HomeKarnatakaರಾಜ್ಯದ 217 ತಾಲೂಕುಗಳು ಬರಪೀಡಿತ ಎಂದು ಘೋಷಣೆ ; 50 ರಿಂದ 60 ಸಾವಿರ ಕೋಟಿ...

ರಾಜ್ಯದ 217 ತಾಲೂಕುಗಳು ಬರಪೀಡಿತ ಎಂದು ಘೋಷಣೆ ; 50 ರಿಂದ 60 ಸಾವಿರ ಕೋಟಿ ನಷ್ಟದ ಅಂದಾಜು.!

ಬೆಂಗಳೂರು : ರಾಜ್ಯದಲ್ಲಿ ಬರ ಪರಿಸ್ಥಿತಿಯಿಂದ ಉಂಟಾಗಿರುವ ಬೆಳೆ ನಷ್ಟದ ಅಂದಾಜು ₹50 ಸಾವಿರ ಕೋಟಿಯಿಂದ ₹60 ಸಾವಿರ ಕೋಟಿ ರೂಪಾಯಿಗಳವರೆಗೆ ತಲುಪುವ ಸಾಧ್ಯತೆಯಿದ್ದು, ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಬರ ಪರಿಹಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಉಪಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಡಾ. ಜಿ. ಪರಮೇಶ್ವರ ಅವರು ತಿಳಿಸಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಒಟ್ಟು 217 ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದೆ. ಈ ಪೈಕಿ 177 ತಾಲೂಕುಗಳಲ್ಲಿ ಉಂಟಾಗಿರುವ ನಷ್ಟದ ಅಂದಾಜು ಮಾಡಲಾಗಿದ್ದು, ಸುಮಾರು ₹46,000 ಕೋಟಿ ನಷ್ಟವಾಗಿದೆ ಎಂದು ಕೇಂದ್ರಕ್ಕೆ ಸಲ್ಲಿಸಿರುವ ಎರಡನೇ ಮೆಮೊರಾಂಡಂನಲ್ಲಿ ತಿಳಿಸಲಾಗಿದೆ. ಅಕ್ಟೋಬರ್ 1ರಂದು ಘೋಷಿಸಲಾದ ಇನ್ನೂ 40 ತಾಲೂಕುಗಳಲ್ಲಿನ ನಷ್ಟದ ಅಂದಾಜು ಪ್ರಕ್ರಿಯೆಯೂ ನಡೆಯುತ್ತಿದೆ. ಈ ಎಲ್ಲ ತಾಲೂಕುಗಳ ನಷ್ಟದ ಅಂದಾಜನ್ನು ಒಟ್ಟುಗೂಡಿಸಿದಾಗ ₹50 ಸಾವಿರ ಕೋಟಿಯಿಂದ ₹60 ಸಾವಿರ ಕೋಟಿ ರೂಪಾಯಿಗಳವರೆಗೆ ನಷ್ಟವಾಗುವ ಸಾಧ್ಯತೆಯಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ರಾಜ್ಯಕ್ಕೆ ಬರಬೇಕಾದ ಪರಿಹಾರವನ್ನು ಕೋರಲಾಗುವುದು ಎಂದು ಹೇಳಿದರು.

