ಮಾನವನ ದೇಹದ ಪ್ರತಿಯೊಂದು ಭಾಗಕ್ಕೂ ರಕ್ತನಾಳಗಳ ಮೂಲಕ ರಕ್ತ ಹರಿಯುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಒಬ್ಬ ಆರೋಗ್ಯವಂತ ವ್ಯಕ್ತಿಯ ದೇಹದಲ್ಲಿ ಸುಮಾರು ನಾಲ್ಕರಿಂದ ಆರು ಲೀಟರ್ ರಕ್ತವಿರುತ್ತದೆ. ಇದು ದೇಹದ ಒಟ್ಟು ತೂಕದ ಶೇಕಡಾ ಎಂಟರಷ್ಟಿರುತ್ತದೆ. ಹೃದಯವು ನಿರಂತರವಾಗಿ ಪಂಪ್ ಮಾಡುವ ಮೂಲಕ ದೇಹದ ಮೂಲೆ ಮೂಲೆಗೂ ಆಮ್ಲಜನಕ ಮತ್ತು ಪೋಷಕಾಂಶಗಳನ್ನು ತಲುಪಿಸುತ್ತದೆ. ದೇಹದ ಯಾವುದೇ ಭಾಗದಲ್ಲಿ ಸಣ್ಣ ಗಾಯವಾದರೂ ರಕ್ತ ಬರುವುದಕ್ಕೆ ಇದೇ ಮುಖ್ಯ ಕಾರಣ.
ಆದರೆ ನಮ್ಮ ದೇಹದಲ್ಲಿ ಕೆಲವೊಂದು ಭಾಗಗಳಿಗೆ ನೇರ ರಕ್ತ ಸರಬರಾಜು ಇರುವುದಿಲ್ಲ. ಸಾಮಾನ್ಯವಾಗಿ ಕೂದಲು ಮತ್ತು ಉಗುರುಗಳಲ್ಲಿ ರಕ್ತ ಸಂಚಾರ ಇರುವುದಿಲ್ಲ ಎಂಬುದು ತಿಳಿದ ವಿಷಯ. ಆದರೆ ಇವುಗಳ ಜೊತೆಗೆ ಮಾನವನ ದೇಹದ ಅತ್ಯಂತ ಪ್ರಮುಖ ಜೀವಂತ ಅಂಗವೊಂದು ರಕ್ತದ ಸಂಪರ್ಕವೇ ಇಲ್ಲದೆ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತದೆ. ಆ ಅಂಗ ಯಾವುದೆಂದರೆ ಕಣ್ಣಿನ ಮುಂಭಾಗದಲ್ಲಿರುವ ಕಾರ್ನಿಯಾ.
ಕಣ್ಣಿನ ದೃಷ್ಟಿಗೆ ಅತ್ಯಂತ ಪ್ರಮುಖವಾಗಿರುವ ಈ ಕಾರ್ನಿಯಾ ಪಾರದರ್ಶಕವಾದ ಪದರವಾಗಿದೆ. ದೃಷ್ಟಿ ಸ್ಪಷ್ಟವಾಗಿರಬೇಕೆಂಬ ಕಾರಣಕ್ಕಾಗಿ ಪ್ರಕೃತಿಯು ಈ ಭಾಗದಲ್ಲಿ ಯಾವುದೇ ರಕ್ತನಾಳಗಳನ್ನು ನಿರ್ಮಿಸಿಲ್ಲ. ರಕ್ತನಾಳಗಳಿದ್ದರೆ ದೃಷ್ಟಿಗೆ ಅಡಚಣೆಯಾಗುವ ಸಾಧ್ಯತೆ ಇರುತ್ತದೆ. ರಕ್ತನಾಳಗಳಿಲ್ಲದಿದ್ದರೂ ಇದು ಸಂಪೂರ್ಣವಾಗಿ ಜೀವಂತ ಅಂಗಾಂಶವಾಗಿದೆ. ರಕ್ತವು ತರಬೇಕಾದ ಆಮ್ಲಜನಕವನ್ನು ಈ ಕಾರ್ನಿಯಾ ನೇರವಾಗಿ ಹೊರಗಿನ ಗಾಳಿಯಿಂದ ಹೀರಿಕೊಳ್ಳುತ್ತದೆ. ಜೊತೆಗೆ ಕಣ್ಣಿನಲ್ಲಿ ಸದಾ ಉತ್ಪತ್ತಿಯಾಗುವ ಕಣ್ಣೀರು ಮತ್ತು ಇತರ ದ್ರವಗಳಿಂದಲೂ ಇದು ಆಮ್ಲಜನಕವನ್ನು ಪಡೆದುಕೊಂಡು ನಿರಂತರವಾಗಿ ಕಾರ್ಯನಿರ್ವಹಿಸುತ್ತದೆ.
ಇನ್ನು ಕೂದಲು ಮತ್ತು ಉಗುರುಗಳ ವಿಷಯಕ್ಕೆ ಬಂದರೆ, ನಮಗೆ ಕಣ್ಣಿಗೆ ಕಾಣಿಸುವ ಕೂದಲಿನ ಮೇಲ್ಭಾಗ ಮತ್ತು ಉಗುರಿನ ಪದರಗಳು ಜೀವಕೋಶಗಳಿಲ್ಲದ ಪ್ರೋಟೀನ್‌ನಿಂದ ಕೂಡಿರುತ್ತವೆ. ಆದ್ದರಿಂದ ಇವುಗಳಲ್ಲಿ ರಕ್ತನಾಳಗಳಿರುವುದಿಲ್ಲ. ಆದರೆ ಚರ್ಮದ ಒಳಗಿರುವ ಕೂದಲಿನ ಬೇರುಗಳು ಮತ್ತು ಉಗುರಿನ ಕೆಳಗಿರುವ ಚರ್ಮದ ಭಾಗದಲ್ಲಿ ರಕ್ತ ಸಂಚಾರ ಅತ್ಯಂತ ಚುರುಕಾಗಿರುತ್ತದೆ. ಇದೇ ಕಾರಣಕ್ಕೆ ಮೇಲ್ಭಾಗದ ಕೂದಲು ಅಥವಾ ಉಗುರು ಕತ್ತರಿಸಿದಾಗ ನೋವಾಗುವುದಿಲ್ಲ ಮತ್ತು ರಕ್ತ ಬರುವುದಿಲ್ಲ, ಆದರೆ ಬೇರುಗಳಿಗೆ ಗಾಯವಾದರೆ ತೀವ್ರ ನೋವು ಹಾಗೂ ರಕ್ತಸ್ರಾವ ಉಂಟಾಗುತ್ತದೆ.

