ಚಿತ್ರದುರ್ಗ: ನಟ ಕಿಚ್ಚ ಸುದೀಪ್ ಅವರಿಗೆ ನಾಯಕ ಸಮುದಾಯದ ಮೀಸಲಾತಿ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಂಸದ ವಿಎಸ್ ಉಗ್ರಪ್ಪ ಬಹಿರಂಗವಾಗಿ ಸವಾಲು ಹಾಕಿದ್ದಾರೆ. “ದಮ್ಮು, ತಾಕತ್ ಇದ್ದರೆ ನಮ್ಮ ಸಮುದಾಯದ ಮೀಸಲಾತಿ ಪರ ಹೋರಾಟಕ್ಕೆ ಬನ್ನಿ” ಎಂದು ಅವರು ನೀಡಿದ ಹೇಳಿಕೆ ಇದೀಗ ಚರ್ಚೆಗೆ ಗ್ರಾಸವಾಗಿದೆ.
ನಟ ಕಿಚ್ಚ ಸುದೀಪ್ಗೆ ಕಾಂಗ್ರೆಸ್ ಹಿರಿಯ ನಾಯಕ ವಿಎಸ್ ಉಗ್ರಪ್ಪ ನೇರ ಸವಾಲು ಹಾಕಿದ್ದಾರೆ. “ಧಮ್ಮು, ತಾಕತ್ ಇದ್ದರೆ ಸಮುದಾಯದ ಮೀಸಲಾತಿ ಹೋರಾಟಕ್ಕೆ ಬನ್ನಿ” ಎಂದು ಕರೆ ನೀಡಿರುವ ಅವರು, ಅಭಿಮಾನಿಗಳ ಕೇಕೆ, ಶಿಳ್ಳೆಗಳಿಗೆ ಸೀಮಿತವಾಗದೆ ನಾಯಕ ಸಮುದಾಯದ ಹಕ್ಕುಗಳಿಗಾಗಿ ಧ್ವನಿ ಎತ್ತಬೇಕು ಎಂದು ಆಗ್ರಹಿಸಿದ್ದಾರೆ. ಚಿತ್ರದುರ್ಗದಲ್ಲಿ ನಡೆದ ವೀರ ಮದಕರಿ ನಾಯಕ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಉಗ್ರಪ್ಪ ನೀಡಿದ ಈ ಹೇಳಿಕೆ ಗಮನ ಸೆಳೆದಿದೆ.
ಸುದೀಪ್ಗೆ ಉಗ್ರಪ್ಪ ಹೇಳಿದ್ದೇನು?
ಚಿತ್ರದುರ್ಗದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಮಂಗಳವಾರ ನಡೆದ ವೀರ ಮದಕರಿ ನಾಯಕ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ವಿಎಸ್ ಉಗ್ರಪ್ಪ, ನಟ ಕಿಚ್ಚ ಸುದೀಪ್ ಅವರು ತಮ್ಮ ಸಮುದಾಯದ ಹಕ್ಕುಗಳ ರಕ್ಷಣೆಗಾಗಿ ಧ್ವನಿ ಎತ್ತಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಅಭಿಮಾನಿಗಳು ‘ಕಿಚ್ಚ, ಕಿಚ್ಚ’ ಎಂದು ಘೋಷಣೆ ಕೂಗುತ್ತಿದ್ದುದನ್ನು ಪ್ರಸ್ತಾಪಿಸಿದ ಅವರು, ಅಭಿಮಾನಿಗಳ ಕೇಕೆ, ಶಿಳ್ಳೆಗಳಿಗೆ ಸೀಮಿತವಾಗದೆ ಸಮುದಾಯದ ಸಮಸ್ಯೆಗಳ ಪರಿಹಾರಕ್ಕಾಗಿ ಸುದೀಪ್ ಮುಂದಾಗಬೇಕು ಎಂದು ಹೇಳಿದರು.
ನಾಯಕ ಸಮುದಾಯದ ವ್ಯಕ್ತಿಯಾಗಿ ತಮ್ಮ ಜನರ ಮೀಸಲಾತಿ ಹಕ್ಕುಗಳಿಗಾಗಿ ಬೀದಿಗಿಳಿದು ಹೋರಾಟ ನಡೆಸಬೇಕು. ಮೀಸಲಾತಿ ಹೋರಾಟಕ್ಕೆ ನಾಯಕತ್ವ ವಹಿಸಬೇಕು ಎಂದು ಸುದೀಪ್ ಅವರಿಗೆ ಉಗ್ರಪ್ಪ ಕರೆ ನೀಡಿದರು.
