ಬೆಂಗಳೂರು: ಭಾರತೀಯ ಆಧ್ಯಾತ್ಮಿಕ ಚಿಂತನೆ ಮತ್ತು ಸಾಂಸ್ಕೃತಿಯ ಪರಂಪರೆ ರಕ್ಷಣೆಗಾಗಿ ಸೇವೆ ಸಲ್ಲಿಸಿದ ಜಗದ್ಗುರು ಮಧ್ವಾಚಾರ್ಯರ ಜಯಂತಿಯನ್ನು ಪ್ರತಿ ವರ್ಷ ಅಕ್ಟೋಬರ್ 21ರಂದು ಸರ್ಕಾರದಿಂದಲೇ ರಾಜ್ಯಮಟ್ಟದಲ್ಲಿ ಆಚರಿಸಲು ನಿರ್ಧರಿಸಲಾಗಿದೆ.
ಶ್ರೀ ಜಗದ್ಗುರು ಶ್ರೀ ಮಧ್ವಾಚಾರ್ಯರ ಜಯಂತಿಯನ್ನು ಆಚರಣೆ ಮಾಡುವ ಕುರಿತು ಪ್ರಸ್ತಾವನೆ:
ಗೃಹ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವರ ದಿನಾಂಕ:23.09.2026ರ ನಡವಳಿಯಲ್ಲಿ, ಜಿಲ್ಲಾ ಬ್ರಾಹ್ಮಣ ಸಂಘ, ಕಲಬುರಗಿ ಜಿಲ್ಲೆ ಇವರ ದಿನಾಂಕ: 16.09.2026ರ ಮನವಿಯಲ್ಲಿ ಶ್ರೀ ಮಧ್ವಾಚಾರ್ಯರ ತತ್ವ, ವಿಚಾರಧಾರೆ ಮತ್ತು ಆದರ್ಶಗಳನ್ನು ಮಧ್ಯ ಪರಂಪರೆಯ ಆಚಾರ್ಯರು, ಮಠಾಧೀಶರು ಹಾಗೂ ಭಕ್ತರು ಇಂದಿಗೂ ನಿರಂತರವಾಗಿ ಸಮಾಜದಲ್ಲಿ ಪ್ರಚಾರಪಡುಸುತ್ತಿದೆ. ಅವರ ಪರಂಪರೆಯ ಧಾರ್ಮಿಕ ಜ್ಞಾನ, ನೈತಿಕ ಮೌಲ್ಯಗಳು, ಆಧ್ಯಾತ್ಮಿಕ ಚಿಂತನೆ ಮತ್ತು ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದು, ಈ ಹಿನ್ನೆಯಲ್ಲಿ ಶ್ರೀ ಜಗದ್ಗುರು ಶ್ರೀ ಮಧ್ವಾಚಾರ್ಯರ ಜಯಂತಿಯನ್ನು ಕರ್ನಾಟಕ ಸರ್ಕಾರದ ವತಿಯಿಂದ ರಾಜ್ಯ ಮಟ್ಟದಲ್ಲಿ ಅಧಿಕೃತವಾಗಿ ಆಚರಿಸುವಂತೆ ಕೋರಿದ್ದು, ಸದರಿ ಮನವಿಯನ್ನು ಕೂಲಂಕಷವಾಗಿ ಪರಿಶೀಲಿಸಿ, ಕರ್ನಾಟಕ ಸರ್ಕಾರದ ವತಿಯಿಂದ ಶ್ರೀ ಜಗದ್ಗುರು ಶ್ರೀ ಮಧ್ವಾಚಾರ್ಯರ ಜಯಂತಿಯನ್ನು ಅಧಿಕೃತವಾಗಿ ಆಚರಿಸುವ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವಂತೆ ಕೋರಿರುತ್ತಾರೆ.
