ಟೀಮ್ ಇಂಡಿಯಾದ ದಿಗ್ಗಜ ಬ್ಯಾಟರ್ ವಿರಾಟ್ ಕೊಹ್ಲಿ ತಮ್ಮ ನಿವೃತ್ತಿಯ ಸುಳಿವು ನೀಡಿದ್ದು, 2027ರ ವಿಶ್ವಕಪ್ ತಮ್ಮ ಕೊನೆಯ ಏಕದಿನ ಸರಣಿಯಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಬೆನ್ನಲ್ಲೇ ಏಕದಿನ ಕ್ರಿಕೆಟ್ನಲ್ಲಿ ಕೊಹ್ಲಿ ಅವರ ಪ್ರಮುಖ ‘ನಂಬರ್ 3’ ಕ್ರಮಾಂಕವನ್ನು ಯಾರು ತುಂಬಲಿದ್ದಾರೆ ಎಂಬ ಚರ್ಚೆ ಜೋರಾಗಿದೆ. ಭಾರತದ ಮಾಜಿ ಆಟಗಾರ ವಸೀಮ್ ಜಾಫರ್ ಪ್ರಕಾರ, ಶುಭ್ಮನ್ ಗಿಲ್, ಇಶಾನ್ ಕಿಶನ್ ಅಥವಾ ಋತುರಾಜ್ ಗಾಯಕ್ವಾಡ್ ಅಲ್ಲ, ಬದಲಿಗೆ ಯುವ ಎಡಗೈ ಬ್ಯಾಟರ್ ತಿಲಕ್ ವರ್ಮಾ ಅವರು ಈ ಸ್ಥಾನಕ್ಕೆ ಅತ್ಯಂತ ಸೂಕ್ತ ಆಟಗಾರ ಎಂದಿದ್ದಾರೆ.
ಇತ್ತೀಚೆಗೆ ನಡೆದ 2026 ರ ಏಷ್ಯನ್ ಗೇಮ್ಸ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ 6 ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ತಿಲಕ್ ವರ್ಮಾ, ಕೇವಲ 22 ಎಸೆತಗಳಲ್ಲಿ ಅಜೇಯ 51 ರನ್ ಚಚ್ಚಿ ಭಾರತದ 19 ರನ್ಗಳ ಭರ್ಜರಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ ವಸೀಮ್ ಜಾಫರ್, “ತಿಲಕ್ ಅವರ ಮಲ್ಟಿ-ಟ್ಯಾಲೆಂಟ್ ನೋಡಲು ಸಂತಸವಾಗುತ್ತದೆ. ಅವರು ಹಿಂದೆ 3ನೇ ಕ್ರಮಾಂಕದಲ್ಲಿ ಶತಕ ಬಾರಿಸಿದ್ದರು, ಈಗ ೫ ಮತ್ತು ೬ನೇ ಕ್ರಮಾಂಕದಲ್ಲೂ ಅದ್ಭುತವಾಗಿ ಹೊಂದಿಕೊಂಡಿದ್ದಾರೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಿವೃತ್ತಿಯಾದ ನಂತರ, ರೋಹಿತ್ ಸ್ಥಾನಕ್ಕೆ ಯಶಸ್ವಿ ಜೈಸ್ವಾಲ್ ಹಾಗೂ ವಿರಾಟ್ ಸ್ಥಾನಕ್ಕೆ ತಿಲಕ್ ವರ್ಮಾ ಸೂಕ್ತ ಎನಿಸುತ್ತಾರೆ,” ಎಂದು ಪ್ರಶಂಸಿಸಿದ್ದಾರೆ.
ಇನ್ನೂ 23 ವರ್ಷದವರಾಗಿರುವ ತಿಲಕ್ ವರ್ಮಾ ಈಗಾಗಲೇ ಟಿ೨೦ಐ ಕ್ರಿಕೆಟ್ನಲ್ಲಿ 65 ಪಂದ್ಯಗಳನ್ನು ಆಡಿದ್ದು, 2026 ರ ಟಿ20 ವಿಶ್ವಕಪ್ ಗೆದ್ದ ಭಾರತ ತಂಡದ ಭಾಗವೂ ಆಗಿದ್ದರು. ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಸುಮಾರು 57ರ ಸರಾಸರಿ ಹಾಗೂ ಲಿಸ್ಟ್ ಎ ಕ್ರಿಕೆಟ್ನಲ್ಲಿ 47 ರ ಸರಾಸರಿ ಹೊಂದಿರುವ ತಿಲಕ್, ಎಡಗೈ ಬ್ಯಾಟರ್ ಆಗಿರುವುದರಿಂದ ತಂಡಕ್ಕೆ ಉತ್ತಮ ಸಮತೋಲನ ತರಬಲ್ಲರು ಎಂದು ಜಾಫರ್ ಅಭಿಪ್ರಾಯಪಟ್ಟಿದ್ದಾರೆ. ಗಿಲ್, ಗಾಯಕ್ವಾಡ್, ರಿಷಭ್ ಪಂತ್ ಮತ್ತು ಕಿಶನ್ ಅವರಂತಹ ಪ್ರಬಲ ಸ್ಪರ್ಧಿಗಳಿದ್ದರೂ, ಜಾಫರ್ ಮಾತ್ರ ಕೊಹ್ಲಿ ಉತ್ತರಾಧಿಕಾರಿಯಾಗಿ ತಿಲಕ್ ವರ್ಮಾ ಅವರನ್ನೇ ಆಯ್ಕೆ ಮಾಡಿದ್ದಾರೆ.

