HomeInternationalಚಳಿಯಲ್ಲಿ ನಡುಗುತ್ತಾ ಕೆಲಸಕ್ಕೆ ಬರುವ ಉದ್ಯೋಗಿಗಳನ್ನು ಕಂಡು ಮರುಗಿದ ಒಡತಿ ; ತಲಾ 43 ಲಕ್ಷ...

ಚಳಿಯಲ್ಲಿ ನಡುಗುತ್ತಾ ಕೆಲಸಕ್ಕೆ ಬರುವ ಉದ್ಯೋಗಿಗಳನ್ನು ಕಂಡು ಮರುಗಿದ ಒಡತಿ ; ತಲಾ 43 ಲಕ್ಷ ರೂ. ಮೌಲ್ಯದ ಐಷಾರಾಮಿ ಕಾರು ಗಿಫ್ಟ್‌ !

ಸಂಸ್ಥೆಗಳಲ್ಲಿ ಉತ್ತಮವಾಗಿ ಕೆಲಸ ಮಾಡುವ ಉದ್ಯೋಗಿಗಳಿಗೆ ನಗದು ಬೋನಸ್ ಅಥವಾ ವೇತನ ಏರಿಕೆ ನೀಡುವುದು ಸಾಮಾನ್ಯ. ಆದರೆ ಚೀನಾದ ಉಪಹಾರ ಗೃಹದ ಮಾಲೀಕಿಯೊಬ್ಬರು ತಮ್ಮ ಸಿಬ್ಬಂದಿಯ ಕಷ್ಟಕ್ಕೆ ಸ್ಪಂದಿಸಿ ನೀಡಿದ ಬಹುಮಾನ ಈಗ ಜಾಗತಿಕ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿದೆ. ತೀವ್ರ ಚಳಿಯಲ್ಲಿ ಸ್ಕೂಟರ್‌ನಲ್ಲಿ ಕೆಲಸಕ್ಕೆ ಬರುತ್ತಿದ್ದ ತಮ್ಮ ಅತ್ಯುತ್ತಮ ಉದ್ಯೋಗಿಗಳಿಗೆ ಅವರು ಐಷಾರಾಮಿ ವಾಹನಗಳನ್ನು ಉಡುಗೊರೆಯಾಗಿ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ.

ಚೀನಾದ ಹೆನಾನ್ ಪ್ರಾಂತ್ಯದ ಜಿಯಾವೋಜು ನಗರದಲ್ಲಿ ಸುಪ್ರಸಿದ್ಧ ಉಪಹಾರ ಗೃಹಗಳ ಸರಣಿಯನ್ನು ನಡೆಸುತ್ತಿರುವ ಮಾ ಯಾನ್ಲಿ ಎಂಬ ಉದ್ಯಮಿ ಈ ಉದಾರ ಕೆಲಸ ಮಾಡಿದ್ದಾರೆ. ಕಳೆದ ಚಳಿಗಾಲದಲ್ಲಿ ತಮ್ಮ ಸಂಸ್ಥೆಯ ಪ್ರಮುಖ ಉದ್ಯೋಗಿಯೊಬ್ಬರು ತೀವ್ರವಾದ ಚಳಿಯಲ್ಲಿ ವಿದ್ಯುತ್ ಚಾಲಿತ ಸ್ಕೂಟರ್‌ನಲ್ಲಿ ಕಷ್ಟಪಟ್ಟು ಕೆಲಸಕ್ಕೆ ಬರುವುದನ್ನು ಮಾ ಯಾನ್ಲಿ ಗಮನಿಸಿದ್ದರು. ಚಳಿಯ ಹೊಡೆತಕ್ಕೆ ಆ ಉದ್ಯೋಗಿಯ ಮುಖ ಕೆಂಪಗಾಗಿ, ಕಿವಿಗಳು ಮತ್ತು ಕೈಗಳು ತೀವ್ರ ಚಳಿಯಿಂದ ಗಟ್ಟಿಯಾಗಿದ್ದವು.

