ಬೆಂಗಳೂರು: ಹಬ್ಬದ ಹೆಸರಲ್ಲಿ ಮಧ್ಯರಾತ್ರಿವರೆಗೂ ಪಟಾಕಿ ಸಿಡಿಸಿ, ಕಿವಿಗಡಚಿಕ್ಕುವಂತೆ ಸಾಂಗ್ ಗಳನ್ನು ಹಾಕಿ ಸಂಭ್ರಮಿಸುವ ಹುಚ್ಚಾಟಕ್ಕೆ ಮಾಜಿ ಸಂಸದೆ, ನಟಿ ರಮ್ಯಾ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ರಾತ್ರಿ ವೇಳೆ ನಡೆಯುವ ಶಬ್ದ ಮಾಲಿನ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ರಮ್ಯಾ, ತಡರಾತ್ರಿ 3 ಗಂಟೆಯಾದರೂ ‘ಫನ್ ವರ್ಲ್ಡ್’ ಆವರಣದಲ್ಲಿ ಪಟಾಕಿಗಳನ್ನು ಸಿಡಿಸುವುದು ಮತ್ತು ಲೌಡ್ಸ್ಪೀಕರ್ ಹಾಕಿರುವ ಬಗ್ಗೆ ಅವರು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ರಮ್ಯಾ, ‘ಸಮಯ ಈಗ ಮುಂಜಾನೆ ಸುಮಾರು 3 ಗಂಟೆ. ಆದರೂ ಫನ್ ವರ್ಲ್ಡ್ನಲ್ಲಿ ಇನ್ನೂ ಪಟಾಕಿಗಳನ್ನು ಸಿಡಿಸಲಾಗುತ್ತಿದೆ ಮತ್ತು ಜೋರಾಗಿ ಸಂಗೀತವನ್ನು ಹಾಕಲಾಗುತ್ತಿದೆ. ಹಬ್ಬಗಳು ಅಥವಾ ವಿಶೇಷ ಸಂದರ್ಭಗಳಲ್ಲಿ ಸ್ವಲ್ಪಮಟ್ಟಿನ ವಿನಾಯಿತಿ ನೀಡುವುದನ್ನು ಒಪ್ಪಿಕೊಳ್ಳಬಹುದು. ಆದರೆ, ಈ ಸಮಯದಲ್ಲಿ ಈ ರೀತಿಯ ಸದ್ದು ಮಾಡುವುದನ್ನು ಯಾವುದೇ ಕಾರಣಕ್ಕೂ ಸಮರ್ಥಿಸಲು ಸಾಧ್ಯವಿಲ್ಲ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಫನ್ ವರ್ಲ್ಡ್ ಸುತ್ತಮುತ್ತಲಿನ ಪರಿಸರದ ಬಗ್ಗೆ ಕಳಕಳಿ ವ್ಯಕ್ತಪಡಿಸಿರುವ ಅವರು, ‘ಹತ್ತಿರದಲ್ಲೇ ಆಸ್ಪತ್ರೆಗಳಿವೆ ಹಾಗೂ ವೃದ್ಧರು, ಚಿಕ್ಕ ಮಕ್ಕಳು ಇದ್ದಾರೆ’ ಇಂತಹ ಶಬ್ದದಿಂದ ವೃದ್ಧರು, ಮಕ್ಕಳು ಮತ್ತು ರೋಗಿಗಳು ಅನುಭವಿಸುವ ತೊಂದರೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
‘ಶಬ್ದ ಮಾಲಿನ್ಯ ನಿಯಂತ್ರಣ ಕುರಿತು ಸುಪ್ರೀಂ ಕೋರ್ಟ್ ಸ್ಪಷ್ಟ ಆದೇಶ ನೀಡಿದೆ. ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಪಟಾಕಿಗಳನ್ನು ಸಿಡಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅಷ್ಟೇ ಅಲ್ಲದೆ, ವಿಶೇಷ ಅನುಮತಿಗಳನ್ನು ಪಡೆದಿದ್ದರೂ ಕೂಡ ಮಧ್ಯರಾತ್ರಿ ದಾಟಿದ ಬಳಿಕ ಲೌಡ್ಸ್ಪೀಕರ್ಗಳನ್ನು ಬಳಸಲು ಅವಕಾಶವಿಲ್ಲ. ಆದರೂ ಈ ನಿಯಮಗಳು ಗಾಳಿಗೆ ತೂರಲಾಗುತ್ತಿದೆ’ ಎಂದು ರಮ್ಯಾ ಹೇಳಿದ್ದಾರೆ.
ನಟಿ ರಮ್ಯಾ ಅವರು ಹಿಂದಿನಿಂದಲೂ ಸಮಾಜದ ವಿವಿಧ ಪ್ರಮುಖ ಸಮಸ್ಯೆಗಳು, ಪರಿಸರ ಕಾಳಜಿ ಹಾಗೂ ಸಾರ್ವಜನಿಕರ ಹಿತಾಸಕ್ತಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಧ್ವನಿ ಎತ್ತುತ್ತಾ ಬಂದಿದ್ದಾರೆ. ಈಗ ಮತ್ತೊಮ್ಮೆ ನಗರದ ನೈರ್ಮಲ್ಯ ಹಾಗೂ ಜನರ ನೆಮ್ಮದಿಗೆ ಭಂಗ ತರುತ್ತಿರುವ ಈ ಘಟನೆಯನ್ನು ಖಂಡಿಸುವ ಮೂಲಕ ಗಮನ ಸೆಳೆದಿದ್ದಾರೆ.
ವಿಜಯದಶಮಿ ದಿನ ಕಟ್ಟಿಗೆ ಬಡಿದಾಟದ ಆಚರಣೆ ವೇಳೆ ದುರಂತ: ಓರ್ವ ಸಾವು: 100ಕ್ಕೂ ಹೆಚ್ಚು ಜನರಿಗೆ ಗಾಯ
ಹೈದರಾಬಾದ್: ವಿಜಯದಶಮಿ ಹಬ್ಬದ ಸಂದರ್ಭದಲ್ಲಿ ಗ್ರಾಮದಲ್ಲಿ ಆಚರಿಸುವ ಕಟ್ಟಿಗೆ ಬಡಿದಾಟ ಆಚರಣೆ ವೇಳೆ ಓರ್ವ ಸಾವನ್ನಪ್ಪಿದ್ದು, ನೂರಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ನಡೆದಿದೆ.
ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ದೇವಗರಗಟ್ಟು ಗ್ರಾಮದಲ್ಲಿ ವಿಜಯದಶಮಿ ಹಬ್ಬದ ಸಂದರ್ಭದಲ್ಲಿ ನಡೆದ ಸಾಂಪ್ರದಾಯಿಕ ಕಟ್ಟಿಗೆ ಬಡಿದಾಟದ ಆಚರಣೆಯಲ್ಲಿ ಈ ದುರಂತ ಸಂಭವಿಸಿದೆ. ಘಟನೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಸುಮಾರು 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಪ್ರತಿ ವರ್ಷ ವಿಜಯದಶಮಿ ಹಬ್ಬದ ಪ್ರಯುಕ್ತ ದೇವಗರಗಟ್ಟು ಗ್ರಾಮದಲ್ಲಿ ಬನ್ನಿ ಹಂಚುವ ಆಚರಣೆಯ ಭಾಗವಾಗಿ ಕಟ್ಟಿಗೆ ಬಡಿದಾಟ ನಡೆಯುತ್ತದೆ. ಈ ವರ್ಷ ಆಚರಣೆಯ ವೇಳೆ ಕಾಲ್ತುಳಿತ ಉಂಟಾಗಿದ್ದು, ಓರ್ವ ಸಾವನ್ನಪ್ಪಿದ್ದಾರೆ. ಮೃತರನ್ನು ಪೋತುರಾಜು (32) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡ 18 ಜನರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಆಲೂರು ಆಸ್ಪತ್ರೆ ಸೇರಿದಂತೆ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಉಳಿದ ನೂರಕ್ಕೂ ಹೆಚ್ಚು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಈ ದುರಂತಕ್ಕೆ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ನಡೆದ ಗಲಾಟೆಯೇ ಕಾರಣವಾಗಿದೆ ಎಂದು ತಿಳಿದುಬಂದಿದೆ. ಕಟ್ಟಿಗೆಗಳಿಂದ ಹೊಡೆದಾಡುವಾಗ ಪರಿಸ್ಥಿತಿ ಕೈಮೀರಿ ಕಾಲ್ತುಳಿತಕ್ಕೆ ಕಾರಣವಾಯಿತು. ಈ ವೇಳೆ ದುರಂತ ಸಂಭವಿಸಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

