ನವದೆಹಲಿ: ಕೆಪಿಎಸ್ ಸಿಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣದಕು ರಿತು ತನಿಖೆಗೆ ವಿಶೇಷ ತನಿಖಾ ತಂಡ (SIT) ರಚಿಸಿ, ಹೊಸದಾಗಿ ತನಿಖೆ ನಡೆಸುವಂತೆ ಕರ್ನಾಟಕ ಹೈಕೋರ್ಟ್ ನೀಡಿದ್ದ ನಿರ್ದೇಶನಗಳಿಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.
ಕರ್ನಾಟಕ ಸರ್ಕಾರವು ಸೆಪ್ಟೆಂಬರ್ 21ರಂದು ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮನೋಜ್ ಮಿಶ್ರಾ ಹಾಗೂ ನ್ಯಾಯಮೂರ್ತಿ ವಿಜಯ್ ಬಿಷ್ಣೋಯ್ ಅವರ ಪೀಠ ಈ ಮಧ್ಯಂತರ ಆದೇಶ ನೀಡಿದೆ.
ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳು ಹಾಗೂ ಕೆಪಿಎಸ್ ಸಿಯ ಇತರ ನೇಮಕಾತಿಗಳಿಗೆ ಸಂಬಂಧಿಸಿದ ಆರೋಪಗಳ ತನಿಖೆಗಾಗಿ ಹೈಕೋರ್ಟ್ ಅಲೋಕ್ ಕುಮಾರ್ ನೇತೃತ್ವದಲ್ಲಿ ಎಸ್ಐಟಿ ರಚಿಸಿತ್ತು.
ರಾಜ್ಯ ಸರ್ಕಾರದ ಪರ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದರು. ಈಗಾಗಲೇ ಸಿಐಡಿ ಪ್ರಕರಣಗಳ ತನಿಖೆ ನಡೆಸುತ್ತಿದ್ದು, ತನಿಖೆ ಅಂತಿಮ ಹಂತದಲ್ಲಿದೆ ಎಂದು ಅವರು ತಿಳಿಸಿದರು. ಪ್ರಸ್ತುತ ಪ್ರಕರಣಗಳ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳ ವಿರುದ್ಧ ಯಾವುದೇ ನಿರ್ದಿಷ್ಟ ಆರೋಪಗಳಿಲ್ಲ. ಹೀಗಿರುವಾಗ ಹೊಸದಾಗಿ ತನಿಖೆ ನಡೆಸುವ ಅಗತ್ಯವಿಲ್ಲ ಎಂದು ಸಿಬಲ್ ವಾದಿಸಿದರು. ಹೊಸದಾಗಿ ತನಿಖೆ ಸಿದರೆ ಸಿಐಡಿ ಈಗಾಗಲೇ ನಡೆಸಿರುವ ತನಿಖೆಯನ್ನು ಮತ್ತೆ ಆರಂಭಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಕೋರ್ಟ್ ಗಮನಕ್ಕೆ ತಂದರು.
ರಾಜ್ಯ ಸರ್ಕಾರದ ಸಲಹೆಗಳನ್ನು ಪಡೆಯದೆ ಹೈಕೋರ್ಟ್ ನೇರವಾಗಿ ಎಸ್ ಐಟಿ ಸದಸ್ಯರನ್ನು ಆಯ್ಕೆ ಮಾಡಿರುವುದಕ್ಕೂ ಆಕ್ಷೇಪ ವ್ಯಕ್ತಪಡಿಸಿದರು. ಎಸ್ ಐಟಿಯಲ್ಲಿ ಕಾರಾಗೃಹಗಳ ಪೊಲೀಸ್ ಮಹಾನಿರ್ದೇಶಕ ಮತ್ತು ಪೊಲೀಸ್ ಮಹಾನಿರೀಕ್ಷಕ ಅಲೋಕ್ ಕುಮಾರ್ ಅವರನ್ನು ಸೇರಿಸಿರುವುದರ ಬಗ್ಗೆಯೂ ಸಿಬಲ್ ಆಕ್ಷೇಪ ವ್ಯಕ್ತಪಡಿಸಿದರು. ಪ್ರತ್ಯೇಕ ಸಿಬಿಐ ತನಿಖೆಯೊಂದರಲ್ಲಿ ಅಲೋಕ್ ಕುಮಾರ್ ಅವರ ಫೋನ್ ಇಂಟರ್‌ಸೆಪ್ಷನ್ ಮತ್ತು ಟ್ಯಾಪಿಂಗ್‌ಗೆ ಸಂಬಂಧಿಸಿದ ಪಾತ್ರದ ಕುರಿತು ಪ್ರಶ್ನೆಗಳು ಎದ್ದಿವೆ ಎಂದು ತಿಳಿಸಿದರು.
ಪ್ರತಿವಾದಿಗಳ ಪರ ವಾದಿಸಿದ ಹಿರಿಯ ವಕೀಲ ಕೆ. ಪರಮೇಶ್ವರ್ ವಾದ ಮಂಡಿಸಿದರು. ವಾದ ಪ್ರತಿವಾದ ಆಲಿಸಿದ ಸುಪ್ರೀಂ ಕೋರ್ಟ್ ಅಕ್ಟೋಬರ್ 12ಕ್ಕೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಿದ್ದು, ಹೈಕೋರ್ಟ್ ರಚಿಸಿದ್ದ ಎಸ್ ಐಟಿಯ ಸದಸ್ಯರ ಬಗ್ಗೆ ರಾಜ್ಯ ಸರ್ಕಾರಕ್ಕೆ ಯಾವುದೇ ಆಕ್ಷೇಪಣೆಗಳಿದ್ದರೆ, ಅವುಗಳನ್ನು ಒಳಗೊಂಡ ಹೆಚ್ಚುವರಿ ಪ್ರಮಾಣಪತ್ರವನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಸೂಚಿಸಿದೆ. . ಪರ್ಯಾಯ ಅಧಿಕಾರಿಗಳ ಹೆಸರನ್ನೂ ರಾಜ್ಯ ಸರ್ಕಾರ ಸೂಚಿಸಬಹುದು ಎಂದು ತಿಳಿಸಿದೆ.

