ಇಂದೋರ್: ಮಧ್ಯಪ್ರದೇಶದ ಇಂದೋರ್ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಬಾಲ್ಯದಲ್ಲಿ ತನ್ನ ತಾತ ಲೈಂಗಿಕವಾಗಿ ಕಿರುಕುಳ ನೀಡಿದ್ದ ಎಂದು ಆರೋಪಿಸಿರುವ 20 ವರ್ಷದ ಯುವತಿ, ಹಲವು ವರ್ಷಗಳ ಬಳಿಕ ಆ ಘಟನೆ ಮತ್ತೆ ನೆನಪಾಗಿ ಆಕ್ರೋಶಗೊಂಡಿದ್ದಾಳೆ. ಬಳಿಕ ತಾತನ ಮನೆಗೆ ತೆರಳಿ ಕ್ರಿಕೆಟ್ ಬ್ಯಾಟ್ನಿಂದ ಹಲ್ಲೆ ನಡೆಸಿದ್ದಾಳೆ. ಗಂಭೀರವಾಗಿ ಗಾಯಗೊಂಡಿದ್ದ ತಾತ ಚಿಕಿತ್ಸೆ ಪಡೆಯುತ್ತಲೇ ಮೃತಪಟ್ಟಿದ್ದಾರೆ.
ಅಸಲಿಗೆ ನಡೆದಿದ್ದೇನು?
ಪೊಲೀಸರ ಪ್ರಕಾರ, ಕಾಲೇಜಿನಲ್ಲಿ ಓದುತ್ತಿರುವ ಯುವತಿ ಶನಿವಾರ ರಾತ್ರಿ ತಡವಾಗಿ ಮನೆಗೆ ಬಂದಿದ್ದಳು. ಈ ಹಿನ್ನೆಲೆಯಲ್ಲಿ ಆಕೆಯ ಪೋಷಕರು ಆಕೆಯನ್ನು ತರಾಟೆಗೆ ತೆಗೆದುಕೊಂಡಿದ್ದರು. ರಾತ್ರಿ ವೇಳೆ ಹೊರಗೆ ಓಡಾಡುವುದು ಸುರಕ್ಷಿತವಲ್ಲ ಹಾಗೂ ಆಕೆಯ ಭದ್ರತೆ ಬಗ್ಗೆ ತಮಗೆ ಆತಂಕವಿದೆ ಎಂದು ಪೋಷಕರು ತಿಳಿಸಿದ್ದರು.
ಇದರಿಂದ ಕೋಪಗೊಂಡ ಯುವತಿ, ಬಾಲ್ಯದಲ್ಲಿ ತಾತ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದ ಘಟನೆ ನೆನಪಿಸಿಕೊಂಡಿದ್ದಾಳೆ. ಈ ವಿಚಾರವಾಗಿ ಪೋಷಕರೊಂದಿಗೆ ವಾಗ್ವಾದ ನಡೆಸಿದ್ದಾಳೆ.
ಬೈಕ್ನಲ್ಲಿ ತೆರಳಿ ತಾತನ ಮೇಲೆ ದಾಳಿ
ಪೋಷಕರೊಂದಿಗೆ ಜಗಳದ ಬಳಿಕ ತೀವ್ರ ಆಕ್ರೋಶಗೊಂಡ ಯುವತಿ, ತಾನು ಅನುಭವಿಸಿದ್ದ ನೋವಿಗೆ ಪ್ರತೀಕಾರ ತೀರಿಸಿಕೊಳ್ಳಲು ನಿರ್ಧರಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾನುವಾರ ಮುಂಜಾನೆ ಸುಮಾರು 3 ಗಂಟೆ ವೇಳೆಗೆ ಮನೆಯಲ್ಲಿದ್ದ ಕ್ರಿಕೆಟ್ ಬ್ಯಾಟ್ ತೆಗೆದುಕೊಂಡು ಬೈಕ್ನಲ್ಲಿ ತಾತನ ಮನೆಗೆ ತೆರಳಿದ್ದಾಳೆ. ಮನೆಯ ಬಾಗಿಲು ತೆರೆದಿದ್ದ ಅಜ್ಜಿಯನ್ನು ಪಕ್ಕಕ್ಕೆ ಸರಿಸಿ, ನೇರವಾಗಿ ತಾತ ಮಲಗಿದ್ದ ಕೋಣೆಗೆ ಹೋಗಿದ್ದಾಳೆ. ಬಳಿಕ ಕ್ರಿಕೆಟ್ ಬ್ಯಾಟ್ನಿಂದ ತಾತನ ತಲೆ ಮತ್ತು ಮುಖಕ್ಕೆ 7–8 ಬಾರಿ ಬಲವಾಗಿ ಹೊಡೆದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಿಕಿತ್ಸೆ ಪಡೆಯುತ್ತಲೇ ಸಾವು
ಮೊಮ್ಮಗಳ ದಾಳಿಯಿಂದ ತಾತ ಗಂಭೀರವಾಗಿ ಗಾಯಗೊಂಡಿದ್ದರು. ಅಜ್ಜಿ ಕೂಗಿಕೊಂಡ ಬಳಿಕ ಸ್ಥಳಕ್ಕೆ ಬಂದ ನೆರೆಹೊರೆಯವರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇಂದೋರ್ನ ಅರಬಿಂದೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಮೃತರು ಮಧ್ಯಪ್ರದೇಶದ ಸ್ಪೆಷಲ್ ಆರ್ಮ್ಡ್ ಫೋರ್ಸ್ (SAF)ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ವ್ಯಕ್ತಿ ಎಂದು ಪೊಲೀಸರು ತಿಳಿಸಿದ್ದಾರೆ.
ವಿಚಾರಣೆಯಲ್ಲಿ ಆಘಾತಕಾರಿ ಆರೋಪ
ಘಟನೆ ಬಳಿಕ ಪೊಲೀಸರು ಯುವತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇಂದೋರ್ ಹೆಚ್ಚುವರಿ ಪೊಲೀಸ್ ಆಯುಕ್ತ ಅಶೋಕ್ ಸಿಂಗ್ ಜಾದೋನ್ ನೀಡಿದ ಮಾಹಿತಿಯ ಪ್ರಕಾರ, ಬಾಲ್ಯದಲ್ಲಿ ಯುವತಿ ತನ್ನ ಪೋಷಕರೊಂದಿಗೆ ತಾತನ ಮನೆಯಲ್ಲೇ ವಾಸಿಸುತ್ತಿದ್ದಳು.
ಆ ಸಂದರ್ಭದಲ್ಲಿ ತಾತ ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿ ಲೈಂಗಿಕವಾಗಿ ಕಿರುಕುಳ ನೀಡುತ್ತಿದ್ದ ಎಂದು ಯುವತಿ ಆರೋಪಿಸಿದ್ದಾಳೆ. ಈ ವಿಚಾರವನ್ನು ಆಗಲೇ ಪೋಷಕರಿಗೆ ತಿಳಿಸಿದ್ದಾಗಿ ಆಕೆ ಹೇಳಿದ್ದಾಳೆ. ಪೋಷಕರು ತಾತನೊಂದಿಗೆ ಜಗಳವಾಡಿ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಜಗಳದ ವೇಳೆ ಬಾಲ್ಯದ ಘಟನೆ ಮತ್ತೆ ನೆನಪಿಗೆ
ವಯಸ್ಸು ಹೆಚ್ಚಾದಂತೆ ಬಾಲ್ಯದಲ್ಲಿ ನಡೆದ ಆಘಾತಕಾರಿ ಘಟನೆ ತನ್ನ ನೆನಪಿನಿಂದ ದೂರವಾಗಿತ್ತು ಎಂದು ಯುವತಿ ವಿಚಾರಣೆ ವೇಳೆ ಹೇಳಿದ್ದಾಳೆ.
ಆದರೆ ಶನಿವಾರ ರಾತ್ರಿ ಪೋಷಕರೊಂದಿಗೆ ನಡೆದ ವಾಗ್ವಾದದ ಸಂದರ್ಭದಲ್ಲಿ ಬಾಲ್ಯದ ಆ ಘಟನೆ ಏಕಾಏಕಿ ಮತ್ತೆ ನೆನಪಿಗೆ ಬಂದಿತ್ತು. ತನಗೆ ಆಗಿದ್ದ ಅನ್ಯಾಯದ ಬಗ್ಗೆ ತೀವ್ರ ಆಕ್ರೋಶಗೊಂಡು ತಾತನ ಮೇಲೆ ದಾಳಿ ಮಾಡಿದ್ದಾಗಿ ಯುವತಿ ಪೊಲೀಸರಿಗೆ ತಿಳಿಸಿದ್ದಾಳೆ.ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಮುಂದುವರಿದಿದೆ.

