ಭಾರತೀಯ ಚಿತ್ರರಂಗದ ಅತ್ಯಂತ ಪ್ರಭಾವಶಾಲಿ ಹಾಗೂ ಅದ್ಭುತ ನಟಿ ಸಾಯಿ ಪಲ್ಲವಿ ಸಾಮಾನ್ಯವಾಗಿ ಮಾಧ್ಯಮಗಳಿಂದ ದೂರವಿದ್ದು, ತಮ್ಮ ಸಿನಿಮಾಗಳ ಮೂಲಕವೇ ಸದ್ದು ಮಾಡುವವರು. ಇದೀಗ ನಟಿ ಸಾಯಿ ಪಲ್ಲವಿ ಮುಂಬರುವ ಮೂರು ತಿಂಗಳ ಅವಧಿಯಲ್ಲಿ ಸತತವಾಗಿ ಮೂರು ಸಿನಿಮಾಗಳನ್ನು ತೆರೆಗೆ ತರುವ ಮೂಲಕ ತಮ್ಮ ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ನೀಡಲು ಸಜ್ಜಾಗಿದ್ದಾರೆ ಎಂದು ವರದಿಯಾಗಿದೆ.
ಸಾಯಿ ಪಲ್ಲವಿ ಅಭಿನಯದ ಬಹುನಿರೀಕ್ಷಿತ ‘ರಾಮಾಯಣ: ರೈಸ್ ಆಫ್ ಎ ಲೆಜೆಂಡ್’ ಸಿನಿಮಾ ನವೆಂಬರ್ 5, 2026 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಇದರ ಬೆನ್ನಲ್ಲೇ ಅದೇ ತಿಂಗಳು ಅಂದರೆ ನವೆಂಬರ್ 20, 2026 ರಂದು ಅವರ ‘ಓಎಂ: ಚಾಪ್ಟರ್ 1’ (OM: Chapter 1) ಸಿನಿಮಾ ಬಿಡುಗಡೆಯಾಗಲಿದೆ. ಈ ಎರಡು ಸಿನಿಮಾಗಳ ಜೊತೆಗೆ, ಮಣಿರತ್ನಂ ನಿರ್ದೇಶನದಲ್ಲಿ ವಿಜಯ್ ಸೇತುಪತಿ ಜೊತೆ ನಟಿಸಿರುವ ‘ಇಂಜಿ ವೆಳ್ಳಂ’ ಚಿತ್ರ ಜನೆವರಿ 29, 2027 ರಂದು ತೆರೆಕಾಣಲಿದೆ ಎಂದು ಹೇಳಲಾಗುತ್ತಿದೆ. ಯೋಜನೆಯಂತೆ ಎಲ್ಲವೂ ನಡೆದರೆ ಸಾಯಿ ಪಲ್ಲವಿ ನಟನೆಯ ಮೂರು ಚಿತ್ರಗಳು ಮೂರು ತಿಂಗಳ ಅಂತರದಲ್ಲಿ ಪ್ರೇಕ್ಷಕರ ಮುಂದೆ ಬರಲಿವೆ.
‘ರಾಮಾಯಣ’ ಸಿನಿಮಾದಲ್ಲಿ ಸೀತಾ ಮಾತೆಯ ಪಾತ್ರದಲ್ಲಿ ನಟಿಸಿರುವ ಸಾಯಿ ಪಲ್ಲವಿ ಅವರಿಗೆ ಈಗಾಗಲೇ ಜಾಗತಿಕ ಮಟ್ಟದಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇನ್ನು ‘ಓಎಂ’ ಸಿನಿಮಾದಲ್ಲಿ ಅವರು ತಮ್ಮ ವೃತ್ತಿಜೀವನದಲ್ಲೇ ಮೊದಲ ಬಾರಿಗೆ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರಸಿದ್ಧ ನಿರ್ದೇಶಕ ಮಣಿರತ್ನಂ ಹಾಗೂ ವಿಜಯ್ ಸೇತುಪತಿ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ‘ಇಂಜಿ ವೆಳ್ಳಂ’ ಮೇಲೆಯೂ ಭಾರಿ ನಿರೀಕ್ಷೆಯಿದೆ. ಈ ಮೂರೂ ಸಿನಿಮಾಗಳು ಯಶಸ್ವಿಯಾದರೆ ಸಾಯಿ ಪಲ್ಲವಿ ಭಾರತೀಯ ಚಿತ್ರರಂಗದಲ್ಲಿ ಮತ್ತಷ್ಟು ಎತ್ತರಕ್ಕೆ ಬೆಳೆಯಲಿದ್ದಾರೆ.

