ದಾವಣಗೆರೆ: ಚಿತ್ರದುರ್ಗ -ಬೆಂಗಳೂರು ಹೊಸ ರೈಲ್ವೆ ಮಾರ್ಗದ ಕಾಮಗಾರಿ ಹಿನ್ನೆಲೆಯಲ್ಲಿ ಪ್ರಮುಖ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ರೈಲ್ವೆ ಮಾರ್ಗ ಕಾಮಗಾರಿ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಬೆಳಗಾವಿ ಕಡೆಗೆ ತೆರಳುತ್ತಿದ್ದ ವಂದೇ ಭಾರತ್ ಎಕ್ಸ್ಪ್ರೆಸ್ ಸೇರಿದಂತೆ ನಾಲ್ಕು ರೈಲುಗಳು ಮಾರ್ಗಮಧ್ಯೆಯೇ ನಿಂತಿದ್ದು, ಪ್ರಯಾಣಿಕರು ಪರದಾಟ ನಡೆಸಿದ್ದಾರೆ. ಮಂಗಳವಾರ ಸಂಜೆ 5:30ರ ಸುಮಾರಿಗೆ ದಾವಣಗೆರೆ ತಾಲೂಕಿನ ಮಾಯಕೊಂಡ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ವಂದೇ ಭಾರತ್ ರೈಲು, ಅಲ್ಲಿಯೇ ನಾಲ್ಕು ಗಂಟೆಗಳ ಕಾಲ ನಿಂತಿದೆ.
ವಂದೇ ಭಾರತ್ ಜೊತೆಗೆ ಬೆಂಗಳೂರು ಕಡೆಯಿಂದ ಬರುತ್ತಿದ್ದ ಇತರ ಮೂರು ರೈಲುಗಳೂ ಕೊಡಗನೂರು, ಸಾಸಲು ಮತ್ತು ಶಿವನಿಯಲ್ಲಿ ನಿಲುಗಡೆಯಾಗಿತ್ತು. ಹೀಗೆ ಮಾಅರ್ಗ ಮಧ್ಯೆಯೇ ನಾಲ್ಕು ರೈಲುಗಳು ನಿಂತಿದ್ದ ಪರಿಣಾಮ ಪ್ರಯಾಣಿಕರಿಗೆ ತೀವ್ರ ಅನಾನುಕೂಲವುಂಟಾಗಿ ಸಂಕಷ್ಟ ಪಡುವಂತಾಯಿತು.
ರೈಲು ಸಂಚಾರ ಯಾವಾಗ ಪುನರಾರಂಭಗೊಳ್ಳಲಿದೆ ಅಥವಾ ರೈಲ್ವೆ ಮಾರ್ಗ (ಲೈನ್) ಯಾವಾಗ ಮುಕ್ತವಾಗಲಿದೆ ಎಂಬುದರ ಬಗ್ಗೆ ರೈಲ್ವೆ ಅಧಿಕಾರಿಗಳು ಯಾವುದೇ ಸ್ಪಷ್ಟ ಮಾಹಿತಿ ನೀಡಿರಲಿಲ್ಲ. ಇದರಿಂದಾಗಿ ರೈಲಿನಲ್ಲಿದ್ದ ಪ್ರಯಾಣಿಕರು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಮಾಯಕೊಂಡದಲ್ಲಿ ನಿಂತಿದ್ದ ವಂದೇ ಭಾರತ್ ಎಕ್ಸ್ಪ್ರೆಸ್ನಲ್ಲಿ ಪ್ರಯಾಣಿಕರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ರೈಲಿನ ಒಳಗಡೆ ಊಟದ ವ್ಯವಸ್ಥೆ ಇದ್ದ ಕಾರಣ ಪ್ರಯಾಣಿಕರಿಗೆ ಸಮಸ್ಯೆಯಾಗಲಿಲ್ಲ. ಆದರೆ, ಗ್ರಾಮೀಣ ಭಾಗದ ಸಣ್ಣ ನಿಲ್ದಾಣಗಳಾದ ಕೊಡಗನೂರು, ಸಾಸಲು ಮತ್ತು ಶಿವನಿಯಲ್ಲಿ ನಿಂತಿರುವ ಉಳಿದ ಮೂರು ರೈಲುಗಳ ಪ್ರಯಾಣಿಕರಿಗೆ ಊಟ, ಕುಡಿಯುವ ನೀರು, ಆಹಾರದ ವ್ಯವಸ್ಥೆ ಇರಲಿಲ್ಲ. ಇದರಿಂದಾಗಿ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದರು.
ಅಧಿಕಾರಿಗಳು ಯಾವುದೇ ಸ್ಪಷ್ಟ ಮಾಹಿತಿ ನೀಡಿರಲಿಲ್ಲ. ಇದರಿಂದ ಬೇಸತ್ತ ಹತ್ತಿರದ ಊರುಗಳ ಪ್ರಯಾಣಿಕರು ರೈಲಿನಿಂದ ಕೆಳಗಿಳಿದು ರಸ್ತೆ ಮಾರ್ಗದ ಮೂಲಕ ಬಸ್ ಹಿಡಿದು ತೆರಳಿದರು. ಕೆಲವೆಡೆ ಸೂಕ್ತ ಬಸ್ ವ್ಯವಸ್ಥೆಯೂ ಇಲ್ಲದೇ ರೈಲಿನಲ್ಲಿಯೇ ಕೂರಬೇಕಾದ ಸ್ಥಿತಿ. ಇಷ್ಟಾದರೂ ಅಧಿಕಾರಿಗಳು ಸ್ಪಷ್ಟ ಮಾಹಿತಿ ನೀಡುತ್ತಿರಲಿಲ್ಲ. ನಾಲ್ಕು ಗಂಟೆ ಬಳಿಕ ರೈಲು ಪ್ರಯಾಣ ಮುಂದುವರೆಸಿತು.
ಸಂಚಾರಿ ನಿಯಮ ಉಲ್ಲಂಘನೆ: ಫೈನ್ ಕಟ್ಟದೇ ತಪ್ಪಿಸಿಕೊಳ್ಳುತ್ತಿದೀರಾ? ಕಠಿಣ ಕ್ರಮಕ್ಕೆ ಮುಂದಾಗಿದೆ ಸರ್ಕಾರ
ಬೆಂಗಳೂರು: ರಾಜ್ಯ ಸರ್ಕಾರ ಶೇ 50ರಷ್ಟು ರಿಯಾಯಿತಿ ನೀಡಿದರೂ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡ ಪಾವತಿ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಪಾವತಿ ಮಾಡದೇ ತಪ್ಪಿಸಿಕೊಂಡು ಓಡಾಡುತ್ತಿದ್ದರೆ ಇನ್ಮುಂದೆ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ.
2019ರಿಂದ 2026ರ ಆಗಸ್ಟ್ವರೆಗೆ ರಾಜ್ಯದಲ್ಲಿ ದಾಖಲಾಗಿರುವ 8.16 ಕೋಟಿ ಸಂಚಾರ ಉಲ್ಲಂಘನೆ ಪ್ರಕರಣಗಳ ಪೈಕಿ 5.53 ಕೋಟಿ ಪ್ರಕರಣಗಳು ಇನ್ನೂ ಇತ್ಯರ್ಥವಾಗಿಲ್ಲ. ಈ ಪ್ರಕರಣಗಳ ದಂಡ ಮೊತ್ತ ಬರೋಬ್ಬರಿ 3,006.70 ಕೋಟಿ ಬಾಕಿಯಿದೆ ಎಂದು ವರದಿಯಾಗಿದೆ.
ರಾಜ್ಯದ ಒಟ್ಟು ಬಾಕಿ ಪ್ರಕರಣಗಳಲ್ಲಿ ಬೆಂಗಳೂರಿನ ಪಾಲು ಅತಿ ಹೆಚ್ಚು. ನಗರದಲ್ಲಿ ದಾಖಲಾಗಿರುವ 5.85 ಕೋಟಿ ಸಂಚಾರ ಉಲ್ಲಂಘನೆ ಪ್ರಕರಣಗಳ ಪೈಕಿ 3.72 ಕೋಟಿಗೂ ಅಧಿಕ ಪ್ರಕರಣಗಳು ಬಾಕಿ ಉಳಿದಿವೆ. ಇದರಿಂದ ಬೆಂಗಳೂರಿನಲ್ಲಿ ವಸೂಲಾಗದೆ ಉಳಿದಿರುವ ದಂಡದ ಮೊತ್ತ 2,048.56 ಕೋಟಿ ಎಂದು ತಿಳಿದುಬಂದಿದೆ. ಬಾಕಿ ಇರುವ ಸಂಚಾರ ದಂಡದ ವಿಚಾರವಾಗಿ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಗಳನ್ನು ಇತ್ತೀಚೆಗೆ ತರಾಟೆಗೆ ತೆಗೆದುಕೊಂಡಿತ್ತು. ಬಾಕಿ ಇರುವ ಇ-ಚಲನ್ಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದ ಕೋರ್ಟ್, ಬಾಕಿ ದಂಡ ಹೊಂದಿರುವ ವಾಹನಗಳನ್ನು ವಶಕ್ಕೆ ಪಡೆಯುವುದು ಹಾಗೂ ಆನ್ಲೈನ್ ಸಾರಿಗೆ ಸಂಬಂಧಿತ ಸೇವೆಗಳನ್ನು ಸ್ಥಗಿತಗೊಳಿಸುವಂತಹ ಕ್ರಮಗಳ ಬಗ್ಗೆಯೂ ನಿರ್ದೇಶನ ನೀಡಿದೆ.
ಈ ಹಿನ್ನೆಲೆಯಲ್ಲಿ ಸಂಚಾರ ದಂಡ ಪಾವತಿಯನ್ನು ಕಡ್ಡಾಯಗೊಳಿಸಲು ಹಲವು ಕ್ರಮಗಳನ್ನು ಕೈಗೊಳ್ಳಲು ಇಲಾಖೆ ಮುಂದಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕರು ಹಾಗೂ ಪೊಲೀಸ್ ಮಹಾನಿರೀಕ್ಷಕ ಎಂ.ಎ. ಸಲೀಂ ತಿಳಿಸಿದ್ದಾರೆ. ವಾಹನದ ಫಿಟ್ನೆಸ್ ಸರ್ಟಿಫಿಕೇಟ್ (FC) ಪಡೆಯಲು ಬಾಕಿ ಇರುವ ಸಂಚಾರ ದಂಡ ಪಾವತಿಯನ್ನು ಕಡ್ಡಾಯಗೊಳಿಸುವ ಬಗ್ಗೆ ಚಿಂತನೆ ನಡೆದಿದೆ. ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿರುವ ವಾಹನಗಳಿಗೆ ವಿಮೆ ನವೀಕರಣಕ್ಕೆ ಅವಕಾಶ ನೀಡದಂತೆ ಕೆಲವು ಕಾಯ್ದೆಗಳಿಗೆ ತಿದ್ದುಪಡಿ ತರಲು ಕೂಡ ಇಲಾಖೆ ಪ್ರಯತ್ನಿಸುತ್ತಿದೆ.
ಸಂಚಾರ ದಂಡ ಪಾವತಿಗೆ ಜನರನ್ನು ಉತ್ತೇಜಿಸಲು ವಿವಿಧ ಕ್ರಮಗಳನ್ನು ಜಾರಿಗೆ ತರಲಾಗುತ್ತಿದೆ. ಸಂಚಾರ ದಂಡವನ್ನು ವಿದ್ಯುತ್ ಬಿಲ್ಗೆ ಲಿಂಕ್ ಮಾಡುವ ಸಾಧ್ಯತೆಯ ಬಗ್ಗೆಯೂ ಸುಪ್ರೀಂ ಕೋರ್ಟ್ ಸಲಹೆ ನೀಡಿದ್ದು, ಈ ಆಯ್ಕೆಗಳನ್ನು ಪರಿಶೀಲಿಸಲಾಗುವುದು ಎಂದು ಸಲೀಂ ತಿಳಿಸಿದ್ದಾರೆ.
ಬೆಂಗಳೂರು ಸಂಚಾರ ಪೊಲೀಸರ ಹಿರಿಯ ಅಧಿಕಾರಿಗಳ ಪ್ರಕಾರ, ಸಂಪರ್ಕರಹಿತ ಜಾರಿ ವ್ಯವಸ್ಥೆ ಹಾಗೂ ವ್ಯವಸ್ಥೆಯಲ್ಲಿರುವ ಕೆಲವು ಲೋಪಗಳು ದಂಡ ವಸೂಲಿ ಕಡಿಮೆಯಾಗಲು ಪ್ರಮುಖ ಕಾರಣಗಳಾಗಿವೆ. ಶೇ 80ಕ್ಕೂ ಅಧಿಕ ಪ್ರಕರಣಗಳು ಸ್ವಯಂಚಾಲಿತ ಕಣ್ಗಾವಲು ಕ್ಯಾಮರಾಗಳ ಮೂಲಕ ದಾಖಲಾಗುತ್ತಿವೆ. ವಾಹನ ಚಾಲಕರನ್ನು ಸ್ಥಳದಲ್ಲೇ ನಿಲ್ಲಿಸದ ಕಾರಣ ಕೆಲವರು ಎಸ್ಎಂಎಸ್ ಮೂಲಕ ಬರುವ ನೋಟಿಸ್ಗಳನ್ನು ನಿರ್ಲಕ್ಷಿಸುತ್ತಾರೆ ಅಥವಾ ಪೊಲೀಸರ ಕೈಗೆ ಸಿಕ್ಕಿಬೀಳುವವರೆಗೆ ದಂಡದ ಬಗ್ಗೆ ಗಮನಹರಿಸುವುದಿಲ್ಲ. ಇವು ಕೂಡ ದಂಡ ವಸೂಲಿ ಸಮರ್ಪಕವಾಗಿ ಆಗದಿರಲು ಕಾರಣವಾಗಿದೆ.

