HomeKarnatakaಮಹಾತ್ಮ ಗಾಂಧೀಜಿಯವರ ಜೀವನಾದರ್ಶಗಳು ಸಾರ್ವಕಾಲಿಕ : ಪ್ರಭುಲಿಂಗ ಕವಳಿಕಟ್ಟಿ

ಮಹಾತ್ಮ ಗಾಂಧೀಜಿಯವರ ಜೀವನಾದರ್ಶಗಳು ಸಾರ್ವಕಾಲಿಕ : ಪ್ರಭುಲಿಂಗ ಕವಳಿಕಟ್ಟಿ

ಶಿವಮೊಗ್ಗ : ಮಹಾತ್ಮ ಗಾಂಧೀಜಿಯವರ ಚಿಂತನೆಗಳು ಸ್ವಾತಂತ್ರ್ಯ ಹೋರಾಟಕ್ಕೆ ಮಾತ್ರ ಸೀಮಿತವಾಗಿರದೆ ಸತ್ಯ, ಅಹಿಂಸೆ, ಸರಳತೆ, ಸ್ವಾವಲಂಬನೆ, ಸಮಾನತೆ ಮತ್ತು ಸರ್ವೋದಯದಂತಹ ಮೌಲ್ಯಗಳು ಸಾರ್ವಕಾಲಿಕ ಮಹತ್ವವನ್ನು ಹೊಂದಿವೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಹೇಳಿದರು.

ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ಡಾ.ಬಿ.ಆರ್.ಅಂಬೇಡ್ಕರ್ಭವನದಲ್ಲಿ ಏರ್ಪಡಿಸಲಾಗಿದ್ದ ಗಾಂದೀಜಿಯವರ 157ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಇಂದಿನ ಸಂದರ್ಭದಲ್ಲಿ ಗಾಂಧೀಜಿಯವರ ಸತ್ಯದ ತತ್ವವು ಸುಳ್ಳು ಸುದ್ದಿ, ವದಂತಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿನ ತಪ್ಪು ಮಾಹಿತಿಯ ನಡುವೆ ನೈಜ ಮಾಹಿತಿಯನ್ನು ಪರಿಶೀಲಿಸುವ ಜವಾಬ್ದಾರಿಯನ್ನು ನೆನಪಿಸುತ್ತದೆ ಎಂದ ಅವರು, ಅಹಿಂಸೆಯು ವೈಯಕ್ತಿಕ ಮತ್ತು ಸಾಮಾಜಿಕ ಸಂಘರ್ಷಗಳನ್ನು ದ್ವೇಷ ಹಾಗೂ ಹಿಂಸೆಯ ಬದಲು ಸಂವಾದ, ಸಹನೆ ಮತ್ತು ಶಾಂತಿಯುತ ಮಾರ್ಗಗಳಿಂದ ಪರಿಹರಿಸುವ ಸಂದೇಶ ನೀಡುತ್ತದೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಮತ್ತು ಸ್ವಾವಲಂಬನೆಯ ಕಲ್ಪನೆ ಗ್ರಾಮೀಣ ಅಭಿವೃದ್ಧಿ, ಸ್ಥಳೀಯ ಉತ್ಪಾದನೆ, ಸಣ್ಣ ಕೈಗಾರಿಕೆಗಳು ಮತ್ತು ಸ್ಥಳೀಯ ಆಡಳಿತದ ಮಹತ್ವವನ್ನು ಒತ್ತಿ ಹೇಳುತ್ತದೆ. ಅವರ ಸರಳ ಜೀವನ ಮತ್ತು ಮಿತ ಬಳಕೆಯ ಚಿಂತನೆ ಕೂಡ ಗಮನಾರ್ಹವಾಗಿದೆ. ಜಾತಿ-ಧರ್ಮದ ಭೇದ-ಭಾವವನ್ನು ಮೀರಿ ಸಾಮಾಜಿಕ ಸಾಮರಸ್ಯ ಮತ್ತು ಸಮಾನತೆ ಬೆಳೆಸುವ ಅಗತ್ಯವನ್ನು ಗಾಂಧೀಜಿಯವರ ವಿಚಾರಗಳು ನೆನಪಿಸುತ್ತವೆ. ತಂತ್ರಜ್ಞಾನ ಮತ್ತು ಆಧುನಿಕತೆ ವೇಗವಾಗಿ ಬೆಳೆಯುತ್ತಿರುವ ಇಂದಿನ ಕಾಲದಲ್ಲಿ, ಮಾನವೀಯ ಮೌಲ್ಯಗಳನ್ನು ಕಾಪಾಡಿಕೊಳ್ಳಲು ಗಾಂಧೀಜಿಯವರ ಸತ್ಯ, ಅಹಿಂಸೆ, ಸರಳತೆ ಮತ್ತು ಸರ್ವೋದಯದ ಚಿಂತನೆಗಳು ಮಾರ್ಗದರ್ಶಕವಾಗಿವೆ ಎಂದರು.

ಲಾಲ್ ಬಹಾದ್ದೂರು ಶಾಸ್ತ್ರೀಜಿ ಅವರು ಸರಳತೆ, ಪ್ರಾಮಾಣಿಕತೆ ಮತ್ತು ಕರ್ತವ್ಯನಿಷ್ಠೆಗೆ ಹೆಸರಾದವರು. ದೇಶದ ಆಹಾರ ಭದ್ರತೆ ಮತ್ತು ಕೃಷಿ ಅಭಿವೃದ್ಧಿಗೆ ಅವರು ಹೆಚ್ಚಿನ ಒತ್ತು ನೀಡಿದ ಅವರು, ಸೈನಿಕರು ಮತ್ತು ರೈತರ ಮಹತ್ವವನ್ನು ಸಾರಿದರು. ರಾಷ್ಟ್ರಸೇವೆ, ಶಿಸ್ತು ಮತ್ತು ಸ್ವಾವಲಂಬನೆಯ ಅವರ ಆದರ್ಶಗಳು ಇಂದಿಗೂ ಪ್ರೇರಣಾದಾಯಕವಾಗಿವೆ ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ್ಅವರು ಮಾತನಾಡಿ, ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಪರಿಕಲ್ಪನೆಯು ಸ್ವಾವಲಂಬಿ, ಸ್ವಯಂ ಆಡಳಿತ ನಡೆಸುವ ಮತ್ತು ಸಮಾನತೆಯ ಆಧಾರದ ಮೇಲೆ ಬದುಕುವ ಗ್ರಾಮಗಳ ನಿರ್ಮಾಣವನ್ನು ಉದ್ದೇಶಿಸಿತ್ತು. ಗಾಂಧೀಜಿಯವರ ದೃಷ್ಟಿಯಲ್ಲಿ ಭಾರತದ ನಿಜವಾದ ಅಭಿವೃದ್ಧಿಯು ಗ್ರಾಮಗಳ ಅಭಿವೃದ್ಧಿಯಿಂದಲೇ ಸಾಧ್ಯ ಎನ್ನುವುದೇ ಆಗಿತ್ತು ಎಂದರು.

ಗಾಂಧೀಜಿಯವರು ಗ್ರಾಮವನ್ನು ಆಡಳಿತದ ಒಂದು ಘಟಕವಾಗಿ ನೋಡದೆ, ಸ್ವಯಂಪೂರ್ಣವಾದ ಸಣ್ಣ ಗಣರಾಜ್ಯದಂತೆ ಕಲ್ಪಿಸಿದ್ದರು. ಗ್ರಾಮಸ್ಥರು ತಮ್ಮ ಗ್ರಾಮದ ಅಗತ್ಯಗಳನ್ನು ತಾವೇ ನಿರ್ಧರಿಸಿ, ಸ್ಥಳೀಯ ಮಟ್ಟದಲ್ಲೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು ಎಂಬುದು ಅವರ ಆಶಯವಾಗಿತ್ತು ಎಂದರು.

ಗ್ರಾಮಸ್ಥರ ಭಾಗವಹಿಸುವಿಕೆಯಿಂದ ಗ್ರಾಮ ನಿರ್ವಹಣೆ, ಆಹಾರ, ಉದ್ಯೋಗ ಮತ್ತು ಅಗತ್ಯ ವಸ್ತುಗಳ ಉತ್ಪಾದನೆಯಲ್ಲಿ ಸ್ಥಳೀಯ ಸ್ವಾವಲಂಬನೆ, ಜನರ ನೇರ ಭಾಗವಹಿಸುವಿಕೆಯ ಮೂಲಕ ಸ್ಥಳೀಯ ಆಡಳಿತ, ಜಾತಿ, ಧರ್ಮ, ಲಿಂಗ ಹಾಗೂ ಆರ್ಥಿಕ ಭೇದಭಾವವಿಲ್ಲದ ಸಮಾಜ, ಖಾದಿ, ಕೈಮಗ್ಗ, ಕರಕುಶಲ ಮತ್ತು ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ, ಪ್ರತಿಯೊಬ್ಬರಿಗೂ ಮೂಲಭೂತ ಶಿಕ್ಷಣ, ಸ್ವಚ್ಛತೆ ಮತ್ತು ಆರೋಗ್ಯ ಸೌಲಭ್ಯ, ಅಹಿಂಸೆ ಮತ್ತು ಸಹಕಾರ: ಸಂಘರ್ಷಕ್ಕಿಂತ ಪರಸ್ಪರ ಸಹಕಾರದ ಮೂಲಕ ಸಮಸ್ಯೆಗಳ ಪರಿಹಾರ ಮುಂತಾದ ವಿಷಯಗಳು ಗಾಂಧೀಜಿಯವರ ಸಮಷ್ಠಿ ಚಿಂತನೆಯ ಸಂಕ್ಷಿಪ್ತ ರೂಪಗಳಾಗಿವೆ ಎಂದರು.

ಗಾಂಧೀಜಿಯವರ ಗ್ರಾಮ ಸ್ವರಾಜ್ಯವು ಕೇವಲ ಪಂಚಾಯತ್ ವ್ಯವಸ್ಥೆಯ ಕಲ್ಪನೆಯಲ್ಲ ಬದಲಾಗಿ ಅದು ಜನರ ಸಬಲೀಕರಣ, ಸ್ವಾವಲಂಬನೆ, ಸಾಮಾಜಿಕ ನ್ಯಾಯ ಮತ್ತು ನೈತಿಕ ಜೀವನವನ್ನು ಒಳಗೊಂಡ ಸಮಗ್ರ ಅಭಿವೃದ್ಧಿಯ ದೃಷ್ಟಿಕೋನವಾಗಿತ್ತು. ಇಂದಿನ ಸ್ಥಳೀಯ ಸ್ವಯಂ ಆಡಳಿತ ಮತ್ತು ಸ್ಥಳೀಯ ಕಾನೂನುಗಳು, ಗ್ರಾಮೀಣ ಅಭಿವೃದ್ಧಿ ಮತ್ತು ಜನರ ಭಾಗವಹಿಸುವಿಕೆಯ ಚರ್ಚೆಗಳಲ್ಲಿ ಈ ಚಿಂತನೆ ಕಾಣಬಹುದಾಗಿದೆ ಎಂದರು.

ಜಿಲ್ಲಾ ಪೊಲೀಸ್ವರಿಷ್ಠಾಧಿಕಾರಿ ಬಿ.ನಿಖಿಲ್ಅವರು ಮಾತನಾಡಿ, ಗಾಂಧೀಜಿಯವರ ಜೀವನದ ಪ್ರಮುಖ ಎರಡು ತತ್ವಗಳೆಂದರೆ ಸತ್ಯ ಮತ್ತು ಅಹಿಂಸೆ. ಇವು ಕೇವಲ ಅವರ ವೈಯಕ್ತಿಕ ಜೀವನದ ಮೌಲ್ಯಗಳಾಗಿರದೆ, ಭಾರತದ ಸ್ವಾತಂತ್ರ್ಯ ಹೋರಾಟದ ಪ್ರಮುಖ ಮಾರ್ಗದರ್ಶಕ ತತ್ವಗಳಾಗಿದ್ದವು. ಸತ್ಯ ಎಂದರೆ ನಿಜವನ್ನು ನಿಷ್ಠೆಯಿಂದ ಸ್ವೀಕರಿಸುವುದು, ಹೇಳುವುದು ಮತ್ತು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವುದು. ಗಾಂಧೀಜಿಯವರು ಸತ್ಯವನ್ನು ಜೀವನದ ಪರಮ ಮೌಲ್ಯವೆಂದು ಪರಿಗಣಿಸಿದ್ದರು. ಅವರ ಪ್ರಸಿದ್ಧ ವಿಚಾರವೆಂದರೆ “ಸತ್ಯವೇ ದೇವರು”. ಯಾವುದೇ ಸಂದರ್ಭದಲ್ಲಿಯೂ ಸುಳ್ಳು, ಅನ್ಯಾಯ ಮತ್ತು ವಂಚನೆಯ ಮಾರ್ಗವನ್ನು ಅನುಸರಿಸದೆ ಸತ್ಯದ ಮಾರ್ಗದಲ್ಲಿ ನಡೆಯಬೇಕು ಎಂಬುದು ಅವರ ಸಂದೇಶವಾಗಿತ್ತು ಎಂದರು.

