ಬೆಂಗಳೂರು: ಅಕ್ಟೋಬರ್ 20ರಿಂದ 25ರವರೆಗೆ ಬೆಂಗಳೂರಿನ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಪ್ರತಿಷ್ಠಿತ ‘ಫಿಬಾ ಮಹಿಳಾ ಬಾಸ್ಕೆಟ್‌ಬಾಲ್ ಲೀಗ್ ಏಷ್ಯಾ–2026’ ಅಂತಾರಾಷ್ಟ್ರೀಯ ಪಂದ್ಯಾವಳಿ ಆಯೋಜಿಸಲಾಗಿದೆ.
ಬೆಂಗಳೂರಿನ ಕರ್ನಾಟಕ ಒಲಿಂಪಿಕ್ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಿಸಿಎಂ ಡಾ.ಜಿ. ಪರಮೇಶ್ವರ್,
ಬೆಂಗಳೂರನ್ನು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಪ್ರಮುಖ ಬಾಸ್ಕೆಟ್ ಬಾಲ್ ಕ್ರೀಡಾ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವುದು ನಮ್ಮ ಸರ್ಕಾರದ ಗುರಿಯಾಗಿದೆ. ಕ್ರೀಡೆಯ ಬೆಳವಣಿಗೆಗೆ ಹಾಗೂ ಕ್ರೀಡಾಪಟುಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.
ಅಕ್ಟೋಬರ್ 20ರಿಂದ 25ರವರೆಗೆ ಬೆಂಗಳೂರಿನ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಪ್ರತಿಷ್ಠಿತ ‘ಫಿಬಾ ಮಹಿಳಾ ಬಾಸ್ಕೆಟ್‌ಬಾಲ್ ಲೀಗ್ ಏಷ್ಯಾ–2026’ ಅಂತಾರಾಷ್ಟ್ರೀಯ ಪಂದ್ಯಾವಳಿ ನಡೆಯಲಿದೆ. ಕರ್ನಾಟಕ ರಾಜ್ಯ ಬಾಸ್ಕೆಟ್‌ಬಾಲ್ ಸಂಸ್ಥೆಯು (KSBA), ಭಾರತೀಯ ಬಾಸ್ಕೆಟ್‌ಬಾಲ್ ಒಕ್ಕೂಟದ (BFI) ಆಶ್ರಯದಲ್ಲಿ, ನಮ್ಮ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಅಂತಾರಾಷ್ಟ್ರೀಯ ಬಾಸ್ಕೆಟ್‌ಬಾಲ್ ಒಕ್ಕೂಟದ (FIBA) ಬೆಂಬಲದೊಂದಿಗೆ ಈ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದರು.
ಜಪಾನ್ ನ ಡೆನ್ಸೊ ಐರಿಸ್, ದಕ್ಷಿಣ ಕೊರಿಯಾದ ಚಿಯಾಂಗ್ಜು ಕೆಬಿ ಸ್ಟಾರ್ಸ್, ಚೀನಾದ ಸಿಚುವಾನ್ ಯುವಾಂಡಾ ಮೈಲೆ, ಫಿಲಿಪ್ಪೀನ್ಸ್‌ನ ಅಕಾರಿ ಸ್ಪಾರ್ಕ್ಸ್, ಚೈನೀಸ್ ತೈಪೆಯ ಕ್ಯಾಥೆ ಲೈಫ್ ಟೈಗರ್ಸ್ ಹಾಗೂ ಭಾರತದ ರಾಷ್ಟ್ರೀಯ ಚಾಂಪಿಯನ್ ಭಾರತೀಯ ರೈಲ್ವೇಸ್ ಸೇರಿದಂತೆ ಏಷ್ಯಾದ ಆರು ಪ್ರಮುಖ ಮಹಿಳಾ ಬಾಸ್ಕೆಟ್‌ಬಾಲ್ ಕ್ಲಬ್ ತಂಡಗಳು ಭಾಗವಹಿಸಲಿವೆ ಎಂದರು.
ಅಂತಾರಾಷ್ಟ್ರೀಯ ಮಟ್ಟದ ಅನುಭವಿ ಆಟಗಾರ್ತಿಯರ ಕೌಶಲ್ಯ ಮತ್ತು ಆಟದ ತಂತ್ರಗಳನ್ನು ನೇರವಾಗಿ ವೀಕ್ಷಿಸಲು ನಮ್ಮ ಯುವ ಕ್ರೀಡಾಪಟುಗಳಿಗೆ, ವಿಶೇಷವಾಗಿ ಮಹಿಳೆಯರಿಗೆ ಇದೊಂದು ಅಪೂರ್ವ ಅವಕಾಶವಾಗಿದೆ. ಭಾರತೀಯ ರೈಲ್ವೇಸ್ ತಂಡಕ್ಕೂ ಏಷ್ಯಾದ ಬಲಿಷ್ಠ ಕ್ಲಬ್ ತಂಡಗಳ ವಿರುದ್ಧ ಸ್ಪರ್ಧಿಸಿ ಅಂತಾರಾಷ್ಟ್ರೀಯ ಅನುಭವ ಪಡೆಯಲು ಅವಕಾಶ ದೊರೆತಿದೆ ಎಂದರು.
ಬೆಂಗಳೂರಿನಲ್ಲಿ ಈ ಹಿಂದೆಯೂ ಹಲವು ಬಾಸ್ಕೆಟ್‌ಬಾಲ್ ಪಂದ್ಯಾವಳಿಗಳನ್ನು ಆಯೋಜಿಸಲಾಗಿದ್ದು, ಈ ಪ್ರತಿಷ್ಠಿತ ಚಾಂಪಿಯನ್‌ಶಿಪ್ ನಗರದ ಕ್ರೀಡಾ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಲಿದೆ. ಮಹಿಳಾ ಬಾಸ್ಕೆಟ್‌ಬಾಲ್‌ಗೆ ಹೆಚ್ಚಿನ ಉತ್ತೇಜನ ನೀಡುವುದರ ಜೊತೆಗೆ ಯುವತಿಯರು ಕ್ರೀಡೆಯಲ್ಲಿ ಸಾಧನೆ ಮಾಡಲು ಸ್ಫೂರ್ತಿಯಾಗಲಿದೆ ಎಂದರು.
ಈ ಅಂತಾರಾಷ್ಟ್ರೀಯ ಪಂದ್ಯಾವಳಿಯನ್ನು ಬೆಂಗಳೂರಿಗೆ ತರುವಲ್ಲಿ ವಿಶೇಷ ಪ್ರಯತ್ನ ನಡೆಸಿದ ಫಿಬಾ ಏಷ್ಯಾ ಅಧ್ಯಕ್ಷ ಡಾ. ಕೆ. ಗೋವಿಂದರಾಜು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮುಖ್ಯಮಂತ್ರಿಗಳು ಈ ಪಂದ್ಯಾವಳಿಯ ಆಯೋಜನೆಗೆ ಬೆಂಬಲ ನೀಡಿದ್ದು, ಮುಂದಿನ ದಿನಗಳಲ್ಲಿಯೂ ಇಂತಹ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಿಗೆ ನಮ್ಮ ಸರ್ಕಾರ ಅಗತ್ಯ ಸಹಕಾರ ನೀಡಲಿದೆ ಎಂದರು.
ರಾಜ್ಯದಲ್ಲಿ ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗಿದ್ದು, ಈಗಾಗಲೇ ಸುಮಾರು 14 ಜಿಲ್ಲೆಗಳಲ್ಲಿ ಸಿಂಥೆಟಿಕ್ ಟ್ರ್ಯಾಕ್ ಗಳನ್ನು ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಜಿಲ್ಲೆಗಳಿಗೆ ಈ ಸೌಲಭ್ಯ ವಿಸ್ತರಿಸುವುದರ ಜೊತೆಗೆ ಕ್ರೀಡಾಪಟುಗಳಿಗೆ ಅಗತ್ಯ ತರಬೇತಿ, ಸೌಲಭ್ಯ ಹಾಗೂ ವೈಯಕ್ತಿಕ ಪ್ರೋತ್ಸಾಹ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಏಷ್ಯನ್ ಗೇಮ್ಸ್‌ನಲ್ಲಿ ಪದಕಗಳನ್ನು ಗಳಿಸಿ ದೇಶಕ್ಕೆ ಕೀರ್ತಿ ತಂದ 85 ಕ್ರೀಡಾಪಟುಗಳು ಹಾಗೂ ಕರ್ನಾಟಕದ ಎಂಟು ಪದಕ ವಿಜೇತರ ಸಾಧನೆಯನ್ನು ಅಭಿನಂದಿಸುತ್ತೇನೆ ಎಂದರು.
ಆರು ದಿನಗಳ ಕಾಲ ನಡೆಯಲಿರುವ ಈ ಅಂತಾರಾಷ್ಟ್ರೀಯ ಪಂದ್ಯಾವಳಿಗೆ ಆಗಮಿಸುತ್ತಿರುವ ಎಲ್ಲ ತಂಡಗಳನ್ನು ಕರ್ನಾಟಕಕ್ಕೆ ಆತ್ಮೀಯವಾಗಿ ಸ್ವಾಗತಿಸುತ್ತೇನೆ. ಪಂದ್ಯಾವಳಿಯ ಯಶಸ್ಸಿಗೆ ಮಾಧ್ಯಮಗಳು ಹಾಗೂ ಕ್ರೀಡಾಭಿಮಾನಿಗಳ ಸಹಕಾರ ಅತ್ಯಂತ ಮುಖ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಫಿಬಾ ಏಷ್ಯಾ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯ ಡಾ. ಕೆ. ಗೋವಿಂದರಾಜು, ಕರ್ನಾಟಕ ರಾಜ್ಯ ಬಾಸ್ಕೆಟ್ ಬಾಲ್ ಸಂಸ್ಥೆಯ ಅಧ್ಯಕ್ಷ ಬಿ. ದಯಾನಂದ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಆಯುಕ್ತ ಎಂ.ಎನ್. ಅನುಚೇತ್ ಉಪಸ್ಥಿತರಿದ್ದರು.

