ಸ್ಟಾರ್ ನಟ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಬಹುನಿರೀಕ್ಷಿತ ‘ರಣಬಾಲಿ’ ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಅಕ್ಟೋಬರ್ 16 ರಂದು ಸಿನಿಮಾ ತೆರೆಕಾಣಲಿದ್ದು, ಬಿಡುಗಡೆಗೂ ಮುನ್ನ ಆಯೋಜಿಸಲಾಗಿದ್ದ ಅದ್ಧೂರಿ ಪ್ರೀ-ರಿಲೀಸ್ ಕಾರ್ಯಕ್ರಮದ ಬಳಿಕ ವಿದೇಶಗಳಲ್ಲಿ, ಅದರಲ್ಲೂ ಮುಖ್ಯವಾಗಿ ಉತ್ತರ ಅಮೆರಿಕದಲ್ಲಿ ಚಿತ್ರದ ಮುಂಗಡ ಟಿಕೆಟ್ ಬುಕಿಂಗ್ ತೀವ್ರ ವೇಗ ಪಡೆದುಕೊಂಡಿದೆ.
ವಿದೇಶಿ ವಿತರಕರು ನೀಡಿರುವ ಮಾಹಿತಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಉತ್ತರ ಅಮೆರಿಕದ ಪ್ರೀ-ಸೇಲ್ಸ್ ಒಂದರಲ್ಲೇ ಬರೋಬ್ಬರಿ $75K ಹೆಚ್ಚಳವಾಗಿದ್ದು, ಒಟ್ಟು ಗಳಿಕೆ $175K ತಲುಪಿದೆ. ಪ್ರಮುಖ ಹಾಗೂ ಜನಪ್ರಿಯ ನಟರ ಚಲನಚಿತ್ರಕ್ಕೆ ಹೋಲಿಸಿದರೆ ಈ ಸಂಖ್ಯೆ ಇನ್ನು ಹೆಚ್ಚಾಗಬೇಕಿದ್ದರೂ, ಪ್ರೀ-ರಿಲೀಸ್ ಈವೆಂಟ್ ಬಳಿಕ ವೀಕ್ಷಕರಲ್ಲಿ ಕುತೂಹಲ ದುಪ್ಪಟ್ಟಾಗಿರುವುದು ಪ್ರೀ-ಸೇಲ್ಸ್ ಜಂಪ್ನಲ್ಲಿ ಕಂಡುಬರುತ್ತಿದೆ.
ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ನವೀನ್ ಯೆರ್ನೇನಿ ಹಾಗೂ ರವಿಶಂಕರ್ ನಿರ್ಮಿಸಿರುವ ಈ ಚಿತ್ರಕ್ಕೆ ಅಜಯ್-ಅತುಲ್ ಜೋಡಿ ಸಂಗೀತ ನೀಡಿದೆ. ಅಭಿಮಾನಿಗಳಲ್ಲಿ ಹಾಗೂ ಸಿನಿಪ್ರಿಯರಲ್ಲಿ ಉತ್ತಮ ನಿರೀಕ್ಷೆ ಹುಟ್ಟುಹಾಕಿರುವ ಈ ಸಿನಿಮಾ ಬಿಡುಗಡೆಯ ವೇಳೆಗೆ ಬಾಕ್ಸ್ ಆಫೀಸ್ನಲ್ಲಿ ಇನ್ನಷ್ಟು ವೇಗ ಪಡೆದುಕೊಳ್ಳಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

