ಬೆಂಗಳೂರು: ಇಂಧನ ಇಲಾಖೆಯ ಕಟ್ಟಡದ ಮೇಲಿಂದ ಜಿಗಿದು ಕಿರಿಯ ಸಹಾಯಕ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಬೆಂಗಳೂರಿನ ಮೌರ್ಯ ಸರ್ಕಲ್ ನಲ್ಲಿರುವ ಇಂಧನ ಇಲಾಖೆ ಕಟ್ಟಡದಲ್ಲಿ ನಡೆದಿದೆ.
48 ವರ್ಷದ ವಜ್ರಕುಮಾರ್ ಆತ್ಮಹತ್ಯೆಗೆ ಶರಣಾದ ನೌಕರ. ಇಂಧನ ಇಲಾಖೆಯ ಬಹುಮಹಡಿ ಕಟ್ಟಡದ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗುರುವಾರ ಸಂಜೆ 6:30ರ ಸುಮಾರಿಗೆ ಈ ಘಟನೆ ನಡೆದಿದೆ. ಕಟ್ಟಡದ 6ನೇ ಫ್ಲೋರ್ನಿಂದ ಬಿದ್ದು ವಜ್ರಕುಮಾರ್ ಸಾವಿಗೆ ಶರಣಾಗಿದ್ದಾರೆ.
ವಜ್ರಕುಮಾರ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ವಜ್ರಕುಮಾರ್ ಇಂಧನ ಇಲಾಖೆ ಕಚೇರಿಯಲ್ಲಿ ಕಿರಿಯ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ.
ಘಟನೆ ಸಂಬಂಧ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ವಜ್ರಕುಮಾರ್ ಅವರು ಹಲವು ಸಮಸ್ಯೆಗಳಿಂದ ಬಳಲುತ್ತಿದ್ದರು ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ವಜ್ರಕುಮಾರ್ಗೆ ಮಕ್ಕಳಿರಲಿಲ್ಲ, ಇತ್ತೀಚಿಗೆ ವಿಚ್ಛೇದನ ಕೂಡ ಪಡೆದುಕೊಂಡಿದ್ದರು. ಅಲ್ಲದೇ ಸ್ವಯಂ ನಿವೃತ್ತಿ ಪಡೆದುಕೊಂಡಿದ್ದರೂ ಹಣ ಬಂದಿರಲಿಲ್ಲ ಎಂದು ತೀವ್ರವಾಗಿ ಮನನೊಂದಿದ್ದರು ಎನ್ನಲಾಗಿದೆ. ಇದೂ ಕೂಡ ಅವರು ಆತ್ಮಹತ್ಯೆಗೆ ಶರಣಾಗಲು ಕಾರಣವಿರಬಹುದು ಎನ್ನಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