ಎಸ್ಟಿ ಮೀಸಲಾತಿ ಹೆಚ್ಚಳಕ್ಕೆ ಆಗ್ರಹ
ರಾಜ್ಯದಲ್ಲಿ ಪರಿಶಿಷ್ಟ ಪಂಗಡದ (ಎಸ್ಟಿ) ಮೀಸಲಾತಿ ಪ್ರಮಾಣ ಇಳಿಕೆಯಾಗಿರುವ ವಿಚಾರವನ್ನು ಪ್ರಸ್ತಾಪಿಸಿದ ಉಗ್ರಪ್ಪ, ಹೈಕೋರ್ಟ್ ಆದೇಶದ ವಿರುದ್ಧ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಬೇಕು ಎಂದು ಒತ್ತಾಯಿಸಿದರು.
ಮೀಸಲಾತಿ ಪ್ರಮಾಣವನ್ನು ಮತ್ತೆ ಶೇ.56ಕ್ಕೆ ಹೆಚ್ಚಿಸಬೇಕು. ಅದಕ್ಕೆ ಸಂವಿಧಾನದ ಒಂಬತ್ತನೇ ಅನುಸೂಚಿಯ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದರು.
ಜಾಗೃತಿ, ವೈಚಾರಿಕತೆ ಮತ್ತು ಸಂಘಟನೆಯ ಕೊರತೆಯಿರುವ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಹೀಗಾಗಿ ಸಮುದಾಯದ ಹಕ್ಕುಗಳಿಗಾಗಿ ಎಲ್ಲರೂ ಒಗ್ಗಟ್ಟಿನಿಂದ ಹೋರಾಡಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಮದಕರಿ ನಾಯಕರ ಹೆಸರಿನಲ್ಲಿ ಸ್ಮಾರಕ ನಿರ್ಮಾಣಕ್ಕೆ ಬೇಡಿಕೆ
ಕಾರ್ಯಕ್ರಮದಲ್ಲಿ ವೀರ ಮದಕರಿ ನಾಯಕರ ಗೌರವಾರ್ಥ ಹಲವು ಬೇಡಿಕೆಗಳನ್ನು ಮುಂದಿಟ್ಟ ಉಗ್ರಪ್ಪ, ಚಿತ್ರದುರ್ಗದ ಬಸ್ ನಿಲ್ದಾಣ, ರೈಲು ನಿಲ್ದಾಣ ಹಾಗೂ ಜಿಲ್ಲಾಧಿಕಾರಿ ಕಚೇರಿಗೆ ಮದಕರಿ ನಾಯಕರ ಹೆಸರು ಇಡಬೇಕು ಎಂದು ಆಗ್ರಹಿಸಿದರು.
ಅಲ್ಲದೆ, ರಾಜ್ಯ ಸರ್ಕಾರ ಮದಕರಿ ನಾಯಕರ ಹೆಸರಿನಲ್ಲಿ ಪ್ರತ್ಯೇಕ ಪ್ರಾಧಿಕಾರ ರಚಿಸಬೇಕು ಮತ್ತು ಚಿತ್ರದುರ್ಗದಲ್ಲಿ ಅವರ ಸ್ಮಾರಕ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ತಮ್ಮ ಕೊನೆಯ ಉಸಿರಿರುವವರೆಗೂ ಪರಿಶಿಷ್ಟ ಜಾತಿ (ಎಸ್ಸಿ), ಪರಿಶಿಷ್ಟ ಪಂಗಡ (ಎಸ್ಟಿ) ಮತ್ತು ಇತರ ಹಿಂದುಳಿದ ವರ್ಗಗಳ (ಒಬಿಸಿ) ಹಕ್ಕುಗಳಿಗಾಗಿ ಹಾಗೂ ಶೋಷಿತ ಸಮುದಾಯಗಳ ಏಳಿಗೆಗಾಗಿ ಹೋರಾಟ ಮುಂದುವರಿಸುವುದಾಗಿ ವಿಎಸ್ ಉಗ್ರಪ್ಪ ಹೇಳಿದರು

