ನವದೆಹಲಿ : ಕರ್ನಾಟಕವನ್ನು ತೀವ್ರವಾಗಿ ಬಾಧಿಸುತ್ತಿರುವ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ರಾಜ್ಯಕ್ಕೆ ಅಗತ್ಯ ನೆರವು ಹಾಗೂ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಕೋರಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಬರದಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಉಂಟಾಗಿರುವ ಸಮಸ್ಯೆಗಳ ಕುರಿತು ಗಮನ ಸೆಳೆದಿರುವ ಖರ್ಗೆ, ಪ್ರಧಾನಿಯವರು ವೈಯಕ್ತಿಕವಾಗಿ ಹಾಗೂ ತುರ್ತಾಗಿ ಮಧ್ಯಪ್ರವೇಶಿಸುವಂತೆ ಮನವಿ ಮಾಡಿದ್ದಾರೆ.
ಕರ್ನಾಟಕವು ಇತ್ತೀಚಿನ ವರ್ಷಗಳಲ್ಲೇ ಅತ್ಯಂತ ಗಂಭೀರವಾದ ಬರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಸೆಪ್ಟೆಂಬರ್ ವೇಳೆಗೆ ರಾಜ್ಯದಲ್ಲಿ 58% ಮಳೆಯ ಕೊರತೆ ದಾಖಲಾಗಿದ್ದು, ವ್ಯಾಪಕ ಬೆಳೆ ನಷ್ಟ ಸಂಭವಿಸಿದೆ. ಇದರಿಂದ ರಾಜ್ಯದ ಲಕ್ಷಾಂತರ ರೈತ ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ.ಕರ್ನಾಟಕವು ₹18,748.23 ಕೋಟಿ ಅಂದಾಜು ನಷ್ಟದ ಹಿನ್ನೆಲೆಯಲ್ಲಿ, NDRF ಮತ್ತು SDRF ಮಾರ್ಗಸೂಚಿಗಳಡಿ ₹3,705.30 ಕೋಟಿ ನೆರವು ಕೋರಿದೆ ಎಂದು ತಿಳಿಸಿದ್ದಾರೆ.
ಪ್ರಧಾನಮಂತ್ರಿಯವರ ಮುಂದೆ ನಾವು 6 ಪ್ರಮುಖ ಮನವಿಗಳನ್ನು ಇಟ್ಟಿದ್ದೇವೆ:
1.ತಕ್ಷಣ ಕೇಂದ್ರ ತಂಡದ ಮೌಲ್ಯಮಾಪನ:
ಕಲ್ಯಾಣ ಕರ್ನಾಟಕ ಭಾಗಕ್ಕೆ ಯಾವುದೇ ವಿಳಂಬವಿಲ್ಲದೆ ವಿಶೇಷ ಕೇಂದ್ರ ತಂಡವನ್ನು ಕಳುಹಿಸಿ, ಸ್ಥಳದಲ್ಲೇ ಬರ ಪರಿಸ್ಥಿತಿ ಹಾಗೂ ಬೆಳೆ ನಷ್ಟವನ್ನು ಪರಿಶೀಲಿಸುವಂತೆ ಮನವಿ ಮಾಡಲಾಗಿದೆ.
2. ₹3,705.30 ಕೋಟಿ ನೆರವು ಬಿಡುಗಡೆ:
NDRF ಮತ್ತು SDRF ನಿಯಮಗಳಡಿ ಕರ್ನಾಟಕ ಕೋರಿರುವ ಸಂಪೂರ್ಣ ₹3,705.30 ಕೋಟಿ ಮೊತ್ತವನ್ನು ಯಾವುದೇ ಅನಿಯಂತ್ರಿತ ಕಡಿತವಿಲ್ಲದೆ ಮಂಜೂರು ಮಾಡಿ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿದೆ.
3. ಸಣ್ಣ ಮತ್ತು ಅತಿಸಣ್ಣ ರೈತರ ರಕ್ಷಣೆ:
ರೈತರಿಗೆ ಇನ್ಪುಟ್ ಸಬ್ಸಿಡಿ ಲೆಕ್ಕಾಚಾರ ಮಾಡುವಾಗ ಹಳೆಯ 2015-16ರ ಕೃಷಿ ಗಣತಿಯ ಬದಲಿಗೆ ಕರ್ನಾಟಕದ ನವೀಕೃತ ‘ಭೂಮಿ’ ಭೂ ದಾಖಲೆಗಳನ್ನು ಆಧಾರವಾಗಿಟ್ಟುಕೊಳ್ಳಬೇಕು. ಇದರಿಂದ ಅರ್ಹವಾಗಿರುವ ಯಾವುದೇ ರೈತರು ನೆರವಿನಿಂದ ವಂಚಿತರಾಗದಂತೆ ನೋಡಿಕೊಳ್ಳಬಹುದು.
4.ಬರ ಘೋಷಣೆ ಪ್ರಕ್ರಿಯೆ ತ್ವರಿತಗೊಳಿಸುವುದು:
ಪ್ರಸ್ತುತ 11 ಹೆಚ್ಚುವರಿ ತಾಲೂಕುಗಳಲ್ಲಿ ನಡೆಯುತ್ತಿರುವ ಗ್ರೌಂಡ್ ಟ್ರೂಥಿಂಗ್ ಪ್ರಕ್ರಿಯೆಯನ್ನು ಹಾಗೂ ಮುಂದೆ ಅರ್ಹತೆ ಪಡೆಯುವ ಯಾವುದೇ ತಾಲೂಕುಗಳನ್ನು ಒಂದೇ ನಿರಂತರ ಬರ ಪರಿಸ್ಥಿತಿಯ ಭಾಗವೆಂದು ಪರಿಗಣಿಸಿ, ಕೇಂದ್ರದ ನೆರವು ಒದಗಿಸುವಂತೆ ಮನವಿ ಮಾಡಲಾಗಿದೆ.
5. ಕುಡಿಯುವ ನೀರಿನ ಭದ್ರತೆಗೆ ನೆರವು:
ಕಾವೇರಿ ಹಾಗೂ ಜಲವಿದ್ಯುತ್ ಜಲಾನಯನ ಪ್ರದೇಶಗಳ ಜಲಾಶಯಗಳಲ್ಲಿ ಐತಿಹಾಸಿಕವಾಗಿ ಕಡಿಮೆ ನೀರಿನ ಮಟ್ಟ ಇರುವ ಹಿನ್ನೆಲೆಯಲ್ಲಿ, ಕುಡಿಯುವ ನೀರಿನ ಭದ್ರತೆ ಹಾಗೂ ಪರ್ಯಾಯ ವಿದ್ಯುತ್ ವ್ಯವಸ್ಥೆಯ ವೆಚ್ಚಕ್ಕೆ ಹೆಚ್ಚುವರಿ ನೆರವು ನೀಡುವಂತೆ ಕೋರಲಾಗಿದೆ.
6.ನ್ಯಾಯಸಮ್ಮತ ಹಾಗೂ ತ್ವರಿತ ನೆರವು:
ರಾಜ್ಯದಲ್ಲಿರುವ 31 ಲಕ್ಷಕ್ಕೂ ಹೆಚ್ಚು ರೈತ ಕುಟುಂಬಗಳು ಎದುರಿಸುತ್ತಿರುವ ಸಂಕಷ್ಟದ ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡು, ಯಾವುದೇ ರಾಜಕೀಯ ಪರಿಗಣನೆಗಳಿಗೆ ಒಳಗಾಗದೆ, ಪರಿಸ್ಥಿತಿಯ ಗಂಭೀರತೆಯ ಆಧಾರದ ಮೇಲೆ ಕರ್ನಾಟಕಕ್ಕೆ ತುರ್ತಾಗಿ ನೆರವು ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿದೆ.
ಬರ ಪರಿಹಾರವು ಮಾನವೀಯ ಅಗತ್ಯವಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮೀರಿರಬೇಕು. ಕರ್ನಾಟಕದ ಜನರು ಎದುರಿಸುತ್ತಿರುವ ಸಂಕಷ್ಟವನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರ ಸರ್ಕಾರವು ತುರ್ತು ಮತ್ತು ಮಾನವೀಯ ಸ್ಪಂದನೆ ನೀಡಲಿದೆ ಎಂಬ ಆಶಾಭಾವನೆ ಇದೆ.
ರಾಜ್ಯದ ಲಕ್ಷಾಂತರ ಬಾಧಿತ ನಾಗರಿಕರಿಗೆ ಅಗತ್ಯವಿರುವ ಆಹಾರ, ಮೇವು, ಕುಡಿಯುವ ನೀರು ಹಾಗೂ ಜೀವನೋಪಾಯದ ಭದ್ರತೆ ಒದಗಿಸಲು ಸಮಯೋಚಿತ ನೆರವು ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗಿದೆ. ಇದೇ ಮನವಿಯನ್ನು ಗೃಹ ಸಚಿವರಾದ ಅಮಿತ್ ಶಾ ಅವರಿಗೂ ಪತ್ರದ ಮೂಲಕ ಸಲ್ಲಿಸಿದ್ದೇನೆ ಎಂದು ಖರ್ಗೆ ತಮ್ಮ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