ತಮ್ಮದೇ ಸಿಬ್ಬಂದಿಯ ಈ ಕಷ್ಟವನ್ನು ಕಂಡ ಮಾಲೀಕಿಗೆ ತೀವ್ರ ಬೇಸರವಾಯಿತು. ‘ನಾನು ಸುಸಜ್ಜಿತ ಕಾರಿನಲ್ಲಿ ಬೆಚ್ಚಗೆ ಪ್ರಯಾಣಿಸುವಾಗ, ಹಗಲಿರುಳು ಶ್ರಮಿಸುವ ನನ್ನ ಸಿಬ್ಬಂದಿಗೆ ಅಂತಹ ಸೌಲಭ್ಯ ಏಕಿರಬಾರದು?’ ಎಂಬ ಆಲೋಚನೆ ಅವರಲ್ಲಿ ಮೂಡಿತು. ಈ ಆಲೋಚನೆಯೇ ಮುಂದೆ ತಮ್ಮ ಅತ್ಯುತ್ತಮ ಸಿಬ್ಬಂದಿಗೆ ಅತಿ ದೊಡ್ಡ ಉಡುಗೊರೆ ನೀಡುವ ನಿರ್ಧಾರಕ್ಕೆ ಕಾರಣವಾಯಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಆಲೋಚನೆಯಂತೆ ಮಾ ಯಾನ್ಲಿ ತಮ್ಮ ಇಬ್ಬರು ಸಿಬ್ಬಂದಿಯನ್ನು ನೇರವಾಗಿ ವಾಹನ ಪ್ರದರ್ಶನ ಮಳಿಗೆಗೆ ಕರೆದೊಯ್ದರು. ಆ ಸಮಯದಲ್ಲೂ ಉದ್ಯೋಗಿಗಳಿಗೆ ತಮಗೆ ಸಿಗಲಿರುವ ಆಶ್ಚರ್ಯದ ಬಗ್ಗೆ ಯಾವುದೇ ಸುಳಿವಿರಲಿಲ್ಲ. ತಮಗೆ ದೊರೆಯಲಿರುವ ಅತಿ ದೊಡ್ಡ ಕೊಡುಗೆಯ ಕುರಿತು ತಿಳಿಯದ ಉದ್ಯೋಗಿಗಳು ಮಳಿಗೆಗೆ ತಲುಪಿದಾಗ ದಂಗಾಗಿದ್ದಾರೆ. ಮಾ ಯಾನ್ಲಿ ಅವರು ಈಗಾಗಲೇ ಪೂರ್ಣ ಹಣವನ್ನು ಪಾವತಿಸಿ ತಲಾ ಮೂರು ಲಕ್ಷ ಯುವಾನ್ ಅಂದರೆ ಭಾರತೀಯ ಮೌಲ್ಯದಲ್ಲಿ ಸುಮಾರು ನಲವತ್ಮೂರು ಲಕ್ಷದ ನಲವತ್ತೆರಡು ಸಾವಿರ ರೂಪಾಯಿ ಮೌಲ್ಯದ ಐಷಾರಾಮಿ ಕಾರುಗಳನ್ನು ಕಾಯ್ದಿರಿಸಿದ್ದರು.

ತಮ್ಮ ಬಳಿ ಎಂಟು ವರ್ಷಗಳಿಂದ ಅತ್ಯಂತ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದ ಲಿ ಜೀ ಎಂಬ ಸಿಬ್ಬಂದಿಗೆ ಹಾಗೂ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಲಿಯು ಯಿಂಗ್‌ಯಿಂಗ್ ಎಂಬ ಮತ್ತೊಬ್ಬ ಉದ್ಯೋಗಿಗೆ ಈ ವಾಹನಗಳನ್ನು ಹಸ್ತಾಂತರಿಸಲಾಯಿತು. ಯಾವುದೇ ಸಾಲದ ಹೊರೆ ಇಲ್ಲದೆ, ಯಾವುದೇ ಮುಚ್ಚಳಿಕೆ ಪತ್ರಕ್ಕೆ ಸಹಿ ಪಡೆಯದೆ ತಕ್ಷಣವೇ ಉದ್ಯೋಗಿಗಳ ಹೆಸರಿಗೇ ವಾಹನವನ್ನು ನೋಂದಣಿ ಮಾಡಿಸಿಕೊಡಲಾಯಿತು. ತಮ್ಮ ಸಂಸ್ಥೆಯ ಯಶಸ್ಸು ಕೇವಲ ತಮ್ಮೊಬ್ಬರ ಶ್ರಮವಲ್ಲ, ಪ್ರತಿಯೊಬ್ಬ ಸಿಬ್ಬಂದಿಯ ಶ್ರಮವೂ ಇದೆ, ಹೀಗಾಗಿ ಸಂಸ್ಥೆಯ ಬೆಳವಣಿಗೆಯ ಫಲ ಸಿಬ್ಬಂದಿಗೂ ತಲುಪಬೇಕು ಎಂದು ಮಾ ಯಾನ್ಲಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular