ಹೃದಯ ಸಂಬಂಧಿ ಕಾಯಿಲೆ ಎಂದರೆ ಕೇವಲ ರಕ್ತನಾಳಗಳ ಬ್ಲಾಕೇಜ್ ಅಥವಾ ಹೃದಯಾಘಾತ (ಹಾರ್ಟ್ ಅಟ್ಯಾಕ್) ಮಾತ್ರವಲ್ಲ. ಹಲವು ಬಾರಿ ಯಾವುದೇ ಬಾಹ್ಯ ರೋಗಲಕ್ಷಣಗಳು ಕಂಡುಬರದೆ ಹೃದಯದ ಸ್ನಾಯುಗಳಲ್ಲಿ ಸದ್ದಿಲ್ಲದೆ ಉರಿಯೂತ ಅಥವಾ ಹಾನಿ ಉಂಟಾಗುವ ಸಾಧ್ಯತೆಯಿರುತ್ತದೆ. ರೋಗಲಕ್ಷಣಗಳು ಗೋಚರಿಸುವಷ್ಟರಲ್ಲಿ ಹೃದಯದ ಕಾರ್ಯಕ್ಷಮತೆ ಕ್ಷೀಣಿಸಿರುತ್ತದೆ. ಇಂತಹ ಗುಪ್ತ ಹೃದಯ ಸಮಸ್ಯೆಯನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು ದೆಹಲಿಯ ಏಮ್ಸ್ (ಎಐಐಎಮ್‌ಎಸ್) ಸಂಸ್ಥೆಯ ಸಂಶೋಧಕರು ಅತ್ಯಾಧುನಿಕ ಕಾರ್ಡಿಯಾಕ್ ಎಂಆರ್‌ಐ ತಂತ್ರಜ್ಞಾನವನ್ನು ಬಳಸಿ ಹೊಸ ಭರವಸೆ ಮೂಡಿಸಿದ್ದಾರೆ.
ಏಮ್ಸ್ ವೈದ್ಯರ ಜಂಟಿ ಅಧ್ಯಯನ
ದೆಹಲಿಯ ಏಮ್ಸ್ ಸಂಸ್ಥೆಯ ಕಾರ್ಡಿಯೋವಾಸ್ಕ್ಯುಲರ್ ರೇಡಿಯೋಲಜಿ, ಕಾರ್ಡಿಯೋಲಜಿ ಹಾಗೂ ಜೆರಿಯಾಟ್ರಿಕ್ ಮೆಡಿಸಿನ್ ವಿಭಾಗಗಳು ಜಂಟಿಯಾಗಿ ಈ ಸಂಶೋಧನೆ ನಡೆಸಿವೆ. ‘ಕಾರ್ಡಿಯಾಕ್ ಸಾರ್ಕೋಯಿಡೋಸಿಸ್’ ನಂತಹ ಹೃದಯದ ಸ್ನಾಯುಗಳನ್ನು ಕಾಡುವ ಹಾಗೂ ಪಂಪಿಂಗ್ ಕ್ಷಮತೆ ತಗ್ಗಿಸುವ ಕಾಯಿಲೆಯನ್ನು ಸಾಮಾನ್ಯ ಪರೀಕ್ಷೆಗಳು ಪತ್ತೆಹಚ್ಚಲು ವಿಫಲವಾದಾಗ, ಈ ಹೊಸ ಕಾರ್ಡಿಯಾಕ್ ಎಂಆರ್‌ಐ ತಂತ್ರಜ್ಞಾನವು ಅತ್ಯಂತ ನಿಖರವಾಗಿ ಆರಂಭಿಕ ಹಾನಿಯನ್ನು ಗುರುತಿಸಿದೆ. ಈ ಅಧ್ಯಯನದ ವಿವರಗಳು ಪ್ರಸಿದ್ಧ ‘ಇಂಡಿಯನ್ ಜರ್ನಲ್ ಆಫ್ ರೇಡಿಯೋಲಜಿ ಅಂಡ್ ಇಮೇಜಿಂಗ್’ ನಿಯತಕಾಲಿಕೆಯಲ್ಲಿ ಪ್ರಕಟವಾಗಿವೆ.
ಅತ್ಯಾಧುನಿಕ ಎಂಆರ್‌ಐ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತದೆ ?
ಏಮ್ಸ್ ಸಂಸ್ಥೆಯ ರೇಡಿಯೋಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಅಮರಿಂದರ್ ಸಿಂಗ್ ಮಲ್ಹಿ ಅವರ ಪ್ರಕಾರ, ಟಿ1 ಮ್ಯಾಪಿಂಗ್, ಟಿ2 ಮ್ಯಾಪಿಂಗ್ ಹಾಗೂ ಲೇಟ್ ಗ್ಯಾಡೋಲಿನಿಯಮ್ ಎನ್‌ಹ್ಯಾನ್ಸ್‌ಮೆಂಟ್ (ಎಲ್‌ಜಿಇ) ಎಂಬ ಮೂರು ಸುಧಾರಿತ ತಂತ್ರಜ್ಞಾನಗಳನ್ನು ಎಂಆರ್‌ಐ ಪರೀಕ್ಷೆಯಲ್ಲಿ ಬಳಸಲಾಗುತ್ತದೆ.
ಟಿ1 ಮ್ಯಾಪಿಂಗ್: ಹೃದಯದ ಸ್ನಾಯುಗಳ ಅಂಗಾಂಶಗಳ ಆರೋಗ್ಯವನ್ನು ಅಳೆದು, ಸೂಕ್ಷ್ಮ ಬದಲಾವಣೆಗಳನ್ನು ಪತ್ತೆ ಮಾಡುತ್ತದೆ.
ಟಿ2 ಮ್ಯಾಪಿಂಗ್: ಅಂಗಾಂಶಗಳಲ್ಲಿನ ನೀರಿನ ಪ್ರಮಾಣ ಹಾಗೂ ಮೊಲೆಕ್ಯುಲರ್ ಬದಲಾವಣೆಗಳನ್ನು ನಿಖರವಾಗಿ ತಿಳಿಸುತ್ತದೆ.
ಎಲ್‌ಜಿಇ ತಂತ್ರಜ್ಞಾನ: ಸ್ನಾಯುಗಳಲ್ಲಿ ಉಂಟಾದ ಗಾಯ, ಕಲೆ ಅಥವಾ ಮೃತಪಟ್ಟ ಅಂಗಾಂಶಗಳನ್ನು ಗುರುತಿಸುತ್ತದೆ.
ಸಾಮಾನ್ಯ ಪರೀಕ್ಷೆಗಳಲ್ಲಿ ವರದಿ ನಾರ್ಮಲ್ ಬಂದಿದ್ದ 7 ರೋಗಿಗಳಲ್ಲಿಯೂ ಈ ಟಿ1 ಮ್ಯಾಪಿಂಗ್ ತಂತ್ರಜ್ಞಾನವು ಸ್ನಾಯುಗಳೊಳಗಿನ ಲೋಪಗಳನ್ನು ಸರಿಯಾಗಿ ಗುರುತಿಸುವಲ್ಲಿ ಯಶಸ್ವಿಯಾಗಿದೆ.
68 ಶೇಕಡಾ ರೋಗಿಗಳಲ್ಲಿ ಸತತ ಹೃದಯ ಬಡಿತದ ದೂರು
ಈ ಅಧ್ಯಯನಕ್ಕೆ ಒಳಪಟ್ಟ ರೋಗಿಗಳ ಸರಾಸರಿ ವಯಸ್ಸು 38 ವರ್ಷವಾಗಿತ್ತು. ಇವರಲ್ಲಿ ಶೇಕಡಾ 68.4 ರಷ್ಟು ರೋಗಿಗಳು ವೇಗವಾದ ಅಥವಾ ಅಸಹಜ ಹೃದಯ ಬಡಿತದ ದೂರು ನೀಡಿದ್ದರೆ, ಶೇಕಡಾ 52.63 ರಷ್ಟು ರೋಗಿಗಳು ಉಸಿರಾಟದ ತೊಂದರೆ ಎದುರಿಸುತ್ತಿದ್ದರು. ಎಂಆರ್‌ಐ ಸ್ಕ್ಯಾನಿಂಗ್ ನಡೆಸಿದಾಗ ಶೇಕಡಾ 63.15 ರಷ್ಟು ರೋಗಿಗಳಲ್ಲಿ ಸ್ನಾಯುಗಳ ಹಾನಿಯ ಲಕ್ಷಣಗಳು ಕಂಡುಬಂದಿವೆ.
ಹೃದಯದ ಸ್ನಾಯುಗಳ ಉರಿಯೂತವನ್ನು ಆರಂಭಿಕ ಹಂತದಲ್ಲೇ ಗುರುತಿಸುವುದರಿಂದ ಮುಂಬರುವ ಭಾರಿ ಅಪಾಯವನ್ನು ತಡೆಯಬಹುದು. ಜೊತೆಗೆ ರೋಗಿಗಳಿಗೆ ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ನೀಡಿ, ಹೃದಯದ ಪಂಪಿಂಗ್ ಕ್ಷಮತೆ ಕುಸಿಯದಂತೆ ತಡೆಯಲು ಈ ಸಂಶೋಧನೆ ಪ್ರಮುಖ ದಾರಿಯಾಗಿದೆ ಎಂದು ವೈದ್ಯಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

