HomeCrimeಪ್ರೀತಿ ಮುರಿದುಬಿದ್ದಿದ್ದಕ್ಕೆ ಮಾಜಿ ಪ್ರೇಮಿಯ ಹತ್ಯೆ ; 9 ಮಂದಿಗೆ ಸುಪಾರಿ ಕೊಟ್ಟ ಅಪ್ರಾಪ್ತೆ !

ಪ್ರೀತಿ ಮುರಿದುಬಿದ್ದಿದ್ದಕ್ಕೆ ಮಾಜಿ ಪ್ರೇಮಿಯ ಹತ್ಯೆ ; 9 ಮಂದಿಗೆ ಸುಪಾರಿ ಕೊಟ್ಟ ಅಪ್ರಾಪ್ತೆ !

ಚಿಕ್ಕ ವಯಸ್ಸಿನ ಪ್ರೇಮ ಸಂಬಂಧವೊಂದು ತೀವ್ರ ಮನಸ್ತಾಪಕ್ಕೆ ತಿರುಗಿ, ಕೊನೆಯಲ್ಲಿ ಯುವಕನ ಭೀಕರ ಹತ್ಯೆಯಲ್ಲಿ ಅಂತ್ಯವಾಗಿರುವ ಆಘಾತಕಾರಿ ಘಟನೆ ಪಂಜಾಬ್‌ನ ಗುರುದಾಸಪುರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಪ್ರೀತಿಸಿದ ಹುಡುಗ ತನಗಾಗಿಯೇ ಇರಬೇಕು ಅಥವಾ ಅವನಿಗೆ ತಕ್ಕ ಶಾಸ್ತಿ ಮಾಡಬೇಕು ಎಂಬ ದ್ವೇಷದ ಭಾವನೆಯಿಂದ ಅಪ್ರಾಪ್ತ ಹುಡುಗಿಯೊಬ್ಬಳು ಹೆಣೆದ ಸಂಚು, ಇಂದು ಒಬ್ಬ ಯುವಕನ ಪ್ರಾಣವನ್ನೇ ಬಲಿ ಪಡೆದಿದೆ.

ಮೃತನನ್ನು ತೆಜಿಂದರ್ ಸಿಂಗ್ (19) ಎಂದು ಗುರುತಿಸಲಾಗಿದೆ. ಈತ ತನ್ನ ಪೋಷಕರಿಗೆ ಏಕೈಕ ಮಗನಾಗಿದ್ದನು. ಮೃತ ಯುವಕ ಹಾಗೂ 16 ವರ್ಷದ ಅಪ್ರಾಪ್ತ ಹುಡುಗಿ ಕಳೆದ 3 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಇಬ್ಬರ ನಡುವೆ ಸಣ್ಣಪುಟ್ಟ ವಿಚಾರಗಳಿಗೆ ತೀವ್ರ ಭಿನ್ನಾಭಿಪ್ರಾಯಗಳು ಮೂಡಿದ್ದವು. ಹುಡುಗಿಯು ಬೇರೊಬ್ಬ ಯುವಕನ ಜೊತೆ ಸಂಪರ್ಕದಲ್ಲಿದ್ದಾಳೆ ಎಂಬ ವಿಷಯ ತಿಳಿದುಬಂದ ನಂತರ ತೆಜಿಂದರ್ ಈ ಸಂಬಂಧವನ್ನು ಕಡಿದುಕೊಳ್ಳಲು ನಿರ್ಧರಿಸಿದ್ದನು. ಸುಮಾರು 3 ತಿಂಗಳ ಹಿಂದೆ ಆತ ಆಕೆಯಿಂದ ದೂರವಾಗಿದ್ದನು.

ತನ್ನನ್ನು ದೂರ ಮಾಡಿದ್ದಕ್ಕೆ ತೀವ್ರ ಕೋಪಗೊಂಡ ಹುಡುಗಿ, ಆತನಿಗೆ ತಕ್ಕ ಪಾಠ ಕಲಿಸಲೇಬೇಕೆಂದು ನಿರ್ಧರಿಸಿ ಗ್ರಾಮದ 9 ಮಂದಿ ಯುವಕರನ್ನು ಸಂಪರ್ಕಿಸಿದ್ದಳು. ಆದರೆ, ಆ ಯುವಕರು ತೆಜಿಂದರ್ ಸಿಂಗ್ ಮೇಲೆ ತೀವ್ರವಾಗಿ ಹಲ್ಲೆ ನಡೆಸಿ ಆತನನ್ನು ಹತ್ಯೆ ಮಾಡಿದ್ದಾರೆ. ಘಟನೆಯ ನಂತರ ತೆಜಿಂದರ್ ಸಿಂಗ್ ಚಿಕ್ಕಪ್ಪನಿಗೆ ಕರೆ ಮಾಡಿದ ಹುಡುಗಿ, ಆತನ ಆರೋಗ್ಯ ಪರಿಸ್ಥಿತಿ ಹೇಗಿದೆ ಎಂದು ವಿಚಾರಿಸಿ, ತನ್ನ ಹೆಸರನ್ನು ಹೇಳಿ ದೂರವಾಣಿ ಸಂಪರ್ಕವನ್ನು ಕಡಿತಗೊಳಿಸಿದ್ದಳು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಘಟನೆಗೆ ಸಂಬಂಧಿಸಿದಂತೆ ಮೃತ ಯುವಕನ ತಂದೆ ಕುಲದೀಪ್ ಸಿಂಗ್ ಅವರು ಕಾಹ್ನುವಾನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ, ಸ್ಥಳೀಯ ಪೊಲೀಸರು ಪ್ರಕರಣದ ತನಿಖೆಯಲ್ಲಿ ವಿಳಂಬ ಧೋರಣೆ ತೋರುತ್ತಿದ್ದಾರೆ ಎಂದು ಕುಟುಂಬಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಘಟನೆಯ ತೀವ್ರತೆಯನ್ನು ಮನಗಂಡ ಹಿರಿಯ ಪೊಲೀಸ್ ಅಧಿಕಾರಿ ಆದಿತ್ಯ ಅವರು, ಪ್ರಕರಣದ ಸಮಗ್ರ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಿದ್ದಾರೆ.

ಸದ್ಯ ಪೊಲೀಸರು 16 ವರ್ಷದ ಹುಡುಗಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆರಂಭಿಕ ವಿಚಾರಣೆಯ ವೇಳೆ ಆಕೆ, “ನಾನು ಆತನಿಗೆ ಕೇವಲ ಪಾಠ ಕಲಿಸಲು ಮತ್ತು ಗಾಯಗೊಳಿಸಲು ಮಾತ್ರ ಹೇಳಿದ್ದೆ, ಜೀವ ತೆೆಗೆಯುವಂತೆ ಹೇಳಿರಲಿಲ್ಲ” ಎಂದು ಹೇಳಿಕೆ ನೀಡಿದ್ದಾಳೆ. ಈ ಕೊಲೆಯು ಹಣ ನೀಡಿ ಮಾಡಿಸಿದ ಸುಪಾರಿ ಹತ್ಯೆಯೇ ಎಂಬ ಅನುಮಾನ ಸ್ಥಳೀಯರಲ್ಲಿ ವ್ಯಕ್ತವಾಗಿದ್ದು, ಮರಣೋತ್ತರ ಪರೀಕ್ಷೆಯ ವರದಿ ಹಾಗೂ ವಿಶೇಷ ತನಿಖಾ ತಂಡದ ವರದಿ ಬಂದ ನಂತರವೇ ಪೂರ್ಣ ಸತ್ಯ ಹೊರಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular