ಬೆಂಗಳೂರು: ರಾಜ್ಯದ ಮುಜರಾಯಿ ಇಲಾಖೆಯು ಎ ಮತ್ತು ಬಿ ಗ್ರೇಡ್ ಹೊಂದಿರುವ ದೇವಸ್ಥಾನಗಳ ಕೋಟ್ಯಂತರ ರೂಪಾಯಿ ಮೌಲ್ಯದ ಸ್ಥಿರಾಸ್ತಿಗಳನ್ನು ಸಂರಕ್ಷಿಸಲು ಬೃಹತ್ ಸರ್ವೇ ಮತ್ತು ಖಾತೆ ಇಂಡೀಕರಣಕ್ಕೆ ಮುಂದಾಗಿದೆ.
ರಾಜ್ಯದ ಎ ಮತ್ತು ಬಿ ಗ್ರೇಡ್ ದೇವಸ್ಥಾನಗಳ ಆಸ್ತಿಗಳಿಗೆ ಅಧಿಕೃತ ದಾಖಲೆಗಳ ಮೂಲಕ ಭದ್ರತೆ ಕಲ್ಪಿಸುವುದು ಮುಜರಾಯಿ ಇಲಾಖೆಯ ಉದ್ದೇಶವಾಗಿದೆ. ದೇವಸ್ಥಾನಗಳ ಹೆಸರಿನಲ್ಲಿ ಆಸ್ತಿಗಳನ್ನು ದಾಖಲೀಕರಣಗೊಳಿಸುವುದರ ಜತೆಗೆ, ಸ್ಥಿರಾಸ್ತಿಗಳ ಸರ್ವೇ, ಅಳತೆ ಮತ್ತು ಖಾತೆ ಇಂಡೀಕರಣ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ನಿರ್ದೇಶನ ನೀಡಲಾಗಿದೆ. ಈ ಕಾರ್ಯದಲ್ಲಿ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಲಾಗಿದೆ.
ರಾಜ್ಯದಲ್ಲಿ 201 ಎ ಗ್ರೇಡ್ ಹಾಗೂ 139 ಬಿ ಗ್ರೇಡ್ ದೇವಸ್ಥಾನಗಳಿದ್ದು, ಇವು ಕೋಟ್ಯಂತರ ರೂ. ಮೌಲ್ಯದ ಸ್ಥಿರ ಮತ್ತು ಚರಾಸ್ತಿಗಳನ್ನು ಹೊಂದಿವೆ. ಆದರೆ ಹಲವು ದೇವಸ್ಥಾನಗಳ ಭೂಮಿ ಒತ್ತುವರಿಯಾಗಿರುವುದು ಹಾಗೂ ಕೆಲವು ಆಸ್ತಿಗಳು ದೇವಸ್ಥಾನಗಳ ಹೆಸರಿನಲ್ಲಿ ಸಮರ್ಪಕವಾಗಿ ದಾಖಲಾಗದಿರುವುದು ಪ್ರಮುಖ ಸಮಸ್ಯೆಯಾಗಿದೆ.
ಇಂತಹ ಆಸ್ತಿಗಳನ್ನು ಗುರುತಿಸಿ, ಕಾನೂನುಬದ್ಧ ದಾಖಲೆಗಳ ಮೂಲಕ ದೇವಸ್ಥಾನಗಳ ಸುಪರ್ದಿಗೆ ತರುವ ಉದ್ದೇಶದಿಂದ ರಾಜ್ಯಾದ್ಯಂತ ಸರ್ವೇ ಮತ್ತು ದಾಖಲೀಕರಣ ಕಾರ್ಯಕ್ಕೆ ವೇಗ ನೀಡಲಾಗಿದೆ.
2026ರ ಆಗಸ್ಟ್ 3ರಂದು ನಡೆದ ಸಭೆಯಲ್ಲಿ ಅಧಿಸೂಚಿತ ದೇವಸ್ಥಾನಗಳ ಸ್ಥಿರಾಸ್ತಿಗಳ ಅಳತೆ, ದಾಖಲೀಕರಣ ಹಾಗೂ ಖಾತೆ ಇಂಡೀಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿತ್ತು. ಮರುದಿನವೇ ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯ ಬೆಂಗಳೂರು ಕಚೇರಿಗೂ ಈ ಸಂಬಂಧ ಮನವಿ ಸಲ್ಲಿಸಲಾಗಿತ್ತು. ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ರಾಜೇಂದ್ರ ಕಟಾರಿಯಾ ಅಧಿಕಾರ ವಹಿಸಿಕೊಂಡ ಬಳಿಕ ದೇವಸ್ಥಾನಗಳ ಆಸ್ತಿಗಳನ್ನು ಆಯಾ ದೇವಳಗಳ ಹೆಸರಿನಲ್ಲಿ ದಾಖಲೀಕರಣಗೊಳಿಸುವ ಕಾರ್ಯಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ. ಪ್ರಗತಿಯ ಮೇಲೆ ನಿಗಾ ಇರಿಸಲು ಪ್ರತಿತಿಂಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಪರಿಶೀಲನಾ ಸಭೆ ನಡೆಸಲಾಗುತ್ತಿದ್ದು, ಪ್ರಗತಿ ವರದಿಗಳನ್ನು ಸಂಗ್ರಹಿಸಲಾಗುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೇವಸ್ಥಾನಗಳ ಆಸ್ತಿ ದಾಖಲೀಕರಣ ಕಾರ್ಯ ಪ್ರಗತಿಯಲ್ಲಿದೆ. ತಾಲೂಕುವಾರು ದಾಖಲೀಕರಣಗೊಂಡ ದೇವಸ್ಥಾನಗಳ ವಿವರ ಹೀಗಿದ್ದು, ಬಂಟ್ವಾಳ – 27, ಸುಳ್ಯ – 85, ಕಡಬ – 83, ಪುತ್ತೂರು – 22, ಬೆಳ್ತಂಗಡಿ – 46, ಮಂಗಳೂರು – 22, ಮೂಲ್ಕಿ – 9 ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 294 ದೇವಸ್ಥಾನಗಳ ಆಸ್ತಿಗಳನ್ನು ದಾಖಲೀಕರಣಗೊಳಿಸಲಾಗಿದೆ.
ದೇವಸ್ಥಾನಗಳ ಆಸ್ತಿ ದಾಖಲೀಕರಣ ಕಾರ್ಯವನ್ನು ತ್ವರಿತಗೊಳಿಸಲು ಕಂದಾಯ ಇಲಾಖೆಯ ಅಧಿಕಾರಿಗಳಿಗೂ ಗುರಿ ನಿಗದಿಪಡಿಸಲಾಗಿದೆ. ಕಳೆದ ಎರಡು ತಿಂಗಳಿಂದ ಭೂಮಾಪಕರು ನಿರಂತರವಾಗಿ ಸರ್ವೇ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಪ್ರಕ್ರಿಯೆಯಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಸಿದೆ.
ದೇವಸ್ಥಾನಗಳ ಸಾಮಾನ್ಯ ನಿಧಿಯಲ್ಲಿ ಸಂಗ್ರಹವಾಗಿರುವ ಹಣದಿಂದ ಉಪ ಮುಖ್ಯಮಂತ್ರಿಗಳ ಕಚೇರಿಯ ಕೋರಿಕೆಯ ಮೇರೆಗೆ ಮೂರು ಹೊಸ ವಾಹನಗಳನ್ನು ಖರೀದಿಸುವುದರ ಜತೆಗೆ, ಈಗಾಗಲೇ ವಿಲೇವಾರಿ ಮಾಡಲಾದ ಇಲಾಖೆಯ ನಾಲ್ಕು ಸರಕಾರಿ ವಾಹನಗಳಿಗೆ ಬದಲಿಯಾಗಿ ವಾಹನ ಖರೀದಿಸುವ ಪ್ರಸ್ತಾವನೆಯನ್ನೂ ಧಾರ್ಮಿಕ ಪರಿಷತ್ ಸಭೆಗೆ ಸಲ್ಲಿಸಲಾಗಿತ್ತು. ಒಟ್ಟು ಏಳು ವಾಹನಗಳ ಖರೀದಿಗೆ ಸಂಬಂಧಿಸಿದ ಈ ಪ್ರಸ್ತಾವನೆ ಅಕ್ಟೋಬರ್ 1ರಂದು ನಡೆದ ಧಾರ್ಮಿಕ ಪರಿಷತ್ ಸಭೆಯಲ್ಲೂ ಚರ್ಚೆಗೆ ಬಾರದೆ ಬಾಕಿ ಉಳಿದಿದೆ.

