ನಿತೇಶ್ ತಿವಾರಿ ನಿರ್ದೇಶನದ ಮಹತ್ವಾಕಾಂಕ್ಷೆಯ ‘ರಾಮಾಯಣ’ ಚಿತ್ರದಲ್ಲಿ ರಾವಣನಾಗಿ ನಟಿಸುವುದರ ಜತೆಗೆ ಸಹ-ನಿರ್ಮಾಪಕರಾಗಿಯೂ ಕೆಲಸ ಮಾಡಿರುವ ರಾಕಿಂಗ್ ಸ್ಟಾರ್ ಯಶ್, ಚಿತ್ರದ ವಿಎಫ್‌ಎಕ್ಸ್ (VFX) ಟೀಕೆಗಳ ಕುರಿತು ಹೈದರಾಬಾದ್‌ನಲ್ಲಿ ನಡೆದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ನಟನಾ ವೃತ್ತಿಯ ಜತೆಗೆ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರ ಸಾಹಸವನ್ನು ಕೊಂಡಾಡಿರುವ ಅವರು, ದೃಶ್ಯಗಳ ಕುರಿತು ಸಣ್ಣಪುಟ್ಟ ತಪ್ಪುಗಳನ್ನು ಹುಡುಕದೆ ಮುಕ್ತ ಮನಸ್ಸಿನಿಂದ ಸಿನಿಮಾ ನೋಡುವಂತೆ ಪ್ರೇಕ್ಷಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಚಿತ್ರದ ದೃಶ್ಯ ವೈಭವ ಹಾಗೂ ನಿರ್ಮಾಪಕರ ಶ್ರಮದ ಕುರಿತು ಮಾತನಾಡಿದ ಯಶ್, ನಮಿತ್ ಮಲ್ಹೋತ್ರಾ ಅವರು ತಮ್ಮ ಪ್ರತಿಷ್ಠೆ ಹಾಗೂ ಕೋಟ್ಯಂತರ ಹಣವನ್ನು ಪಣಕ್ಕಿಟ್ಟು ಈ ಬೃಹತ್ ಸಿನಿಮಾವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುತ್ತಿದ್ದಾರೆ. ಇಂತಹ ವ್ಯಕ್ತಿಗಳನ್ನು ನಾವು ಕಳೆದುಕೊಂಡರೆ ಭಾರತೀಯ ಸಿನಿಮಾವನ್ನು ಮತ್ತೆ ಮುಂಚೂಳಿಗೆ ತರಲು ವರ್ಷಗಳೇ ಹಿಡಿಯುತ್ತದೆ. ಆದ್ದರಿಂದ ವಿಎಫ್‌ಎಕ್ಸ್‌ನಲ್ಲಿ ಸಣ್ಣಪುಟ್ಟ ಲೋಪಗಳನ್ನು ಹುಡುಕುವುದನ್ನು ಬಿಟ್ಟು, ಎಲ್ಲರೂ ಒಟ್ಟಾಗಿ ನಿಂತು ಭಾರತೀಯ ಚಿತ್ರರಂಗದ ಈ ಪ್ರಯತ್ನವನ್ನು ಬೆಂಬಲಿಸಬೇಕು ಎಂದು ಕರೆ ನೀಡಿದ್ದಾರೆ. ಲಾಸ್ ಏಂಜಲೀಸ್‌ನಲ್ಲಿ ತಮ್ಮ ವ್ಯವಹಾರದಲ್ಲಿ ನೆಲೆಸಿದ್ದ ನಮಿತ್, ಭಾರತೀಯ ಸಿನಿಮಾಗಳಿಗೆ ಜಾಗತಿಕ ಮನ್ನಣೆ ತರಬೇಕು ಎಂಬ ಏಕೈಕ ಕಾರಣಕ್ಕಾಗಿ ಈ ಸಾಹಸಕ್ಕೆ ಕೈಹಾಕಿದ್ದಾರೆ ಎಂದು ಅವರ ದೃಢತೆಯನ್ನು ಯಶ್ ಸ್ಮರಿಸಿದ್ದಾರೆ.
ರಾಮಾಯಣ ಬಿಡುಗಡೆ ದಿನಾಂಕ: ನಾಮಿತ್ ಮಲ್ಹೋತ್ರಾ ನಿರ್ಮಾಣದಲ್ಲಿ ಎರಡು ಭಾಗಗಳಾಗಿ ಮೂಡಿಬರುತ್ತಿರುವ ಈ ಬ್ರಹ್ಮಾಂಡ ಸಿನಿಮಾದ ಮೊದಲ ಭಾಗವು ಜಾಗತಿಕ ಮಟ್ಟದಲ್ಲಿ ನವೆಂಬರ್ 5, 2026ರಂದು ತೆರೆಕಾಣಲಿದೆ. ಹಾಗೂ ಇದರ ಎರಡನೇ ಭಾಗವು 2027ರ ದೀಪಾವಳಿಗೆ ಬಿಡುಗಡೆಯಾಗಲಿದೆ.