ಇನ್ನೂ ಘೋಷಣೆಯಾಗದ 22 ತಾಲೂಕುಗಳ ವಿಚಾರವಾಗಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಆ ತಾಲೂಕುಗಳಲ್ಲಿಯೂ ಗ್ರೌಂಡ್ ಟ್ರೂಥಿಂಗ್ ನಡೆಸಲಾಗುವುದು. ಪರಿಶೀಲನೆಯ ವೇಳೆ ಒಂದೆರಡು ಅಥವಾ ಮೂರು ತಾಲೂಕುಗಳು ಬರಪೀಡಿತ ಎಂದು ಕಂಡುಬರಬಹುದು. ಕರಾವಳಿ ಭಾಗದ ಕೆಲವು ತಾಲೂಕುಗಳಲ್ಲಿ ಅಂತಹ ಪರಿಸ್ಥಿತಿ ಇಲ್ಲ. ಪರಿಶೀಲನೆಯ ನಂತರ ವಾಸ್ತವ ಸ್ಥಿತಿಯನ್ನು ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇತ್ತೀಚೆಗೆ ಸುರಿದ ಮಳೆಯಿಂದ ಬರ ಪರಿಹಾರದ ಪರಿಶೀಲನೆಗೆ ಯಾವುದೇ ನಕಾರಾತ್ಮಕ ಪರಿಣಾಮ ಉಂಟಾಗುವುದಿಲ್ಲ. ಈ ಮಳೆಯಿಂದ ಕುಡಿಯುವ ನೀರಿನ ಲಭ್ಯತೆಗೆ ಸ್ವಲ್ಪ ಅನುಕೂಲವಾಗಬಹುದೇ ಹೊರತು ಬೆಳೆಗಳಿಗೆ ಹೆಚ್ಚಿನ ಪ್ರಯೋಜನವಾಗುವುದಿಲ್ಲ. ಕೇಂದ್ರದ ತಂಡಗಳಿಗೆ ಮೇ, ಜೂನ್, ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿನ ಮಳೆ ಹಾಗೂ ಬರ ಪರಿಸ್ಥಿತಿಯನ್ನು ವಿವರಿಸಲಾಗುವುದು. ಈ ಅವಧಿಯ ಪರಿಸ್ಥಿತಿಯನ್ನೇ ಮೆಮೊರಾಂಡಂನಲ್ಲಿ ದಾಖಲಿಸಲಾಗಿದೆ. ಇತ್ತೀಚಿನ ಮಳೆಯನ್ನು ಮಾತ್ರ ಆಧರಿಸಿ ಬರ ಪರಿಸ್ಥಿತಿಯನ್ನು ನಿರ್ಧರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕೇಂದ್ರದ ತಂಡಗಳ ಪರಿಶೀಲನೆ

ಕೇಂದ್ರ ಸರ್ಕಾರದಿಂದ ಕೃಷಿ ಸಚಿವಾಲಯ, ಪರಿಸರ ಸಚಿವಾಲಯ ಸೇರಿದಂತೆ ವಿವಿಧ ಸಚಿವಾಲಯಗಳ ಜಂಟಿ ಕಾರ್ಯದರ್ಶಿಗಳು ಹಾಗೂ ಅಧಿಕಾರಿಗಳನ್ನು ಒಳಗೊಂಡ ಮೂರು ತಂಡಗಳು ರಾಜ್ಯಕ್ಕೆ ಆಗಮಿಸುತ್ತಿವೆ. ಈ ತಂಡಗಳು ರಾಜ್ಯದ ಮೂರು ಕಡೆಗಳಿಗೆ ತೆರಳಿ ಮಳೆ ಮತ್ತು ಬೆಳೆ ನಷ್ಟದ ವಾಸ್ತವ ಸ್ಥಿತಿಯನ್ನು ಪರಿಶೀಲಿಸಲಿವೆ. ಇಂದು ನಾವು ಬ್ರೀಫಿಂಗ್ ಮಾಡಿದ ಬಳಿಕ ತಂಡಗಳು ತಮ್ಮ ಪರಿಶೀಲನೆಗೆ ತೆರಳಲಿವೆ. ಈಗಾಗಲೇ ಕೆಲವು ಕಡೆಗಳಲ್ಲಿ ಪ್ರತ್ಯೇಕ ತಂಡಗಳು ಪರಿಶೀಲನೆ ಆರಂಭಿಸಿವೆ ಎಂದು ತಿಳಿಸಿದರು.

