು.
ನಾನು ಎಷ್ಟು ದಿನ ಅಧಿಕಾರದಲ್ಲಿರುತ್ತೇನೆ ಎಂಬುದು ಮುಖ್ಯವಲ್ಲ. ಒಂದು ದಿನ ಇರಬಹುದು, ಒಂದು ವರ್ಷ ಅಥವಾ ಐದು ವರ್ಷ ಇರಬಹುದು. ಜನರು ಎಷ್ಟು ದಿನ ಆಶೀರ್ವಾದ ಮಾಡುತ್ತಾರೆ ಎಂಬುದು ಬೇರೆ ವಿಚಾರ. ಆದರೆ, ನಾವು ಮುಂದಿನ ಪೀಳಿಗೆಗಾಗಿ ಹಾಕಿಕೊಡುವ ಅಭಿವೃದ್ಧಿಯ ಅಡಿಪಾಯ ಶಾಶ್ವತವಾಗಿರಬೇಕು. ಮನೆ ನಿರ್ಮಿಸುವ ಮುನ್ನ ಮಾಸ್ಟರ್ಪ್ಲಾನ್ ಸಿದ್ಧಪಡಿಸುವಂತೆ, ಕರ್ನಾಟಕವನ್ನು ಕಟ್ಟಲು ದೂರದೃಷ್ಟಿಯ ಯೋಜನೆ ಅಗತ್ಯ ಎಂದು ಹೇಳಿದರು.
ಸಮೃದ್ಧ ಕರ್ನಾಟಕ, ಉದ್ಯಮ ಕರ್ನಾಟಕ, ಸಂಚಾರಿ ಕರ್ನಾಟಕ ಹಾಗೂ ಪ್ರತಿಭಾ ಕರ್ನಾಟಕದ ಆಶಯದೊಂದಿಗೆ ರಾಜ್ಯದ ಎಲ್ಲ ಭಾಗಗಳಿಗೂ ಸಮಾನ ಅಭಿವೃದ್ಧಿ ಅವಕಾಶ ಕಲ್ಪಿಸುವ ಉದ್ದೇಶವಿದೆ. ಈ ಹಿನ್ನೆಲೆಯಲ್ಲಿ ಏಳು ಪ್ರಮುಖ ಆದ್ಯತೆಗಳನ್ನು ಆಧರಿಸಿ ಪ್ರಾದೇಶಿಕ ನಗರೀಕರಣ ಯೋಜನೆ ರೂಪಿಸಲಾಗುತ್ತಿದೆ” ಎಂದರು.
ನಗರಗಳ ಆರ್ಥಿಕ ಶಕ್ತಿ ಹಳ್ಳಿಗಳಿಗೂ ನೆರವು
“ನಾನು ಎಸ್.ಎಂ. ಕೃಷ್ಣ ಅವರ ಸಂಪುಟದಲ್ಲಿ ನಗರಾಭಿವೃದ್ಧಿ ಸಚಿವನಾಗಿದ್ದೆ. ಅದಕ್ಕೂ ಮೊದಲು ಬಂಗಾರಪ್ಪ ಅವರ ಕಾಲದಲ್ಲಿಯೇ ಸಚಿವನಾಗಿದ್ದೆ. ಆಗ ನನಗಿದ್ದ ಅನುಭವಕ್ಕೂ ಈಗಿನ ದೀರ್ಘ ರಾಜಕೀಯ ಅನುಭವದ ನಂತರ ಮೂಡಿರುವ ಚಿಂತನೆಗೂ ವ್ಯತ್ಯಾಸವಿದೆ. ನಗರಗಳು ಬಲಿಷ್ಠವಾಗಿದ್ದರೆ ಮಾತ್ರ ಗ್ರಾಮೀಣ ಪ್ರದೇಶಗಳನ್ನು ಬಲಪಡಿಸಲು ಸಾಧ್ಯ ಎಂಬುದನ್ನು ಅನುಭವದಿಂದ ಅರಿತಿದ್ದೇನೆ” ಎಂದು ತಿಳಿಸಿದರು.
“ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಎಲ್ಲ ನಗರಗಳಲ್ಲಿಯೂ ಆರ್ಥಿಕ ಚಟುವಟಿಕೆಗಳು ಹೆಚ್ಚಾಗಬೇಕು. ನಗರಗಳಿಂದ ಸೃಷ್ಟಿಯಾಗುವ ಆರ್ಥಿಕ ಸಂಪನ್ಮೂಲವನ್ನು ಗ್ರಾಮೀಣ ಜನರ ಬದುಕಿನ ಸುಧಾರಣೆಗೂ ಬಳಸುವಂತಾಗಬೇಕು. ಬೆಂಗಳೂರು ಬೆಳೆದರೆ ಕರ್ನಾಟಕ ಬೆಳೆಯುತ್ತದೆ, ಪಟ್ಟಣಗಳು ಬೆಳೆದರೆ ಹಳ್ಳಿಗಳ ಬದುಕು ಸುಧಾರಿಸುತ್ತದೆ ಎಂಬ ದೃಢ ನಂಬಿಕೆ ನನ್ನದು” ಎಂದು ಹೇಳಿದರು.
2047ರ ಕರ್ನಾಟಕಕ್ಕೆ ದೂರದೃಷ್ಟಿಯ ನೀಲನಕ್ಷೆ
“ಅಭಿವೃದ್ಧಿಯನ್ನು ಕೇವಲ ಆರ್ಥಿಕ ಅಂಕಿ-ಅಂಶಗಳಿಂದ ಅಳೆಯಲು ಸಾಧ್ಯವಿಲ್ಲ. ಜನರಿಗೆ ಉದ್ಯೋಗ, ಉತ್ತಮ ರಸ್ತೆ, ಗುಣಮಟ್ಟದ ಆಸ್ಪತ್ರೆ, ಶಿಕ್ಷಣ ಮತ್ತು ಸಮೃದ್ಧ ಬದುಕು ದೊರೆಯಬೇಕು. ಇಡೀ ಕರ್ನಾಟಕ ಸಮಗ್ರವಾಗಿ ಬೆಳೆಯಬೇಕು. ಇದೇ ನಮ್ಮ ಗುರಿ” ಎಂದು ತಿಳಿಸಿದರು.
“2047ರಲ್ಲಿ ಕರ್ನಾಟಕ ಹೇಗಿರಬೇಕು ಎಂಬುದನ್ನು ಈಗಲೇ ಕಲ್ಪಿಸಿಕೊಂಡು ಅದಕ್ಕೆ ಅಗತ್ಯವಾದ ಮಾರ್ಗಸೂಚಿ ಸಿದ್ಧಪಡಿಸಬೇಕು. ಮುಂದಿನ ಪೀಳಿಗೆಗೆ ಉತ್ತಮ ನಗರಗಳು, ಉತ್ತಮ ರಸ್ತೆಗಳು ಮತ್ತು ಉತ್ತಮ ಜೀವನಮಟ್ಟ ಕಲ್ಪಿಸುವುದು ನಮ್ಮೆಲ್ಲರ ಜವಾಬ್ದಾರಿ. ಈ ಯೋಜನೆ ಮುಂದಿನ ಎರಡು ದಶಕಗಳ ಅಭಿವೃದ್ಧಿಗೆ ಮಾರ್ಗಸೂಚಿಯಾಗಲಿದೆ. ಯೋಜನೆಯ ಸಿದ್ಧತೆಯಲ್ಲಿ ಸಹಕಾರ ನೀಡಿದ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರನ್ನು ಅಭಿನಂದಿಸಿದ ಅವರು, ಕಡಿಮೆ ಅವಧಿಯಲ್ಲಿ ಯೋಜನೆಯನ್ನು ಈ ಹಂತಕ್ಕೆ ತಂದಿರುವುದು ಸಂತಸ ತಂದಿದೆ” ಎಂದರು.
ನಗರವಾಸಿಗಳ ಪ್ರಮಾಣ ಶೇ.70ಕ್ಕೆ ಏರಿಕೆ ನಿರೀಕ್ಷೆ
“ರಾಜ್ಯದ ಜನಸಂಖ್ಯೆ ಪ್ರಸ್ತುತ ಸುಮಾರು 6.9 ಕೋಟಿ ಇದ್ದು, 2047ರ ವೇಳೆಗೆ 7.7ರಿಂದ 7.8 ಕೋಟಿಗೆ ತಲುಪುವ ನಿರೀಕ್ಷೆಯಿದೆ. ಪ್ರಸ್ತುತ ರಾಜ್ಯದ ಜನಸಂಖ್ಯೆಯಲ್ಲಿ ಶೇ.46ರಷ್ಟು ಮಂದಿ ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. 2047ರ ವೇಳೆಗೆ ಈ ಪ್ರಮಾಣ ಶೇ.70ಕ್ಕೆ ಏರಿಕೆಯಾಗುವ ಅಂದಾಜಿದೆ. ಈ ಬದಲಾವಣೆಗೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳದಿದ್ದರೆ ಭವಿಷ್ಯದಲ್ಲಿ ನಗರಗಳ ಮೇಲೆ ಒತ್ತಡ ಹೆಚ್ಚಾಗಲಿದೆ ಎಂಬ ಹಿನ್ನೆಲೆಯಲ್ಲಿ ಸಮಗ್ರ ಪ್ರಾದೇಶಿಕ ನಗರೀಕರಣ ಯೋಜನೆ ರೂಪಿಸಲಾಗಿದೆ” ಎಂದು ವಿವರಿಸಿದರು.
