ಬೆಂಗಳೂರು: ರಾಹುಲ್ ಗಾಂಧಿಗೆ ಟೋಪಿ ಹಾಕಿ ಸಿದ್ದರಾಮಯ್ಯರನ್ನು ಕುರ್ಚಿ ಕಾಲು ಎಳೆದಿರಿ. ಇದು ಹೈಕಮಾಂಡ್ ಅಂಡ್ ಲೋಕಮಾಂಡ್ ಕುಮ್ಮಕ್ಕಾಗಿ ನಡೆಸಿದ ಷಡ್ಯಂತ್ರ! ಏನಂತೀರಿ ಮಂತ್ರಿಗಳೇ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಈ ಕುರಿತಾಗಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಹೆಚ್.ಡಿ. ಕುಮಾರಸ್ವಾಮಿ, ಗೃಹ ಮಂತ್ರಿಯಾಗಿ ರಾಜ್ಯದ ಆಡಳಿತಕ್ಕೆ ಗ್ರಹಣ ಹಿಡಿಸಿದ್ದೀರಿ. ಮಿದುಳು, ನಾಲಿಗೆ, ವಿವೇಕ ಮತ್ತು ಕೆಲಸ ಎಲ್ಲವೂ ಹಳಿತಪ್ಪಿ ಹಾದಿ ತಪ್ಪಿದ್ದೀರಿ. ಮೊದಲು ಚಿಕಿತ್ಸೆ ಪಡೆದುಕೊಳ್ಳಿ ಎಂದು ತಿಳಿಸಿದ್ದಾರೆ.
ಹೀಗಿದೆ ಹೆಚ್.ಡಿ.ಕೆ. ಪೋಸ್ಟ್
“ನಿಂದಕ ಮಂತ್ರಿ ಪ್ರಿಯಾಂಕ್ ಖರ್ಗೆ,
ಗೃಹ ಮಂತ್ರಿಯಾಗಿ ರಾಜ್ಯದ ಆಡಳಿತಕ್ಕೆ ಗ್ರಹಣ ಹಿಡಿಸಿದ್ದೀರಿ. ಮಿದುಳು, ನಾಲಿಗೆ, ವಿವೇಕ ಮತ್ತು ಕೆಲಸ ಎಲ್ಲವೂ ಹಳಿತಪ್ಪಿ ಹಾದಿ ತಪ್ಪಿದ್ದೀರಿ. ಮೊದಲು ಚಿಕಿತ್ಸೆ ಪಡೆದುಕೊಳ್ಳಿ.
ನನ್ನ ಮಾತಿನ ಅರಿವು ನನಗಿದೆ. ನಿಮ್ಮ ಮಾತಿನ ಹರಿವು ನಿಮಗೆ ಗೊತ್ತಿಲ್ಲ. ದಿನಕ್ಕೊಂದು ಟಾರ್ಗೆಟ್ ಹುಡುಕುತ್ತಲೇ ಇರುತ್ತೀರಿ. ಒಮ್ಮೆ RSS, ಇನ್ನೊಮ್ಮೆ SIR, ಆಮೇಲೆ ಕುಮಾರಸ್ವಾಮಿ.. ಯಾರೂ ಸಿಗದಿದ್ದರೆ ಸ್ವಯಂ ಮೈ ಪರಚಿಕೊಳ್ಳುತ್ತೀರಿ.
ಮಿತಿಮೀರಿದ ಬಾಯಿಚಪಲ, ಅಪರಿಮಿತ ಪ್ರಚಾರದ ಹಪಾಹಪಿ.. ಅಪ್ಪ AICC ಅಧ್ಯಕ್ಷ ಎನ್ನುವ ಅಪಾರ ಹಮ್ಮು; ಇವು ನಿಮ್ಮನ್ನು ಥಕ ಥೈ ಥಕ ಥೈ ಅಂತ ಕುಣಿಸುತ್ತಿವೆ.
ನನ್ನ ಬೆರಳ ಮೇಲೆ ನಿಮ್ಮ ಕಣ್ಣಿದೆ ಎಂಬ ಮಾಹಿತಿ ನನಗಿದೆಯಪ್ಪಾ.. ಆದರೆ ನಿಮ್ಮ ನಿದ್ರೆ ಕೆಡಿಸಿದ್ದು ನಾನೇ ಎಂಬುದು ನಿಮಗೂ ಗೊತ್ತು. ಕೆಪಿಎಸ್ಸಿ ಕೋಲಾಹಲ ಹೇಗಿತ್ತು? ನೆನಪಿದೆಯಾ? ಆ ಕೊಳಕನ್ನು ತೊಳೆಯದೆ ಬಿಡುವುದಿಲ್ಲ ನಾನು.
ಪಾಪ.. ನಿಮ್ಮದು ಮಾತು ಜಾಸ್ತಿ, ಕೆಲಸ ನಾಸ್ತಿ. ಪರನಿಂದನೆಯಲ್ಲಿ ಪರಮಾರ್ಥ ಕಾಣುತ್ತಿದ್ದೀರಿ! ಐಡೆಂಟಿಟಿ ಸಮಸ್ಯೆ ಅಂತ ಕಾಣುತ್ತೆ ನಿಮಗೆ!
ಮುರುಕಮನೆ ಕಾಂಗ್ರೆಸ್ ನಲ್ಲಿ ನಿಮ್ಮಪ್ಪ ಆಲ್ ಇಂಡಿಯಾ ಅಧ್ಯಕ್ಷರೆನ್ನುವ ಏಕೈಕ ಕಾರಣಕ್ಕೆ ಎಲ್ಲೆಲ್ಲಿ, ಹೇಗೆಲ್ಲಾ ಬೆಂಕಿಕಡ್ಡಿ ಗೀರಿ ಚಳಿ ಕಾಯಿಸಿಕೊಳ್ಳುತ್ತಿದ್ದೀರಿ ಅಂತ ಗೊತ್ತಿದೆ, ನಿಮ್ಮ ಪಾರ್ಟಿಯ ಮಂತ್ರಿಗಳು, ಶಾಸಕರಿಗೂ ಅದು ಗೊತ್ತಿದೆ. ಅವರೇ ನನಗೆ ಹೇಳುತ್ತಿದ್ದಾರೆ.
ತಂದಿಕ್ಕಿ ತಮಾಷೆ ನೋಡಲು ಹೋಗಿ ಬುಡಕ್ಕೆ ಬಿಸಿನೀರು ಬಿಟ್ಟುಕೊಂಡಿದ್ದೀರಿ ಖರ್ಗೆ ಅವರೇ.., ಸಿದ್ದರಾಮಯ್ಯ ಅವರ ಹೆಸರಿನ ರಕ್ಷಣೆ ಪಡೆಯಲು ಹೋಗಬೇಡಿ. ನಿಮ್ಮ ಮುಖ್ಯಮಂತ್ರಿ, ನಿಮ್ಮಪ್ಪ ಮತ್ತು ನೀವು; ಮೂವರೂ ಒಟ್ಟಾಗಿ ರಾಹುಲ್ ಗಾಂಧಿಗೆ ಟೋಪಿ ಹಾಕಿ ಸಿದ್ದರಾಮಯ್ಯರನ್ನು ಕುರ್ಚಿ ಕಾಲು ಎಳೆದಿರಿ. ಇದು ಹೈಕಮಾಂಡ್ ಅಂಡ್ ಲೋಕಮಾಂಡ್ ಕುಮ್ಮಕ್ಕಾಗಿ ನಡೆಸಿದ ಷಡ್ಯಂತ್ರ! ಏನಂತೀರಿ ಮಂತ್ರಿಗಳೇ?