ಬರ ಪರಿಹಾರಕ್ಕೆ ಸಂಬಂಧಿಸಿದಂತೆ ಕೇಂದ್ರಕ್ಕೆ ಈಗಾಗಲೇ ಎರಡು ಮೆಮೊರಾಂಡಂಗಳನ್ನು ಸಲ್ಲಿಸಲಾಗಿದೆ. ಎರಡನೇ ಮೆಮೊರಾಂಡಂನಲ್ಲಿ 177 ತಾಲೂಕುಗಳ ಸುಮಾರು ₹46,000 ಕೋಟಿ ನಷ್ಟದ ಅಂದಾಜನ್ನು ನೀಡಲಾಗಿದೆ. ಕೇಂದ್ರದ ತಂಡಗಳ ಪರಿಶೀಲನೆ ಹಾಗೂ ಉಳಿದ ತಾಲೂಕುಗಳ ನಷ್ಟದ ಅಂದಾಜು ಪೂರ್ಣಗೊಂಡ ಬಳಿಕ ಒಟ್ಟು 217 ತಾಲೂಕುಗಳ ಪರಿಸ್ಥಿತಿಯನ್ನು ಒಳಗೊಂಡ ಮೂರನೇ ಹಾಗೂ ಅಂತಿಮ ಮೆಮೊರಾಂಡಂ ಸಲ್ಲಿಸಲಾಗುವುದು ಎಂದು ಹೇಳಿದರು.

ಚುನಾವಣಾ ಆಯೋಗಕ್ಕೆ ಮೆಮೊರಾಂಡಂ

ಚುನಾವಣಾ ಆಯೋಗಕ್ಕೆ ಮೆಮೊರಾಂಡಂ ಸಲ್ಲಿಸಲು ತೆರಳಿದ್ದೆವು : ಫಾರಂ–7 ಮೂಲಕ ಅರ್ಹ ಮತದಾರರ ಹೆಸರುಗಳನ್ನು ತೆಗೆದುಹಾಕಿರುವ ಆರೋಪದ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಗೆ ತೆರಳಿದ್ದ ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ಮಾಡುತ್ತಿರುವ ಟೀಕೆಗಳಿಗೆ ಪ್ರತಿಕ್ರಿಯಿಸಿದ ಡಾ. ಜಿ. ಪರಮೇಶ್ವರ ಅವರು, ನಾವು ಪ್ರತಿಭಟನೆ ಮಾಡಲು ಹೋಗಿರಲಿಲ್ಲ. ಚುನಾವಣಾ ಆಯೋಗಕ್ಕೆ ಮೆಮೊರಾಂಡಂ ಸಲ್ಲಿಸಲು ಹೋಗಿದ್ದೆವು. ಅವರು ನಮಗೆ ಸರಿಯಾಗಿ ಉತ್ತರ ನೀಡದ ಹಿನ್ನೆಲೆಯಲ್ಲಿ ಉತ್ತರ ನೀಡುವವರೆಗೂ ಅಲ್ಲಿಯೇ ಕುಳಿತುಕೊಂಡಿದ್ದೆವು. ಸರ್ಕಾರ ನಡೆಸುವವರು ನಾವು. ನಾವೇನಕ್ಕೆ ಪ್ರತಿಭಟನೆ ನಡೆಸುವುದಕ್ಕೆ ಹೋಗುತ್ತೇವೆ. ಮುಖ್ಯಮಂತ್ರಿಗಳಾಗಲಿ, ಸಚಿವರಾಗಲಿ ಯಾರೂ ಪ್ರತಿಭಟನೆ ಮಾಡಲು ಹೋಗಿರಲಿಲ್ಲ. ಈ ಕನಿಷ್ಠ ಪ್ರಜ್ಞೆ ನಮಗಿದೆ ಎಂದು ಪ್ರತ್ಯುತ್ತರಿಸಿದರು.

ಫಾರಂ–7 ಅರ್ಜಿಗಳ ವಿಚಾರವಾಗಿ ಈಗಾಗಲೇ ಹಲವು ಕಡೆ ಎಫ್‌ಐಆರ್‌ಗಳು ದಾಖಲಾಗಿವೆ. ಫಾರಂ–7 ಅರ್ಜಿಗಳನ್ನು ಒಟ್ಟಾಗಿ ಸಂಗ್ರಹಿಸಿ, ಸಹಿ ಮಾಡಿ ಬಂಡಲ್‌ಗಳ ರೂಪದಲ್ಲಿ ಸಲ್ಲಿಸಿರುವವರ ವಿರುದ್ಧ ಕೆಲವು ಕಡೆ ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸುವಂತೆ ಚುನಾವಣಾ ಆಯೋಗವನ್ನು ಕೋರಿದ್ದೇವೆ. ಏಳು ದಿನಗಳ ಕಾಲ ನೋಟಿಸ್ ನೀಡಿ ಕಾಯ್ದು, ನಂತರ ಎಫ್‌ಐಆರ್ ದಾಖಲಿಸುವುದಾಗಿ ಚುನಾವಣಾ ಆಯೋಗವು ಪತ್ರದ ಮೂಲಕ ತಿಳಿಸಿದೆ. ಅದರಂತೆ ಮುಂದಿನ ಕ್ರಮ ಕೈಗೊಳ್ಳಬೇಕಿದೆ. ಎಫ್‌ಐಆರ್ ದಾಖಲಾದ ನಂತರ ಪ್ರಕರಣದಲ್ಲಿ ಬೇರೆ ರೀತಿಯ ಬೆಳವಣಿಗೆಗಳು ನಡೆಯಲಿವೆ ಎಂದು ಹೇಳಿದರು.

ಇದು ದೊಡ್ಡ ರೀತಿಯ ಹಗರಣ. ಫಾರಂ –7 ಅರ್ಜಿಗಳು ಎಲ್ಲಿ ಮುದ್ರಣವಾಗಿವೆ? ಎಲ್ಲೋ ಒಂದು ಕಡೆ ಕೇಂದ್ರೀಕೃತವಾಗಿ ಮುದ್ರಣ ಮಾಡಿ, ಸಂಪೂರ್ಣ ಮಾಹಿತಿಯನ್ನು ಪ್ರಿಂಟ್ ಮಾಡಲಾಗಿದೆ. ನಂತರ ಅರ್ಜಿ ಸಲ್ಲಿಸುವವರ ಹೆಸರು ಮತ್ತು ಎಪಿಕ್ (EPIC) ಸಂಖ್ಯೆಯನ್ನು ಮಾತ್ರ ನಮೂದಿಸಿ ಸಹಿ ಮಾಡಲಾಗಿದೆ. ಒಂದೊಂದು ಬಂಡಲ್‌ನಲ್ಲಿ ಒಂದೇ ಸಮುದಾಯದ 50ರಿಂದ 60 ಜನರ ಅರ್ಜಿಗಳನ್ನು ಒಟ್ಟಾಗಿ ಸಲ್ಲಿಸಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಇವರಿಗೆ ಈ ಎಲ್ಲ ಮಾಹಿತಿ ಹೇಗೆ ತಿಳಿಯಿತು? ಅರ್ಜಿಗಳನ್ನು ಮುದ್ರಿಸಿದವರು ಯಾರು? ಎಲ್ಲಿ ಮುದ್ರಿಸಲಾಗಿದೆ? ಇದರ ಹಿಂದೆ ಹಲವು ಸಂಗತಿಗಳು ನಡೆಯುತ್ತಿವೆ ಎಂಬ ಅನುಮಾನವಿದೆ ಎಂದರು.

ಅಗತ್ಯವಿರುವ ಪುರಾವೆಗಳನ್ನು ಸಂಬಂಧಪಟ್ಟ ತನಿಖಾ ಸಂಸ್ಥೆಗಳ ಮುಂದೆ ಸೂಕ್ತ ಸಮಯದಲ್ಲಿ ಸಲ್ಲಿಸಲಾಗುವುದು. ಈಗ ಆರೋಪದ ಬಗ್ಗೆ ಪ್ರಸ್ತಾಪಿಸಿದ್ದೇವೆ. ಅಗತ್ಯವಿರುವ ದಾಖಲೆಗಳನ್ನು ಸಂಬಂಧಪಟ್ಟ ಏಜೆನ್ಸಿಗಳ ಮುಂದೆ ನೀಡುತ್ತೇವೆ ಎಂದು ತಿಳಿಸಿದರು.

ಆರೋಪಗಳ ಕುರಿತು ತನಿಖೆ

ಆರೋಪಗಳ ಕುರಿತು ತನಿಖೆ ನಡೆಯಲಿ : ಯಾರು ಬೇಕಾದರೂ ಏನು ಬೇಕಾದರೂ ವ್ಯಾಖ್ಯಾನ ಮಾಡಬಹುದು. ಆದರೆ ತಪ್ಪು ನಡೆದಿದ್ದರೆ ಅದನ್ನು ತಪ್ಪು ಎಂದು ಹೇಳಲೇಬೇಕು. ಈ ವಿಚಾರವನ್ನು ಮುಚ್ಚಿಹಾಕಲು ವಿರೋಧ ಪಕ್ಷದವರು ಬೇರೆ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನಾವು ಯಾವುದೇ ಪಕ್ಷದವರನ್ನು ಗುರಿಯಾಗಿಸಿಕೊಂಡು ಆರೋಪ ಮಾಡಿಲ್ಲ. ಬೆಳಗಾವಿಯಲ್ಲಿ ಕೆಲವರು ತಪ್ಪಾಗಿದೆ ಎಂದು ಒಪ್ಪಿಕೊಂಡು, ಲಿಖಿತವಾಗಿ ಹಿಂಪಡೆದಿರುವ ಉದಾಹರಣೆಯೂ ಇದೆ ಎಂದು ತಿಳಿಸಿದರು.

ಅರ್ಜಿಗಳನ್ನು ಸಲ್ಲಿಸಿದವರು ಬೆದರಿಕೆಗೆ ಒಳಗಾಗಿ ಹಿಂಪಡೆದಿದ್ದಾರೆ ಎಂಬ ಮಾಧ್ಯಮದವರ ಮಾತಿಗೆ ಪ್ರತಿಕ್ರಿಯಿಸಿದ ಅವರು, ಅರ್ಜಿ ಹಿಂಪಡೆದವರು ಚಿಕ್ಕ ಮಕ್ಕಳಲ್ಲ. ಅರ್ಜಿ ಸಲ್ಲಿಸುವಾಗ ಅವರಿಗೆ ಪ್ರಜ್ಞೆ ಇತ್ತು ಅಲ್ವಾ?. ಈಗ ವಿರೋಧ ಪಕ್ಷದವರು ತಮ್ಮನ್ನು ರಕ್ಷಿಸಿಕೊಳ್ಳಲು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಪ್ರಕರಣದ ಸತ್ಯಾಸತ್ಯತೆ ಹೊರಬರಬೇಕು. ತನಿಖೆ ನಡೆಸುವುದಕ್ಕೆ ನಮ್ಮ ಯಾವುದೇ ತಕರಾರಿಲ್ಲ. ತನಿಖೆ ನಡೆಸಿ, ಯಾವುದೇ ತಪ್ಪು ನಡೆದಿಲ್ಲ ಮತ್ತು ಎಲ್ಲವೂ ಸರಿಯಾಗಿದೆ ಎಂದು ಸಾಬೀತಾದರೆ ಅದನ್ನು ಒಪ್ಪಿಕೊಳ್ಳಲು ಸಿದ್ಧರಿದ್ದೇವೆ. ಆದರೆ ತಪ್ಪಾಗಿದೆ ಎಂಬುದು ನಮ್ಮ ಆರೋಪವಾಗಿದ್ದು, ಅದಕ್ಕೆ ಸಂಬಂಧಿಸಿದ ಪುರಾವೆಗಳನ್ನು ಒದಗಿಸುತ್ತೇವೆ. ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಲಿ. ತನಿಖೆಯ ನಂತರ ಸತ್ಯಾಂಶ ಹೊರಬರಲಿದೆ ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular