HomeKarnatakaನಕಲಿ ಔಷಧ ದಂಧೆ: ಎಸ್‌ಐಟಿ ತನಿಖೆಯಲ್ಲಿ ಆಘಾತಕಾರಿ ಮಾಹಿತಿ ಬಹಿರಂಗ: ಒಂದೂವರೆ ವರ್ಷದಲ್ಲಿ 15 ಸಾವಿರ...

ನಕಲಿ ಔಷಧ ದಂಧೆ: ಎಸ್‌ಐಟಿ ತನಿಖೆಯಲ್ಲಿ ಆಘಾತಕಾರಿ ಮಾಹಿತಿ ಬಹಿರಂಗ: ಒಂದೂವರೆ ವರ್ಷದಲ್ಲಿ 15 ಸಾವಿರ ನಕಲಿ ಆ್ಯಂಟಿಬಯೋಟಿಕ್ ವಯಲ್ ವಿತರಣೆ

ಬೆಂಗಳೂರು: ರಾಜ್ಯದಲ್ಲಿ ಪತ್ತೆಯಾಗಿರುವ ನಕಲಿ ಔಷಧ ದಂಧೆ ಜಾಲದ ಬಗ್ಗೆ ಎಸ್‌ಐಟಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದು, ತನಿಖೆಯಲ್ಲಿ ಆಘಾತಕಾರಿ ಮಾಹಿತಿಗಳು ಬಯಲಾಗಿವೆ.

ನಕಲಿ ಔಷಧ ಜಾಲ ಕಳೆದ ಒಂದೂವರೆ ವರ್ಷದಲ್ಲಿ ಎರಡು ನಕಲಿ ಆ್ಯಂಟಿಬಯೋಟಿಕ್‌ಗಳ ಸುಮಾರು 15 ಸಾವಿರ ವಯಲ್‌ಗಳನ್ನು ವಿತರಿಸಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜವಿಸೆಫ್ಟಾ ಮತ್ತು ಎಮ್ಬ್ಲಾವಿಯೋ ಹೆಸರಿನ ಈ ಔಷಧಿಗಳ ಮಾರಾಟ ಹಕ್ಕು ಫೈಜರ್ ಸಂಸ್ಥೆಯದ್ದಾಗಿದೆ. ಆರೋಪಿಗಳು 2025ರ ಏಪ್ರಿಲ್‌ನಿಂದ ಈ ಜಾಲವನ್ನು ನಡೆಸುತ್ತಿದ್ದರು. ಅಸಲಿ ಔಷಧದ ಬದಲು ಜೆನೆರಿಕ್ ಔಷಧವನ್ನು ವಯಲ್‌ಗಳಲ್ಲಿ ತುಂಬಿ, ಅವು ಅಸಲಿ ಔಷಧಗಳಂತೆ ಕಾಣುವಂತೆ ಫೈಜರ್ ಹೆಸರಿನ ಲೇಬಲ್‌ಗಳನ್ನು ಬಳಸುತ್ತಿದ್ದರು ಎಂದು ಎಸ್‌ಐಟಿ ಅಧಿಕಾರಿಗಳು ತಿಳಿಸಿದ್ದಾರೆ. ಟರ್ಕಿಯಲ್ಲಿರುವ ಫೈಜರ್‌ನ ಉತ್ಪಾದನಾ ಘಟಕದಿಂದ ಮೂಲ ಕಂಪನಿಯ ಲೇಬಲ್‌ಗಳನ್ನು ಆರೋಪಿಗಳು ಪಡೆದುಕೊಳ್ಳುತ್ತಿದ್ದರು.

ನಕಲಿ ಔಷಧಿಗಳಲ್ಲಿರುವ ರಾಸಾಯನಿಕ ಅಂಶಗಳನ್ನು ಪತ್ತೆಹಚ್ಚಲು ಪ್ರಯೋಗಾಲಯದ ವರದಿಗಾಗಿ ಕಾಯಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಯಲ್‌ಗಳ ವಿತರಣಾ ಜಾಲವನ್ನೂ ಪತ್ತೆಹಚ್ಚಲಾಗಿದೆ ಎಂದು ಅವರು ಹೇಳಿದ್ದಾರೆ.

ಆರೋಪಿಗಳು ಖರೀದಿಸಿದ ಔಷಧ ಪ್ರಮಾಣ, ಮಾರಾಟ ಮಾಡಿದ ಪ್ರಮಾಣ, ಪಡೆದ ಹಾಗೂ ವಿತರಿಸಿದ ದಾಸ್ತಾನು ಸೇರಿದಂತೆ ಪ್ರತಿಯೊಂದು ಹಂತದ ಮಾಹಿತಿಯನ್ನು ತಾಳೆ ಹಾಕಿ ಪರಿಶೀಲಿಸಲಾಗುತ್ತಿದೆ. ಆರೋಪಿಗಳು ಔಷಧಿಗಳನ್ನು ಕೆಲವು ಸಂಸ್ಥೆಗಳಿಗೆ ಮಾರಾಟ ಮಾಡಿದ್ದು, ಆ ಸಂಸ್ಥೆಗಳು ಮುಂದೆ ಯಾರಿಗೆ ಪೂರೈಸಿವೆ ಎಂಬುದನ್ನೂ ಎಸ್‌ಐಟಿ ತನಿಖೆ ನಡೆಸುತ್ತಿದೆ. ವಿತರಣಾ ಜಾಲದ ಪ್ರತಿಯೊಂದು ಹಂತವನ್ನು ಪೊಲೀಸರು ಹಾಗೂ ಆರೋಗ್ಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಸದ್ಯದ ತನಿಖೆಯಲ್ಲಿ ಕ್ಯಾನ್ಸರ್ ಔಷಧಿಗಳ ನಕಲಿ ತಯಾರಿಕೆಗೆ ಸಂಬಂಧಿಸಿದ ಯಾವುದೇ ಸಾಕ್ಷ್ಯ ಪತ್ತೆಯಾಗಿಲ್ಲ. ಆದರೂ ಈ ಕುರಿತು ತನಿಖೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜವಿಸೆಫ್ಟಾ ಮತ್ತು ಎಮ್ಬ್ಲಾವಿಯೋ ಗಂಭೀರ ಬ್ಯಾಕ್ಟೀರಿಯಾ ಸೋಂಕುಗಳ ಚಿಕಿತ್ಸೆಗೆ ಬಳಸುವ ಪ್ರಿಸ್ಕ್ರಿಪ್ಷನ್ ಆ್ಯಂಟಿಬಯೋಟಿಕ್‌ಗಳಾಗಿವೆ. ಜವಿಸೆಫ್ಟಾ ಒಂದು ವಯಲ್‌ಗೆ ಸುಮಾರು ₹5,500ರಿಂದ ₹6,000 ಹಾಗೂ ಎಮ್ಬ್ಲಾವಿಯೋ ಒಂದು ವಯಲ್‌ಗೆ ₹6,000ರಿಂದ ₹6,500ರವರೆಗೆ ಬೆಲೆ ಇದೆ. ಆರೋಪಿಗಳು ಕಡಿಮೆ ವೆಚ್ಚದಲ್ಲಿ ನಕಲಿ ಔಷಧ ತಯಾರಿಕೆಗೆ ಬೇಕಾದ ವಸ್ತುಗಳನ್ನು ಖರೀದಿಸಿ, ಅವುಗಳನ್ನು ಬ್ರ್ಯಾಂಡೆಡ್ ಔಷಧಗಳಂತೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು. ಕಳೆದ ಕೆಲವು ತಿಂಗಳಲ್ಲಿ ₹10 ಕೋಟಿಗೂ ಅಧಿಕ ಲಾಭ ಗಳಿಸಿರಬಹುದು ಎಂಬ ಶಂಕೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಹೈದರಾಬಾದ್, ಚೆನ್ನೈ, ಉತ್ತರಾಖಂಡ್ ಸೇರಿದಂತೆ ವಿವಿಧ ರಾಜ್ಯಗಳಿಂದ ನಕಲಿ ಔಷಧ ತಯಾರಿಕೆಗೆ ಬೇಕಾದ ವಸ್ತುಗಳನ್ನು ತರಲಾಗುತ್ತಿತ್ತು ಎನ್ನಲಾಗಿದೆ. ಬಳಿಕ ಅವುಗಳನ್ನು ವಯಲ್‌ಗಳಲ್ಲಿ ತುಂಬಿ, ಫೈಜರ್ ಉತ್ಪನ್ನಗಳೆಂದು ಲೇಬಲ್ ಮಾಡಿ ಡಿಎಂ ಫಾರ್ಮಾ ಮೂಲಕ ವಿತರಿಸಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡಿಎಂ ಫಾರ್ಮಾ ಸಂಸ್ಥೆ ಚೆನ್ನೈನ ಬಾಲಸುಬ್ರಮಣಿ ಹಾಗೂ ಶಿವಮೊಗ್ಗ ಮೂಲದ, ಪ್ರಮುಖ ಆರೋಪಿ ಆರ್. ಪ್ರಶಾಂತ್ ಬಾಬು ಪತ್ನಿ ಪ್ರಿಯಾಂಕಾ ಹೆಸರಿನಲ್ಲಿ ನೋಂದಣಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಔಷಧಿಗಳನ್ನು ವೀರೇಶ್ ಕುಮಾರ್ ಜೈನ್ ಮಾಲೀಕತ್ವದ ಕೃಪಾ ಫಾರ್ಮಾಗೆ ಪೂರೈಸಲಾಗುತ್ತಿತ್ತು. ಬಳಿಕ ಕೃಪಾ ಫಾರ್ಮಾ ಇತರೆ ಔಷಧ ಕಂಪನಿಗಳು ಮತ್ತು ಆಸ್ಪತ್ರೆಗಳಿಗೆ ಅಸಲಿ ಔಷಧಿಗಳ ಜತೆಗೆ ನಕಲಿ ಔಷಧಿಗಳನ್ನೂ ಪೂರೈಸುತ್ತಿತ್ತು. ನಕಲಿ ಔಷಧ ತಯಾರಿಕೆಗಾಗಿ ಪ್ರಶಾಂತ್ ಬಿದಡಿ ಸಮೀಪದ ಫಾರ್ಮ್‌ಹೌಸ್‌ವೊಂದನ್ನು ಬಾಡಿಗೆಗೆ ಪಡೆದಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಏಳು ಮಂದಿಯನ್ನು ಎಸ್‌ಐಟಿ ಬಂಧಿಸಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular