ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಜಯನಗರ ಮೈದಾನದಲ್ಲಿ ಆರ್.ಎಸ್.ಎಸ್ ಪಥಸಂಚಲನ ನಡೆಯುತ್ತಿದೆ. ಇದರ ಬೆನ್ನಲ್ಲೇ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆರ್.ಎಸ್.ಎಸ್.ವಿರುದ್ಧ ಮತ್ತೆ ಕಿಡಿಕಾರಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘ(RSS) ಎಲ್ಲಕ್ಕಿಂತ ಹೆಚ್ಚಾಗಿ ನೋಂದಾಯಿತ ಎಂಬ ಚಿಹ್ನೆಗೆ ಭಯ ಪಡುತ್ತದೆ. ಏಕೆಂದರೆ, ಅಧಿಕೃತ ನೋಂದಣಿಯಾದರೆ ಕಾನೂನು ಪರಿಶೀಲನೆ, ಹಣಕಾಸಿನ ವಿವರಗಳ ಬಹಿರಂಗಪಡಿಸುವಿಕೆ, ಪಾರದರ್ಶಕತೆ ಮತ್ತು ಹೊಣೆಗಾರಿಕೆ ಅನಿವಾರ್ಯವಾಗುತ್ತವೆ ಎಂದದು ವ್ಯಂಗ್ಯವಾಡಿದ್ದಾರೆ.
ಆರ್.ಎಸ್.ಎಸ್ಗೆ ಹಣ ನೀಡುವವರು ಯಾರು? ಹಣ ಎಲ್ಲಿಂದ ಬರುತ್ತದೆ? ಅದನ್ನು ಹೇಗೆ ಖರ್ಚು ಮಾಡಲಾಗುತ್ತದೆ? ಲೆಕ್ಕಪತ್ರಗಳನ್ನು ಯಾರು ಲೆಕ್ಕಪರಿಶೋಧನೆ ಮಾಡುತ್ತಾರೆ? ಅಂತಿಮವಾಗಿ, ಇದಕ್ಕೆ ಹೊಣೆಗಾರರು ಯಾರು? ಎಂದು ಪ್ರಿಯಾಂಕ್ ಖರ್ಗೆ ಕೇಳಿದ್ದಾರೆ. ಮುಚ್ಚಿಡಲು ಏನೂ ಇಲ್ಲದಿದ್ದರೆ, ಆರ್.ಎಸ್.ಎಸ್ ತನ್ನ ಲೆಕ್ಕಪತ್ರಗಳನ್ನು ಸಾರ್ವಜನಿಕ ಪರಿಶೀಲನೆಗೆ ಮುಕ್ತಗೊಳಿಸಲು ಏಕೆ ಹಿಂಜರಿಯಬೇಕು? ಎಂದು ಪ್ರಶ್ನಿಸಿದ್ದಾರೆ.
ಇನ್ನು ಆರ್ಎಸ್ಎಸ್ಗೆ ಪ್ರಿಯಾಂಕ್ ಖರ್ಗೆ ಸಾಲು ಸಾಲು ಪ್ರಶ್ನೆ ವಿಚಾರ ಸಂಬಂಧ ವಿಪಕ್ಷ ನಾಯಕ ಆರ್.ಅಶೋಕ್ ತಿರುಗೇಟು ನೀಡಿದ್ದು, ಕಾಂಗ್ರೆಸ್ಗೆ ಎಲ್ಲಿಂದ ಫಂಡ್ ಬರ್ತಿದೆ, ಪಾಕ್ನಿಂದ ಬರ್ತಿದೆಯಾ? ಅಮೆರಿಕದಿಂದ ಫಂಡ್ ಬರ್ತಾ ಇದ್ಯಾ? ನೀವೂ ಹೇಳಿ ಎಂದಿದ್ದಾರೆ.
ನಾವು ನಿಮ್ಮ ತರಹ ಕಾಕ್ರೋಚ್ ಜನತಾ ಪಕ್ಷದ ಜೊತೆ ಸೇರಿ ಫಂಡ್ ಪಡೆಯುತ್ತಿಲ್ಲ. ಆರ್.ಎಸ್.ಎಸ್ ಗೆ ಫಂಡ್ ಎಲ್ಲಿಂದ ಬರುತ್ತೆಂದು ಸ್ವಯಂ ಸೇವಕರೇ ಹೇಳ್ತಾರೆ. ನೀನು ಮಂತ್ರಿ ಆಗಿ ಎಷ್ಟುದಿನ ಆಯ್ತಪ್ಪ, ಅಧಿಕಾರ ಎಷ್ಟುದಿನ ಇರಲಿದೆ? ಎಂದು ಕಿಡಿ ಕಾರಿರುವ ಅಶೋಕ್, ಇನ್ನೂ 1 ವರ್ಷ ನಿನ್ನ ಅಧಿಕಾರ ಇರಲಿದೆ. ನೀನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಗ್ಗೆ ಮಾತನಾಡ್ತೀಯಾ? ನಿಮಗೆ ತಾಕತ್ತಿದ್ದರೆ ಈ ಬಗ್ಗೆ ನಿಮ್ಮ ಸಿಎಂ ಡಿಕೆಶಿ ಮಾತಾನಾಡಲಿ ಎಂದು ಸವಾಲು ಹಾಕಿದ್ದಾರೆ. ಮುಖ್ಯಮಂತ್ರಿಗಳು ಯಾಕೆ ಮೌನ ಆಚರಣೆಯಲ್ಲಿದ್ದಾರೆ ಎಂದೂ ಪ್ರಶ್ನಿಸಿದ್ದಾರೆ.
ದೇಶದ ಎಲ್ಲಾ ಕಡೆ ಆರ್.ಎಸ್.ಎಸ್ ಪಥಸಂಚಲನ ಮಾಡಲಾಗುತ್ತೆ. ರಾಜ್ಯದಲ್ಲಿ ನಾವು ವಿಜಯದಶಮಿ ಸಮಯದಲ್ಲಿ ಮಾಡುತ್ತೇವೆ. ಇಂದಿರಾ ಗಾಂಧಿ ಇದ್ದ ಸಂದರ್ಭದಲ್ಲಿ ಅನುಮತಿ ಸಿಕ್ತಾ ಇತ್ತು. ಆದರೆ ಈಗ ಅನುಮತಿ ಪಡೆಯಲು ಸಮಸ್ಯೆ ಆಯ್ತು. ಸಂಘವಾಗಿ ದೇಶಕ್ಕಾಗಿ ನಾವು ಪಥಸಂಚಲನ ಮಾಡುತ್ತೇವೆ. ಈ ಹಿಂದೆಯಿಂದಲೂ ಕೂಡ ಪಥಸಂಚಲನ ಮಾಡಿಕೊಂಡು ಬಂದಿದ್ದೇವೆ ಎಂದು ತಿಳಿಸಿದ್ದಾರೆ.

