ನಾವು ಸಾಮಾನ್ಯವಾಗಿ ವಿಸ್ಕಿಯನ್ನು ವಿಭಿನ್ನ ರೀತಿಯಲ್ಲಿ ಸೇವಿಸುವುದನ್ನು ನೋಡಿರುತ್ತೇವೆ. ಕೆಲವರು ಅದನ್ನು ನೀರು ಅಥವಾ ಐಸ್ ಕ್ಯೂಬ್ಸ್ ಜೊತೆ ಸೇವಿಸಿದರೆ, ಇನ್ನು ಕೆಲವರು ಸೋಡಾ ಅಥವಾ ಕೋಲ್ಡ್ ಡ್ರಿಂಕ್ಸ್ ಜೊತೆ ಮಿಕ್ಸ್ ಮಾಡಿ ಕುಡಿಯುತ್ತಾರೆ. ಅದರಲ್ಲೂ ಚಾಕೊಲೇಟ್, ಡ್ರೈ ಫ್ರೂಟ್ಸ್ ಅಥವಾ ಚಿಕನ್ ಫ್ರೈ ಜೊತೆ ವಿಸ್ಕಿ ಕಾಂಬಿನೇಷನ್ ಜನಪ್ರಿಯ. ಆದರೆ, ಎಂದಾದರೂ ಬಿಸಿ ಬಿಸಿ ಬೇಳೆ ಸಾರಿಗೆ (ದಾಲ್) ವಿಸ್ಕಿ ಮಿಕ್ಸ್ ಮಾಡಿರುವುದನ್ನು ಕೇಳಿದ್ದೀರಾ? ಕೇಳಲು ಅಚ್ಚರಿಯೆನಿಸಿದರೂ ಇದು ಸತ್ಯ! ಹೈದರಾಬಾದ್‌ನ ಪ್ರಸಿದ್ಧ ‘ವಿಸ್ಕಿ ಸಾಂಬಾ’ ರೆಸ್ಟೋರೆಂಟ್ ‘ದಾಲ್ ವಿಸ್ಕಿ’ ಎಂಬ ವಿಭಿನ್ನ ಖಾದ್ಯವನ್ನು ಪರಿಚಯಿಸಿ ಆಹಾರ ಪ್ರಿಯರ ಗಮನಸೆಳೆದಿದೆ.
ಉತ್ತರ ಭಾರತ ಶೈಲಿಯ ಪ್ರಸಿದ್ಧ ಆಹಾರವಾದ ‘ದಾಲ್ ಮಖನಿ’ಗೆ ರೆಸ್ಟೋರೆಂಟ್‌ನ ಸಿಗ್ನೇಚರ್ ವಿಸ್ಕಿಯನ್ನು ಸೇರಿಸಿ ಈ ಹೊಸ ಪ್ರಯೋಗ ಮಾಡಲಾಗಿದೆ. ಪ್ರಸಿದ್ಧ ಕಂಟೆಂಟ್ ಕ್ರಿಯೇಟರ್‌ಗಳಾದ ಗರಿಮಾ ಮತ್ತು ಮಹಿಮಾ ನಹಾಟಾ ಅವರು ಈ ‘ದಾಲ್ ವಿಸ್ಕಿ’ ಮಾಡುವ ವೀಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಪ್ರಸ್ತುತ ಇದು ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಖಾದ್ಯವನ್ನು ಬಡಿಸುವ ಶೈಲಿಯೇ ಅತ್ಯಂತ ಆಕರ್ಷಕವಾಗಿದೆ. ಗ್ರಾಹಕರ ಟೇಬಲ್ ಮೇಲೆಯೇ ಬಿಸಿ ಬಿಸಿ ದಾಲ್ ಮಖನಿಗೆ ವಿಸ್ಕಿ ಹಾಗೂ ತುಪ್ಪದ ಒಗ್ಗರಣೆ (ತಡ್ಕಾ) ನೀಡಲಾಗುತ್ತದೆ. ಚೆಫ್ ಅವರು ಮೊದಲು ತುಪ್ಪದಲ್ಲಿ ಒಣ ಮೆಣಸಿನಕಾಯಿ ಹಾಕಿ ಹುರಿದು, ಬಳಿಕ ಅದಕ್ಕೆ ವಿಸ್ಕಿ ಸೇರಿಸಿ ಬೆಂಕಿ ಎಬ್ಬಿಸುತ್ತಾರೆ (ಫ್ಲಾಂಬೇ). ನಂತರ ಆ ಘಮಘಮಿಸುವ ಒಗ್ಗರಣೆಯನ್ನು ದಾಲ್‌ಗೆ ಸುರಿದು ಕುಲ್ಚಾ ಜೊತೆ ಸವಿಯಲು ನೀಡಲಾಗುತ್ತದೆ.
ಈ ವೀಡಿಯೊಗೆ ಇಂಟರ್‌ನೆಟ್‌ನಲ್ಲಿ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. “ಬಹಳ ಕುತೂಹಲಕಾರಿಯಾಗಿದೆ” ಎಂದು ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರೆ, “ವಿಸ್ಕಿಯನ್ನು ದಾಲ್‌ಗೆ ಹಾಕುವ ಬದಲು ಹಾಗೆಯೇ ಕುಡಿಯುವುದು ಮೇಲು” ಎಂದು ಇನ್ನು ಕೆಲವರು ತಮಾಷೆ ಮಾಡಿದ್ದಾರೆ. “ಇದರಿಂದ ದಾಲ್ ಮಖನಿಯ ಮೂಲ ರುಚಿ ಹಾಳಾಗುವುದಿಲ್ಲವೇ?” ಎಂದು ಕೆಲವು ಆಹಾರ ಪ್ರಿಯರು ಪ್ರಶ್ನಿಸಿದ್ದಾರೆ. ಆದರೆ ಭಾರತೀಯರ ಈ ಹೊಸ ಮಾದರಿಯ ಸೃಜನಶೀಲತೆಗೆ ಅನೇಕರು ಫಿದಾ ಆಗಿದ್ದಾರೆ.

