ಜಿಗಣಿ: ಸ್ನೇಹಿತರೊಂದಿಗೆ ಟ್ರೆಕ್ಕಿಂಗ್ ಹೋಗಿದ್ದ ವೇಳೆ ಕಲ್ಲು ಕ್ವಾರಿಯಲ್ಲಿ ಈಜಲು ಹೋಗಿ ನಾಪತ್ತೆಯಾಗಿದ ಟೆಕ್ಕಿ ಶವವಾಗಿ ಪತ್ತೆಯಾಗಿದ್ದಾನೆ.
ಬೆಂಗಳೂರು ಹೊರವಲಯದ ಜಿಗಣಿ ಸಮೀಪದ ಯಲ್ಲಮ್ಮನದೊಡ್ಡಿಯಲ್ಲಿ ಕಲ್ಲು ಕ್ವಾರಿಯಲ್ಲಿ ಟೆಕ್ಕಿ ಶವ ಪತ್ತೆಯಾಗಿದೆ. ವಿನಯ್ ಮೃತ ಟೆಕ್ಕಿ. ಕಳೆದ ಎರದು ದಿನಗಳಿಂದ ನಾಪತ್ತೆಯಾಗಿದ್ದ ವಿನಯ್ ಇದೀಗ ಶವವಾಗಿ ಪತ್ತೆಯಾಗಿದ್ದಾನೆ.
ಅಗ್ನಿಶಾಮಕ ದಳ, ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ಸೇರಿದಂತೆ ಈಶ್ವರ್ ಮಲ್ಪೆ ಮುಳುಗು ತಜ್ಞರ ತಂಡದಿಂದ ಎರಡು ದಿನಗಳಿಂದ ಕಲ್ಲು ಕ್ವಾರಿಯ ನೀರಿನಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ನಿರಂತರ ಹುಡುಕಾಟದ ಬಳಿಕ ಕೊನೆಗೂ ಮೃತದೇಹ ಪತ್ತೆಯಾಗಿದೆ.
ಸದ್ಯ ಮೃತದೇಹವನ್ನ ಅತ್ತಿಬೆಲೆಯ ಆಕ್ಸ್‌ಫರ್ಡ್ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಸಂಬಂಧ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆಂಧ್ರಪ್ರದೇಶ ಮೂಲದ ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದ ವಿನಯ್ ಬೆಂಗಳೂರಿನ ಹಲಸೂರಿನಲ್ಲಿ ವಾಸವಿದ್ದರು. ಗಾಂಧಿ ಜಯಂತಿ ರಜೆ ಹಿನ್ನೆಲೆ ಟ್ರಕ್ಕಿಂಗ್ ಪ್ಲ್ಯಾನ್ ಮಾಡಿದ್ದು, ಬಿಎಲ್‌ಆರ್ ಹೈಕ್ ಎಂಬ ಇನ್ಸ್ಟಾ ಗ್ರೂಪ್ ಮೂಲಕ ಎಂಟು ಜನರ ತಂಡ ಟ್ರೆಕ್ಕಿಂಗ್ ತೆರಳಿದ್ದರು.
ಟ್ರೆಕ್ಕಿಂಗ್ ವೇಳೆ ವಿನಯ್ ಸೇರಿದಂತೆ ಇಡೀ ತಂಡ ಕಲ್ಲು ಕ್ವಾರಿಯಲ್ಲಿ ಈಜಲು ತೆರಳಿತ್ತು. ಕಲ್ಲು ಕ್ವಾರಿಯ ಮೇಲಿನಿಂದ ಯುವಕ-ಯುವತಿಯರ ತಂಡ ನೀರಿಗೆ ಡೈವ್ ಹೊಡೆದು ಮೋಜುಮಸ್ತಿ ಮಾಡಿದ್ದರು. ಈ ವೇಳೆ ಟೆಕ್ಕಿ ವಿನಯ್ ಏಕಾಏಕಿ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದರು.
ಸ್ನೇಹಿತರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸತತ ಶೋಧ ಕಾರ್ಯಾಚರಣೆ ಬಳಿಕ ಇಂದು ವಿನಯ್ ಮೃತದೇಹ ಕಲ್ಲು ಕ್ವಾರಿಯಲ್ಲಿ ಪತ್ತೆಯಾಗಿದೆ.
