HomeBusinessತಿಂಗಳಿಗೆ 1 ಲಕ್ಷ ಸಂಪಾದಿಸುವ ಅರ್ಬನ್ ಕಂಪನಿ ಬಾರ್ಬರ್ ; ಇಲ್ಲಿದೆ ಕೇಶ ವಿನ್ಯಾಸಕನ ಕಠಿಣ...

ತಿಂಗಳಿಗೆ 1 ಲಕ್ಷ ಸಂಪಾದಿಸುವ ಅರ್ಬನ್ ಕಂಪನಿ ಬಾರ್ಬರ್ ; ಇಲ್ಲಿದೆ ಕೇಶ ವಿನ್ಯಾಸಕನ ಕಠಿಣ ಪರಿಶ್ರಮದ ಕಥೆ !

ಭಾರತದಲ್ಲಿ ಕೆಲಸದ ಅವಕಾಶಗಳು, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಯುವಕರ ಕಠಿಣ ಪರಿಶ್ರಮದ ಕುರಿತು ಅರ್ಬನ್ ಕಂಪನಿ ಆಪ್ ಮೂಲಕ ಮನೆಗೆ ಬಂದು ಸೇವೆ ನೀಡುವ ಕೇಶ ವಿನ್ಯಾಸಕ (ಬಾರ್ಬರ್) ಒಬ್ಬರು ಹಂಚಿಕೊಂಡ ನೈಜ ಅನುಭವಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿದೆ.

ಆಯಾನಿಕ್ ಅಸೆಟ್ ಸಂಸ್ಥೆಯ ಫಂಡ್ ಮ್ಯಾನೇಜರ್ ಹಾಗೂ ಲೇಖಕರಾದ ಹರ್ಷ್ ಗುಪ್ತಾ ಮಧುಸೂದನ್ ಅವರು ಎಕ್ಸ್ ಖಾತೆಯಲ್ಲಿ ಈ ಸಂಭಾಷಣೆಯನ್ನು ಹಂಚಿಕೊಂಡಿದ್ದಾರೆ. ಮುಂಬೈನಲ್ಲಿ ನೆಲೆಸಿರುವ, ಮೂಲತಃ ಉತ್ತರ ಪ್ರದೇಶದ ಅಜಂಘಡ್ ಜಿಲ್ಲೆಯ ಈ ಯುವಕ ಅರ್ಬನ್ ಕಂಪನಿಯಲ್ಲಿ ಸೇವೆ ನೀಡುತ್ತಿದ್ದಾರೆ. ವಾರದಲ್ಲಿ 6 ದಿನ ಬೆಳಿಗ್ಗೆಯಿಂದ ರಾತ್ರಿಯವರೆಗೆ ಶ್ರಮವಹಿಸಿ ಕೆಲಸ ಮಾಡುವ ಈತ, ಪ್ರಯಾಣದ ವೆಚ್ಚಗಳನ್ನು ಹೊರತುಪಡಿಸಿ ತಿಂಗಳಿಗೆ ಸುಮಾರು 1 ಲಕ್ಷ ರೂಪಾಯಿ ನಿವ್ವಳ ಆದಾಯ ಗಳಿಸುತ್ತಿದ್ದಾರೆ. ಪ್ರಸ್ತುತ ತಮಗೆ ಆರಂಭಿಕ ಹಂತದ ಸರ್ಕಾರಿ ಕೆಲಸ ಸಿಕ್ಕರೂ ಸ್ವೀಕರಿಸುವುದಿಲ್ಲ, ಏಕೆಂದರೆ ಈ ವೃತ್ತಿಯಲ್ಲಿ ಅವರಿಗೆ ಸ್ವತಂತ್ರತೆ ಹಾಗೂ ಸೂಕ್ತ ಆದಾಯ ಸಿಗುತ್ತಿದೆ ಎಂದು ಯುವಕ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ತಮ್ಮ ತವರು ರಾಜ್ಯ ಉತ್ತರ ಪ್ರದೇಶದಲ್ಲಿ ಆಗಿರುವ ಬದಲಾವಣೆಗಳ ಕುರಿತು ಮಾತನಾಡಿದ ಆತ, ಈ ಹಿಂದೆ ಹಳ್ಳಿಯಿಂದ ಲಖನೌ ತಲುಪಲು 7 ರಿಂದ 8 ಗಂಟೆ ಬೇಕಾಗುತ್ತಿತ್ತು. ಆದರೆ ಈಗ ಅಷ್ಟೇ ಸಮಯದಲ್ಲಿ ಹೋಗಿ, ಟೀ ಕುಡಿದು ವಾಪಸ್ ಬರಬಹುದು. ರಸ್ತೆಗಳು ಎಷ್ಟೊಂದು ನಯವಾಗಿವೆ ಎಂದರೆ ಕಪ್‌ನಲ್ಲಿರುವ ಟೀ ಕೂಡ ಚೆಲ್ಲುವುದಿಲ್ಲ ಎಂದು ಹೆದ್ದಾರಿಗಳ ಅಭಿವೃದ್ಧಿಯನ್ನು ಹೊಗಳಿದ್ದಾರೆ. ಹಳ್ಳಿಯಲ್ಲಿರುವ ತಮ್ಮ ಕುಟುಂಬಕ್ಕೆ ಸರ್ಕಾರದ ಯೋಜನೆಗಳ ಲಾಭ ಸಿಗುತ್ತಿದೆ ಎಂದು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಷ್ಟೇ ಅಲ್ಲದೆ, ತಮ್ಮ ಆದಾಯದಿಂದ ಮೂಲದಲ್ಲೇ ತೆರಿಗೆ ಕಡಿತವಾಗುತ್ತಿದ್ದು (ಟಿಡಿಎಸ್), ಪ್ರತಿ ವರ್ಷ ನಿಯಮಿತವಾಗಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುತ್ತಿರುವುದಾಗಿ ಹಾಗೂ ಕೆಲವೊಮ್ಮೆ ಹಣ ವಾಪಸ್ ಬರುವುದಾಗಿಯೂ ಅವರು ತಿಳಿಸಿದ್ದಾರೆ. ಇವರ ಪತ್ನಿ ಕೂಡ ಈ ಹಿಂದೆ ಉದ್ಯೋಗದಲ್ಲಿದ್ದು, ಪ್ರಸ್ತುತ ಸಣ್ಣ ಮಗುವನ್ನು ನೋಡಿಕೊಳ್ಳಲು ವಿರಾಮ ತಳೆದಿದ್ದಾರೆ. ಮಗನನ್ನು ಉತ್ತಮ ಖಾಸಗಿ ಪ್ರೀ-ಸ್ಕೂಲ್‌ಗೆ ಸೇರಿಸಿ ಓದಿಸುತ್ತಿದ್ದಾರೆ.

ಹರ್ಷ್ ಗುಪ್ತಾ ಅವರು ತಮ್ಮ ಪೋಸ್ಟ್ ಕೊನೆಯಲ್ಲಿ, “ನಮ್ಮ ದೇಶ ಸೋತಿದೆ ಎಂದು ಸದಾ ನಕಾರಾತ್ಮಕವಾಗಿ ಬರೆದುಕೊಳ್ಳುವ ಜಾಲತಾಣಗಳಲ್ಲಿ ಅಕೌಂಟ್ ತೆರೆದು ನೈಜ ಅಭಿಪ್ರಾಯ ತಿಳಿದುಕೊಳ್ಳಿ ಎಂದು ಅವರಿಗೆ ಹೇಳಬೇಕೆನಿಸಿತು, ಆದರೆ ಅವರಲ್ಲಿದ್ದ ಸಕಾರಾತ್ಮಕತೆಯನ್ನು ಹಾಳುಮಾಡಲು ಮನಸ್ಸಾಗಲಿಲ್ಲ” ಎಂದು ವ್ಯಂಗ್ಯವಾಗಿ ಬರೆದುಕೊಂಡಿದ್ದಾರೆ. ಈ ಪೋಸ್ಟ್ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕಷ್ಟಪಟ್ಟು ದುಡಿಯುವವರಿಗೆ ಭಾರತದಲ್ಲಿ ಅವಕಾಶಗಳಿಗೇನೂ ಕೊರತೆಯಿಲ್ಲ ಎಂದು ಅನೇಕ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular