ಮುಂಬೈ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು. ಅವರು ರಾಜೀನಾಮೆ ನೀಡದಿದ್ದರೆ ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆಗೆ ಆಗ್ರಹಿಸಿ ದೇಶಾದ್ಯಂತ ಹೋರಾಟ ನಡೆಸುವುದಾಗಿ ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಹೇಳಿದ್ದಾರೆ.
ಮುಂಬೈನ ಶಿವಾಜಿ ಪಾರ್ಕ್ನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಮತದಾರರ ಪಟ್ಟಿಯಿಂದ ಸುಮಾರು 13 ಕೋಟಿ ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂದು ಆರೋಪಿಸಿದರು. ಜ್ಞಾನೇಶ್ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅನುಕೂಲವಾಗುವ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ದೀಪ್ಕೆ ದೂರಿದರು.‘ಒಂದು ದೇಶ, ಒಂದು ಚುನಾವಣೆ’ ಎಂಬ ಕೇಂದ್ರ ಸರ್ಕಾರದ ಘೋಷಣೆಯ ಹಿಂದೆ ಬಿಜೆಪಿ ‘ಒಂದು ದೇಶ, ಒಂದು ಪಕ್ಷ’ದ ಆಡಳಿತ ತರಲು ಮುಂದಾಗಿದೆ ಎಂದು ಅವರು ಆರೋಪಿಸಿದರು.
https://x.com/abhijeet_dipke/status/2105966451786203577
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಿದ್ದೆವು. ಇದೀಗ ಎರಡು ತಿಂಗಳಲ್ಲೇ ಮತ್ತೊಂದು ದೊಡ್ಡ ಹೋರಾಟ ನಡೆಸಬೇಕಾದ ಪರಿಸ್ಥಿತಿ ಬಂದಿದೆ ಎಂದು ದೀಪ್ಕೆ ಹೇಳಿದರು. ಕೇಂದ್ರ ಸರ್ಕಾರದ ವಿರುದ್ಧವೂ ಅವರು ಟೀಕೆ ವ್ಯಕ್ತಪಡಿಸಿದರು.ಈ ಪ್ರತಿಭಟನೆಗೆ ಮುಂಬೈ ಪೊಲೀಸರು ಅನುಮತಿ ನೀಡಿರಲಿಲ್ಲ. ಆದರೂ ಸಿಜೆಪಿ ಕಾರ್ಯಕರ್ತರು ಶಿವಾಜಿ ಪಾರ್ಕ್ನಲ್ಲಿ ಸೇರಿ ಪ್ರತಿಭಟನೆ ನಡೆಸಿದರು. ಸ್ಥಳೀಯರಿಂದಲೂ ಪ್ರತಿಭಟನೆಗೆ ವಿರೋಧ ವ್ಯಕ್ತವಾಯಿತು.ಅನುಮತಿ ಇಲ್ಲದೆ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಸಿಜೆಪಿ ನಾಯಕರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.

