HomeKarnatakaತಾನು ತಿಂದು ಬಿಜೆಪಿ ಮೂತಿಗೆ ಒರೆಸಿದ ಮುಖ್ಯಮಂತ್ರಿ..!: ಆರ್. ಅಶೋಕ್ ಆಕ್ರೋಶ

ತಾನು ತಿಂದು ಬಿಜೆಪಿ ಮೂತಿಗೆ ಒರೆಸಿದ ಮುಖ್ಯಮಂತ್ರಿ..!: ಆರ್. ಅಶೋಕ್ ಆಕ್ರೋಶ

ಬೆಂಗಳೂರು: ಬಿಜೆಪಿ ಸರ್ಕಾರ ಅವಧಿಯಲ್ಲಿ ಯಡಿಯೂರಪ್ಪ ಬಜೆಟ್ ಮೀರಿ ಕಾಮಗಾರಿ ಆರಂಭಿಸಿದ್ದರು. ಬಿಜೆಪಿ ಸರ್ಕಾರದ ಇಂತಹ ಅನಾಹುತಗಳಿಂದಾಗಿ ಆರ್ಥಿಕ ಇಲಾಖೆಯವರು ನಮಗೆ ಪತ್ರ ಬರೆದಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿರುವ ಬಗ್ಗೆ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ತಿರುಗೇಟು ನೀಡಿದ್ದಾರೆ.

ತಾನು ತಿಂದು ಬಿಜೆಪಿ ಮೂತಿಗೆ ಒರೆಸಿದ ಮುಖ್ಯಮಂತ್ರಿ ಎಂದು ಟೀಕಿಸಿದ್ದಾರೆ. ಹೊಸ ಯೋಜನೆಗಳನ್ನು ಘೋಷಿಸುವ ಹಾಗೂ ಸಾಲ ಪಡೆಯುವ ಸಾಮರ್ಥ್ಯ ತಮಗಿಲ್ಲ ಎಂದು ಆರ್ಥಿಕ ಇಲಾಖೆ ಪತ್ರ ಬರೆದಿರುವ ಮಾಹಿತಿಯನ್ನು ನಾನು ವಿಶೇಷ ಅಧಿವೇಶನದಲ್ಲಿ ಬಹಿರಂಗ ಮಾಡಿದ್ದೆ. ಇದರಿಂದ ಮಾನ ಕಳೆದುಕೊಂಡ ಕಾಂಗ್ರೆಸ್‌ ಸರ್ಕಾರ, ಇನ್ನೂ ಸರಿಯಾಗಿ ಉತ್ತರ ನೀಡಲು ಪರದಾಡುತ್ತಿದೆ. ಈಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇದಕ್ಕೆಲ್ಲ ಬಿಜೆಪಿಯೇ ಕಾರಣ ಎಂದು ಷರಾ ಬರೆದುಬಿಟ್ಟಿದ್ದಾರೆ. ಮುಖ್ಯಮಂತ್ರಿಗಳೇ, ಈ ರಾಜ್ಯದಲ್ಲಿ ಆರ್ಥಿಕ ಇಲಾಖೆಯ ಸಚಿವರು ಯಾರು? ಈ ಇಲಾಖೆಯನ್ನು ಬಿಜೆಪಿಗೆ ನೀಡಲಾಗಿದೆಯೇ? ಬಜೆಟ್‌ ಮೀರಿ ಯೋಜನೆಗಳನ್ನು ನೀಡಿದ್ದು ನಿಮ್ಮದೇ ಪಕ್ಷದ ಮಾಜಿ ಸಿಎಂ ಎನ್ನುವ ಬದಲು ಬಿ.ಎಸ್‌.ಯಡಿಯೂರಪ್ಪ ಎಂದು ಬಾಯಿ ತಪ್ಪಿ ಹೇಳಿದ್ದೀರಿ ಎಂದಿದ್ದಾರೆ.

ಕಳೆದ ಬಜೆಟ್‌ನಲ್ಲಿ 8,34,677 ಲಕ್ಷ ಕೋಟಿ ರೂ. ಸಾಲವಿದ್ದು, ಈವರೆಗೆ ರಾಜ್ಯ ಸರ್ಕಾರಗಳು ಮಾಡಿರುವ ಒಟ್ಟು ಸಾಲಗಳಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರ ಪಾಲು 52.33% ರಷ್ಟಿದೆ. ಸಿದ್ದರಾಮಯ್ಯ ಒಬ್ಬರೇ 4,36,803 ರೂ. ಸಾಲವನ್ನು ಪ್ರತಿ ವ್ಯಕ್ತಿಯ ತಲೆಯ ಮೇಲೆ ಹಾಕಿ ಆರ್ಥಿಕ ಸ್ಥಿತಿಯನ್ನು ಪಾತಾಳಕ್ಕೆ ಒಯ್ದಿದ್ದಾರೆ. ನೀವು ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ಮಾಡುವ ಮುನ್ನ ಹೊಸ ಯೋಜನೆಗಳ ಘೋಷಣೆ ಮಾಡದಿರಲು ಆರ್ಥಿಕ ಇಲಾಖೆ ಈ ಪತ್ರ ಬರೆದಿದೆ. ಅಂದಮೇಲೆ ಇಲ್ಲಿ ಬಿಜೆಪಿ ಎಲ್ಲಿಂದ ಬಂತು? ಸಿದ್ದರಾಮಯ್ಯನವರೇ ಹೇಳುವಂತೆ “ಕೊಟ್ಟ ಕುದುರೆ ಏರದವ ವೀರನೂ ಅಲ್ಲ ಶೂರನೂ ಅಲ್ಲ” ಎಂಬಂತೆ, ನಿಮ್ಮ ಶೂರತ್ವವನ್ನು ಆರ್ಥಿಕ ಇಲಾಖೆಯ ಸ್ಥಿತಿ ಸರಿಪಡಿಸುವಲ್ಲಿ ತೋರಿಸಿ. ಅರ್ಥವಿಲ್ಲದ ಆರೋಪ ಮಾಡಿ ಇರುವ ಮರ್ಯಾದೆಯನ್ನೂ ಕಳೆದುಕೊಳ್ಳಬೇಡಿ ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸರ್ಕಾರಕ್ಕೆ ಬೆಂಗಳೂರಿನ ವಾಸ್ತವತೆ ಕಾಣುತ್ತಿಲ್ಲವೇ?