“ನಗರೀಕರಣ ಎಂದರೆ ಕೇವಲ ಬೆಂಗಳೂರು ಅಥವಾ ನಗರಗಳ ಅಭಿವೃದ್ಧಿಯಲ್ಲ. ರಾಜ್ಯದ ಎಲ್ಲ ಪ್ರದೇಶಗಳಲ್ಲೂ ಯೋಜಿತ ಬೆಳವಣಿಗೆ, ಉದ್ಯೋಗ ಸೃಷ್ಟಿ, ಮೂಲಸೌಕರ್ಯ ವಿಸ್ತರಣೆ ಹಾಗೂ ಗ್ರಾಮೀಣ-ನಗರ ಪ್ರದೇಶಗಳ ನಡುವಿನ ಆರ್ಥಿಕ ಸಂಪರ್ಕ ಬಲಪಡಿಸುವುದು ಇದರ ಉದ್ದೇಶವಾಗಿದೆ” ಎಂದು ಹೇಳಿದರು.
“ಉತ್ತಮ ಶಿಕ್ಷಣ ಮತ್ತು ಉದ್ಯೋಗದ ನಿರೀಕ್ಷೆಯಲ್ಲಿ ಹಳ್ಳಿಗಳಿಂದ ನಗರಗಳಿಗೆ ಜನರು ವಲಸೆ ಬರುತ್ತಿದ್ದಾರೆ. ಆದರೆ, ಎಲ್ಲ ನಗರಗಳಲ್ಲೂ ಉದ್ಯೋಗಾವಕಾಶ ಮತ್ತು ಮೂಲಸೌಕರ್ಯ ಸಮರ್ಪಕವಾಗಿ ವಿಸ್ತರಣೆಯಾಗದಿದ್ದರೆ ಸಂಚಾರ ದಟ್ಟಣೆ, ವಸತಿ ಸಮಸ್ಯೆ ಸೇರಿದಂತೆ ಹಲವು ಸವಾಲುಗಳು ಎದುರಾಗುತ್ತವೆ. ಹೀಗಾಗಿ ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಎಲ್ಲ ನಗರಗಳನ್ನೂ ಭವಿಷ್ಯದ ಅಗತ್ಯಕ್ಕೆ ತಕ್ಕಂತೆ ಯೋಜಿತವಾಗಿ ಅಭಿವೃದ್ಧಿಪಡಿಸಬೇಕು ಎಂದು ಹೇಳಿದರು.
“ಗ್ರಾಮೀಣ ಪ್ರದೇಶಗಳಿಂದ ನಗರಗಳಿಗೆ ವಲಸೆ ಹೆಚ್ಚುತ್ತಿರುವುದಕ್ಕೆ ಶಿಕ್ಷಣ ಮತ್ತು ಉದ್ಯೋಗವೇ ಪ್ರಮುಖ ಕಾರಣಗಳಾಗಿವೆ. ನಾನು ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದವನು. ನಮ್ಮ ತಂದೆ-ತಾಯಿ ನನಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕು ಎಂಬ ಉದ್ದೇಶದಿಂದ ಬೆಂಗಳೂರಿಗೆ ಕರೆತಂದು ಸೇರಿಸಿದರು. ಚುನಾವಣೆ ಸಂದರ್ಭ ಹೊರತುಪಡಿಸಿ ವರ್ಷಕ್ಕೆ ಮೂರು-ನಾಲ್ಕು ದಿನವೂ ಹಳ್ಳಿಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ನನ್ನ ಮಕ್ಕಳಿಗಾಗಲಿ, ಪತ್ನಿಗಾಗಲಿ ಹಳ್ಳಿಯ ಬದುಕು ಹೇಗಿರುತ್ತದೆ ಎಂಬುದೇ ಗೊತ್ತಿಲ್ಲ. ಇದು ನನ್ನೊಬ್ಬನ ಪರಿಸ್ಥಿತಿಯಲ್ಲ, ಬಹುತೇಕ ಕುಟುಂಬಗಳ ಸ್ಥಿತಿಯೂ ಇದೇ ಆಗಿದೆ” ಎಂದು ತಮ್ಮ ಅನುಭವ ಹಂಚಿಕೊಂಡರು.
“ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂಬ ಕಾರಣಕ್ಕೆ ಬಡ ಕುಟುಂಬಗಳೂ ನಗರಗಳತ್ತ ಮುಖ ಮಾಡುತ್ತಿವೆ. ಮನೆ, ಆಸ್ತಿ ಸೇರಿದಂತೆ ಇತರ ಅಗತ್ಯಗಳಿಗಿಂತ ಮಕ್ಕಳಿಗೆ ಒಳ್ಳೆಯ ಶಾಲೆ, ಉತ್ತಮ ಶಿಕ್ಷಣ ಕೊಡಿಸುವುದಕ್ಕೇ ಹೆಚ್ಚಿನ ಆದ್ಯತೆ ನೀಡುತ್ತಾರೆ. ಎಷ್ಟೇ ಕಷ್ಟವಾದರೂ ಮಕ್ಕಳಿಗೆ ಉತ್ತಮ ಬಟ್ಟೆ, ಶೂ ಕೊಡಿಸಿ ಒಳ್ಳೆಯ ಶಾಲೆಗೆ ಕಳುಹಿಸಬೇಕು ಎಂಬುದು ಅವರ ಆಸೆಯಾಗಿರುತ್ತದೆ. ಅಧಿಕಾರಿಗಳ ಮನೆಗಳಲ್ಲಿ ಕೆಲಸ ಮಾಡುವ ಚಾಲಕರು ಸೇರಿದಂತೆ ಸಾಮಾನ್ಯ ಕಾರ್ಮಿಕರಲ್ಲೂ ಇದೇ ಕನಸಿದೆ” ಎಂದು ಹೇಳಿದರು.
ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗಬೇಕು
“ಹಳ್ಳಿಗಳಿಂದ ಜನರು ನಗರಗಳಿಗೆ ಬರುವುದು ಮುಖ್ಯವಾಗಿ ಎರಡು ಕಾರಣಕ್ಕೆ. ಒಂದು ಶಿಕ್ಷಣ, ಮತ್ತೊಂದು ಉದ್ಯೋಗ. ಎಲ್ಲರೂ ಬೆಂಗಳೂರಿಗೆ ಬಂದರೆ ನಗರದ ಜನಸಂಖ್ಯೆ ಹೆಚ್ಚುತ್ತದೆ. ಅದರೊಂದಿಗೆ ಸಮಸ್ಯೆಗಳೂ ಹೆಚ್ಚುತ್ತವೆ. ಹೀಗಾಗಿ ಜನರು ತಮ್ಮ ಊರು, ತಾಲೂಕು ಮತ್ತು ಜಿಲ್ಲೆಗಳಲ್ಲಿಯೇ ಉದ್ಯೋಗ ಪಡೆಯುವ ವಾತಾವರಣ ನಿರ್ಮಿಸಬೇಕು” ಎಂದು ಹೇಳಿದರು.
“ಬೆಂಗಳೂರು ಸುತ್ತಮುತ್ತಲಿನ ಕೋಲಾರ, ತುಮಕೂರು, ಮಂಡ್ಯ ಸೇರಿದಂತೆ ವಿವಿಧ ಜಿಲ್ಲೆಗಳ ಜನರೂ ಉದ್ಯೋಗ ಮತ್ತು ಶಿಕ್ಷಣಕ್ಕಾಗಿ ಬೆಂಗಳೂರಿಗೆ ಬರುತ್ತಿದ್ದಾರೆ. ಬೆಂಗಳೂರು ಸುತ್ತಮುತ್ತಲಿನ ಕೆಲವು ಪ್ರದೇಶಗಳ ಜನಸಂಖ್ಯೆಯ ಗಮನಾರ್ಹ ಭಾಗ ನಗರಕ್ಕೆ ಸ್ಥಳಾಂತರಗೊಂಡಿದೆ. ಹೀಗಾಗಿ ಪ್ರಾದೇಶಿಕ ಮಟ್ಟದಲ್ಲಿಯೇ ಕೈಗಾರಿಕೆ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದು ಅಗತ್ಯವಾಗಿದೆ” ಎಂದರು.
70 ಲಕ್ಷದಿಂದ 1.40 ಕೋಟಿಗೆ ಜನಸಂಖ್ಯೆ
“ನಾನು ಹಿಂದೆ ನಗರಾಭಿವೃದ್ಧಿ ಸಚಿವರಾಗಿದ್ದಾಗ ಬೆಂಗಳೂರಿನ ಜನಸಂಖ್ಯೆ ಸುಮಾರು 70 ಲಕ್ಷ ಇತ್ತು. ಆಗ ನಗರದ ವ್ಯಾಪ್ತಿ ಹೆಬ್ಬಾಳ ಫ್ಲೈಓವರ್, ರಾಜರಾಜೇಶ್ವರಿ ನಗರ ಸೇರಿದಂತೆ ಸೀಮಿತ ಪ್ರದೇಶಗಳವರೆಗೆ ಇತ್ತು. ಈಗ ನಗರ ವ್ಯಾಪ್ತಿ ವಿಸ್ತರಿಸಿದ್ದು, ಜನಸಂಖ್ಯೆ ಸುಮಾರು 1.40 ಕೋಟಿಗೆ ಏರಿಕೆಯಾಗಿದೆ. ವಾಹನಗಳ ಸಂಖ್ಯೆಯೂ ಸುಮಾರು 1.35 ಕೋಟಿಯಷ್ಟಾಗಿದೆ” ಎಂದು ವಿವರಿಸಿದರು.
“ಬೆಂಗಳೂರಿನ ಜನಸಂಖ್ಯೆ ಮತ್ತು ವಾಹನಗಳ ಸಂಖ್ಯೆ ಹೆಚ್ಚಾಗಿದ್ದರೂ ಅದಕ್ಕೆ ತಕ್ಕಂತೆ ರಸ್ತೆ ಸೇರಿದಂತೆ ಮೂಲಸೌಕರ್ಯ ವಿಸ್ತರಣೆಯಾಗಿಲ್ಲ. ಇಡೀ ರಾಜ್ಯದ ಲೆಕ್ಕದಲ್ಲಿ ರಸ್ತೆ ಪ್ರಮಾಣ ಶೇ.8ರಷ್ಟಿದೆ. ಸಾಮಾನ್ಯವಾಗಿ ಶೇ.18ರಷ್ಟು ರಸ್ತೆ ಪ್ರಮಾಣ ಇರಬೇಕೆಂಬ ಹೋಲಿಕೆಯನ್ನು ಗಮನದಲ್ಲಿಟ್ಟುಕೊಂಡರೆ ಮೂಲಸೌಕರ್ಯ ವಿಸ್ತರಣೆಯ ಅಗತ್ಯ ಎಷ್ಟಿದೆ ಎಂಬುದು ತಿಳಿಯುತ್ತದೆ” ಎಂದರು.
ಮೈಸೂರಿನ ನಗರ ಯೋಜನೆ ಮಾದರಿ
ಮೈಸೂರು ನಗರ ಯೋಜನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಿಎಂ, “ಮೈಸೂರು ದೇಶದ ಉತ್ತಮ ಯೋಜಿತ ನಗರಗಳಲ್ಲಿ ಒಂದು. ಹಿಂದಿನ ಮಹಾರಾಜರ ಕಾಲದಿಂದ ಹಿಡಿದು ನಂತರದ ನಗರಾಭಿವೃದ್ಧಿ ಅಧಿಕಾರಿಗಳವರೆಗೆ ವಿಶಾಲ ರಸ್ತೆಗಳು ಹಾಗೂ ವ್ಯವಸ್ಥಿತ ನಗರ ವಿನ್ಯಾಸಕ್ಕೆ ಆದ್ಯತೆ ನೀಡಿದ್ದಾರೆ. ಬೆಂಗಳೂರಿಗಿಂತಲೂ ಉತ್ತಮವಾಗಿ ಯೋಜನೆ ರೂಪಿಸಿರುವುದನ್ನು ನಾನು ಕಣ್ಣಾರೆ ನೋಡಿದ್ದೇನೆ. ಇಂದಿಗೂ ಮೈಸೂರು ಉತ್ತಮ ಯೋಜಿತ ನಗರವಾಗಿ ಉಳಿದಿದೆ” ಎಂದು ಹೇಳಿದರು.
“ಬೆಳಗಾವಿಯಲ್ಲಿಯೂ ಹಿಂದಿನ ಕಾಲದಲ್ಲಿ ಸೇನಾ ನೆಲೆಯ ಪ್ರಭಾವದಿಂದ ಕೆಲವು ಪ್ರದೇಶಗಳು ವ್ಯವಸ್ಥಿತವಾಗಿ ಅಭಿವೃದ್ಧಿಯಾಗಿವೆ. ಆದರೆ, ರಾಜ್ಯದ ಬಹುತೇಕ ನಗರಗಳಲ್ಲಿ ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಸಮಗ್ರ ನಗರ ಯೋಜನೆ ರೂಪಿಸುವ ಅಗತ್ಯವಿದೆ” ಎಂದು ಅಭಿಪ್ರಾಯಪಟ್ಟರು.
“ರಾಜ್ಯದ ಎಲ್ಲ ನಗರಗಳ ಬೆಳವಣಿಗೆ, ಸಂಚಾರ ವ್ಯವಸ್ಥೆ, ಕೈಗಾರಿಕೆಗಳ ಸ್ಥಾಪನೆ ಮತ್ತು ಭವಿಷ್ಯದ ಅಗತ್ಯಗಳನ್ನು ಸಮಗ್ರವಾಗಿ ಪರಿಗಣಿಸಬೇಕಿದೆ. ನಗರಾಭಿವೃದ್ಧಿ ಮತ್ತು ಪಟ್ಟಣ ಯೋಜನೆ ಇಲಾಖೆಗಳ ಮೂಲಕ ಈ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ಕೆಂಪೇಗೌಡರ ಭವನ ನಿರ್ಮಾಣದ ಸಂದರ್ಭದಲ್ಲಿಯೂ ನಗರ ಯೋಜನೆಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಕೆಲವು ಸೂಚನೆಗಳನ್ನು ನೀಡಿರುವುದಾಗಿ” ತಿಳಿಸಿದರು.
“ರಾಜ್ಯದ ನಗರಗಳ ಯೋಜಿತ ಬೆಳವಣಿಗೆಗೆ ಅಗತ್ಯವಿರುವ ನಗರ ಯೋಜನಾ ತಜ್ಞರ ಕೊರತೆ ನೀಗಿಸಲು ಸರಕಾರದ ವತಿಯಿಂದಲೇ ಪ್ರತ್ಯೇಕ ಟೌನ್ ಪ್ಲಾನಿಂಗ್ ಕಾಲೇಜು ಆರಂಭಿಸಲು ಸಿದ್ಧತೆ ನಡೆಸಲಾಗುವುದು. ಬೆಂಗಳೂರು ಮಾತ್ರವಲ್ಲದೆ ಕಲಬುರಗಿ, ಶಿವಮೊಗ್ಗ, ಮಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಸೇರಿದಂತೆ ರಾಜ್ಯದ ಎಲ್ಲ ಪ್ರಮುಖ ನಗರಗಳಲ್ಲೂ ಕೈಗಾರಿಕೆ, ಉದ್ಯೋಗ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ನಗರ ಯೋಜನೆಗೆ ಸಂಬಂಧಿಸಿದಂತೆ ತಜ್ಞ ಮಾನವ ಸಂಪನ್ಮೂಲ ಸಿದ್ಧಪಡಿಸುವ ಅಗತ್ಯವಿದೆ” ಎಂದರು.
“ಇಂದು ವಿವಿಧ ವಿಭಾಗಗಳ ಇಂಜಿನಿಯರ್ಗಳು ಬರುತ್ತಾರೆ. ಎಲೆಕ್ಟ್ರಿಕಲ್, ಸಿವಿಲ್ ಸೇರಿದಂತೆ ಬೇರೆ ಬೇರೆ ವಿಭಾಗಗಳಲ್ಲಿ ಪರಿಣತಿ ಪಡೆದವರು ಇದ್ದಾರೆ. ಆದರೆ, ನಗರಗಳ ಭವಿಷ್ಯದ ಬೆಳವಣಿಗೆಗೆ ಅತ್ಯಗತ್ಯವಾದ ಟೌನ್ ಪ್ಲಾನಿಂಗ್ಗೆ ಪ್ರತ್ಯೇಕ ಶಿಕ್ಷಣ ವ್ಯವಸ್ಥೆ ಬೇಕಿದೆ. ಹೀಗಾಗಿ ಸರಕಾರದ ವತಿಯಿಂದಲೇ ಪ್ರತ್ಯೇಕ ಟೌನ್ ಪ್ಲಾನಿಂಗ್ ಕಾಲೇಜು ಆರಂಭಿಸಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುತ್ತೇನೆ” ಎಂದು ತಿಳಿಸಿದರು.
ಬೆಂಗಳೂರು ಗಳಿಸಿದ ಸಂಪನ್ಮೂಲ ಗ್ರಾಮೀಣಾಭಿವೃದ್ಧಿಗೂ ಬಳಕೆ
“ಬೆಂಗಳೂರು ಇಡೀ ರಾಜ್ಯದ ಆರ್ಥಿಕ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಿದೆ. ಐಟಿ, ಬಿಟಿ ಸೇರಿದಂತೆ ವಿವಿಧ ಉದ್ಯಮಗಳು ರಾಜ್ಯಕ್ಕೆ ಹೆಚ್ಚಿನ ಆದಾಯ ತರುತ್ತಿವೆ. ಆದಾಯ ತೆರಿಗೆ, ಜಿಎಸ್ಟಿ ಸೇರಿದಂತೆ ವಿವಿಧ ಮೂಲಗಳಿಂದ ನಗರ ಪ್ರದೇಶಗಳಲ್ಲಿ ಸೃಷ್ಟಿಯಾಗುವ ಆರ್ಥಿಕ ಸಂಪನ್ಮೂಲವನ್ನು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೂ ಬಳಸಬೇಕಿದೆ” ಎಂದು ಹೇಳಿದರು.
“ಬೆಂಗಳೂರು ಮತ್ತು ನಗರ ಪ್ರದೇಶಗಳು ಆರ್ಥಿಕವಾಗಿ ಬೆಳೆಯುವುದರಿಂದ ಇಡೀ ರಾಜ್ಯಕ್ಕೆ ಅನುಕೂಲವಾಗಬೇಕು. ನಗರಗಳ ಮೂಲಕ ಬರುವ ಆದಾಯವನ್ನು ಹಳ್ಳಿಗಳ ಅಭಿವೃದ್ಧಿಗೆ ಬಳಸಬೇಕಾಗುತ್ತದೆ. ನಗರ ಪ್ರದೇಶದ ಜನರು ತಾವು ತೆರಿಗೆ ಕಟ್ಟುತ್ತಿದ್ದೇವೆ, ನಮಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿ ಎಂದು ಕೇಳುವುದು ಸಹಜ. ಐಟಿ, ಬಿಟಿ ಸೇರಿದಂತೆ ವಿವಿಧ ಉದ್ಯಮಗಳ ಅಗತ್ಯಗಳನ್ನೂ ಗಮನದಲ್ಲಿಟ್ಟುಕೊಂಡು ಸಮತೋಲಿತ ಅಭಿವೃದ್ಧಿ ಸಾಧಿಸಬೇಕು” ಎಂದರು.
ಕೃಷಿ, ಕೈಗಾರಿಕೆಗಳಿಗೂ ಪರಸ್ಪರ ಸಂಬಂಧ
“ರಾಜ್ಯದ ಕೃಷಿ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆಯಿದೆ. ಹಣ್ಣು, ಹೂವು ಸೇರಿದಂತೆ ವಿವಿಧ ಉತ್ಪನ್ನಗಳನ್ನು ರಫ್ತು ಮಾಡಲಾಗುತ್ತಿದೆ. ಆದರೆ, ಕೃಷಿ, ಕೈಗಾರಿಕೆ, ನಗರಾಭಿವೃದ್ಧಿ ಮತ್ತು ಮಾರುಕಟ್ಟೆ ವ್ಯವಸ್ಥೆಗಳು ಪರಸ್ಪರ ಸಂಬಂಧ ಹೊಂದಿವೆ. ಒಂದು ಕ್ಷೇತ್ರದ ಬೆಳವಣಿಗೆ ಮತ್ತೊಂದು ಕ್ಷೇತ್ರದ ಮೇಲೂ ಪರಿಣಾಮ ಬೀರುತ್ತದೆ” ಎಂದು ಹೇಳಿದರು.
“ಕಬ್ಬು ಬೆಳೆಗಾರರ ಸಮಸ್ಯೆಯನ್ನು ಉದಾಹರಣೆಯಾಗಿ ಪ್ರಸ್ತಾಪಿಸಿದ ಅವರು, ಉತ್ತರ ಪ್ರದೇಶದ ಕೆಲವು ಪ್ರದೇಶಗಳಲ್ಲಿ ಕಡಿಮೆ ಆಳದಲ್ಲೇ ನೀರು ಲಭ್ಯವಾಗುವುದರಿಂದ ಕಬ್ಬು ಬೆಳೆಯಲು ಅನುಕೂಲವಿದೆ. ಅಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಬೆಳೆಯಲಾಗುತ್ತಿದೆ. ಕರ್ನಾಟಕದಲ್ಲಿಯೂ ಕಬ್ಬು ಬೆಳೆಗಾರರು ನ್ಯಾಯಯುತ ಬೆಲೆಗಾಗಿ ಹೋರಾಟ ನಡೆಸುತ್ತಿದ್ದಾರೆ. ಸಕ್ಕರೆ ಬೆಲೆ ನಿಗದಿ, ಕಾರ್ಖಾನೆಗಳ ಆರ್ಥಿಕ ಸ್ಥಿತಿ ಹಾಗೂ ರೈತರಿಗೆ ಸಿಗುವ ಕಬ್ಬಿನ ದರ ಇವೆಲ್ಲವೂ ಒಂದಕ್ಕೊಂದು ಸಂಬಂಧ ಹೊಂದಿವೆ. ಪ್ರತಿಯೊಂದು ಕ್ಷೇತ್ರದ ಸಮಸ್ಯೆಯನ್ನೂ ಪ್ರತ್ಯೇಕವಾಗಿ ನೋಡದೆ ಸಮಗ್ರ ದೃಷ್ಟಿಕೋನದಿಂದ ಪರಿಹರಿಸಬೇಕು” ಎಂದು ಹೇಳಿದರು.
“ಇಡೀ ಜಗತ್ತು ಇಂದು ಬೆಂಗಳೂರಿನತ್ತ ನೋಡುತ್ತಿದೆ. ಆದರೆ, ಬೆಂಗಳೂರು ಒಂದೇ ಸಾಕಾಗುವುದಿಲ್ಲ. ಬೆಂಗಳೂರಿನ ಆಚೆಗೂ ಕರ್ನಾಟಕ ಬೆಳೆಯಬೇಕು. ರಾಜ್ಯದ ಎಲ್ಲ ಭಾಗಗಳಿಗೂ ಅಭಿವೃದ್ಧಿಯ ಅವಕಾಶಗಳು ಹಂಚಿಕೆಯಾಗಬೇಕು” ಎಂದು ಸಿಎಂ ಹೇಳಿದರು.
ಈ ಉದ್ದೇಶದಿಂದ ಏಳು ಪ್ರಮುಖ ವಲಯಗಳನ್ನು ಆಧರಿಸಿ ಯೋಜನೆ ರೂಪಿಸಲಾಗುತ್ತಿದೆ. ಅವುಗಳೆಂದರೆ:
1. ಉದ್ಯಮ ಕರ್ನಾಟಕ: ಎಲ್ಲ ಜಿಲ್ಲೆಗಳಲ್ಲೂ ಕೈಗಾರಿಕೆ ಮತ್ತು ಉದ್ಯೋಗಾವಕಾಶಗಳ ಸೃಷ್ಟಿ.
2. ಸೇವಾ ಉನ್ನತಿ ಕರ್ನಾಟಕ: ಗುಣಮಟ್ಟದ ಸೇವೆಗಳು ಹಾಗೂ ಮೂಲಸೌಕರ್ಯ ವಿಸ್ತರಣೆ.
3. ಸಂಚಾರ ಕರ್ನಾಟಕ: ಸುಧಾರಿತ ಸಾರಿಗೆ ಮತ್ತು ಸಂಪರ್ಕ ವ್ಯವಸ್ಥೆ.
4. ಪರಿಸರ ಕರ್ನಾಟಕ: ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ನಗರಾಭಿವೃದ್ಧಿ.
5. ಪ್ರತಿಭಾ ಕರ್ನಾಟಕ: ಶಿಕ್ಷಣ, ಕೌಶಲ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ.
6. ಸಮೃದ್ಧಿ ಕರ್ನಾಟಕ: ಎಲ್ಲ ಪ್ರದೇಶಗಳ ಸಮಗ್ರ ಆರ್ಥಿಕ ಬೆಳವಣಿಗೆ.
7. ಡಿಜಿಟಲ್ ಕರ್ನಾಟಕ: ತಂತ್ರಜ್ಞಾನ ಆಧಾರಿತ ಆಡಳಿತ ಮತ್ತು ಸೇವೆಗಳ ವಿಸ್ತರಣೆ.
“2047ರ ವೇಳೆಗೆ ಕರ್ನಾಟಕದ ವಿದ್ಯುತ್ ಬೇಡಿಕೆ 40 ಸಾವಿರದಿಂದ 50 ಸಾವಿರ ಮೆಗಾವಾಟ್ಗೆ ತಲುಪುವ ನಿರೀಕ್ಷೆಯಿದ್ದು, ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಈಗಿನಿಂದಲೇ ವಿದ್ಯುತ್ ಉತ್ಪಾದನೆ ಮತ್ತು ಸಂಗ್ರಹಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು” ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದರು.
“ಕೃಷಿ ಮತ್ತು ಕೈಗಾರಿಕೆಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಸುವುದರ ಜತೆಗೆ ಹೊಸ ತಂತ್ರಜ್ಞಾನ, ಸೇವಾ ಕ್ಷೇತ್ರಗಳ ಬೆಳವಣಿಗೆಗೂ ಆದ್ಯತೆ ನೀಡಬೇಕು. ಉತ್ತಮ ರಸ್ತೆ, ರೈಲು ಹಾಗೂ ಸಾರಿಗೆ ಸಂಪರ್ಕ ವ್ಯವಸ್ಥೆ ಮತ್ತು ನಿರಂತರ ವಿದ್ಯುತ್ ಪೂರೈಕೆಗೆ ಒತ್ತು ನೀಡಬೇಕು” ಎಂದು ತಿಳಿಸಿದರು.
12 ಸಾವಿರ ಮೆಗಾವಾಟ್ ವಿದ್ಯುತ್ ಸಾಮರ್ಥ್ಯ ಸೇರ್ಪಡೆ
“ನಾನು ಇಂಧನ ಸಚಿವನಾಗಿದ್ದಾಗ ಸಾಕಷ್ಟು ಸವಾಲುಗಳಿದ್ದವು. ಈ ಖಾತೆ ವಹಿಸಿಕೊಂಡು ಕೆಟ್ಟ ಹೆಸರು ತಂದುಕೊಳ್ಳುತ್ತೀಯಾ ಎಂದು ಹಲವರು ಎಚ್ಚರಿಸಿದ್ದರು. ಆದರೆ, ಸವಾಲನ್ನು ಸ್ವೀಕರಿಸಿ ಏನಾದರೂ ಸಾಧಿಸಬೇಕು ಎಂಬ ಉದ್ದೇಶದಿಂದ ಜವಾಬ್ದಾರಿ ತೆಗೆದುಕೊಂಡೆ. ಆಗ ಸುಮಾರು 12 ಸಾವಿರ ಮೆಗಾವಾಟ್ ವಿದ್ಯುತ್ ಸಾಮರ್ಥ್ಯವನ್ನು ಹೆಚ್ಚಿಸುವ ಪ್ರಯತ್ನ ಮಾಡಲಾಯಿತು” ಎಂದು ಹೇಳಿದರು.
“ಸೌರ ವಿದ್ಯುತ್ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಲಾಯಿತು. ಪಾವಗಡದಲ್ಲಿ ರೈತರ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳದೆ ಗುತ್ತಿಗೆ ಮಾದರಿಯಲ್ಲಿ ಪಡೆದು ಬೃಹತ್ ಸೋಲಾರ್ ಪಾರ್ಕ್ ನಿರ್ಮಿಸಲಾಯಿತು. ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಜಮೀನಿನ ಮೇಲಿನ ಮಾಲೀಕತ್ವವನ್ನು ಉಳಿಸಿಕೊಂಡೇ ಯೋಜನೆ ಅನುಷ್ಠಾನಗೊಳಿಸಲಾಯಿತು” ಎಂದು ವಿವರಿಸಿದರು.
“ಪಾವಗಡದ ರೈತರು ತಮ್ಮ ಜಮೀನನ್ನು ಕಳೆದುಕೊಂಡಿಲ್ಲ. ಜಮೀನು ಅವರ ಬಳಿಯೇ ಇದೆ. ಸರಕಾರಕ್ಕೆ ವಿದ್ಯುತ್ ದೊರೆಯುತ್ತಿದೆ, ರೈತರಿಗೂ ಗುತ್ತಿಗೆ ಆದಾಯ ಸಿಗುತ್ತಿದೆ. ಇದರಿಂದ ರೈತರಿಗೂ ಅನುಕೂಲವಾಗಿದೆ” ಎಂದರು.
ರಾತ್ರಿ ವೇಳೆಯೂ ಸೌರ ವಿದ್ಯುತ್ ಬಳಕೆಗೆ ಬ್ಯಾಟರಿ ಸಂಗ್ರಹ
“ಸೌರ ವಿದ್ಯುತ್ ಉತ್ಪಾದನೆ ಹಗಲಿನ ಸೂರ್ಯನ ಬೆಳಕನ್ನು ಅವಲಂಬಿಸಿದೆ. ಆದರೆ, ವಿದ್ಯುತ್ ಬೇಡಿಕೆ ರಾತ್ರಿ ವೇಳೆಯೂ ಇರುತ್ತದೆ. ಹೀಗಾಗಿ ಹಗಲಿನಲ್ಲಿ ಉತ್ಪಾದನೆಯಾಗುವ ಸೌರ ವಿದ್ಯುತ್ನ್ನು ಸಂಗ್ರಹಿಸಿ ರಾತ್ರಿ ಬಳಸುವ ನಿಟ್ಟಿನಲ್ಲಿ ಬ್ಯಾಟರಿ ವ್ಯವಸ್ಥೆ ಅಳವಡಿಸಲು ಸರಕಾರ ಟೆಂಡರ್ ಕರೆದಿದೆ” ಎಂದು ತಿಳಿಸಿದರು.
“ತಂತ್ರಜ್ಞಾನ ಬೆಳವಣಿಗೆಯೊಂದಿಗೆ ವಿದ್ಯುತ್ ಉತ್ಪಾದನೆಯಷ್ಟೇ ಅಲ್ಲದೆ, ಅದನ್ನು ಸಮರ್ಪಕವಾಗಿ ಸಂಗ್ರಹಿಸಿ ಅಗತ್ಯವಿರುವ ಸಮಯದಲ್ಲಿ ಬಳಸುವ ವ್ಯವಸ್ಥೆಯೂ ಮುಖ್ಯವಾಗಲಿದೆ” ಎಂದರು.
ಪ್ರತಿ ವರ್ಷ ಶೇ.10-12ರಷ್ಟು ವಿದ್ಯುತ್ ಬೇಡಿಕೆ ಹೆಚ್ಚಳ
“ಕರ್ನಾಟಕದಲ್ಲಿ ಪ್ರತಿ ವರ್ಷ ವಿದ್ಯುತ್ ಬೇಡಿಕೆ ಶೇ.10ರಿಂದ 12ರಷ್ಟು ಹೆಚ್ಚಳವಾಗುತ್ತಿದೆ. ಇತ್ತೀಚೆಗೆ ತಮಿಳುನಾಡಿನಲ್ಲಿ ಪ್ರತಿ ಯೂನಿಟ್ಗೆ 30 ರೂ. ಹಾಗೂ ಕೇರಳದಲ್ಲಿ 24 ರೂ. ದರದಲ್ಲಿ ವಿದ್ಯುತ್ ಖರೀದಿಸಿರುವುದನ್ನು ಉಲ್ಲೇಖಿಸಿದ ಅವರು, ಗರಿಷ್ಠ ಬೇಡಿಕೆಯ ಸಂದರ್ಭದಲ್ಲಿ ವಿದ್ಯುತ್ ಲಭ್ಯತೆ ಮತ್ತು ಖರೀದಿ ವೆಚ್ಚದ ಸವಾಲುಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು” ಎಂದರು.
“ಅಧಿಕಾರಿಗಳಿಗೆ ಸರಕಾರ ನೀಡಿರುವ ಅಧಿಕಾರ ಮತ್ತು ಜವಾಬ್ದಾರಿ ಕೇವಲ ಉದ್ಯೋಗವಲ್ಲ, ಸಮಾಜಕ್ಕೆ ಕೊಡುಗೆ ನೀಡುವ ಅವಕಾಶ. ವೈಯಕ್ತಿಕ ಹಿತಾಸಕ್ತಿಯನ್ನು ಬದಿಗಿಟ್ಟು, ಮುಂದಿನ ಪೀಳಿಗೆಯ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಪ್ರತಿಯೊಂದು ನಿರ್ಧಾರ ಕೈಗೊಳ್ಳಬೇಕು. ಜನರು ಸಮಸ್ಯೆ ಹೊತ್ತು ನಿಮ್ಮ ಬಳಿಗೆ ಬಂದಾಗ, ದೇವಸ್ಥಾನಕ್ಕೆ ಹೋಗಿ ನೆಮ್ಮದಿ ಪಡೆದು ಹೊರಬಂದ ಅನುಭವದಂತೆ ಪರಿಹಾರ ಕಂಡುಕೊಂಡು ಸಂತೋಷದಿಂದ ಹಿಂದಿರುಗುವ ವಾತಾವರಣ ನಿರ್ಮಿಸಬೇಕು” ಎಂದು ಅಧಿಕಾರಿಗಳಿಗೆ ಕರೆ ನೀಡಿದರು.
“ದೇವರು ವರ, ಶಾಪ ನೀಡುವುದಿಲ್ಲ. ಕೇವಲ ಅವಕಾಶ ಮಾತ್ರ ಕೊಡುತ್ತಾನೆ. ನಿಮಗೆ ಸರಕಾರಿ ನೌಕರಿ, ಅಧಿಕಾರಿಯಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಈ ಅವಕಾಶದಲ್ಲಿ ದೇಶಕ್ಕೆ, ರಾಜ್ಯಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಪ್ರಜ್ಞೆ ಇರಲಿ. ನಿಮ್ಮ ಆತ್ಮಸಾಕ್ಷಿ ಒಪ್ಪುವ ಮತ್ತು ಸಮಾಜ ಒಪ್ಪುವ ನಿರ್ಧಾರಗಳನ್ನು ಕೈಗೊಳ್ಳಿ” ಎಂದು ಸಲಹೆ ನೀಡಿದರು.
ಜನರು ನಿಮ್ಮ ಬಳಿಗೆ ಬರುವುದು ಸಮಸ್ಯೆ ಪರಿಹಾರಕ್ಕಾಗಿ
“ಸರಕಾರಿ ಕೆಲಸ ದೇವರ ಕೆಲಸ ಎಂಬ ತತ್ವವನ್ನು ಪ್ರತಿಯೊಬ್ಬ ಅಧಿಕಾರಿಯೂ ಪಾಲಿಸಬೇಕು. ಜನರು ಅಧಿಕಾರಿಗಳ ಬಳಿ ಬರುವುದು ಸಮಸ್ಯೆಗಳಿದ್ದಾಗ ಮಾತ್ರ. 30-35 ವರ್ಷಗಳ ಸೇವಾವಧಿಯಲ್ಲಿ ಸಾವಿರಾರು ಜನರಿಗೆ ನೆರವಾಗುವ ಅವಕಾಶ ಅಧಿಕಾರಿಗಳಿಗಿದೆ. ದೇವಸ್ಥಾನಕ್ಕೆ ಹೋಗುವ ಭಕ್ತರು ಆರೋಗ್ಯ, ಉದ್ಯೋಗ, ನೆಮ್ಮದಿ ಕೇಳುವಂತೆ, ಸರಕಾರಿ ಕಚೇರಿಗೆ ಬರುವ ಜನರು ತಮ್ಮ ಸಮಸ್ಯೆಗಳಿಗೆ ಪರಿಹಾರ ನಿರೀಕ್ಷಿಸುತ್ತಾರೆ” ಎಂದರು.
“ನಿಮ್ಮ ಬಳಿ ಬಂದ ವ್ಯಕ್ತಿಯ ಪರಿಸ್ಥಿತಿಯಲ್ಲಿ ನೀವೇ ಇದ್ದರೆ ಏನು ಮಾಡುತ್ತಿದ್ದಿರಿ ಎಂಬುದನ್ನು ಯೋಚಿಸಿ ತೀರ್ಮಾನ ಕೈಗೊಳ್ಳಿ. ನಿಮ್ಮಿಂದ ಹೊರಗೆ ಹೋದಾಗ ಆ ವ್ಯಕ್ತಿಗೆ ನೆಮ್ಮದಿ ಸಿಗಬೇಕು. ರಾಜಕಾರಣಿಗಳು ಸಾವಿರ ಮಾತುಗಳನ್ನು ಆಡಬಹುದು. ಆದರೆ ಜನರು ಅಧಿಕಾರಿಗಳು ಮತ್ತು ಸಿಬ್ಬಂದಿ ಮೇಲೆ ಅಪಾರ ವಿಶ್ವಾಸ ಇಟ್ಟಿದ್ದಾರೆ. ಆ ವಿಶ್ವಾಸ ಉಳಿಸಿಕೊಳ್ಳುವುದು ನಿಮ್ಮ ಜವಾಬ್ದಾರಿ” ಎಂದರು.
