ಬೂತ್ ಬಾಂಗ್ಲಾ ಚಿತ್ರದ ಯಶಸ್ಸು ಹಾಗೂ ಹೈವಾನ್ ಚಿತ್ರದ ಸೋಲಿನ ನಂತರ ಪ್ರಸಿದ್ಧ ನಿರ್ದೇಶಕ ಪ್ರಿಯದರ್ಶನ್ ಮತ್ತು ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತೊಮ್ಮೆ ಒಂದಾಗುತ್ತಿದ್ದಾರೆ. 1970ರ ದಶಕದ ಹಿನ್ನೆಲೆಯಲ್ಲಿ ಮೂಡಿಬರಲಿರುವ ಈ ಶೀರ್ಷಿಕೆ ಇಡದ ಕಾಮಿಡಿ ಥ್ರಿಲ್ಲರ್ ಸಿನಿಮಾಗೆ ಇದೀಗ ನಾಯಕಿ ಆಯ್ಕೆಯಾಗಿದ್ದು, ನಟಿ ಭೂಮಿ ಪೆಡ್ನೇಕರ್ ಅಕ್ಷಯ್ ಕುಮಾರ್ ಜೊತೆ ಮುಖ್ಯ ಭೂಮಿಕೆಯಲ್ಲಿ ನಟಿಸಲಿದ್ದಾರೆ. ಈ ವಿಷಯವನ್ನು ಸ್ವತಃ ನಿರ್ದೇಶಕ ಪ್ರಿಯದರ್ಶನ್ ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ.
ಈ ಚಿತ್ರದ ಮೂಲಕ ಅಕ್ಷಯ್ ಕುಮಾರ್ ಹಾಗೂ ಭೂಮಿ ಪೆಡ್ನೇಕರ್ ಮೂರನೇ ಬಾರಿಗೆ ಜೋಡಿಯಾಗಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಹಿಂದೆ ಟಾಯ್ಲೆಟ್ ಏಕ್ ಪ್ರೇಮ್ ಕಥಾ ಹಾಗೂ ರಕ್ಷಾ ಬಂಧನ್ ಸಿನಿಮಾಗಳಲ್ಲಿ ಈ ಜೋಡಿ ಒಂದಾಗಿ ನಟಿಸಿತ್ತು. ರಾಜಸ್ಥಾನ್, ಮುಂಬೈ ಮತ್ತು ಭೋಪಾಲ್ನಲ್ಲಿ ಈ ಸಿನಿಮಾದ ಚಿತ್ರೀಕರಣ ನಡೆಯಲಿದ್ದು, ನವೆಂಬರ್ ಕೊನೆಯ ವಾರದಿಂದ ಸತತ ಮೂರು ತಿಂಗಳ ಕಾಲ ಶೂಟಿಂಗ್ ಹಂತ ನಡೆಯಲಿದೆ. ಈ ಚಿತ್ರದಲ್ಲಿ ಹಾಸ್ಯ ನಟ ರಾಜ್ಪಾಲ್ ಯಾದವ್ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ.
ಅಂದಹಾಗೆ, ಅಕ್ಷಯ್ ಕುಮಾರ್ ಹಾಗೂ ಪ್ರಿಯದರ್ಶನ್ ಕಾಂಬಿನೇಷನ್ನ 9ನೇ ಸಿನಿಮಾ ಇದಾಗಿದೆ. ಈ ಹಿಂದೆ ಹೇರಾ ಫೇರಿ, ಗರಂ ಮಸಾಲ, ಭಾಗಮ್ ಭಾಗ್, ಭೂಲ್ ಭುಲೈಯಾ ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದ ಈ ಜೋಡಿಯ ಹೈವಾನ್ ಸಿನಿಮಾ ಇತ್ತೀಚೆಗೆ ಬಾಕ್ಸ್ ಆಫೀಸ್ನಲ್ಲಿ ಸೋಲು ಕಂಡಿತ್ತು. ಈ ಸೋಲಿನ ಬಗ್ಗೆ ಮಾತನಾಡಿದ್ದ ಪ್ರಿಯದರ್ಶನ್, ಪ್ರೇಕ್ಷಕರು ನಮ್ಮ ಕಾಂಬಿನೇಷನ್ನಲ್ಲಿ ಕೇವಲ ಕಾಮಿಡಿ ಸಿನಿಮಾಗಳನ್ನಷ್ಟೇ ನಿರೀಕ್ಷಿಸುತ್ತಾರೆ ಎಂಬುದು ಸಾಬೀತಾಗಿದೆ ಎಂದಿದ್ದರು. ಹೀಗಾಗಿ ಈ ಹೊಸ ಕಾಮಿಡಿ ಥ್ರಿಲ್ಲರ್ ಸಿನಿಮಾ ಮೇಲೆ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮೂಡಿದೆ.