ಅಹಿಂಸೆ ಎಂದರೆ ಯಾವುದೇ ವ್ಯಕ್ತಿಗೆ ದೈಹಿಕವಾಗಿಯಷ್ಟೇ ಅಲ್ಲದೆ, ಮಾತು ಮತ್ತು ಕೃತಿಗಳ ಮೂಲಕವೂ ಹಾನಿ ಮಾಡದಿರುವುದು. ಅನ್ಯಾಯವನ್ನು ಎದುರಿಸುವಾಗಲೂ ಹಿಂಸೆಯನ್ನು ಆಶ್ರಯಿಸದೆ, ಶಾಂತಿ, ಸಹನೆ ಮತ್ತು ನೈತಿಕ ಧೈರ್ಯದಿಂದ ಹೋರಾಡುವುದು ಗಾಂಧೀಜಿಯವರ ಅಹಿಂಸೆಯ ಪರಿಕಲ್ಪನೆಯಾಗಿತ್ತು. ಸತ್ಯಾಗ್ರಹದ ಮೂಲಕ ಸತ್ಯ ಮತ್ತು ಅಹಿಂಸೆಯನ್ನು ಸಾಮಾಜಿಕ ಹಾಗೂ ರಾಜಕೀಯ ಹೋರಾಟದ ಸಾಧನಗಳನ್ನಾಗಿ ರೂಪಿಸಿದವರು ಗಾಂಧೀಜಿ ಎಂದರು.

ಇಂದಿಗೂ ಸತ್ಯ, ಅಹಿಂಸೆ, ಸಹನೆ, ಪರಸ್ಪರ ಗೌರವ ಮತ್ತು ನ್ಯಾಯದ ಮೌಲ್ಯಗಳು ಶಾಂತಿಯುತ ಸಮಾಜ ಮತ್ತು ಪ್ರಜಾಪ್ರಭುತ್ವದ ಬಲವರ್ಧನೆಗೆ ಮಹತ್ವದ್ದಾಗಿವೆ. ಗಾಂಧೀಜಿಯವರ ಸಂದೇಶವು—ಅನ್ಯಾಯವನ್ನು ವಿರೋಧಿಸಬೇಕು, ಆದರೆ ದ್ವೇಷ ಮತ್ತು ಹಿಂಸೆಯನ್ನು ಆಶ್ರಯಿಸಬಾರದು—ಎಂಬ ಮಾನವೀಯ ಮೌಲ್ಯವನ್ನು ಸಾರುತ್ತದೆ ಎಂದರು.

ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಹಿರಿಯ ಸಾಹಿತಿ ಹಾಗೂ ವಿಶ್ರಾಂತ ಪ್ರಾಂಶುಪಾಲ ಡಾ. ಹೆಚ್.ಟಿ. ಕೃಷ್ಣಮೂರ್ತಿ ಅವರು ಮಾತನಾಡಿ, ಗಾಂಧೀಜಿಯವರು ಪ್ರತಿಪಾದಿಸಿದ ಮೂರು ಧ್ಯೇಯಗಳೆಂದರೆ ಹಿಂದೂ ಮುಸ್ಲಿಂ ಐಕ್ಯತೆ, ಅನಕ್ಷರತೆ ನಿವಾರಣೆ ಹಾಗೂ ಸರಳತೆ. ಭರತಖಂಡದ ಮೊದಲರೆಡು ಅಧ್ಯಾಯಗಳು ರಾಮಾಯಣ ಮತ್ತು ಮಹಾಭಾರತ. ಮೂರನೇ ಅಧ್ಯಾಯವೇ ಗಾಂಧೀಜಿ ಎಂದರು.

ಗಾಂಧೀಜಿಯವರ ರಾಮ ದೇವಾಲಯದಲ್ಲಿಲ್ಲ. ರಾಮ ಇರುವುದು ಆದರ್ಶ, ಸಂಕಲ್ಪದಲ್ಲಿ ಎಂದ ಅವರು, ಸಾಮಾಜಿಕ ಜಾಲತಾಣಗಳು ಹಬ್ಬಿಸುವ ಸುಳ್ಳನ್ನು ಎಂದಿಗೂ ನಂಬಬೇಡಿ. ಸತ್ಯವನ್ನು ಹೇಳಲಾಗದಿದ್ದರೂ ಸುಳ್ಳನ್ನು ಸುಳ್ಳೆಂದು ಹೇಳುವ ಧೈರ್ಯ ಮಾಡಬೇಕು. ಇತ್ತೀಚೆಗೆ ನಡೆಯುತ್ತಿರುವ ಪ್ರಕೃತಿ ವಿಕೋಪಕ್ಕೆ ಕಾರಣ ಮನುಷ್ಯ ಗಾಂಧೀಜಿಯವರ ಸರಳ ಜೀವನ ಅಳವಡಿಸಿಕೊಳ್ಳದಿರುವುದು ಎಂದರು.

ಗಾಂಧೀಜಿಯವರು ಬರೆದ ಹಿಂದೂ ಸ್ವರಾಜ್ ಪುಸ್ತಕದ 240 ಪುಟಗಳಲ್ಲಿ 40 ಪುಟಗಳನ್ನು ಎಡಗೈಯಲ್ಲಿ ಬರೆದದ್ದು. ಅವರು ಎರಡೂ ಕೈಯಲ್ಲಿ ಬರೆಯುತ್ತಿದ್ದರು. ಅಂತಹವರು ಮಹಾನ್ ಬುದ್ಧಿವಂತರಾಗಿರುತ್ತಾರೆ. ಅವರು ದಿನಂಪ್ರತಿ 18 ಕಿ.ಮೀ ನಡೆಯುತ್ತಿದ್ದರು. ಅವರು ತಮ್ಮ ಜೀವತಾವಧಿಯ 35 ವರ್ಷದೊಳಗೆ 75000 ಕಿ.ಮೀ ವಿಶ್ವ ಪರ್ಯಟನೆ ಮಾಡಿದ್ದರು.

ಅವರ ವ್ಯಕ್ತಿತ್ವದ ದರ್ಶನ : 40 ದೇಶದೊಳಗೆ ಗಾಂಧಿ ರಸ್ತೆ ಮತ್ತು ವೃತ್ತಗಳಿವೆ. 92 ದೇಶಗಳಲ್ಲಿ ಅವರ ಪ್ರತಿಮೆ ಇದೆ. 150 ದೇಶಗಳು ಗಾಂಧೀಜಿಯವರ ಅಂಚೆ ಚೀಟಿ ಹೊರತಂದಿವೆ. ವಿದೇಶಗಳ ಅಂಚೆ ಚೀಟಿ ಪ್ರದರ್ಶನಗಳಲ್ಲಿ ಗಾಂಧೀಜಿಯವರ 711 ಅಂಚೆ ಚೀಟಿ ಪ್ರದರ್ಶನಗೊಂಡಿವೆ. ಸರಳತೆ, ಸ್ವಚ್ಛತೆ, ಸತ್ಯ ಮತ್ತು ನಿಷ್ಠೆಯನ್ನು ಮೈಗೂಡಿಸಿಕೊಂಡು ವಿಶ್ವದ ಮಹಾನ್ ನಾಯಕರಾಗಿದ್ದಾರೆ. – ಧನಂಜಯ ಸರ್ಜಿ, ಮಾನ್ಯ ವಿಧಾನ ಪರಿಷತ್ಸದಸ್ಯರು.

ಸರ್ವಧರ್ಮ ಪ್ರಾರ್ಥನೆಯಲ್ಲಿ ಭಗವದ್ಗೀತೆ, ಕುರಾನ್ಮತ್ತು ಬೈಬಲ್ವಾಚನಮಾಡಲಾಯಿತು. ಗಾಂಧೀಜಿಯವರ 157ನೇ ಜಯಂತಿ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಸ್ನಾತಕೋತ್ತರ, ಪದವೀಪೂರ್ವ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರು ನಗದು ಪುರಸ್ಕಾರ ಮತ್ತು ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಅಭಿಷೇಕ್ವಿ., ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಚಂದ್ರಪ್ಪ ಗುಂಡಪಲ್ಲಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಂಜುನಾಥಸ್ವಾಮಿ,ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಆರ್.ಮಾರುತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ಹಾಲಾಡಿ, ಕಾರ್ಮಿಕ ಇಲಾಖೆಯ ರಘುನಾಥ್ ಮತ್ತಿತರರು ಉಪಸ್ಥಿತರಿದ್ದರು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular