ಮನೆಯಲ್ಲಿ ಅನ್ನ ಉಳಿದಾಗ ಅದನ್ನು ಬಿಸಾಡುವ ಬದಲು ಫ್ರಿಜ್ನಲ್ಲಿ ಇಟ್ಟು ಮರುದಿನ ಬಿಸಿ ಮಾಡಿಕೊಂಡು ತಿನ್ನುವ ಅಭ್ಯಾಸ ಕೆಲವರಲ್ಲಿ ಇರುತ್ತದೆ.ಇನ್ನು ಕೆಲವರು ಅನ್ನವನ್ನು ಹೊರಗೇ ಇಟ್ಟು ಬೆಳಗ್ಗೆ ಸೇವಿಸುತ್ತಾರೆ. ಆದರೆ ಬೇಯಿಸಿದ ಅನ್ನವನ್ನು ಸರಿಯಾಗಿ ಸಂಗ್ರಹಿಸದಿದ್ದರೆ ಆಹಾರದಿಂದ ಹರಡುವ ಕಾಯಿಲೆಗಳು ಉಂಟಾಗಬಹುದು. ಹಾಗಾದರೆ ಉಳಿದ ಅನ್ನವನ್ನು ತಿನ್ನುವುದು ಅಪಾಯಕಾರಿಯೇ? ಅದನ್ನು ಫ್ರಿಜ್ನಲ್ಲಿ ಇಡುವಾಗ ಮತ್ತು ಮತ್ತೆ ಬಿಸಿ ಮಾಡುವಾಗ ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು? ಇಲ್ಲಿದೆ ಮಾಹಿತಿ.
ತಂಗಳು ಅನ್ನದಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತದೆಯೇ?
ಬೇಯಿಸಿದ ಅನ್ನದಲ್ಲಿ Bacillus cereus ಎಂಬ ಬ್ಯಾಕ್ಟೀರಿಯಾದ ಬೀಜಕಗಳು ಉಳಿಯುವ ಸಾಧ್ಯತೆ ಇದೆ. ಅನ್ನವನ್ನು ಬೇಯಿಸಿದ ಬಳಿಕ ದೀರ್ಘಕಾಲ ಕೋಣೆಯ ಉಷ್ಣಾಂಶದಲ್ಲಿ ಬಿಟ್ಟರೆ ಈ ಬ್ಯಾಕ್ಟೀರಿಯಾಗಳು ಬೆಳೆಯಬಹುದು. ಇದರಿಂದ ಆಹಾರ ವಿಷಬಾಧೆ ಉಂಟಾಗುವ ಅಪಾಯವಿದೆ.
ಇಂತಹ ಅನ್ನವನ್ನು ಸೇವಿಸಿದರೆ ವಾಕರಿಕೆ, ವಾಂತಿ, ಹೊಟ್ಟೆನೋವು ಮತ್ತು ಅತಿಸಾರದಂತಹ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಕೆಲವು ಸಂದರ್ಭಗಳಲ್ಲಿ ಬ್ಯಾಕ್ಟೀರಿಯಾ ಉತ್ಪಾದಿಸುವ ವಿಷಕಾರಿ ಅಂಶಗಳು ಮತ್ತೆ ಬಿಸಿ ಮಾಡಿದರೂ ನಾಶವಾಗುವುದಿಲ್ಲ. ಹೀಗಾಗಿ ಅನ್ನವನ್ನು ಮತ್ತೆ ಬಿಸಿ ಮಾಡಿದರೆ ಸಾಕು, ಅದು ಸಂಪೂರ್ಣ ಸುರಕ್ಷಿತವಾಗುತ್ತದೆ ಎಂದು ಭಾವಿಸಬಾರದು.
ಅನ್ನವನ್ನು ಫ್ರಿಜ್ನಲ್ಲಿ ಇಡುವ ಸರಿಯಾದ ವಿಧಾನ ಯಾವುದು?
ಅನ್ನ ಉಳಿದಾಗ ಅದನ್ನು ಬಹಳ ಹೊತ್ತು ಅಡುಗೆಮನೆಯಲ್ಲೇ ಬಿಟ್ಟು ನಂತರ ಫ್ರಿಜ್ಗೆ ಇಡುವುದು ಸರಿಯಲ್ಲ. ಅನ್ನವನ್ನು ಸಣ್ಣ ಪ್ರಮಾಣಗಳಾಗಿ ವಿಂಗಡಿಸಿ, ಸ್ವಚ್ಛವಾದ ಅಗಲವಾದ ಪಾತ್ರೆಗಳಲ್ಲಿ ಹಾಕಿದರೆ ಬೇಗ ತಣ್ಣಗಾಗುತ್ತದೆ.
ಬೇಯಿಸಿದ ಅನ್ನವನ್ನು ಸಾಧ್ಯವಾದಷ್ಟು ಬೇಗ, ಆದರ್ಶವಾಗಿ ಒಂದು ಗಂಟೆಯೊಳಗೆ ಫ್ರಿಜ್ನಲ್ಲಿ ಇರಿಸಿ.
ಫ್ರಿಜ್ನ ತಾಪಮಾನ 5 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಕಡಿಮೆ ಇರುವಂತೆ ನೋಡಿಕೊಳ್ಳಿ.
ಅನ್ನವನ್ನು ದೀರ್ಘಕಾಲ ಸಂಗ್ರಹಿಸದೆ, ಸುರಕ್ಷತೆಯ ದೃಷ್ಟಿಯಿಂದ 24 ಗಂಟೆಯೊಳಗೆ ಬಳಸುವುದು ಉತ್ತಮ.
ಅನ್ನವನ್ನು ಕೋಣೆಯ ಉಷ್ಣಾಂಶದಲ್ಲಿ ದೀರ್ಘಕಾಲ ಬಿಟ್ಟಿದ್ದರೆ, ಅದನ್ನು ಮತ್ತೆ ಬಿಸಿ ಮಾಡಿ ತಿನ್ನಬೇಡಿ.
ಅನ್ನವನ್ನು ಮತ್ತೆ ಬಿಸಿ ಮಾಡುವಾಗ ಈ ತಪ್ಪು ಬೇಡ
ಫ್ರಿಜ್ನಿಂದ ತೆಗೆದ ಅನ್ನವನ್ನು ಸ್ವಲ್ಪ ಬಿಸಿ ಮಾಡಿದರೆ ಸಾಲದು. ಅನ್ನದ ಪ್ರತಿಯೊಂದು ಭಾಗವೂ ಸಮಾನವಾಗಿ ಚೆನ್ನಾಗಿ ಬಿಸಿಯಾಗಬೇಕು. ಮೈಕ್ರೋವೇವ್ನಲ್ಲಿ ಬಿಸಿ ಮಾಡುವಾಗ ಮಧ್ಯದಲ್ಲಿ ಅನ್ನವನ್ನು ಕಲಕುವುದರಿಂದ ತಾಪಮಾನ ಸಮವಾಗಿ ಹರಡಲು ಸಹಾಯವಾಗುತ್ತದೆ.
ಇನ್ನೊಂದು ಮುಖ್ಯ ವಿಷಯವೆಂದರೆ, ಅನ್ನವನ್ನು ಪದೇಪದೇ ಬಿಸಿ ಮಾಡಬಾರದು. ಒಂದು ಬಾರಿ ತಿನ್ನಲು ಬೇಕಾದಷ್ಟು ಅನ್ನವನ್ನು ಮಾತ್ರ ತೆಗೆದು ಬಿಸಿ ಮಾಡಿ. ಉಳಿದ ಅನ್ನವನ್ನು ಮತ್ತೆ ಮತ್ತೆ ಬಿಸಿ ಮಾಡಿ ತಣ್ಣಗಾಗಿಸುವುದರಿಂದ ಆಹಾರ ಸುರಕ್ಷತೆಯ ಅಪಾಯ ಹೆಚ್ಚಾಗಬಹುದು.
ಅನ್ನ ಕೆಟ್ಟ ವಾಸನೆ ಬೀರದಿದ್ದರೆ ತಿನ್ನಬಹುದೇ?
ಅನ್ನದಿಂದ ಕೆಟ್ಟ ವಾಸನೆ ಬರದಿದ್ದರೂ ಅದು ಸುರಕ್ಷಿತವಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಹಾನಿಕಾರಕ ಬ್ಯಾಕ್ಟೀರಿಯಾಗಳು ಅಥವಾ ಅವು ಉತ್ಪಾದಿಸಿದ ವಿಷಕಾರಿ ಅಂಶಗಳು ಇದ್ದರೂ ಅನ್ನದ ವಾಸನೆ ಮತ್ತು ಬಣ್ಣದಲ್ಲಿ ಬದಲಾವಣೆ ಕಾಣಿಸದೇ ಇರಬಹುದು. ಆದ್ದರಿಂದ ವಾಸನೆ ನೋಡಿ ಮಾತ್ರ ಅನ್ನ ತಿನ್ನುವ ನಿರ್ಧಾರ ಮಾಡಬಾರದು.
ಉಳಿದ ಅನ್ನವನ್ನು ಎಸೆಯಬೇಕೇ?
ಅಗತ್ಯವಿಲ್ಲ. ಅನ್ನವನ್ನು ಬೇಕಾದಷ್ಟು ಮಾತ್ರ ಬೇಯಿಸುವುದು ಉತ್ತಮ. ಉಳಿದರೆ ಅದನ್ನು ಬೇಗ ತಣ್ಣಗಾಗಿಸಿ ಫ್ರಿಜ್ನಲ್ಲಿ ಸಂಗ್ರಸಿಟ್ಟುಕೊಂಡು, 24 ಗಂಟೆಯೊಳಗೆ ಬಳಸಿ. ಮತ್ತೆ ಬಿಸಿ ಮಾಡುವಾಗ ಸಂಪೂರ್ಣವಾಗಿ ಹಬೆಯಾಡುವಷ್ಟು ಬಿಸಿಯಾಗುವಂತೆ ನೋಡಿಕೊಳ್ಳಿ. ಅನ್ನವನ್ನು ಸುರಕ್ಷಿತವಾಗಿ ಸಂಗ್ರಹಿಸದಿದ್ದರೆ, ಮತ್ತೆ ಬಿಸಿ ಮಾಡುವುದರಿಂದಲೂ ಅಪಾಯ ದೂರವಾಗುವುದಿಲ್ಲ.
ತಂಗಳು ಅನ್ನ ತಿನ್ನುವುದೇ ಅಪಾಯಕಾರಿ ಅಂತ ಅರ್ಥವಲ್ಲ. ಅದನ್ನು ಹೇಗೆ ತಣ್ಣಗಾಗಿಸುತ್ತೀರಿ, ಎಷ್ಟು ಬೇಗ ಫ್ರಿಜ್ನಲ್ಲಿ ಇಡುತ್ತೀರಿ ಮತ್ತು ಮತ್ತೆ ಹೇಗೆ ಬಿಸಿ ಮಾಡುತ್ತೀರಿ ಎಂಬುದೇ ಮುಖ್ಯ ವಿಷಯ.