ಅರೆಬರೆ ಮಾಹಿತಿ ಪಡೆದು ಮನಸೋಇಚ್ಛೆ ಹೇಳಿಕೆ ನೀಡುವ ನೀವು, ರಾಕೆಟ್ ವೇಗದಲ್ಲಿ ಅಪ್ಲೋಡ್ ಮಾಡಿದವರ ಬೆನ್ಹತ್ತಿದ್ದೀರಿ, ಸ್ಟಿಂಗ್ ಶೂಟಿಂಗ್ ಮಾಡಿದ ಪಾತಕಿಯ ರಕ್ಷಣೆಗೆ ನಿಂತಿದ್ದೀರಿ! ಯಾಕೆ ಖರ್ಗೆ ಅವರೇ..? ಸ್ಟಿಂಗ್ ಪಿನ್ ಜತೆ ನಿಮ್ಮದೇನು ನೆಂಟಸ್ತಿಕೆ? ಸ್ಟಿಂಗ್ ಸಾಮ್ರಾಟ + ಸ್ಟಿಂಗ್ ಪಿನ್ + ಸ್ಟಿಂಗ್ ಪಿನ್ ರಕ್ಷಕ = ಸ್ಟಿಂಗ್ ತ್ರಿವೇಣಿ ಸಂಗಮ!!
ನೀವು ಸಿದ್ದರಾಮಯ್ಯರನ್ನು ಭೇಟಿಯಾದಾಗ ಏನು ಹೇಳಿದರು? ಹೇಳಿದರಾ ಅಥವಾ ಝಾಡಿಸಿದರಾ? ಮಹಾಮಂಗಳಾರತಿ ಬಹಳ ಚೆನ್ನಾಗಿಯೇ ಆಯಿತು ಎನ್ನುವ ಮಾಹಿತಿ ನನಗಿದೆ, ನಿಜವಾ? ಅದನ್ನು ಬಹಿರಂಗವಾಗಿ ಹೇಳುವ ನೈತಿಕತೆ, ಧೈರ್ಯ ನಿಮಗಿದೆಯಾ?
ಕನ್ನಡಕ್ಕಾಗಿ ನಾನು ಅಕ್ಕ ಸಮ್ಮೇಳನಕ್ಕೆ ಹೋಗಿದ್ದೆ, ಮೋಜು ಮಸ್ತಿಗಲ್ಲ. ಬಹುಶಃ ಕನ್ನಡ ಸಮ್ಮೇಳನಕ್ಕೆ ಹೋಗಿ ಕರಾಮತ್ತು ನಡೆಸುವ ಕಲೆಗಾರಿಕೆ ಕಾಂಗ್ರೆಸ್ಸಿಗರಾದ ನಿಮಗೆ ಮಾತ್ರ ಕರಗತ. ನಿಮ್ಮ ಕಲೆಗಳನ್ನು ಇನ್ನೊಬ್ಬರಿಗೆ ಅಂಟಿಸುವ ಪ್ರಯತ್ನ ಬೇಡಿ. ಕನ್ನಡವನ್ನು ಅಪಮಾನಿಸುವ ಅಹಂಕಾರವನ್ನೂ ತೋರಬೇಡಿ.
ಸ್ಟಿಂಗ್ ಸುಳಿಯಲ್ಲಿರುವ ನೀವು ವಿಷಯಾಂತರದ ಮಾಸ್ಟರ್. ನನಗೆ ಗೊತ್ತು, ಸ್ಟಿಂಗ್ ಸಾಮ್ರಾಟನ ಒತ್ತಡ ನಿಮ್ಮ ಮೇಲೆ ಎಷ್ಟಿದೆ ಎಂದು. ಗಳ ಇರಿಯುವ ಕೆಲಸ ಬೇಡ ಗೃಹ ಮಂತ್ರಿಗಳೇ.. ಘನತೆ, ಗೌರವ; ಇಂತಹ ಭಾರೀ ಶಬ್ದಗಳು ನಿಮ್ಮ ಬಾಯಲ್ಲಿ ಬರಬಾರದು. ನಡವಳಿಕೆ, ನಿಯತ್ತು, ನಿರ್ಭೀತಿ ಇಲ್ಲದೆ ಸ್ಟಿಂಗ್ ಸಂಚುಕೋರರ ಜತೆ ಶಾಮೀಲಾಗಿರುವ ನಿಮ್ಮ ಯೋಗ್ಯತೆ, ಅಹಂಕಾರವನ್ನು ಕಾಲವೇ ನಿರ್ಣಯಿಸುತ್ತದೆ. ವಿನಾಶಕಾಲೇ ವಿಪರೀತ ಬುದ್ಧಿ..”

