ಆಯುಷ್ಮಾನ್ ಖುರಾನಾ ಮತ್ತು ಸಾರಾ ಆಲಿ ಖಾನ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಉಡ್ತಾ ತೀರ್’ ಸಿನಿಮಾ ಚಿತ್ರಮಂದಿರಗಳಲ್ಲಿ ತನ್ನ ಮೊದಲ ವಾರದ ಪ್ರದರ್ಶನವನ್ನು ಪೂರ್ಣಗೊಳಿಸಿದ್ದು, ಗಲ್ಲಾಪೆಟ್ಟಿಗೆಯಲ್ಲಿ ಸ್ಥಿರ ಪ್ರದರ್ಶನವನ್ನು ಮುಂದುವರಿಸಿದೆ. ಸಾಧಾರಣ ಆರಂಭದ ಹೊರತಾಗಿಯೂ, ಮೊದಲ ವಾರಾಂತ್ಯದಲ್ಲಿ ಚೇತರಿಸಿಕೊಂಡು ₹19.55 ಕೋಟಿ ಕಲೆಕ್ಷನ್ ಮಾಡಿದ್ದ ಈ ಸಿನಿಮಾ, ವಾರದ ಕೆಲಸದ ದಿನಗಳಲ್ಲೂ ಬಿಸಿನೆಸ್ ಕಾಯ್ದುಕೊಂಡಿದೆ.
ಚಿತ್ರವು ಬಿಡುಗಡೆಯಾದ 7ನೇ ದಿನ ಅಂದರೆ ಗುರುವಾರದಂದು ಭಾರತಾದ್ಯಂತ 5,744 ಶೋಗಳಿಂದ ಒಟ್ಟು ₹2.60 ಕೋಟಿ ನಿವ್ವಳ ಗಳಿಕೆ ಮಾಡಿದೆ. ಬುಧವಾರದ ₹2.65 ಕೋಟಿ ಗಳಿಕೆಗೆ ಹೋಲಿಸಿದರೆ ಕೇವಲ 1.9 ಪ್ರತಿಶತದಷ್ಟು ಮಾತ್ರ ಇಳಿಕೆ ಕಂಡಿದೆ. ಇದರೊಂದಿಗೆ ಭಾರತದಲ್ಲಿ ಚಿತ್ರದ ಒಟ್ಟು ನಿವ್ವಳ ಗಳಿಕೆ ₹31.25 ಕೋಟಿಗೆ ತಲುಪಿದ್ದರೆ, ಗ್ರೋಸ್ ಕಲೆಕ್ಷನ್ ₹37.28 ಕೋಟಿಯಾಗಿದೆ.
ವಿದೇಶಿ ಮಾರುಕಟ್ಟೆಯಲ್ಲೂ ಉತ್ತಮ ಸೌಂಡು ಮಾಡುತ್ತಿರುವ ‘ಉಡ್ತಾ ತೀರ್’, 7ನೇ ದಿನ ₹50 ಲಕ್ಷ ಗಳಿಸಿದ್ದು, ಒಟ್ಟು ವಿದೇಶಿ ಗಳಿಕೆ ₹9 ಕೋಟಿಗೆ ಏರಿಕೆಯಾಗಿದೆ. ಈ ಮೂಲಕ ಚಿತ್ರದ ಜಾಗತಿಕ ಗ್ರೋಸ್ ಕಲೆಕ್ಷನ್ ₹46.28 ಕೋಟಿ ತಲುಪಿದೆ.
ಆಕಾಶ್ ಕೌಶಿಕ್ ನಿರ್ದೇಶನದ ಈ ಕಾಮಿಡಿ ಥ್ರಿಲ್ಲರ್ ಚಿತ್ರವನ್ನು ₹50 ರಿಂದ ₹65 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ ಎಂದು ಅಂದಾಜಿಸಲಾಗಿದೆ. ಈ ಬಜೆಟ್‌ಗೆ ಹೋಲಿಸಿದರೆ ಪ್ರಸ್ತುತ ಗಳಿಕೆ ತೃಪ್ತಿಕರವಾಗಿದ್ದರೂ, ಪ್ರೇಕ್ಷಕರನ್ನು ಇನ್ನಷ್ಟು ಸೆಳೆಯಲು ಮುಂಬರುವ ಎರಡನೇ ವಾರಾಂತ್ಯದ ಗಳಿಕೆ ಅತ್ಯಂತ ನಿರ್ಣಾಯಕವಾಗಲಿದೆ. ಚಿತ್ರದಲ್ಲಿ ರಾಹುಲ್ ಬೋಸ್, ರಾಮ್ ಕಪೂರ್, ಗುಲ್ಶನ್ ಗ್ರೋವರ್ ಸೇರಿದಂತೆ ದೊಡ್ಡ ತಾರಾಗಣವೇ ಇದೆ.

