ಬೆಂಗಳೂರು: ಪದೇ ಪದೇ ಬಿಸಿ ಮಾಡಿದ ಅಡುಗೆ ಎಣ್ಣೆಯ ಮರುಬಳಕೆಗೆ ಸರ್ಕಾರ ನಿರ್ಬಂಧ ವಿಧಿಸಿದೆ. ಆಹಾರ ಸುರಕ್ಷತೆ ಹಾಗೂ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಸುರಕ್ಷಿತ ಆಹಾರ, ಆರೋಗ್ಯಕರ ಸಮಾಜವೇ ಸರ್ಕಾರದ ಆದ್ಯತೆಯಾಗಿದೆ.
ಬಳಸಿದ ಅಡುಗೆ ಎಣ್ಣೆ ಮರುಬಳಕೆಗೆ ನಿರ್ಬಂಧ
-
ಅಡುಗೆ ಎಣ್ಣೆಯನ್ನು 3 ಬಾರಿಗಿಂತ ಹೆಚ್ಚು ಬಿಸಿ ಮಾಡಿ ಬಳಸುವಂತಿಲ್ಲ
-
ಬಳಸಿದ ಎಣ್ಣೆಯನ್ನು ನೇರವಾಗಿ ಸಿಂಕ್ ಅಥವಾ ಒಳಚರಂಡಿಗೆ ಸುರಿಯದೇ, ಅಧಿಕೃತ ಸಂಗ್ರಹಣಾ ಸಂಸ್ಥೆಗಳಿಗೆ (Aggregators) ನೀಡಬೇಕು
-
ಆಹಾರ ಸುರಕ್ಷತೆ ಮತ್ತು ಸಾರ್ವಜನಿಕ ಆರೋಗ್ಯದ ದೃಷ್ಟಿಯಿ೦ದ ಕ್ರಮ
-
ಹೋಟೆಲ್, ರುವಾರ ರೆಸ್ಟೋರೆಂಟ್ ಹಾಗೂ ಆಹಾರ ಮಳಿಗೆಗಳಲ್ಲಿ ನಿಯಮ ಪಾಲನೆ ಕಡ್ಡಾಯ
-
ಆಹಾರ ಸುರಕ್ಷತೆ ಮತ್ತು ಸಾರ್ವಜನಿಕ ಆರೋಗ್ಯವೇ ಸರ್ಕಾರದ ಆದ್ಯತೆ
ಪದೇ ಪದೇ ಬಿಸಿ ಮಾಡಿದ ಅಡುಗೆ ಎಣ್ಣೆ ಮರುಬಳಕೆಗೆ ಕಡಿವಾಣ
ಪದೇಪದೇ ಬಿಸಿ ಮಾಡಿ ಬಳಸುವ ಅಡುಗೆ ಎಣ್ಣೆಯಿಂದ ಉಂಟಾಗಬಹುದಾದ ಆರೋಗ್ಯ ಸಮಸ್ಯೆಗಳನ್ನು ತಡೆಯಲು ಕರ್ನಾಟಕ ಸರ್ಕಾರ ಕ್ರಮ ಕೈಗೊಂಡಿದೆ. ಹೋಟೆಲ್, ರೆಸ್ಟೋರೆಂಟ್, ಬೇಕರಿ ಹಾಗೂ ಇತರೆ ಆಹಾರ ತಯಾರಿಕಾ ಘಟಕಗಳಲ್ಲಿ ಒಂದೇ ಎಣ್ಣೆಯನ್ನು ಹಲವು ಬಾರಿ ಬಳಸುವುದನ್ನು ನಿಯಂತ್ರಿಸುವುದು ಇದರ ಉದ್ದೇಶವಾಗಿದೆ.
ಅಡುಗೆ ಎಣ್ಣೆಯನ್ನು ಪದೇಪದೇ ಹೆಚ್ಚಿನ ತಾಪಮಾನದಲ್ಲಿ ಬಿಸಿ ಮಾಡಿದಾಗ ಅದರಲ್ಲಿರುವ ಟೋಟಲ್ ಪೋಲಾರ್ ಕಾಂಪೌಂಡ್ಸ್(TPC) ಪ್ರಮಾಣ ಹೆಚ್ಚಾಗುತ್ತದೆ. FSSAI ನಿಯಮದ ಪ್ರಕಾರ TPC ಪ್ರಮಾಣ 25% ಮೀರಿದ ಎಣ್ಣೆಯನ್ನು ಆಹಾರ ತಯಾರಿಕೆಗೆ ಬಳಸಬಾರದು. ಇಂತಹ ಎಣ್ಣೆಯ ನಿರಂತರ ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇರುವುದರಿಂದ ಎಣ್ಣೆಯ ಗುಣಮಟ್ಟದ ಮೇಲ್ವಿಚಾರಣೆಗೆ ಒತ್ತು ನೀಡಲಾಗಿದೆ.
ಮೂರು ಬಾರಿ ಮೀರದಂತೆ ಮರುಬಳಕೆ
ರಾಜ್ಯದಲ್ಲಿ ರೂಪಿಸಲಾಗುತ್ತಿರುವ ಪ್ರಸ್ತಾವಿತ ಮಾರ್ಗಸೂಚಿಯಲ್ಲಿ ಅಡುಗೆ ಎಣ್ಣೆಯನ್ನು ಮೂರು ಬಾರಿ ಮೀರಿಸಿ ಬಿಸಿ ಮಾಡಿ ಮರುಬಳಕೆ ಮಾಡದಂತೆ ಸೂಚಿಸಲಾಗಿದೆ. ಹೋಟೆಲ್, ಬೇಕರಿ ಮತ್ತು ಆಹಾರ ಮಳಿಗೆಗಳಲ್ಲಿ ಎಣ್ಣೆಯನ್ನು ಎಷ್ಟು ಬಾರಿ ಬಳಸಲಾಗಿದೆ, ಉಳಿದ ಎಣ್ಣೆಯನ್ನು ಹೇಗೆ ಸಂಗ್ರಹಿಸಲಾಗಿದೆ ಹಾಗೂ ಹೇಗೆ ವಿಲೇವಾರಿ ಮಾಡಲಾಗಿದೆ ಎಂಬುದರ ದಾಖಲೆ ನಿರ್ವಹಿಸುವ ವ್ಯವಸ್ಥೆಯನ್ನೂ ಪರಿಗಣಿಸಲಾಗುತ್ತಿದೆ.
ಬಳಸಿದ ಎಣ್ಣೆಯಿಂದ ಬಯೋಡೀಸೆಲ್
ಬಳಸಿದ ಅಡುಗೆ ಎಣ್ಣೆಯನ್ನು ಚರಂಡಿ ಅಥವಾ ಒಳಚರಂಡಿಗೆ ಸುರಿಯುವ ಬದಲು ಸಂಗ್ರಹಿಸಿ ಬಯೋಡೀಸೆಲ್ ಸೇರಿದಂತೆ ಕೈಗಾರಿಕಾ ಬಳಕೆಗೆ ಕಳುಹಿಸುವ ವ್ಯವಸ್ಥೆಗೆ ಸರ್ಕಾರ ಒತ್ತು ನೀಡುತ್ತಿದೆ. ಕರ್ನಾಟಕದಲ್ಲಿ ಬಯೋಡೀಸೆಲ್ ಕಂಪನಿಗಳೊಂದಿಗೆ ಸಹಭಾಗಿತ್ವದ ಮೂಲಕ ಹೋಟೆಲ್ ಗಳು ಮತ್ತು ಆಹಾರ ಸಂಸ್ಥೆಗಳಿಂದ ಬಳಸಿದ ಎಣ್ಣೆ ಸಂಗ್ರಹಿಸುವ ವ್ಯವಸ್ಥೆ ಪರಿಶೀಲಿಸಲಾಗುತ್ತಿದೆ.
2024–25 ಮತ್ತು 2025–26ನೇ ಸಾಲಿನಲ್ಲಿ ಕರ್ನಾಟಕದಲ್ಲಿ 32.68 ಲಕ್ಷ ಲೀಟರ್ ಬಳಸಿದ ಅಡುಗೆ ಎಣ್ಣೆಯನ್ನು ಸಂಗ್ರಹಿಸಿ ಪುನರ್ಬಳಕೆಗೆ ನೀಡಲಾಗಿದೆ ಎಂದು ಹೇಳಲಾಗಿದೆ.
ಒಟ್ಟಿನಲ್ಲಿ, ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಪದೇಪದೇ ಬಿಸಿ ಮಾಡಿದ ಎಣ್ಣೆಯ ಬಳಕೆಯನ್ನು ನಿಯಂತ್ರಿಸುವುದು, ಆಹಾರ ಸಂಸ್ಥೆಗಳಲ್ಲಿ ತಪಾಸಣೆ ಬಲಪಡಿಸುವುದು ಹಾಗೂ ಬಳಸಿದ ಎಣ್ಣೆಯನ್ನು ಆಹಾರ ಸರಪಳಿಯಿಂದ ಹೊರಗಿಟ್ಟು ಬಯೋಡೀಸೆಲ್ ನಂತಹ ಉತ್ಪನ್ನಗಳಿಗೆ ಬಳಸುವುದು ಸರ್ಕಾರದ ಉದ್ದೇಶವಾಗಿದೆ.

