ಕೊರೊನಾ ಸೋಂಕಿನ ಸಂಕಷ್ಟದ ಕಾಲದಲ್ಲಿ ತಮ್ಮ ನೌಕರಿಯನ್ನು ತೊರೆದು ಸ್ವಗ್ರಾಮಕ್ಕೆ ಮರಳಿ ಕೃಷಿಯಲ್ಲಿ ವಿಸ್ಮಯ ಸೃಷ್ಟಿಸಿರುವ ಆಂಧ್ರಪ್ರದೇಶದ ರೈತನೊಬ್ಬನ ಯಶೋಗಾಥೆ ಈಗ ಎಲ್ಲೆಡೆ ವೈರಲ್ ಆಗಿದೆ. ಸಾಂಪ್ರದಾಯಿಕ ಬೆಳೆಗಳಿಗೆ ಬದಲಾಗಿ ವಿದೇಶಿ ಹಣ್ಣಿನ ಕೃಷಿಗೆ ಕೈಹಾಕಿರುವ ಈ ರೈತ, ಇಂದು ಪ್ರತಿ ಕೆಜಿಗೆ 500 ರಿಂದ 600 ರೂಪಾಯಿ ಬೆಲೆ ಬಾಳುವ ವಿಶಿಷ್ಟ ಹಣ್ಣನ್ನು ಬೆಳೆದು ಕೇವಲ ಐದು ಎಕರೆಯಲ್ಲಿ ಬರೋಬ್ಬರಿ 30 ಲಕ್ಷ ರೂಪಾಯಿ ವರೆಗೆ ವಾರ್ಷಿಕ ವರದಿ ಗಳಿಸುತ್ತಿದ್ದಾರೆ.
ಆಂಧ್ರಪ್ರದೇಶದ ಎನ್ಟಿಆರ್ ಜಿಲ್ಲೆಯ ರಾಮಾರೆಡ್ಡಿಪಲ್ಲಿಯವರಾದ ಬಿ. ಶೇಷು ಬಾಬು (B Seshu Babu), ಹೈದರಾಬಾದ್ನಲ್ಲಿ ಸಮಾಜ ಕಲ್ಯಾಣ ಇಲಾಖೆ ಉದ್ಯೋಗದಲ್ಲಿದ್ದರು. 2020ರಲ್ಲಿ ಕೋವಿಡ್ ಸಾಂಕ್ರಾಮಿಕದ ವೇಳೆ ಕೆಲಸ ಬಿಟ್ಟು ಗ್ರಾಮಕ್ಕೆ ಬಂದ ಅವರು, ತಮ್ಮ ತಂದೆ ಮೆಣಸಿನಕಾಯಿ ಬೆಳೆಯುತ್ತಿದ್ದ ಜಮೀನಿಗೆ ಇಳಿದರು. ಆದರೆ ಹವಾಮಾನ ವೈಪರೀತ್ಯದಿಂದಾಗಿ ಮೆಣಸಿನಕಾಯಿ ಬೆಳೆಗೆ ನಷ್ಟವಾಗತೊಡಗಿದಾಗ, ಅವರು ಹೊಸ ಬೆಳೆಗಳನ್ನು ಪ್ರಯೋಗಿಸಲು ನಿರ್ಧರಿಸಿದರು. ಅಂತರ್ಜಾಲದಲ್ಲಿ ಹುಡುಕಾಟ ನಡೆಸುತ್ತಿದ್ದಾಗ ಅವರಿಗೆ ‘ಗ್ಯಾಕ್’ (Gac) ಎಂಬ ವಿಲಕ್ಷಣ ಹಣ್ಣಿನ ಪರಿಚಯವಾಯಿತು.
ಆಗ್ನೇಯ ಏಷ್ಯಾ ಮೂಲದ ‘ಗ್ಯಾಕ್’ ಒಂದು ಪೌಷ್ಟಿಕಾಂಶಯುಕ್ತ ‘ಸೂಪರ್ಫ್ರೂಟ್’ ಆಗಿದ್ದು, ಇದರಲ್ಲಿ ಟೊಮೆಟೊದಲ್ಲಿರುವಂತೆ ಲೈಕೋಪೀನ್ ಹಾಗೂ ವಿಟಮಿನ್ ‘ಎ’ ಅಂಶ ತುಂಬಿದೆ. ವಿಯೆಟ್ನಾಂನಿಂದ ಆಮದು ಮಾಡಿಕೊಂಡ ಸಸಿಗಳನ್ನು ಮಾರಾಟ ಮಾಡುತ್ತಿದ್ದ ನರ್ಸರಿಯೊಂದನ್ನು ಸಂಪರ್ಕಿಸಿದ ಶೇಷು ಬಾಬು, ಮಾರ್ಚ್ 2023 ರಲ್ಲಿ 700 ರೂ. ಬೆಲೆಯಂತೆ 100 ಸಸಿಗಳನ್ನು ತಂದು ಕಾಲು ಎಕರೆ ಪ್ರದೇಶದಲ್ಲಿ ನೆಟ್ಟರು. ಕೇವಲ ನಾಲ್ಕು ತಿಂಗಳಲ್ಲಿ ಫಸಲು ನೀಡಲು ಆರಂಭಿಸಿದ ಈ ಗಿಡಗಳಿಂದ ಮೊದಲನೇ ಹಂತದಲ್ಲೇ 2,100 ಕೆಜಿ ಹಣ್ಣು ಲಭಿಸಿತು. ಇದನ್ನು ಪ್ರತಿ ಕೆಜಿಗೆ 800 ರೂ. ನಂತೆ ಮಾರಾಟ ಮಾಡುವ ಮೂಲಕ ಅವರು ಒಂದೇ ಬಾರಿಗೆ 16 ಲಕ್ಷ ರೂ. ಗೂ ಅಧಿಕ ಆದಾಯ ಗಳಿಸಿದರು.
ಪ್ರಸ್ತುತ ಅವರು 75 ಸೆಂಟ್ ಜಮೀನಿನಲ್ಲಿ ಸುಮಾರು 300 ಗ್ಯಾಕ್ ಗಿಡಗಳನ್ನು ಬೆಳೆಯುತ್ತಿದ್ದಾರೆ. ಇದರಲ್ಲಿ 210 ಹೆಣ್ಣು ಗಿಡಗಳು ಹಾಗೂ 90 ಗಂಡು ಗಿಡಗಳಿವೆ. ಹೆಣ್ಣು ಗಿಡಗಳು ತಲಾ 30 ಕೆಜಿ ಹಣ್ಣು ನೀಡುತ್ತವೆ. ಈ ಹಣ್ಣಿನ ಅಧಿಕ ಇಳುವರಿಗಾಗಿ ಕೃತಕ ಅಥವಾ ಕೈಯಿಂದ ಪರಾಗಸ್ಪರ್ಶ (Manual pollination) ಮಾಡಲಾಗುತ್ತದೆ. ಇದು ಸ್ವಲ್ಪ ಶ್ರಮದಾಯಕವಾದರೂ ಹಣ್ಣಿನ ಮೌಲ್ಯವನ್ನು ಹೆಚ್ಚಿಸುತ್ತದೆ. ಯಾವುದೇ ಮಧ್ಯವರ್ತಿಗಳಿಲ್ಲದೆ ನೇರವಾಗಿ ಗ್ರಾಹಕರಿಗೆ ಹಾಗೂ ಹೈದರಾಬಾದ್ನ ಲುಲು ಮಾಲ್ (Lulu Mall) ಸೇರಿದಂತೆ ಆನ್ಲೈನ್-ಆಫ್ಲೈನ್ ಮೂಲಕ ನೇರ ಮಾರಾಟ ಮಾಡುತ್ತಿರುವುದು ಇವರ ಯಶಸ್ಸಿನ ಗುಟ್ಟು.
ಘನಾ ಜೀವಾಮೃತ ಹಾಗೂ ನೈಸರ್ಗಿಕ ಜೈವಿಕ ಗೊಬ್ಬರಗಳನ್ನು ಬಳಸಿಕೊಂಡು ಸಂಪೂರ್ಣ ಸಾವಯವ ಕೃಷಿ ಪದ್ಧತಿಯನ್ನು ಅನುಸರಿಸುತ್ತಿರುವ ಶೇಷು ಬಾಬು, ಗ್ಯಾಕ್ ಹಣ್ಣಿನ ಜೊತೆಗೆ ಡ್ರಾಗನ್ ಫ್ರೂಟ್, ಸೀಬೆ, ಪಪ್ಪಾಯಿ, ನಿಂಬೆ ಮತ್ತು ಮುಳ್ಳುಹರಳೆ (Spine Gourd) ಸೇರಿದಂತೆ ವಿವಿಧ ಬೆಳೆಗಳನ್ನೂ ಬೆಳೆದು ಆದಾಯವನ್ನು ದ್ವಿಗುಣಗೊಳಿಸಿದ್ದಾರೆ.