ಎಐ ಬಂದರೂ ಮಾನವ ಸಂಪನ್ಮೂಲವೇ ಕರ್ನಾಟಕದ ಶಕ್ತಿ
“ಡಿಜಿಟಲ್ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ (ಎಐ) ಜಗತ್ತಿನ ಕೆಲಸದ ವಿಧಾನವನ್ನೇ ಬದಲಿಸುತ್ತಿವೆ. ಒಂದು ಕಾಲದಲ್ಲಿ ಲೆಕ್ಕಾಚಾರಕ್ಕೆ ಕ್ಯಾಲ್ಕುಲೇಟರ್ ಬಳಸುತ್ತಿದ್ದೆವು. ನಂತರ ಕಂಪ್ಯೂಟರ್, ಇಂಟರ್ನೆಟ್ ಮತ್ತು 1ಜಿ, 2ಜಿ, 3ಜಿ, 4ಜಿ, 5ಜಿ ತಂತ್ರಜ್ಞಾನಗಳು ಬಂದವು. ಈಗ ಎಐ ಮೂಲಕ ಕೆಲವೇ ನಿಮಿಷಗಳಲ್ಲಿ ಹಲವು ಕೆಲಸಗಳನ್ನು ಮಾಡಬಹುದಾಗಿದೆ. ಇದರಿಂದ ಉದ್ಯೋಗಗಳ ಸ್ವರೂಪ ಬದಲಾಗುವ ಸಾಧ್ಯತೆಯೂ ಇದೆ. ಇಂತಹ ಬದಲಾವಣೆಗಳಿಗೆ ರಾಜ್ಯ ಸಿದ್ಧವಾಗಿರಬೇಕು” ಎಂದು ಹೇಳಿದರು.
“ಕರ್ನಾಟಕದ ಮಾನವ ಸಂಪನ್ಮೂಲವೇ ರಾಜ್ಯದ ದೊಡ್ಡ ಶಕ್ತಿ. ರಾಜ್ಯದಲ್ಲಿ 250ಕ್ಕೂ ಹೆಚ್ಚು ಎಂಜಿನಿಯರಿಂಗ್ ಕಾಲೇಜುಗಳಿದ್ದು, ಪ್ರತಿವರ್ಷ ಒಂದು ಲಕ್ಷಕ್ಕೂ ಅಧಿಕ ಎಂಜಿನಿಯರ್ಗಳು ಸಿದ್ಧರಾಗುತ್ತಿದ್ದಾರೆ. ವೈದ್ಯರು, ನರ್ಸ್ಗಳು ಮತ್ತು ಅರೆವೈದ್ಯಕೀಯ ಸಿಬ್ಬಂದಿಯನ್ನೂ ದೊಡ್ಡ ಪ್ರಮಾಣದಲ್ಲಿ ರೂಪಿಸಲಾಗುತ್ತಿದೆ. ಆದರೆ, ಈ ವರ್ಷ ಸುಮಾರು 30 ಸಾವಿರ ಎಂಜಿನಿಯರಿಂಗ್ ಸೀಟುಗಳು ಖಾಲಿ ಉಳಿದಿರುವುದು ಶಿಕ್ಷಣ ಮತ್ತು ಉದ್ಯೋಗದ ನಡುವಿನ ಹೊಂದಾಣಿಕೆಯ ಅಗತ್ಯವನ್ನು ತೋರಿಸುತ್ತದೆ” ಎಂದರು.
ಬೆಂಗಳೂರು ಮೀರಿದ ಐಟಿ-ಬಿಟಿ ಬೆಳವಣಿಗೆಗೆ ಒತ್ತು
“ವಿಶ್ವದ ನಾಯಕರು ಮೊದಲು ದೆಹಲಿಗೆ ಬಂದು, ನಂತರ ಮುಂಬೈ, ಕೋಲ್ಕತ, ಚೆನ್ನೈ ಅಥವಾ ಇತರ ನಗರಗಳಿಗೆ ಹೋಗುತ್ತಿದ್ದ ಕಾಲವಿತ್ತು. ಆದರೆ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆಯ ಸಂದರ್ಭದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು, ಈಗ ವಿಶ್ವದ ನಾಯಕರು ದೆಹಲಿಗೆ ಬರುವ ಮೊದಲು ಬೆಂಗಳೂರಿಗೆ ಬರುತ್ತಿದ್ದಾರೆ ಎಂದು ಹೇಳಿದ್ದರು. ಬೆಂಗಳೂರಿನ ಮಾನವ ಸಂಪನ್ಮೂಲ ಮತ್ತು ತಾಂತ್ರಿಕ ಸಾಮರ್ಥ್ಯವೇ ಇದಕ್ಕೆ ಕಾರಣ” ಎಂದು ಸ್ಮರಿಸಿದರು.
“ಮೈಸೂರು ಸೇರಿದಂತೆ ಬೆಂಗಳೂರು ಹೊರಗಿನ ನಗರಗಳಿಗೂ ಐಟಿ-ಬಿಟಿ ಉದ್ಯಮಗಳನ್ನು ವಿಸ್ತರಿಸಲು ಹಿಂದಿನಿಂದಲೂ ಪ್ರಯತ್ನಿಸಲಾಗಿದೆ. ಮೈಸೂರಿನಲ್ಲಿ ಇನ್ಫೋಸಿಸ್ ಕ್ಯಾಂಪಸ್ ಸ್ಥಾಪನೆಗೆ ಅಂದು ಎಕರೆಗೆ ಮೂರು ಲಕ್ಷ ರೂ. ದರದಲ್ಲಿ ಜಮೀನು ನೀಡಲಾಗಿತ್ತು. ಬೆಳಗಾವಿ, ಧಾರವಾಡ, ಮಂಗಳೂರು ಸೇರಿದಂತೆ ಇತರ ನಗರಗಳಲ್ಲಿಯೂ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗೆ ಪ್ರಯತ್ನಿಸಲಾಗಿತ್ತು. ಈಗ ‘ಬಿಯಾಂಡ್ ಬೆಂಗಳೂರು’ ಮೂಲಕ ಈ ಪ್ರಯತ್ನಕ್ಕೆ ಮತ್ತಷ್ಟು ವೇಗ ನೀಡಲಾಗುತ್ತಿದೆ” ಎಂದರು.
“ರಾಜ್ಯಕ್ಕೆ ಬರುವ ಬೃಹತ್ ಹೂಡಿಕೆಗಳಿಗೆ ಸರಕಾರ ಸೂಕ್ತ ನೀತಿ ಮತ್ತು ಮೂಲಸೌಕರ್ಯ ಒದಗಿಸಬೇಕು. ಎಲ್ಲವನ್ನೂ ಸರಕಾರವೇ ಮಾಡಲಾಗುವುದಿಲ್ಲ. ಖಾಸಗಿ ಹೂಡಿಕೆದಾರರಿಗೆ ಅವಕಾಶ ಕಲ್ಪಿಸಿದಾಗ ಕೈಗಾರಿಕೆಗಳು ಸ್ಥಾಪನೆಯಾಗಿ ಸ್ಥಳೀಯರಿಗೆ ಉದ್ಯೋಗ ದೊರೆಯುತ್ತದೆ” ಎಂದು ಹೇಳಿದರು.
ಪ್ರತಿ ನಗರಕ್ಕೂ ರಿಂಗ್ ರಸ್ತೆ ನಿರ್ಮಾಣದ ಚಿಂತನೆ
“ನಗರಗಳ ಸಂಚಾರ ವ್ಯವಸ್ಥೆ ಸುಧಾರಿಸಲು ದೊಡ್ಡ ನಗರಗಳಿಂದ ಸಣ್ಣ ಪಟ್ಟಣಗಳವರೆಗೆ ವರ್ತುಲ ರಸ್ತೆ (ರಿಂಗ್ ರಸ್ತೆ) ನಿರ್ಮಿಸುವ ಚಿಂತನೆ ಇದೆ. ಪ್ರತಿಯೊಂದು ಪಟ್ಟಣದ ಹೊರವಲಯದಲ್ಲಿ, ಸಾಧ್ಯವಾದಷ್ಟು ಒಂದು ಕಿಲೋಮೀಟರ್ ಅಂತರದಲ್ಲಿ ರಿಂಗ್ರೋಡ್ ನಿರ್ಮಿಸುವ ಉದ್ದೇಶವಿದೆ” ಎಂದು ತಿಳಿಸಿದರು.
“ಜನರಿಗೆ ಸಮಯವೇ ಹಣ. ವಾಹನಗಳು, ಬಸ್ಗಳು ಪಟ್ಟಣದ ಒಳಗೆ ಸಿಲುಕಿಕೊಳ್ಳಬಾರದು. ಹೊರವಲಯದ ರಸ್ತೆಗಳ ಮೂಲಕ ಸಂಚಾರ ಸುಗಮವಾಗಬೇಕು. ಕನಕಪುರದಲ್ಲಿ ರಸ್ತೆ ಅಗಲೀಕರಣ ಮತ್ತು ಬೈಪಾಸ್ ನಿರ್ಮಾಣದಿಂದ ಆಗಿರುವ ಬದಲಾವಣೆಯನ್ನು ನಾನು ನೋಡಿದ್ದೇನೆ. ಇದೇ ರೀತಿಯ ಯೋಜಿತ ವ್ಯವಸ್ಥೆ ಎಲ್ಲ ನಗರಗಳಲ್ಲೂ ಬರಬೇಕು” ಎಂದರು.
“ಬೆಂಗಳೂರು ನಗರಕ್ಕೆ ಸುಮಾರು ₹1.5 ಲಕ್ಷ ಕೋಟಿ ಮೊತ್ತದ ಯೋಜನೆಗಳ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಮೆಟ್ರೋ, ರಸ್ತೆ, ಸುರಂಗ ಮಾರ್ಗ ಸೇರಿದಂತೆ ವಿವಿಧ ಸಾರಿಗೆ ವ್ಯವಸ್ಥೆಗಳನ್ನು ಸಮಗ್ರವಾಗಿ ಯೋಜಿಸಬೇಕಿದೆ. ಕೇವಲ ಟೀಕೆ ಮಾಡುವುದಕ್ಕಿಂತ ಪರ್ಯಾಯ ಪರಿಹಾರಗಳನ್ನೂ ಸೂಚಿಸಬೇಕು” ಎಂದು ಹೇಳಿದರು.
ನಗರವಾರು ಕೈಗಾರಿಕೆ, ಉದ್ಯೋಗಕ್ಕೆ ಆದ್ಯತೆ
“ಪ್ರತಿಯೊಂದು ಪ್ರದೇಶದ ಸಾಮರ್ಥ್ಯಕ್ಕೆ ಅನುಗುಣವಾಗಿ ಕೈಗಾರಿಕೆಗಳನ್ನು ಬೆಳೆಸುವ ಉದ್ದೇಶವಿದೆ. ಬಳ್ಳಾರಿಯಲ್ಲಿ ಕಬ್ಬಿಣದ ಅದಿರು ಆಧಾರಿತ ಉಕ್ಕು ಉದ್ಯಮಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಹುಬ್ಬಳ್ಳಿ-ಧಾರವಾಡದಲ್ಲಿ ವಿದ್ಯುತ್ ವಾಹನಗಳ ಉತ್ಪಾದನೆಗೆ ಉತ್ತೇಜನ ನೀಡಲಾಗುತ್ತಿದೆ. ಮಂಗಳೂರಿನಲ್ಲಿ ಡೇಟಾ ಸೆಂಟರ್ ಸ್ಥಾಪನೆ ಸೇರಿದಂತೆ ಹೊಸ ಹೂಡಿಕೆಗಳಿಗೆ ಅವಕಾಶ ಕಲ್ಪಿಸುವ ಚಿಂತನೆ ಇದೆ” ಎಂದು ವಿವರಿಸಿದರು.
“ಕರಾವಳಿ ಮತ್ತು ಮಲೆನಾಡು ಪ್ರದೇಶಗಳ ಪ್ರವಾಸೋದ್ಯಮ ಅಭಿವೃದ್ಧಿಗೆ ಹೊಸ ಪ್ರವಾಸೋದ್ಯಮ ನೀತಿ ರೂಪಿಸಲಾಗುತ್ತಿದೆ. ಸುಮಾರು 300 ಕಿ.ಮೀ. ಉದ್ದದ ಕರಾವಳಿ ಪ್ರದೇಶದಲ್ಲಿ ಪ್ರವಾಸೋದ್ಯಮಕ್ಕೆ ಇರುವ ಅವಕಾಶಗಳನ್ನು ಬಳಸಿಕೊಳ್ಳಬೇಕು. ಕರಾವಳಿ ನಿಯಂತ್ರಣ ವಲಯ (ಸಿಆರ್ಝೆಡ್) ನಿಯಮಗಳಿಂದ ಎದುರಾಗುತ್ತಿರುವ ಸಮಸ್ಯೆಗಳ ಕುರಿತು ಕೇಂದ್ರ ಸಚಿವರನ್ನು ಭೇಟಿಯಾಗಿ ಚರ್ಚಿಸಲಾಗಿದೆ. ಈ ವಿಚಾರದಲ್ಲಿ ಕೆಲವು ಸಡಿಲಿಕೆಗಳಿಗೂ ಒಪ್ಪಿಗೆ ದೊರೆಯುವ ನಿರೀಕ್ಷೆಯಿದೆ” ಎಂದರು.
ಕೃಷಿ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ
“ಕರ್ನಾಟಕದ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ. ಹಣ್ಣು, ತರಕಾರಿ, ಹೂವು ಸೇರಿದಂತೆ ಹಲವು ಉತ್ಪನ್ನಗಳು ವಿಮಾನ ನಿಲ್ದಾಣದ ಮೂಲಕ ರಫ್ತಾಗುತ್ತಿವೆ. ಎಲೆಕ್ಟ್ರಾನಿಕ್ಸ್, ಸೆಮಿಕಂಡಕ್ಟರ್ ಮತ್ತು ರಕ್ಷಣಾ ಉಪಕರಣಗಳ ಉತ್ಪಾದನೆಯ ಜತೆಗೆ ಕೃಷಿ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ರಫ್ತಿಗೂ ಹೆಚ್ಚಿನ ಅವಕಾಶ ಕಲ್ಪಿಸಬೇಕು” ಎಂದು ಹೇಳಿದರು.
“ರೇಷ್ಮೆ ಉದ್ಯಮದ ಸಾಮರ್ಥ್ಯವನ್ನು ವಿವರಿಸಿದ ಅವರು, ಮೈಸೂರು ರೇಷ್ಮೆಗೆ ದೇಶ-ವಿದೇಶಗಳಲ್ಲಿ ಹೆಚ್ಚಿನ ಬೇಡಿಕೆಯಿದೆ. ಗುಣಮಟ್ಟದ ರೇಷ್ಮೆ ಉತ್ಪನ್ನಗಳನ್ನು ಖರೀದಿಸಲು ಜನರು ಕಾಯುವ ಪರಿಸ್ಥಿತಿಯಿದೆ. ಚೀನಾದಿಂದ ರೇಷ್ಮೆ ಪೂರೈಕೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ರೇಷ್ಮೆ ಬೆಲೆಯಲ್ಲಿಯೂ ಏರಿಕೆಯಾಗಿದೆ. ರಾಮನಗರ, ಚನ್ನಪಟ್ಟಣ, ಕೊಳ್ಳೇಗಾಲ, ಕೋಲಾರ ಮಾತ್ರವಲ್ಲದೆ ಉತ್ತರ ಕರ್ನಾಟಕದಲ್ಲಿಯೂ ರೇಷ್ಮೆ ಕೃಷಿ ವಿಸ್ತರಣೆಯಾಗುತ್ತಿದೆ” ಎಂದರು.
“ಕೃಷಿ, ತೋಟಗಾರಿಕೆ, ಹತ್ತಿ, ಮೆಣಸಿನಕಾಯಿ, ಮಸಾಲೆ ಪದಾರ್ಥ, ಕಾಫಿ ಸೇರಿದಂತೆ ಎಲ್ಲ ಉತ್ಪನ್ನಗಳಿಗೂ ಜಾಗತಿಕ ಮಾರುಕಟ್ಟೆ ಕಲ್ಪಿಸಬೇಕು. ಇದಕ್ಕೆ ಸೂಕ್ತ ಸಂಗ್ರಹಣೆ, ಸಂಸ್ಕರಣೆ, ಸಾರಿಗೆ ಮತ್ತು ಮಾರುಕಟ್ಟೆ ವ್ಯವಸ್ಥೆ ರೂಪಿಸುವುದು ಅಗತ್ಯ” ಎಂದು ತಿಳಿಸಿದರು.
ಅಭಿವೃದ್ಧಿಯ ಜತೆಗೆ ಪರಿಸರ ಸಂರಕ್ಷಣೆಯೂ ಮುಖ್ಯ
“ನಗರಗಳಲ್ಲಿ ಉತ್ತಮ ರಸ್ತೆಗಳು, ಉದ್ಯಾನಗಳು, ಹಸಿರು ಪ್ರದೇಶಗಳು ಮತ್ತು ಸಾರ್ವಜನಿಕ ಸೌಲಭ್ಯಗಳನ್ನು ಕಲ್ಪಿಸಬೇಕು. ಮನುಷ್ಯನ ಬದುಕಿಗೆ ಪ್ರಕೃತಿ ಅನಿವಾರ್ಯ. ಎಷ್ಟೇ ತಂತ್ರಜ್ಞಾನ ಬೆಳೆದರೂ ಪರಿಸರವನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ. ಮನೆಗಳಲ್ಲಿಯೂ ಕೃತಕ ಗಿಡಗಳನ್ನು ಇಡುವ ಪರಿಸ್ಥಿತಿ ಬಂದಿರುವುದು ಪ್ರಕೃತಿಯೊಂದಿಗಿನ ಸಂಬಂಧದ ಮಹತ್ವವನ್ನು ನೆನಪಿಸುತ್ತದೆ” ಎಂದು ಹೇಳಿದರು.
“ನಗರ ಯೋಜನೆ ರೂಪಿಸುವಾಗ ಹಸಿರು ಪ್ರದೇಶಗಳು, ಉದ್ಯಾನಗಳು, ಕೆರೆಗಳು ಮತ್ತು ಪರಿಸರ ಸಮತೋಲನಕ್ಕೆ ಆದ್ಯತೆ ನೀಡಬೇಕು. ನಗರಗಳು ಕೇವಲ ಕಟ್ಟಡಗಳ ಸಮೂಹವಾಗದೆ ಜನರು ನೆಮ್ಮದಿಯಿಂದ ಬದುಕುವ ಸ್ಥಳಗಳಾಗಬೇಕು” ಎಂದರು.
ನಗರ ಆಸ್ತಿ ದಾಖಲೆಗಳ ಡಿಜಿಟಲೀಕರಣಕ್ಕೆ ಒತ್ತು
“ನಗರ ಮತ್ತು ಪಟ್ಟಣ ಪ್ರದೇಶಗಳ ಆಸ್ತಿ ದಾಖಲೆಗಳನ್ನು ಸರಿಪಡಿಸಿ ಡಿಜಿಟಲೀಕರಣಗೊಳಿಸುವ ಅಗತ್ಯವಿದೆ. ಆಸ್ತಿಗಳ ಅಳತೆ, ತೆರಿಗೆ ಸಂಗ್ರಹ, ಮಾಲೀಕತ್ವದ ದಾಖಲೆ ಸೇರಿದಂತೆ ಎಲ್ಲ ವಿವರಗಳನ್ನು ವ್ಯವಸ್ಥಿತವಾಗಿ ದಾಖಲಿಸಬೇಕು. ಈ ಉದ್ದೇಶದಿಂದ ‘ಭೂ ಗ್ಯಾರಂಟಿ’ ಯೋಜನೆಯ ಮೂಲಕ ಆಸ್ತಿ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು” ತಿಳಿಸಿದರು.
“ಕಷ್ಟಪಟ್ಟು ದುಡಿದು ಒಂದು ಸಣ್ಣ ಮನೆ ಅಥವಾ ಆಸ್ತಿ ಕಟ್ಟಿಕೊಂಡಿರುವ ಬಡವರ ದಾಖಲೆಗಳು ಸರಿಯಾಗಿರಬೇಕು. ಅವರ ಆಸ್ತಿಗೆ ಸಂಬಂಧಿಸಿದ ದಾಖಲೆಗಳಲ್ಲಿ ಗೊಂದಲ ಸೃಷ್ಟಿಸಲು ಯಾರಿಗೂ ಅವಕಾಶ ಕೊಡಬಾರದು. ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಿ ಜನರ ಆಸ್ತಿ ಹಕ್ಕುಗಳನ್ನು ರಕ್ಷಿಸಬೇಕು” ಎಂದು ಸೂಚಿಸಿದರು.
“ಜನರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಒದಗಿಸುವ ಉದ್ದೇಶದಿಂದ ಪ್ರಜಾಸೇವಾ ವ್ಯವಸ್ಥೆಯನ್ನೂ ರೂಪಿಸಲಾಗಿದೆ. ಅಧಿಕಾರಿಗಳು ನಕಾರಾತ್ಮಕ ಧೋರಣೆ ಬಿಟ್ಟು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ಲಂಚ ಅಥವಾ ವೈಯಕ್ತಿಕ ಲಾಭಕ್ಕಾಗಿ ಕೆಲಸ ಮಾಡುವ ಪ್ರವೃತ್ತಿಗೆ ಅವಕಾಶ ನೀಡಬಾರದು” ಎಂದು ಎಚ್ಚರಿಸಿದರು.
ನಗರ ಮಕ್ಕಳಿಗೆ ಹಳ್ಳಿ ಬದುಕಿನ ಪರಿಚಯ
“ನಗರಗಳಲ್ಲಿ ಶಿಕ್ಷಣ ಪಡೆಯುತ್ತಿರುವ ಮಕ್ಕಳಿಗೆ ಗ್ರಾಮೀಣ ಬದುಕಿನ ಪರಿಚಯ ಮಾಡಿಸುವ ಉದ್ದೇಶದಿಂದ ವಿಶ್ವವಿದ್ಯಾಲಯಗಳ ಸಹಯೋಗದಲ್ಲಿ ಮೂರು ದಿನಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮ ರೂಪಿಸಲಾಗಿದೆ. ನಗರದಲ್ಲಿ ಓದುವ ಮಕ್ಕಳಿಗೆ ಹಳ್ಳಿಯ ಬದುಕು ಏನು ಎಂಬುದೇ ಗೊತ್ತಿಲ್ಲ. ಹೀಗಾಗಿ ಅವರನ್ನು ಗ್ರಾಮಗಳಿಗೆ ಕರೆದೊಯ್ದು ಅಲ್ಲಿಯೇ ವಾಸ್ತವ್ಯ ಮಾಡಿಸಿ, ರೈತರ ಬದುಕು, ಕೃಷಿ ಚಟುವಟಿಕೆ, ಹಸು ಸಾಕಣೆ, ಹೊಲದಲ್ಲಿ ದುಡಿಯುವ ಶ್ರಮದ ಬಗ್ಗೆ ತಿಳಿಸಬೇಕು. ಇಂದು ಕಾಲು ಲೀಟರ್ ನೀರಿನ ಬಾಟಲಿಗೆ ₹30 ಕೊಡುವ ಪರಿಸ್ಥಿತಿಯಿದೆ. ಹಾಲಿನ ಬೆಲೆಯೂ ಹೆಚ್ಚಾಗಿದೆ. ಆಹಾರ ಮತ್ತು ನೀರಿನ ಹಿಂದೆ ರೈತರ ಶ್ರಮವಿದೆ ಎಂಬುದನ್ನು ಮಕ್ಕಳು ಅರ್ಥಮಾಡಿಕೊಳ್ಳಬೇಕು” ಎಂದರು.
ಪ್ರತಿಯೊಂದು ನಿರ್ಧಾರಕ್ಕೂ ಅಧಿಕಾರಿಗಳಲ್ಲಿ ಹೊಣೆಗಾರಿಕೆ ಇರಲಿ
“ರಾಜ್ಯಕ್ಕೆ ಹೂಡಿಕೆ ಬರಬೇಕಾದರೆ ಕೈಗಾರಿಕೆಗಳಿಗೆ ಅಗತ್ಯವಿರುವ ವಿದ್ಯುತ್, ರಸ್ತೆ, ನೀರು ಮತ್ತು ಇತರ ಮೂಲಸೌಕರ್ಯಗಳನ್ನು ಒದಗಿಸಬೇಕು. ಹೂಡಿಕೆದಾರರಿಗೆ ಅನುಕೂಲ ಕಲ್ಪಿಸುವ ಜತೆಗೆ ಸ್ಥಳೀಯ ಯುವಜನರಿಗೆ ಉದ್ಯೋಗ ಸಿಗುವಂತೆ ಯೋಜನೆ ರೂಪಿಸಬೇಕು. ಕೃಷಿ, ಆರೋಗ್ಯ, ಕೈಗಾರಿಕೆ, ತೋಟಗಾರಿಕೆ ಸೇರಿದಂತೆ ಎಲ್ಲ ಇಲಾಖೆಗಳ ನಡುವೆ ಸಮನ್ವಯ ಇರಬೇಕು” ಎಂದು ಹೇಳಿದರು.
“ನಿಮ್ಮ ಕೈಯಲ್ಲಿರುವ ಸರಕಾರದ ಪೆನ್ನು ಸಾಮಾನ್ಯ ಪೆನ್ನಲ್ಲ. ನೀವು ಬರೆಯುವ ಪ್ರತಿಯೊಂದು ಅಕ್ಷರಕ್ಕೂ ಗೌರವ ಸಿಗಬೇಕು. ನಿಮ್ಮ ನಿರ್ಧಾರಗಳು ಜನರ ಬದುಕಿನ ಮೇಲೆ ಪರಿಣಾಮ ಬೀರುತ್ತವೆ. ಹೀಗಾಗಿ ಪ್ರತಿಯೊಂದು ಕಡತವನ್ನೂ ಜನರ ಹಿತದೃಷ್ಟಿಯಿಂದ ಪರಿಶೀಲಿಸಿ. ಜನರ ಕೆಲಸಕ್ಕೆ ಅನಗತ್ಯ ವಿಳಂಬ ಮಾಡಬೇಡಿ” ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
“ರಾಜ್ಯದ ಅಧಿಕಾರಿಗಳ ತಂಡದ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಐಎಎಸ್ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿ ತಮ್ಮ ಅನುಭವ ಮತ್ತು ಪರಿಶ್ರಮದಿಂದ ರಾಜ್ಯದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದ್ದಾರೆ. ಪರಿಶ್ರಮ ಇರುವಲ್ಲಿ ಫಲ ಖಂಡಿತ ಸಿಗುತ್ತದೆ” ಎಂದರು.
“ವಿಶ್ವದ ಗಮನ ಕರ್ನಾಟಕದ ಮೇಲಿದೆ. ನಮ್ಮ ಯುವಜನರು ಎಂಜಿನಿಯರ್ಗಳು, ವೈದ್ಯರು, ವಿಜ್ಞಾನಿಗಳು, ತಂತ್ರಜ್ಞರು ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಪ್ರತಿಭೆ ತೋರಿಸುತ್ತಿದ್ದಾರೆ. ಈ ಮಾನವ ಸಂಪತ್ತಿನ ಸಾಮರ್ಥ್ಯವನ್ನು ಬಳಸಿಕೊಂಡು ಮುಂದಿನ 20 ವರ್ಷಗಳ ಅಭಿವೃದ್ಧಿಗೆ ಸಿದ್ಧತೆ ಮಾಡಿಕೊಳ್ಳಬೇಕು. ನಿಮ್ಮ ಮಕ್ಕಳ ಭವಿಷ್ಯವೂ ಈ ಯೋಜನೆಯಲ್ಲಿದೆ” ಎಂದು ಹೇಳಿದರು.