ಕನ್ನಡ ಚಿತ್ರರಂಗದ ಹಿರಿಯ ನಟಿ ಲಲಿತಮ್ಮ ವಿಧಿವಶ
ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟಿ, ರಂಗಭೂಮಿ ಕಲಾವಿದೆ ಲಲಿತಮ್ಮ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ.
ಅಮ್ಮನ ಮಡಿಲು ಟ್ರಸ್ಟ್ ನಲ್ಲಿ ಆಶ್ರಯ ಪಡೆದಿದ್ದ ನಟಿ ಲಲಿತಮ್ಮ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಾರೆ.
ಹಲವು ವರ್ಷಗಳ ಕಾಲ ಕಲಾ ಸೇವೆ ಮಾಡಿದ ಹಿರಿಯ ಕಲಾವಿದೆ ಲಲಿತಮ್ಮ ಅವರನ್ನು ಕೊನೆಗಾಲದಲ್ಲಿ ನೋಡಿಕೊಳ್ಳುವವರು ಯಾರೂ ಇಲ್ಲದ ಕಾರಣ, ಬೆಂಗಳೂರಿನ ‘ಅಮ್ಮನ ಮಡಿಲು ಟ್ರಸ್ಟ್’ ಆಶ್ರಮದಲ್ಲಿದ್ದು, ಅಗತ್ಯ ಚಿಕಿತ್ಸೆ ಹಾಗೂ ಆರೈಕೆ ಪಡೆಯುತ್ತಿದ್ದರು. ಆದರೆ ಅನಾರೋಗ್ಯದಿಂದ ಇಂದು ಕೊನೆಯುಸಿರೆಳೆದಿದ್ದಾರೆ.
ಲಲಿತಮ್ಮ ಅವರು ಸುಮಾರು 35 ವರ್ಷಗಳ ಕಾಲ ರಂಗಭೂಮಿಯಲ್ಲಿ ಕಲಾ ಸೇವೆ ಸಲ್ಲಿಸಿದ್ದರು. ನೂರಾರು ನಾಟಕ ಹಾಗೂ ಪ್ರದರ್ಶನಗಳಲ್ಲಿ ಅಭಿನಯಿಸಿದ್ದಾರೆ. ಕಿರುತೆರೆ ಹಾಗೂ ಸಿನಿಮಾರಂಗದಲ್ಲೂ ಗುರುತಿಸಿಕೊಂಡಿದ್ದರು. ‘ರಂಗೋಲಿ’, ‘ಮಾಂಗಲ್ಯ’, ‘ಮಹಾಮಾಯಿ’ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಹಾಗೂ ‘ಸುಂಟರಗಾಳಿ’, ‘ಜಾಕಿ’, ‘ವಜ್ರಕಾಯ’, ‘ಜಂಗ್ಲಿ ಕಿತ್ತೂರು’, ‘ಪುತ್ರ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
ವಿಶೇಷವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಸುಂಟರಗಾಳಿ’ ಸಿನಿಮಾದಲ್ಲಿ ಅವರು ಮಾಡಿದ್ದ ‘ಸಾರಾಯಿ ಶಾರದೆ’ ಪಾತ್ರ ಪ್ರೇಕ್ಷಕರ ಗಮನ ಸೆಳೆದಿತ್ತು.
ಮದುವೆ, ಮಕ್ಕಳಿಲ್ಲದೆ ಲಲಿತಮ್ಮ ಅವರು ಒಂಟಿಯಾಗಿಯೇ ಜೀವನದಲ್ಲಿ ಹಲವು ಕಷ್ಟಗಳನ್ನು ಎದುರಿಸಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಮತ್ತೊಬ್ಬ ಕಲಾವಿದೆ ಪಂಕಜಾ ಅವರು ಗಮನಿಸಿ, ಬೆಂಗಳೂರಿನ ‘ಅಮ್ಮನ ಮಡಿಲು ಟ್ರಸ್ಟ್’ ಆಶ್ರಮಕ್ಕೆ ಕರೆತಂದು ಆಶ್ರಯ ಕಲ್ಪಿಸಿದ್ದರು.