ಮಠ ಶ್ರೀ ಸತ್ಯಾತ್ಮಸೇನೆ ವಿವಿಧೋದ್ದೇಶ ಸೇವಾ ಸಂಸ್ಥೆ (ರಿ) ಶ್ರೀ ರಾಘವೇಂದ್ರ ಸ್ವಾಮಿ ಬ್ರಹ್ಮಪೂರ ಕಲಬುರಗಿ ಹಾಗೂ ಜಿಲ್ಲಾ ಬ್ರಾಹ್ಮಣ ಸಂಘ, ಕಲಬುರಗಿ ಇವರ ದಿನಾಂಕ:16.09.2026 ಪತ್ರದಲ್ಲಿ, ಶ್ರೀ ಜಗದ್ಗುರು ಶ್ರೀ ಮಧ್ವಾಚಾರ್ಯಯರ ಜಯಂತಿಯನ್ನು ಕರ್ನಾಟಕ ಸರ್ಕಾರದ ವತಿಯಿಂದ ರಾಜ್ಯಮಟ್ಟದಲ್ಲಿ ಅಧಿಕೃತವಾಗಿ ಆಚರಿಸುವಂತೆ ಹಾಗೂ ಜಯಂತಿಯ ಅಂಗವಾಗಿ ಸರ್ಕಾರದ ವತಿಯಿಂದ ಅಧಿಕೃತ ಕಾರ್ಯಕ್ರಮ ಆಯೋಜಿಸಿ ಶ್ರೀ ಮಧ್ವಾಚಾರ್ಯಯರ ಜೀವನ, ತತ್ತಶಾಸ್ತ್ರ ಹಾಗೂ ಕೊಡುಗೆಗಳ ಕುರಿತು ವಿಚಾರ ಸಂಕಿರಣ, ಉಪನ್ಯಾಸ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಅವರ ಮಹಾನ್ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಅನುಕೂಲವಾಗುವುದರಿಂದ ಸದರಿ ಮನವಿಯನ್ನು ಪರಿಗಣಿಸಿ ಸಂಬಂಧಿಸಿದ ಇಲಾಖೆಗೆ ಅಗತ್ಯ ನಿರ್ದೇಶನ ನೀಡಿ ಶ್ರೀ ಜಗದ್ಗುರು ಶ್ರೀ ಮಧ್ವಾಚಾರ್ಯರ ಜಯಂತಿಯನ್ನು ಕರ್ನಾಟಕ ಸರ್ಕಾರದ ವತಿಯಿಂದ ಅಧಿಕೃತವಾಗಿ ಆಚರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಯವರನ್ನು ಕೋರಿರುತ್ತಾರೆ.
ಅದರನ್ವಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸರ್ಕಾರದ ಆದೇಶದಂತೆ 33 ವಿವಿಧ ಮಹನೀಯರ / ಮಹಾಪುರುಷರ ಜಯಂತಿಗಳನ್ನು ಆಚರಿಸಿಕೊಂಡು ಬರಲಾಗುತ್ತಿರುವ ಅಂಶವನ್ನು ಅವಗಾಹನೆಗೆ ಸಲ್ಲಿಸುತ್ತಾ, ಶ್ರೀ ಮಧ್ವಾಚಾರ್ಯರ ಜಯಂತಿಯನ್ನು ಆಚರಣೆ ಮಾಡುವ ಕುರಿತು ಸರ್ಕಾರದ ಹಂತದಲ್ಲಿ ತೀರ್ಮಾನಿಸುವಂತೆ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರು ಕೋರಿರುತ್ತಾರೆ.
ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಶ್ರೀ ಜಗದ್ಗುರು ಶ್ರೀ ಮಧ್ವಾಚಾರ್ಯರ ಜಯಂತಿಯನ್ನು ಪ್ರತಿ ವರ್ಷ ಅಕ್ಟೋಬರ್ 21ರಂದು ರಾಜ್ಯಾದ್ಯಂತ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಆಚರಿಸಲು ಸರ್ಕಾರವು ಆದೇಶಿಸಿದೆ. ಸದರಿ ಜಯಂತಿಯ ಆಚರಣೆಗೆ ತಗಲುವ ವೆಚ್ಚವನ್ನು ಮಹಾಪುರುಷರ ಜಯಂತಿಗಳ ಆಚರಣೆಗೆ 2026-27ನೇ ಸಾಲಿನ ಅನುದಾನದಿಂದ ಭರಿಸತಕ್ಕದ್ದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ತಿಳಿಸಿದ್ದಾರೆ.

