ಇತ್ತೀಚಿನ ದಿನಗಳಲ್ಲಿ ರಸ್ತೆಗಳಲ್ಲಿ ಸಣ್ಣಪುಟ್ಟ ವಿಚಾರಕ್ಕೆ ವಾಹನ ಸವಾರರ ನಡುವೆ ಜಗಳ ಮತ್ತು ಗಲಾಟೆಗಳು ಹೆಚ್ಚಾಗುತ್ತಿವೆ. ಇಂತಹ ಸಮಯಗಳಲ್ಲಿ ತಾಳ್ಮೆ ಕಳೆದುಕೊಳ್ಳದೆ ಬುದ್ಧಿವಂತಿಕೆಯಿಂದ ವರ್ತಿಸುವುದು ಅತ್ಯಂತ ಮುಖ್ಯ ಎಂಬುದಕ್ಕೆ ನೋಯ್ಡಾದಲ್ಲಿ ನಡೆದ ಘಟನೆಯೊಂದು ಸೂಕ್ತ ಉದಾಹರಣೆಯಾಗಿದೆ. ನೋಯ್ಡಾದ ರಸ್ತೆಯೊಂದರಲ್ಲಿ ಸವಾರನೊಬ್ಬ ತನ್ನ ಸಮಯಪ್ರಜ್ಞೆ ಹಾಗೂ ಶಾಂತ ಸ್ವಭಾವದಿಂದ ದೊಡ್ಡ ಅನಾಹುತವನ್ನೇ ತಪ್ಪಿಸಿದ್ದು, ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಗಮನ ಸೆಳೆಯುತ್ತಿವೆ.
ಅಭಿಷೇಕ್ ಜಾಲನ್ ಎಂಬುವವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿರುವ ವೀಡಿಯೋ ಪ್ರಕಾರ, ಕಾರೊಂದರ ಚಾಲಕ ರಸ್ತೆಯ ವಿಭಜಕದ ತಪ್ಪು ಬದಿಯಲ್ಲಿ ಚಾಲನೆ ಮಾಡಿಕೊಂಡು ಬಂದು, ಮತ್ತೊಬ್ಬ ಸವಾರನನ್ನು ಹಿಂಬಾಲಿಸಿದ್ದಾನೆ. ಅಷ್ಟೇ ಅಲ್ಲದೆ, ಮುಂಭಾಗದಲ್ಲಿದ್ದ ವಾಹನವನ್ನು ತಡೆಯುವ ಉದ್ದೇಶದಿಂದ ಹಠಾತ್ತಾಗಿ ಬ್ರೇಕ್ ಹಾಕಿ ರಸ್ತೆಯನ್ನು ತಡೆಗಟ್ಟಿದ್ದಾನೆ. ಬಳಿಕ ತನ್ನ ಕಾರಿನಿಂದ ಕೆಳಗಿಳಿದು ಜಗಳವಾಡುವ ಉದ್ದೇಶದಿಂದ ಸವಾರನ ವಾಹನದತ್ತ ಆಕ್ರೋಶದಿಂದ ಧಾವಿಸಿ ಬಂದಿದ್ದಾನೆ.
ಆದರೆ, ಈ ಹಠಾತ್ ಬೆಳವಣಿಗೆಯಿಂದ ಭೀತಿಗೊಳಗಾಗದ ಆ ಸವಾರ, ಎದುರಾಳಿಯ ಉದ್ರೇಕಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೆ ಅತ್ಯಂತ ಜಾಗರೂಕತೆಯಿಂದ ವರ್ತಿಸಿದ್ದಾರೆ. ತಕ್ಷಣವೇ ತಮ್ಮ ಕಾರಿನ ಬಾಗಿಲುಗಳನ್ನು ಒಳಗಿನಿಂದ ಭದ್ರಪಡಿಸಿಕೊಂಡು, ಮುಂಭಾಗದಲ್ಲಿ ಕಾರನ್ನು ಚಲಾಯಿಸಲು ಸಾಕಷ್ಟು ಜಾಗವನ್ನು ಕಾಯ್ದುಕೊಂಡಿದ್ದಾರೆ. ಎದುರಾಳಿ ಹತ್ತಿರ ಬರುತ್ತಿದ್ದಂತೆ ಸನ್ನಿವೇಶವನ್ನು ಗ್ರಹಿಸಿ, ಸುರಕ್ಷಿತವಾಗಿ ಅಲ್ಲಿಂದ ವಾಹನವನ್ನು ಚಲಾಯಿಸಿಕೊಂಡು ತೆರಳಿದ್ದಾರೆ.
ಈ ಸಂಪೂರ್ಣ ಘಟನೆಯು ಸವಾರನ ವಾಹನದಲ್ಲಿದ್ದ ಕ್ಯಾಮೆರಾದಲ್ಲಿ ದಾಖಲಾಗಿದೆ. ಈ ದೃಶ್ಯಾವಳಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅಭಿಷೇಕ್, ಅದರಲ್ಲಿ ಸ್ಪಷ್ಟವಾಗಿ ಕಾಣಿಸುವ ಕಿಡಿಗೇಡಿ ಚಾಲಕನ ವಾಹನದ ನೋಂದಣಿ ಸಂಖ್ಯೆಯನ್ನು ಉಲ್ಲೇಖಿಸಿ ನೋಯ್ಡಾ ಪೊಲೀಸ್ ಹಾಗೂ ಉತ್ತರ ಪ್ರದೇಶ ಪೊಲೀಸರಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಜೊತೆಗೆ ಚಾಲಕರಿಗೆ ಈ ವೀಡಿಯೋ ಒಂದು ಪಾಠವಾಗಲಿ ಎಂದು ಜನರಿಗೆ ಇದನ್ನು ಹೆಚ್ಚು ಹಂಚಿಕೊಳ್ಳಲು ಕೋರಿದ್ದಾರೆ. ಈ ವೀಡಿಯೋಗೆ ತಕ್ಷಣ ಸ್ಪಂದಿಸಿರುವ ಉತ್ತರ ಪ್ರದೇಶ ತುರ್ತು ಸೇವೆಗಳ ಅಧಿಕೃತ ಖಾತೆಯು, ಅಗತ್ಯ ಮಾಹಿತಿ ಪಡೆದು ಮುಂದಿನ ತನಿಖೆಗೆ ಚಾಲನೆ ನೀಡಿದೆ.
ಈ ಘಟನೆಯು ಪ್ರತಿಯೊಬ್ಬ ವಾಹನ ಸವಾರರಿಗೂ ಮುಖ್ಯವಾದ ಸಂದೇಶವೊಂದನ್ನು ನೀಡುತ್ತದೆ. ರಸ್ತೆಯಲ್ಲಿ ಗಲಾಟೆ ಅಥವಾ ರಂಪಾಟದ ವಾತಾವರಣ ನಿರ್ಮಾಣವಾದಾಗ ಎದುರಾಳಿಯೊಂದಿಗೆ ಚರ್ಚೆಗೆ ಇಳಿಯದೆ, ಕಾರಿನ ಬಾಗಿಲುಗಳನ್ನು ಮುಚ್ಚಿಕೊಂಡು, ಸುರಕ್ಷಿತ ಅಂತರ ಕಾಯ್ದುಕೊಂಡು ತಕ್ಷಣ ಆ ಸ್ಥಳದಿಂದ ಕಾಲ್ತೆಗೆಯುವುದು ಪ್ರಾಣಾಪಾಯವನ್ನು ತಪ್ಪಿಸುತ್ತದೆ. ಪ್ರಚೋದನೆಗೆ ಒಳಗಾಗದೆ ತಾಳ್ಮೆಯಿಂದ ವರ್ತಿಸುವುದೇ ಪ್ರಾಣರಕ್ಷಣೆಗೆ ಅತ್ಯುತ್ತಮ ಮಾರ್ಗ ಎಂಬುದನ್ನು ಈ ವರದಿ ಎತ್ತಿಹಿಡಿದಿದೆ.

