ನವದೆಹಲಿ: ನಮ್ಮ ರಾಜ್ಯದ ಹಳೆಯ ಬಾಕಿ ವಿಚಾರವಾಗಿ ನಾನು ವಿತ್ತ ಸಚಿವರೊಂದಿಗೆ ಚರ್ಚೆ ಮಾಡಿದ್ದು, ಕೆಲವು ಸಿಹಿ ಸುದ್ದಿ ಕೊಟ್ಟಿದ್ದಾರೆ. ನಾನು ಈಗ ಆ ಬಗ್ಗೆ ಹೇಳುವುದಿಲ್ಲ. ನಂತರ ಮಾತನಾಡುತ್ತೇನೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಜಿಎಸ್ ಟಿ ಸಭೆ ಬಳಿಕ ಕರ್ನಾಟಕ ಭವನದಲ್ಲಿ ಮತನಾಡಿದ ಸಿಎಂ ಡಿ.ಕೆ.ಶಿವಕುಮಾರ್, ಜಿಎಸ್ ಟಿ ಕೌನ್ಸಿಲ್ ಸಭೆ ಅತ್ಯುತ್ತಮವಾಗಿ ನಡೆಯಿತು. ಕರ್ನಾಟಕದ ಅಂಶಗಳನ್ನು ಎಲ್ಲರೂ ಒಪ್ಪಿದ್ದಾರೆ ಎಂದರು.
ಜಿಎಸ್ ಟಿ ಪಾವತಿಸದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಬಂಧಿಸುವ ವಿಚಾರ ಪ್ರಸ್ತಾಪವಾಯಿತು. ಆದಾಯ ತೆರಿಗೆ ನಿಯಮ, ನಿಬಂಧನೆಗಳಂತೆ ಮಾಡಬೇಕು, ಅನಗತ್ಯವಾಗಿ ಅಧಿಕಾರಿಗಳು ವ್ಯಾಪಾರಸ್ಥರನ್ನು ಬಂಧಿಸುವುದು ಸರಿಯಲ್ಲ. ಅವರಿಂದ ಎಷ್ಟು ಕಟ್ಟಿಸಿಕೊಳ್ಳಬೇಕೋ ಅಷ್ಟು ಹಣ ಕಟ್ಟಿಸಿಕೊಳ್ಳೋಣ. ಬಂಧಿಸುವುದು ಸರಿಯಲ್ಲ ಎಂದು ಚರ್ಚೆಯಾಯಿತು. ಒಂದು ರಾಜ್ಯ ಬಿಟ್ಟರೆ ಉಳಿದ ರಾಜ್ಯಗಳು ಒಪ್ಪಿವೆ ಎಂದು ಹೇಳಿದರು.
ನನ್ನ, ಸಚಿವರ ಸ್ಟಿಂಗ್ ಆಪರೇಷನ್ ಯತ್ನದ ಪಿತಾಮಹ ಯಾರು, ಹಣಕಾಸಿನ ನೆರವು ನೀಡಿದ್ದು ಯಾರೆಂದು ಗೊತ್ತು; ಖಾಸಗಿ ಏಜೆಂಟರನ್ನು ನೇಮಕ ಮಾಡಿರುವ ಬಗ್ಗೆ ಮಾಹಿತಿ ಇದೆ ಎಂದ ಸಿಎಂ ಡಿ.ಕೆ.ಶಿವಕುಮಾರ್
ಬೆಂಗಳೂರು: ಮುಖ್ಯಮಂತ್ರಿ ಆದ ಬಳಿಕ ನನ್ನ ಹಾಗೂ ಇತರೆ ಸಚಿವರ ವಿರುದ್ಧ ಸ್ಟಿಂಗ್ ಆಪರೇಷನ್ ಪ್ರಯತ್ನ ನಡೆದಿದ್ದು, ಇದರ ಪಿತಾಮಹ ಯಾರು? ಇದಕ್ಕೆ ಹಣಕಾಸಿನ ನೆರವು ಯಾರು ನೀಡುತ್ತಿದ್ದಾರೆ ಹಾಗೂ ಹೇಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂಬುದು ನನಗೆ ತಿಳಿದಿದೆ ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದ್ದಾರೆ.
ನವದೆಹಲಿಯ ಕರ್ನಾಟಕ ಭವನದ ಬಳಿಮಾತನಾಡಿದ ಸಿಎಂ ಡಿ.ಕೆ.ಶಿವಕುಮಾರ್, ಸಚಿವರ ಮೇಲೆ ಗುಪ್ತ ಕಾರ್ಯಾಚರಣೆ ಮಾಡುತ್ತಿರುವ ಬಗ್ಗೆ ನೀಡಿರುವ ಎಚ್ಚರಿಕೆ ಬಗ್ಗೆ ಕೇಳಿದಾಗ, “ಮಾರುವೇಷದ ಕಾರ್ಯಾಚರಣೆಗಳನ್ನು ನನ್ನ ಮೇಲಿಂದಲೇ ಶುರು ಮಾಡಲು ಪ್ರಯತ್ನ ಮಾಡಿದ್ದಾರೆ. ನನ್ನ ಬಳಿ ಈ ಬಗ್ಗೆ ಎಲ್ಲ ಸಾಕ್ಷ್ಯಗಳೂ ಇವೆ. ನಾನು ಜವಾಬ್ದಾರಿ ಸ್ಥಾನದಲ್ಲಿದ್ದೇನೆ. ನಾನು ಏನೇ ಮಾತನಾಡಬೇಕಾದರೂ ಸುಮ್ಮನೆ ಮಾತನಾಡುವುದಿಲ್ಲ” ಎಂದರು.
ಮುಖ್ಯಮಂತ್ರಿಯಾದ ಬಳಿಕ ನಡೆದಿರುವ ಪ್ರಯತ್ನಗಳ ಬಗ್ಗೆ ಹೇಳುತ್ತಿದ್ದೇನೆ. ನನ್ನನ್ನು ಸೇರಿಸಿ ಬೇರೆ ಯಾವ, ಯಾವ ನಾಯಕರ ವಿರುದ್ಧ ಕಾರ್ಯಾಚರಣೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬುದೂ ತಿಳಿದಿದೆ. ಆದರೆ, ಈ ಎಲ್ಲ ವಿಚಾರಗಳನ್ನು ಈಗ ಬಹಿರಂಗವಾಗಿ ಮಾತನಾಡುವ ಅಗತ್ಯವಿಲ್ಲ ಎಂದು ತಿಳಿಸಿದರು.
ಸಚಿವರನ್ನು ಸಿಕ್ಕಿ ಹಾಕಿಸಲು ಏಜೆಂಟರನ್ನು ನೇಮಕ ಮಾಡಿಕೊಂಡಿರುವ ಬಗ್ಗೆ ಬಹಳ ಚರ್ಚೆಯಾಗುತ್ತಿದೆ. ಕೆಲವರು ನನ್ನ ಬಳಿ ಬಂದಿದ್ದರು, ನಾನು ಫೋಟೋಗಳನ್ನು ಬಿಡುಗಡೆ ಮಾಡಲು ಸಿದ್ಧ. ಸದ್ಯಕ್ಕೆ ಅದರ ಅವಶ್ಯಕತೆ ಇಲ್ಲ. ಯಾರು ಏನೇನು ಮಾಡುತ್ತಿದ್ದಾರೆ ಎಂಬುದು ನನಗೆ ಗೊತ್ತು. ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ. ನನ್ನ ಬಳಿ ಯಾರು ಬಂದಿದ್ದರೋ ಅವರ ಮೇಲೆ ಅನುಮಾನ ಬಂದು ಪೊಲೀಸರಿಗೆ ತಿಳಿಸಿ, ದಾಖಲೆಗಳನ್ನು ಸಿದ್ಧಪಡಿಸಿ ಇಟ್ಟುಕೊಂಡಿದ್ದೇನೆ. ಅದನ್ನು ಈಗಲೇ ಬಹಿರಂಗ ಮಾಡಲು ಸಾಧ್ಯವಿಲ್ಲ. ಇದಕ್ಕೆ ಪಿತಾಮಹರು ಯಾರು ಎಂದು ತಿಳಿದಿದೆ. ಅದಕ್ಕೆಲ್ಲಾ ಉತ್ತರಿಸಲು ಹೋಗುವುದಿಲ್ಲ. ಅಧಿಕಾರಿಗಳನ್ನು ಸುಮ್ಮನೆ ಸಿಕ್ಕಿಹಾಕಿಸಲು ಪ್ರಯತ್ನ ಮಾಡುತ್ತಿದ್ದು, ಅವರು ಹುಷಾರಾಗಿರಬೇಕು ಎಂದು ಎಚ್ಚರಿಕೆ ನೀಡಿದೆ. ಹಿಂದೆ ಮಾಧ್ಯಮದಿಂದ ಸ್ಟಿಂಗ್ ಆಪರೇಷನ್ ಮಾಡಲು ಬಂದಿದ್ದರು. ಹಾಗಾಗಿ ಈಗಲೇ ಎಚ್ಚರಿಕೆ ನೀಡಲಾಗಿದೆ. ಕೆಲವು ನಾಯಕರು ಈ ಕಾರ್ಯಾಚರಣೆಗೆ ಖಾಸಗಿ ಏಜೆಂಟರನ್ನು ನೇಮಕ ಮಾಡಿಕೊಂಡಿದ್ದಾರೆ ಎಂಬ ಬಗ್ಗೆ ಪಕ್ಕಾ ಮಾಹಿತಿ ಇದೆ ಎಂದರು.
ಇನ್ನು ಎಸ್ ಐ ಆರ್ ಬಗ್ಗೆ ಕಳೆದ ಎರಡು ದಿನಗಳಿಂದ ಹೋರಾಟ ನಡೆದಿರುವ ವಿಚಾರವಾಗಿ ಬಾಂಗ್ಲಾದೇಶ ಹಾಗೂ ಬೇರೆಡೆಗಳಿಂದ ಬಂದು ಜನರು ಇಲ್ಲಿದ್ದಾರೆ ಎಂದು ಬಿಜೆಪಿಯವರು ಹೇಳುತ್ತಾರೆ. ಹಾಗಿದ್ದರೆ ದೇಶದ ಗಡಿಯಲ್ಲಿ ಬಾಂಗ್ಲಾದೇಶದಿಂದ ನುಸುಳಿಕೋರರನ್ನು ತಡೆಗಟ್ಟುವುದು ಕೇಂದ್ರ ಸರ್ಕಾರದ ಕರ್ತವ್ಯವಲ್ಲವೇ? ಬಿಜೆಪಿಯ ಸಂಸದರೂ ಹಾಗೂ ಶಾಸಕರು, ನಾವು ಬಾಂಗ್ಲಾದೇಶದವರನ್ನು ಮತಪಟ್ಟಿಯಿಂದ ತೆಗೆಯಲು ಅರ್ಜಿ ಸಲ್ಲಿಸಿದ್ದೇವೆ ಎಂದಿದ್ದಾರೆ. ಭಾರತೀಯರ ಮತಗಳ ರಕ್ಷಣೆ ಮಾಡುವುದು ಕೇಂದ್ರ ಸರ್ಕಾರದ ಕರ್ತವ್ಯ. ನಮ್ಮಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ಇದ್ದರೆ ಅವರ ಮತದಾನದ ಹಕ್ಕು ಕಸಿಯುವುದು ಮಾತ್ರವಲ್ಲ, ಅವರನ್ನೇ ದೇಶದಿಂದ ಹೊರಗೆ ಹಾಕಲಿ. ಆ ಕೆಲಸ ಯಾಕೆ ಮಾಡುತ್ತಿಲ್ಲ? ಎಂದು ಪ್ರಶ್ನಿಸಿದರು.
ಹೋರಾಟಗಾರರ ವಿರುದ್ಧ ಪೊಲೀಸರೂ ಅಮಾನವೀಯವಾಗಿ ನಡೆದುಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿಯವರು ದೇಶದ ಪ್ರಜಾಪ್ರಭುತ್ವ ಹಾಗೂ ಜನರ ರಕ್ಷಣೆಗಾಗಿ ಹೋರಾಡುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ಬಿಜೆಪಿಯವರು ತಮ್ಮ ಬಡ ಬಿಜೆಪಿ ಕಾರ್ಯಕರ್ತರ ಹೆಸರಿನಲ್ಲಿ ಪೂರ್ವಮುದ್ರಿತ ಫಾರಂ 7 ಗಳನ್ನು ನೀಡುತ್ತಿದ್ದಾರೆ. ವಿಶೇಷವಾಗಿ ಅಲ್ಪಸಂಖ್ಯಾತ ಮತದಾರರ ಪೂರ್ವ ಮುದ್ರಿತ ಅರ್ಜಿಗಳನ್ನು ಲಕ್ಷಾಂತರ ಸಂಖ್ಯೆಯಲ್ಲಿ ಸಲ್ಲಿಸಲಾಗುತ್ತಿದೆ. ಕೆಲವು ಬಿಜೆಪಿ ಕಾರ್ಯಕರ್ತರು ತಪ್ಪೊಪ್ಪಿಗೆ ಮಾಡಿಕೊಂಡು ಅರ್ಜಿಗಳನ್ನು ವಾಪಸ್ಸು ಪಡೆದಿದ್ದಾರೆ. ಕೇಂದ್ರ ಸರ್ಕಾರದವರು ಈ ಮತಗಳ್ಳತನವನ್ನು ಒಂದು ದೊಡ್ಡ ಕ್ರಿಮಿನಲ್ ಸಂಚು ಎಂದು ಏಕೆ ಪರಿಗಣಿಸಲಿಲ್ಲ? ರಾಜ್ಯದಲ್ಲಿ ನಮ್ಮ ಹೋರಾಟದ ನಂತರ ಚುನಾವಣಾ ಆಯೋಗವೂ, ಸೂಕ್ತ ಪರಿಶೀಲನೆಯಿಲ್ಲದೇ ಯಾವುದೇ ಅರ್ಹ ಮತವನ್ನು ತೆಗೆದುಹಾಕಬಾರದೆಂದು ಸ್ಪಷ್ಟ ಸೂಚನೆ ನೀಡಿದೆ. ನಾವು ಆ ಹೋರಾಟ ಮಾಡದೇ ಇದ್ದಿದ್ದರೆ, ಬಡ ಹಳ್ಳಿಗರು, ಅನಕ್ಷರಸ್ಥರ ಮತಗಳನ್ನು ಡಿಲೀಟ್ ಮಾಡಲಾಗುತ್ತಿತ್ತು. ಈಗ ಚುನಾವಣಾ ಆಯೋಗವು, ದೇಶಾದ್ಯಂತ ಯಾವುದೇ ವಸತಿಯಿಲ್ಲದವರು, ಶೋಷಿತರು ಮತದಾನದ ಹಕ್ಕಿನಿಂದ ವಂಚಿತರಾಗದಂತೆ ಒಂದು ತಿಂಗಳ ಕಾಲ ಅಭಿಯಾನದ ರೀತಿಯಲ್ಲಿ ಮತಗಳ ರಕ್ಷಣೆ ಮಾಡಬೇಕೆಂದು ತಿಳಿಸಿದೆ ಎಂದರು.
ಮತಗಳನ್ನು ರಕ್ಷಿಸುವ ಕಾರ್ಯವು ಬೆಂಗಳೂರಿನಿಂದ ಪ್ರಾರಂಭವಾಗಿದ್ದು, ಬಿಜೆಪಿ ನಾಯಕರಿಗೆ ನಾಚಿಕೆಯಾಗಬೇಕು. ರಾಜ್ಯದ ಪ್ರತಿ ನಾಗರಿಕನ ಮತದ ಹಕ್ಕನ್ನು ರಕ್ಷಿಸುವುದು ಮುಖ್ಯಮಂತ್ರಿಯಾಗಿ ನನ್ನ ಕರ್ತವ್ಯವಲ್ಲವೇ? ಬಿಜೆಪಿಯವರು ಮತಗಳ್ಳತನ ಮಾಡಲು ಇಂತಹ ಹಂತಕ್ಕೆ ತಲುಪುವರೆಂಬ ಕಲ್ಪನೆ ನಮಗಿರಲಿಲ್ಲ. ಚುನಾವಣೆ ಗೆಲ್ಲಲು ಮೊದಲು ರಾಜ್ಯದ ಹಾಗೂ ದೇಶದ ಜನರ ಮನಸ್ಸನ್ನು ಗೆಲ್ಲಬೇಕು. ಆದರೆ ಬಿಜೆಪಿಯವರು ಚುನಾವಣಾ ಆಯೋಗದ ವ್ಯವಸ್ಥೆಯನ್ನೇ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ನಡೆಯುತ್ತಿರುವ ಈ ಮತಗಳ ಅಕ್ರಮದ ಬಗ್ಗೆ ವಿಚಾರಿಸಲು ಸರ್ಕಾರಕ್ಕೆ ಅಧಿಕಾರವಿಲ್ಲವೇ? ಇಂತಹ ಕ್ರಿಮಿನಲ್ ಸಂಚಿನ ವಿರುದ್ಧ ನಾವು ಧ್ವನಿಯೆತ್ತಿದ್ದು, ಮಾಧ್ಯಮಗಳೂ ನಮಗೆ ಸಹಕರಿಸಿವೆ. ಈ ಮೂಲಕ ಮಾಧ್ಯಮದವರು ಅರ್ಹಮತದಾರರ ನೆರವಿಗೆ ನಿಂತಿದ್ದಾರೆ. ಆದ್ದರಿಂದ ನವದೆಹಲಿಯಲ್ಲಿ ದೇಶದ ಮತದಾರನ ಹಿತರಕ್ಷಣೆಗೆ ಹೋರಾಡುತ್ತಿರುವ ಇಂಡಿಯಾ ಬ್ಲಾಕ್ ನ ನಾಯಕರಿಗೆ ನಾನು ಅಭಿನಂದಿಸುತ್ತೇನೆ. ಇದರಿಂದ ದೇಶದ ಪ್ರಜಾಪ್ರಭುತ್ವ ಹಾಗೂ ಮತಗಳನ್ನು ರಕ್ಷಿಸಲಾಗುತ್ತಿದೆ ಎಂದರು.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆ ಹಾಗೂ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ನಡೆಸುತ್ತಿರುವವರ ಮೇಲೆ ದಬ್ಬಾಳಿಕೆ ನಡೆದಿದ್ದು, ಇಂದು ‘ಭಾರತೀಯ ಪ್ರಜಾಪ್ರಭುತ್ವದ ಕರಾಳ ದಿನ’ ಎಂದು ಪಕ್ಷ ಘೋಷಿಸಿದೆ. ಇದೊಂದು ಕರಾಳ ದಿನವಾಗಿದ್ದು, ಇಡೀ ದೇಶದ ಪ್ರಜಾಪ್ರಭುತ್ವ ಉಳಿಸಲು ಈ ಹೋರಾಟ ಮಾಡಿದೆ. ನಾನು ಅಲ್ಲಿ ಭಾಗವಹಿಸಬೇಕಿತ್ತು. ಜಿ.ಎಸ್.ಟಿ ಸಭೆಯಲ್ಲಿ ಭಾಗವಹಿಸಬೇಕಿದ್ದರಿಂದ ಭಾಗವಹಿಸಲಾಗಲಿಲ್ಲ ಎಂದರು.