‘ಬ್ರ್ಯಾಂಡ್ ಬೆಂಗಳೂರು’ ಎಂದು ಭರ್ಜರಿ ಪ್ರಚಾರ ಮಾಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಬೆಂಗಳೂರಿನ ವಾಸ್ತವತೆ ಕಾಣುತ್ತಿಲ್ಲವೇ ಎಂದು ಆರ್. ಅಶೋಕ್ ಪ್ರಶ್ನಿಸಿದ್ದಾರೆ.

ಒಂದು ಮಳೆ ಬಂದರೆ ಸಾಕು — ಅಂಡರ್‌ಪಾಸ್‌ಗಳು ಜಲಾವೃತ, ರಸ್ತೆಗಳು ಕೆರೆಗಳಾಗಿ, ಮರಗಳು ಧರೆಗೆ, ವಾಹನ ಸಂಚಾರ ಅಸ್ತವ್ಯಸ್ತ. ಹೆಬ್ಬಾಳದಿಂದ ಯಲಹಂಕ, ಪೀಣ್ಯದಿಂದ ಮಹದೇವಪುರದವರೆಗೆ ಬೆಂಗಳೂರಿಗರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದ್ದಾರೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಜನರಿಗೆ ಮೂಲಭೂತ ಸೌಲಭ್ಯ ಕಲ್ಪಿಸುವುದಕ್ಕಿಂತ, ‘ಬ್ರ್ಯಾಂಡ್ ಬೆಂಗಳೂರು’, ‘ಕ್ಲೀನ್ ಬೆಂಗಳೂರು’ ಎಂಬ ಹೆಸರಿನಲ್ಲಿ ಪ್ರಚಾರಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಒಂದೆಡೆ ಜನರು ಮಳೆ ನೀರಿನಲ್ಲಿ ಸಿಲುಕಿ ಪರದಾಡುತ್ತಿದ್ದರೆ, ಮತ್ತೊಂದೆಡೆ ಮನೆ ಬಳಿ ವಾಹನ ನಿಲ್ಲಿಸುವುದಕ್ಕೂ ₹15,000–₹25,000 ವಾರ್ಷಿಕ ಶುಲ್ಕ ವಿಧಿಸುವ ಪ್ರಸ್ತಾವನೆ ತರುತ್ತಿದ್ದಾರೆ.

ಖಾಲಿ ನಿವೇಶನ ಸ್ವಚ್ಛಗೊಳಿಸುವ ಹೆಸರಲ್ಲಿ ಮಾಲೀಕರಿಗೆ ದಂಡ, ಪಾರ್ಕಿಂಗ್ ಶುಲ್ಕದ ಹೊರೆ, ಕಸಕ್ಕೆ ಪ್ರತ್ಯೇಕ ಶುಲ್ಕ — ಆದರೆ ಮಳೆ ಬಂದಾಗ ನೀರು ಸರಾಗವಾಗಿ ಹರಿಯಲು ಅಗತ್ಯವಿರುವ ಮೂಲಸೌಕರ್ಯ ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರು ಜನರಿಗೆ ಬೇಕಿರುವುದು ಪ್ರಚಾರದ ‘ಬ್ರ್ಯಾಂಡ್ ಬೆಂಗಳೂರು’ ಅಲ್ಲ; ಮಳೆ ಬಂದಾಗ ಮುಳುಗದ, ಸಂಚಾರ ಸ್ಥಗಿತವಾಗದ, ಸುರಕ್ಷಿತ ಮತ್ತು ಸುಸಜ್ಜಿತ ಬೆಂಗಳೂರು. ಜನರ ಮೇಲೆ ಹೊಸ ಶುಲ್ಕ ಮತ್ತು ನಿಯಮ ಹೇರಿ ಖಜಾನೆ ತುಂಬಿಸುವುದನ್ನು ಬಿಟ್ಟು, ಮೊದಲು ಬೆಂಗಳೂರಿನ ಮೂಲಭೂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಿ ಎಂದು ಒತ್ತಾಯಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular