ಬೆಂಗಳೂರು: ಬೆಳಗ್ಗೆ ಎದ್ದ ತಕ್ಷಣ ಒಂದು ಕಪ್ ಕಾಫಿ ಕುಡಿಯುವುದರಿಂದ ದಿನ ಆರಂಭಿಸುವವರಿದ್ದಾರೆ. ಕೆಲಸದ ನಡುವಿನ ದಣಿವು ಹೋಗಲಾಡಿಸಲು, ತಲೆನೋವು ಬಂದಾಗ, ಮನಸ್ಸು ಫ್ರೆಶ್ ಮಾಡಿಕೊಳ್ಳಲು ಅಥವಾ ಒಂಟಿಯಾಗಿದ್ದಾಗ ಸಂಗಾತಿಯಂತೆ ಕಾಫಿ ಕುಡಿಯುವವರೂ ಇದ್ದಾರೆ. ಕಾಫಿ ಪ್ರಿಯರಿಗೆ ಅಕ್ಟೋಬರ್ 1 ವಿಶೇಷ ದಿನ. ಪ್ರತಿವರ್ಷ ಈ ದಿನವನ್ನು ಅಂತರರಾಷ್ಟ್ರೀಯ ಕಾಫಿ ದಿನವಾಗಿ ಆಚರಿಸಲಾಗುತ್ತದೆ.
ಕಾಫಿ ಕುಡಿಯುವ ಪ್ರತಿಯೊಬ್ಬರಿಗೂ ಅದರ ರುಚಿ, ಪರಿಮಳ ಮತ್ತು ತಯಾರಿಸುವ ವಿಧಾನದಲ್ಲಿ ತಮ್ಮದೇ ಆದ ಇಷ್ಟವಿರುತ್ತದೆ. ಕೆಲವರು ಮನೆಯಲ್ಲೇ ಕಾಫಿ ಮಾಡಿಕೊಂಡು ಕುಡಿಯಲು ಇಷ್ಟಪಟ್ಟರೆ, ಇನ್ನು ಕೆಲವರು ತಮ್ಮ ನೆಚ್ಚಿನ ಕಾಫಿಗಾಗಿ ಕಿಲೋಮೀಟರ್ಗಟ್ಟಲೆ ಪ್ರಯಾಣಿಸುತ್ತಾರೆ. ಅಷ್ಟರಮಟ್ಟಿಗೆ ಕಾಫಿ ಹಲವರ ದಿನನಿತ್ಯದ ಬದುಕಿನ ಭಾಗವಾಗಿದೆ.
ಆದರೆ ಅಂತರರಾಷ್ಟ್ರೀಯ ಕಾಫಿ ದಿನವನ್ನು ಏಕೆ ಆಚರಿಸಲಾಗುತ್ತದೆ? ಕಾಫಿ ಭಾರತಕ್ಕೆ ಬಂದಿದ್ದು ಹೇಗೆ? ಇದರ ಹಿಂದೆ ಚಿಕ್ಕಮಗಳೂರಿನ ನಂಟೇನು? ತಿಳಿಯೋಣ.
ಅಂತರರಾಷ್ಟ್ರೀಯ ಕಾಫಿ ದಿನ ಆರಂಭವಾಗಿದ್ದು ಹೇಗೆ?
ಅಂತರರಾಷ್ಟ್ರೀಯ ಕಾಫಿ ಸಂಸ್ಥೆ (ICO) ಸೇರಿದಂತೆ ವಿಶ್ವದ ಹಲವು ಕಾಫಿ ಸಂಘಟನೆಗಳು ಅಕ್ಟೋಬರ್ 1ರಂದು ಅಂತರರಾಷ್ಟ್ರೀಯ ಕಾಫಿ ದಿನವನ್ನು ಆಚರಿಸುತ್ತವೆ. ಕಾಫಿ ಉದ್ಯಮದ ವೈವಿಧ್ಯತೆ, ಗುಣಮಟ್ಟ ಮತ್ತು ಕಾಫಿ ಬೆಳೆಯುವ ರೈತರು ಹಾಗೂ ಕಾರ್ಮಿಕರ ಕೊಡುಗೆಯನ್ನು ಗುರುತಿಸುವುದು ಈ ದಿನದ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ.
2014ರಲ್ಲಿ ಅಂತರರಾಷ್ಟ್ರೀಯ ಕಾಫಿ ಸಂಸ್ಥೆ ಅಂತರರಾಷ್ಟ್ರೀಯ ಕಾಫಿ ದಿನವನ್ನು ಅಧಿಕೃತವಾಗಿ ಆಚರಿಸುವ ನಿರ್ಧಾರ ಕೈಗೊಂಡಿತು. ಇದರಂತೆ 2015ರಲ್ಲಿ ಇಟಲಿಯ ಮಿಲನ್ನಲ್ಲಿ ಮೊದಲ ಅಧಿಕೃತ ಅಂತರರಾಷ್ಟ್ರೀಯ ಕಾಫಿ ದಿನವನ್ನು ಆಚರಿಸಲಾಯಿತು.
ಆದರೆ ಅದಕ್ಕೂ ಮುನ್ನವೂ ಹಲವು ದೇಶಗಳಲ್ಲಿ ಕಾಫಿ ದಿನದ ಆಚರಣೆ ನಡೆದಿತ್ತು. 1997ರಲ್ಲಿ ಚೀನಾದಲ್ಲಿ ICO ವತಿಯಿಂದ ಕಾಫಿ ದಿನ ಆಚರಿಸಲಾಗಿತ್ತು. ತೈವಾನ್ನಲ್ಲಿ 2009ರಲ್ಲಿ ಕಾಫಿ ದಿನ ಆಚರಿಸಲಾಯಿತು. ನೇಪಾಳದಲ್ಲಿ 2005ರ ನವೆಂಬರ್ 15ರಂದು ಮೊದಲ ಅಂತರರಾಷ್ಟ್ರೀಯ ಕಾಫಿ ದಿನ ಆಚರಣೆ ನಡೆದಿತ್ತು.
ಭಾರತಕ್ಕೆ ಕಾಫಿ ಬಂದಿದ್ದು ಹೇಗೆ?
ಭಾರತದ ಕಾಫಿ ಇತಿಹಾಸದಲ್ಲಿ ಕರ್ನಾಟಕದ ಚಿಕ್ಕಮಗಳೂರಿಗೆ ವಿಶೇಷ ಸ್ಥಾನವಿದೆ. ಕಾಫಿ ಭಾರತಕ್ಕೆ ಬಂದ ಕಥೆಯನ್ನು ಹೇಳುವಾಗ ಬಾಬಾಬುಡನ್ ಗಿರಿಯ ಹೆಸರು ಪ್ರಮುಖವಾಗಿ ಕೇಳಿಬರುತ್ತದೆ.
ಜನಪ್ರಚಲಿತ ಕಥೆಯ ಪ್ರಕಾರ, ಮೆಕ್ಕಾಗೆ ಯಾತ್ರೆಗೆ ತೆರಳಿದ್ದ ಸೂಫಿ ಸಂತ ಬಾಬಾ ಬುಡನ್ ಯೆಮೆನ್ನಿಂದ ಏಳು ಕಾಫಿ ಬೀಜಗಳನ್ನು ತಮ್ಮೊಂದಿಗೆ ತಂದಿದ್ದರು. ಆ ಬೀಜಗಳನ್ನು ಚಿಕ್ಕಮಗಳೂರಿನ ಬೆಟ್ಟ ಪ್ರದೇಶದಲ್ಲಿ ನೆಟ್ಟರು ಎನ್ನಲಾಗುತ್ತದೆ. ಅಲ್ಲಿಂದ ಕರ್ನಾಟಕದಲ್ಲಿ ಕಾಫಿ ಬೆಳೆಯುವ ಪರಂಪರೆ ಬೆಳೆದು ಬಂದಿತು.ನಂತರ ಚಿಕ್ಕಮಗಳೂರು ಕಾಫಿ ಬೆಳೆಗೆ ಹೆಸರುವಾಸಿಯಾದ ಪ್ರಮುಖ ಪ್ರದೇಶವಾಗಿ ಗುರುತಿಸಿಕೊಂಡಿತು.
ಕಾಫಿ ಪ್ರಮುಖ ಆರ್ಥಿಕ ಬೆಳೆಯಾದದ್ದು ಯಾವಾಗ?
ಸುಮಾರು 1840ರ ಅವಧಿಯಲ್ಲಿ ಭಾರತದಲ್ಲಿ ಕಾಫಿ ಬೆಳೆಯುವುದು ವಾಣಿಜ್ಯ ಮಟ್ಟದಲ್ಲಿ ಹೆಚ್ಚಾಯಿತು. ಬ್ರಿಟಿಷರು ದಕ್ಷಿಣ ಭಾರತದ ಬೆಟ್ಟ ಪ್ರದೇಶಗಳಲ್ಲಿ ವಿಶೇಷವಾಗಿ ಅರೇಬಿಕಾ ಕಾಫಿ ತೋಟಗಳನ್ನು ಅಭಿವೃದ್ಧಿಪಡಿಸಿದರು.
ಕರ್ನಾಟಕದ ಎತ್ತರದ ಪ್ರದೇಶಗಳು, ಇಳಿಜಾರು ಭೂಮಿ, ಹವಾಮಾನ, ಮಳೆ, ನೆರಳು ಮತ್ತು ಮಣ್ಣಿನ ಗುಣ ಕಾಫಿ ಬೆಳೆಗೆ ಅನುಕೂಲಕರವಾಗಿದ್ದವು. ಇದರಿಂದ ಕಾಫಿ ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿ ಬೆಳೆಯಿತು.
ಇಂದು ಭಾರತವೂ ವಿಶ್ವದ ಪ್ರಮುಖ ಕಾಫಿ ಉತ್ಪಾದಕ ದೇಶಗಳಲ್ಲಿ ಒಂದಾಗಿದೆ. ಕರ್ನಾಟಕ ದೇಶದ ಕಾಫಿ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಚಿಕ್ಕಮಗಳೂರು, ಕೊಡಗು ಮತ್ತು ಹಾಸನದಂತಹ ಪ್ರದೇಶಗಳು ಕಾಫಿ ತೋಟಗಳಿಗೆ ಹೆಸರುವಾಸಿಯಾಗಿವೆ.
ಕಾಫಿ ದಿನದ ಮಹತ್ವವೇನು?
ಅಂತರರಾಷ್ಟ್ರೀಯ ಕಾಫಿ ದಿನ ಕೇವಲ ಕಾಫಿ ಕುಡಿಯುವವರ ಸಂಭ್ರಮಕ್ಕೆ ಸೀಮಿತವಾಗಿಲ್ಲ. ಕಾಫಿ ಬೆಳೆ ಬೆಳೆಯುವ ರೈತರು, ತೋಟ ಕಾರ್ಮಿಕರು, ಸಂಸ್ಕರಣೆ ಮತ್ತು ರಫ್ತು ಕ್ಷೇತ್ರದಲ್ಲಿ ಕೆಲಸ ಮಾಡುವವರು ಸೇರಿದಂತೆ ಇಡೀ ಕಾಫಿ ಉದ್ಯಮದ ಕೊಡುಗೆಯನ್ನು ಗುರುತಿಸುವ ದಿನವೂ ಹೌದು.
ಕಾಫಿ ಉದ್ಯಮ ಎದುರಿಸುತ್ತಿರುವ ಹವಾಮಾನ ಬದಲಾವಣೆ, ಸುಸ್ಥಿರ ಕೃಷಿ ಮತ್ತು ಕಾಫಿ ಬೆಳೆಗಾರರ ಬೆಂಬಲದಂತಹ ವಿಚಾರಗಳ ಬಗ್ಗೆಯೂ ಈ ದಿನ ಜಾಗೃತಿ ಮೂಡಿಸಲಾಗುತ್ತದೆ.
ಮನೆಯಲ್ಲಿ ಟ್ರೈ ಮಾಡಬಹುದಾದ 5 ಕಾಫಿ ಐಡಿಯಾಗಳು
ಸಾಮಾನ್ಯ ಫಿಲ್ಟರ್ ಕಾಫಿ ಅಥವಾ ಇನ್ಸ್ಟಂಟ್ ಕಾಫಿಯ ಜೊತೆಗೆ ಈಗ ಕಾಫಿಯಲ್ಲಿ ಹಲವು ಹೊಸ ಫ್ಲೇವರ್ಗಳನ್ನು ಪ್ರಯತ್ನಿಸುವ ಟ್ರೆಂಡ್ ಇದೆ. ಈ ಕಾಫಿ ದಿನದಂದು ಮನೆಯಲ್ಲಿ ಟ್ರೈ ಮಾಡಬಹುದಾದ ಕೆಲವು ಆಯ್ಕೆಗಳು ಇಲ್ಲಿವೆ.
1. ಬ್ರೌನ್ ಶುಗರ್-ವ್ಯಾನಿಲ್ಲಾ ಐಸ್ ಕಾಫಿ
ಎಸ್ಪ್ರೆಸ್ಸೋಗೆ ಬ್ರೌನ್ ಶುಗರ್ ಮತ್ತು ಸ್ವಲ್ಪ ವ್ಯಾನಿಲ್ಲಾ ಸಿರಪ್ ಸೇರಿಸಿ. ನಂತರ ಐಸ್ ಮತ್ತು ತಣ್ಣನೆಯ ಹಾಲು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಮೇಲೆ ಸ್ವಲ್ಪ ದಾಲ್ಚಿನ್ನಿ ಪುಡಿ ಹಾಕಿದರೆ ಉತ್ತಮ ಪರಿಮಳ ಸಿಗುತ್ತದೆ.
2. ಕಾಫಿ-ಕೊಕೊನಟ್ ಡ್ರಿಂಕ್
ಕೋಲ್ಡ್ ಬ್ರೂ ಕಾಫಿಗೆ ತೆಂಗಿನ ನೀರು ಮತ್ತು ಸ್ವಲ್ಪ ಕೊಕೊನಟ್ ಮಿಲ್ಕ್ ಸೇರಿಸಿ. ಗ್ಲಾಸ್ಗೆ ಐಸ್ ಹಾಕಿ ಈ ಮಿಶ್ರಣವನ್ನು ಸುರಿದರೆ ಹಗುರವಾದ ರಿಫ್ರೆಶಿಂಗ್ ಡ್ರಿಂಕ್ ಸಿದ್ಧ.
3. ಆರೆಂಜ್ ಎಸ್ಪ್ರೆಸ್ಸೋ
ಕಾಫಿ ಮತ್ತು ಕಿತ್ತಳೆ ಹಣ್ಣಿನ ರುಚಿಯನ್ನು ಒಟ್ಟಿಗೆ ಪ್ರಯತ್ನಿಸಬೇಕೆಂದರೆ ಆರೆಂಜ್ ಎಸ್ಪ್ರೆಸ್ಸೋ ಟ್ರೈ ಮಾಡಬಹುದು. ಐಸ್ ಮತ್ತು ತಣ್ಣನೆಯ ಟಾನಿಕ್ ವಾಟರ್ಗೆ ಸ್ವಲ್ಪ ಆರೆಂಜ್ ಜ್ಯೂಸ್ ಸೇರಿಸಿ. ಕೊನೆಯಲ್ಲಿ ಎಸ್ಪ್ರೆಸ್ಸೋವನ್ನು ನಿಧಾನವಾಗಿ ಸುರಿಯಿರಿ. ಮೇಲೆ ಕಿತ್ತಳೆ ಹಣ್ಣಿನ ತುಂಡು ಇಡಬಹುದು.
4. ಬನಾನಾ ಕಾಫಿ ಸ್ಮೂದಿ
ತಣ್ಣನೆಯ ಕಾಫಿ, ಒಂದು ಪಕ್ವವಾದ ಬಾಳೆಹಣ್ಣು, ಹಾಲು, ಸ್ವಲ್ಪ ಕೋಕೋ ಪೌಡರ್ ಮತ್ತು ಐಸ್ ಅನ್ನು ಬ್ಲೆಂಡ್ ಮಾಡಿ. ಹೆಚ್ಚು ಸಿಹಿ ಬೇಕಿದ್ದರೆ ಸ್ವಲ್ಪ ಜೇನುತುಪ್ಪ ಸೇರಿಸಬಹುದು. ಬೆಳಗಿನ ಉಪಾಹಾರದ ಜೊತೆ ಇದನ್ನು ಪ್ರಯತ್ನಿಸಬಹುದು.
5. ವ್ಹಿಪ್ಡ್ ಕಾಫಿ
ಇನ್ಸ್ಟಂಟ್ ಕಾಫಿಗೆ ಸ್ವಲ್ಪ ಬಿಸಿ ನೀರು ಸೇರಿಸಿ ಚೆನ್ನಾಗಿ ವಿಸ್ಕ್ ಮಾಡಿದರೆ ಕ್ರೀಮಿ ಟೆಕ್ಸ್ಚರ್ ಬರುತ್ತದೆ. ಈ ಕಾಫಿ ಮಿಶ್ರಣವನ್ನು ಐಸ್ ಹಾಕಿದ ತಣ್ಣನೆಯ ಹಾಲಿನ ಮೇಲೆ ಹಾಕಿ. ಮೇಲೆ ಸ್ವಲ್ಪ ದಾಲ್ಚಿನ್ನಿ ಪುಡಿ ಹಾಕಿದರೆ ವ್ಹಿಪ್ಡ್ ಕಾಫಿ ಸಿದ್ಧ.
ಹಾಟ್ ಕಾಫಿಯಾಗಿರಲಿ, ಕೋಲ್ಡ್ ಬ್ರೂ ಆಗಿರಲಿ, ಫಿಲ್ಟರ್ ಕಾಫಿಯಾಗಿರಲಿ ಅಥವಾ ಹೊಸ ಫ್ಲೇವರ್ನ ಕಾಫಿಯಾಗಿರಲಿ ಕಾಫಿ ಪ್ರಿಯರಿಗೆ ತಮ್ಮ ನೆಚ್ಚಿನ ಕಾಫಿಯೊಂದಿಗೆ ಈ ದಿನವನ್ನು ಆಚರಿಸಲು ಅಂತರರಾಷ್ಟ್ರೀಯ ಕಾಫಿ ದಿನವೇ ಒಂದು ನೆಪ.a

